ಆ್ಯಪ್ನಗರ

ಐಬಿಪಿಎಸ್‌ನಲ್ಲಿ ಮತ್ತೆ ಮೋಸ, ಈ ಬಾರಿಯೂ ಕನ್ನಡಿಗರಿಗೆ ಆದ್ಯತೆ ಇಲ್ಲ

ಇತ್ತೀಚೆಗೆ ಎಸ್‌ಬಿಐ ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆ ತಂದು ರಾಜ್ಯದಲ್ಲಿನ ಹುದ್ದೆಗಳು ಕನ್ನಡಿಗರಿಗೇ ದೊರೆಯುವಂತಾಗಲು ಕ್ರಮ ತೆಗೆದುಕೊಂಡಿತ್ತು. ಹೀಗಾಗಿ ಐಬಿಪಿಎಸ್‌ ಕೂಡ ಈ ನಿಟ್ಟಿನಲ್ಲಿ ಬದಲಾವಣೆ ತರಬಹುದು ಎಂದು ನಿರೀಕ್ಷಿಸಲಾಗುತ್ತಿತ್ತು.

Vijaya Karnataka 6 Aug 2020, 12:16 am

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ನೇಮಕ ಮಾಡುವ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ಮತ್ತೆ ಕನ್ನಡಿಗರಿಗೆ ಮೋಸ ಮಾಡಿದೆ. ಪ್ರೊಬೆಷನರಿ ಆಫೀಸರ್‌/ಮ್ಯಾನೇಜ್‌ಮೆಂಟ್‌ ಟ್ರೇನಿ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ, ಆದರೆ ನೇಮಕ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಆದ್ಯತೆ ಇಲ್ಲ.
Vijaya Karnataka Web IBPS


ಇದರಿಂದಾಗಿ, ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳು ಕನ್ನಡಿಗರಿಗೇ ಸಿಗುವಂತಾಗಬೇಕು ಮತ್ತು ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ದೊರೆಯಬೇಕೆಂಬ ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆಲೆ ಇಲ್ಲದಂದಾಗಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆದಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ.

ರಾಜ್ಯದ ಬ್ಯಾಂಕ್‌ ಶಾಖೆಗಳಲ್ಲಿ ಕನ್ನಡದಲ್ಲಿಯೇ ವ್ಯವಹಾರ ನಡೆಸಲು ಅನುಕೂಲವಾಗಬೇಕು ಮತ್ತು ರಾಜ್ಯದ ಅಭ್ಯರ್ಥಿಗಳಿಗೇ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಬ್ಯಾಂಕ್‌ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆ ತರುವಂತೆ ಮುಖ್ಯಮಂತ್ರಿ, ಸಚಿವರು, ರಾಜ್ಯದ ಸಂಸದರು, ಕನ್ನಡದ ಅಭಿವೃದ್ಧಿ ಪ್ರಾಕಾರ, ಹಿರಿಯ ಸಾಹಿತಿಗಳು ಕೇಂದ್ರ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿ ಕೂಡ ನಡೆಸಲಾಗಿತ್ತು.

ಇತ್ತೀಚೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆ ತಂದು ರಾಜ್ಯದಲ್ಲಿನ ಹುದ್ದೆಗಳು ಕನ್ನಡಿಗರಿಗೇ ದೊರೆಯುವಂತಾಗಲು ಕ್ರಮ ತೆಗೆದುಕೊಂಡಿತ್ತು. ಹೀಗಾಗಿ ಐಬಿಪಿಎಸ್‌ ಕೂಡ ಈ ನಿಟ್ಟಿನಲ್ಲಿ ಬದಲಾವಣೆ ತರಬಹುದು ಎಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಸ್ವಾಯತ್ತ ಸಂಸ್ಥೆಯಾದ ಐಬಿಪಿಎಸ್‌ ತನ್ನ ಹಿಂದಿನ ಚಾಳಿಯನ್ನೇ ಮುಂದುವರಿಸಿದೆ.

ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಎಸ್‌ಬಿಐ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ

ಹುದ್ದೆಗಳೂ ಇಲ್ಲ

ಈ ಬಾರಿ ಕೇವಲ ಮೂರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಟ್ಟು 1,167 ಹುದ್ದೆಗಳಿಗೆ ಮಾತ್ರ ನೇಮಕ ನಡೆಯಲಿದೆ. ರಾಜ್ಯ ಮೂಲದ ಕೆನರಾ ಬ್ಯಾಂಕಿನಲ್ಲಿ ಒಂದೇ ಒಂದು ಹುದ್ದೆಯೂ ಖಾಲಿ ಇಲ್ಲ. ಕಾರ್ಪೋರೇಷನ್‌ ಬ್ಯಾಂಕ್‌ ಅನ್ನು ವಿಲೀನಮಾಡಿಕೊಂಡಿರುವ ಯೂನಿಯನ್‌ ಬ್ಯಾಂಕ್‌ ಕೂಡ ನೇಮಕಮಾಡಿಕೊಳ್ಳುತ್ತಿಲ್ಲ. ಬ್ಯಾಂಕ್‌ ಆಫ್‌ ಇಂಡಿಯಾ, ಯೂಕೋ ಬ್ಯಾಂಕ್‌ ಮತ್ತು ಪಂಜಾಬ್‌ ಅ್ಯಂಡ್‌ ಸಿಂಧ್‌ ಬ್ಯಾಂಕ್‌ ಮಾತ್ರ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿವೆ.

ಯಾವುದೇ ಪದವೀಧರರು ಪ್ರೊಬೆಷನರಿ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್‌ 26 ಕೊನೆಯ ದಿನವಾಗಿದೆ. ಎರಡು ಹಂತದ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ