ಆ್ಯಪ್ನಗರ

ಕಳೆದ 10 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಉತ್ಪಾದನೆ: ಹಣದುಬ್ಬರವೂ ಹೆಚ್ಚಳ!

ಭಾರತದಲ್ಲಿ ಉತ್ಪಾದನಾ ವಲಯದ ಚಟುವಟಿಕೆ ಕಳೆದ 10 ತಿಂಗಳಿನಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ. ಬೇಡಿಕೆ ವೃದ್ಧಸಿರುವುದರಿಂದ ಉತ್ಪಾದನೆ ಕೂಡ ಹೆಚ್ಚುತ್ತಿದೆ. ಹೀಗಿದ್ದರೂ ಹಣದುಬ್ಬರ ಹೆಚ್ಚುತ್ತಿರುವುದು ಕಾರ್ಖಾನೆಗಳಿಗೆ ಭವಿಷ್ಯದ ಬಗ್ಗೆ ಯೋಚಿಸುವಂತಾಗಿಸಿದೆ.

Vijaya Karnataka 1 Dec 2021, 10:06 pm
ಹೊಸದಿಲ್ಲಿ: ಭಾರತದಲ್ಲಿ ಕಳೆದ ನವೆಂಬರ್‌ನಲ್ಲಿ ಉತ್ಪಾದನಾ ವಲಯದ ಚಟುವಟಿಕೆ ಕಳೆದ 10 ತಿಂಗಳಿನಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ. ಬೇಡಿಕೆ ವೃದ್ಧಿಸಿರುವುದರಿಂದ ಉತ್ಪಾದನೆ ಕೂಡ ಹೆಚ್ಚುತ್ತಿದೆ. ಹೀಗಿದ್ದರೂ ಹಣದುಬ್ಬರ ಹೆಚ್ಚುತ್ತಿರುವುದು ಕಾರ್ಖಾನೆಗಳಿಗೆ ಭವಿಷ್ಯದ ಬಗ್ಗೆ ಯೋಚಿಸುವಂತಾಗಿಸಿದೆ ಎಂದು ಸಮೀಕ್ಷೆ ತಿಳಿಸಿದೆ.
Vijaya Karnataka Web production


ಕೋವಿಡ್‌-19 ನಿರ್ಬಂಧಗಳು ಸಡಿಲವಾದ ನಂತರ, ಆರ್ಥಿಕಚಟುವಟಿಕೆಗಳು ಚೇತರಿಸುತ್ತಿದ್ದು, ನಾನಾ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಆರ್ಥಿಕತೆ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ವರದಿ ತಿಳಿಸಿದೆ. ಐಎಚ್‌ಎಸ್‌ ಮಾರ್ಕಿಟ್‌ ವರದಿಯ ಪ್ರಕಾರ, ಪರ್ಚೇಸಿಂಗ್‌ ಮ್ಯಾನೇಜರ್ಸ್ ಇಂಡೆಕ್ಸ್‌ ನವೆಂಬರ್‌ನಲ್ಲಿ 57.6ಕ್ಕೆ ಚೇತರಿಸಿದೆ. ಅಕ್ಟೋಬರ್‌ನಲ್ಲಿ 55.9 ಇತ್ತು.

ವಿಶ್ವದ ಬೇಡಿಕೆ ಉತ್ಪಾದನಾ ತಾಣಗಳಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ!

''ಭಾರತೀಯ ಉತ್ಪಾದನಾ ವಲಯದ ಉದ್ದಿಮೆಗಳು ನವೆಂಬರ್‌ನಲ್ಲಿ ವಿಸ್ತರಿಸಿವೆ. ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ'' ಎಂದು ಐಎಚ್‌ಎಸ್‌ ಮಾಕಿಟ್‌ನ ತಜ್ಞರಾದ ಪೊಲ್ಯಾನಾ ಡಿಲಿಮಾ ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಿಂದ ಕಾರ್ಖಾನೆಗಳಿಗೆ ಹೊಸ ಆರ್ಡರ್‌ಗಳು ಹೆಚ್ಚುತ್ತಿವೆ. ಬೇಡಿಕೆಯನ್ನು ಪೂರೈಸಲು ಸತತ 5 ತಿಂಗಳುಗಳಿಂದ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಜುಲೈ-ಸೆಪ್ಟೆಂಬರ್‌ನಲ್ಲಿ ಆರ್ಥಿಕತೆ ಶೇ.8.4 ವೃದ್ಧಿಸಿದೆ.

‘ಮೇಕ್ ಇನ್ ಇಂಡಿಯಾ’ಗೆ ಯಶಸ್ಸು; ಅತ್ಯಾಧುನಿಕ ತಂತ್ರಜ್ಞಾನದ ದೇಶಿಯ ನಿರ್ಮಿತ ಇಂಧನ ರಿಗ್ ಕಾರ್ಯಾರಂಭ

ವಿದ್ಯುತ್‌ ಬಳಕೆ ಶೇ.3.6 ಹೆಚ್ಚಳ:
ನವೆಂಬರ್‌ನಲ್ಲಿ ಭಾರತದ ವಿದ್ಯುತ್‌ ಬಳಕೆ ಶೇ.3.6 ಏರಿಕೆಯಾಗಿದೆ. ಆರ್ಥಿಕ ಚಟುವಟಿಕೆಗಳು ಚುರುಕಾಗಿರುವುದನ್ನು ಇದು ಬಿಂಬಿಸಿದೆ. ನವೆಂಬರ್‌ನಲ್ಲಿ 100.42 ಶತಕೋಟಿ ಯುನಿಟ್‌ ವಿದ್ಯುತ್‌ ಬಳಕೆಯಾಗಿದೆ ಎಂದು ವಿದ್ಯುತ್‌ ಸಚಿವಾಲಯದ ವರದಿ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ 96.88 ಶತಕೋಟಿ ಯುನಿಟ್‌ ವಿದ್ಯುತ್‌ ಬಳಕೆಯಾಗಿತ್ತು. ಕಳೆದ ತಿಂಗಳು ದಿನಕ್ಕೆ 166.19 ಗಿಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆ ಇತ್ತು.

ನವೆಂಬರ್‌ನಲ್ಲಿ 1.3 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ
ನವೆಂಬರ್‌ ತಿಂಗಳಲ್ಲಿ ₹ 1,31,526 ಕೋಟಿ ಸರಕು ಮತ್ತು ಆದಾಯ ತೆರಿಗೆ (ಜಿಎಸ್‌ಟಿ) (Goods and service Tax) ಸಂಗ್ರಹಿಸಲಾಗಿದೆ ಎಂದು ಕೇಂದ್ರ ಹಣಕಾಸು ಮಂತ್ರಾಲಯ (Central finance ministry) ಹೇಳಿದೆ. ಇದು 2017 ರ ಜುಲೈನಲ್ಲಿ ಜಿಎಸ್‌ಟಿ (GST) ಜಾರಿಯಾದ ಬಳಿಕ ಸಂಗ್ರಹಿಸಿದ ಎರಡನೇ ಅತೀ ದೊಡ್ಡ ಮೊತ್ತವಾಗಿದೆ. ಈ ಹಿಂದೆ ಇದೇ ವರ್ಷ ಏಪ್ರಿಲ್‌ನಲ್ಲಿ ₹ 1,39,708 ಕೋಟಿ ಸಂಗ್ರಹಿಸಿದ್ದು ಈ ವರೆಗಿನ ಗರಿಷ್ಠವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ