ಆ್ಯಪ್ನಗರ

ಕೊಪ್ಪಳದಲ್ಲಿನ ದೇಶದ ಮೊದಲ ಆಟಿಕೆ ಕ್ಲಸ್ಟರ್‌ನಲ್ಲಿ ಹೂಡಿಕೆಗೆ ಆಹ್ವಾನ

ಆಟಿಕೆ ಉತ್ಪಾದನಾ ಕ್ಲಸ್ಟರ್‌ಗಳಲ್ಲಿ ಕೊಪ್ಪಳ ಮೊದಲನೆಯದಾಗಿದ್ದು, ಉದ್ಯಮಕ್ಕೆ ಎಲ್ಲ ಅಗತ್ಯ ಸೌಕರ್ಯಗಳನ್ನು ಒಳಗೊಂಡಿರಲಿದೆ. ಆಟಿಕೆಗಳಿಗೆ ಕರ್ನಾಟಕ, ದೇಶದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.

Vijaya Karnataka Web 25 Aug 2020, 10:43 pm
ಬೆಂಗಳೂರು: ಕಿನ್ನಾಳ ಆಟಿಕೆ ಖ್ಯಾತಿಯ ಕೊಪ್ಪಳದಲ್ಲಿ ಸ್ಥಾಪನೆಯಾಗುತ್ತಿರುವ ದೇಶದ ಮೊಟ್ಟ ಮೊದಲ ಆಟಿಕೆ ಕ್ಲಸ್ಟರ್‌ನಲ್ಲಿ ಹೂಡಿಕೆ ಮಾಡಲು ದೇಶ, ವಿದೇಶಗಳ ಆಟಿಕೆ ತಯಾರಕರಿಗೆ ರಾಜ್ಯ ಸರಕಾರ ಮುಕ್ತ ಆಹ್ವಾನ ನೀಡಿದೆ.
Vijaya Karnataka Web ಗೊಂಬೆ
ಗೊಂಬೆ


ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ವೋಕಲ್ ಫಾರ್ ಲೋಕಲ್ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಪೂರಕವಾಗಿ ಆಟಿಕೆ ತಯಾರಿಕೆಗೆ ಒತ್ತು ನೀಡಿರುವ ರಾಜ್ಯ ಸರಕಾರ, ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಟಾಯ್‌ ಕ್ಲಸ್ಟರ್‌ಗೆ ಕರ್ನಾಟಕದಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಿ, ಉದ್ಯಮವನ್ನು ಬೆಂಬಲಿಸುವುದಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಹಾಗೂ ಕೈಗಾರಿಕಾಭಿವೃದ್ದಿ ಆಯುಕ್ತರಾದ ಗುಂಜನ್‌ ಕೃಷ್ಣ ಭರವಸೆ ನೀಡಿದರು. ಆಟಿಕೆ ಕ್ಲಸ್ಟರ್ ನಲ್ಲಿ ದೇಶ ಮತ್ತು ವಿದೇಶದ ಆಟಿಕೆ ತಯಾರಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದಾಗಿಯೂ ಹೇಳಿದರು.

ಕೊಪ್ಪಳ ಟಾಯ್ ಕ್ಲಸ್ಟರ್

ಕೊಪ್ಪಳ ಟಾಯ್ ಕ್ಲಸ್ಟರ್ ರಾಷ್ಟ್ರೀಯ ಹೆದ್ದಾರಿ 63 ರಲ್ಲಿದ್ದು, ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಜತೆಗೆ, ವಾಣಿಜ್ಯ ನಗರ ಹುಬ್ಬಳ್ಳಿಗೆ ಸಮೀಪದಲ್ಲಿದೆ. ಕುಶಲ ಕರ್ಮಿಗಳಿಗೆ ವಿಫುಲ ಉದ್ಯೋಗಾವಕಾಶ ಕಲ್ಪಿಸುವ ಆಟಿಕೆ ಉದ್ಯಮದಿಂದ ಮುಂಬರುವ ದಿನಗಳಲ್ಲಿ ಬರೋಬ್ಬರಿ 1,00,000 ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿ ಆಗುವ ನಿರೀಕ್ಷೆ ಇದೆ.

ವಿಶ್ವದರ್ಜೆಯ ಯಂತ್ರೋಪಕರಣಗಳ ಮೂಲಸೌಕರ್ಯ ಮತ್ತು ಆಟಿಕೆ ತಯಾರಕರಿಗೆ ಕರ್ನಾಟಕ, ಪೂರಕ ಕಾರ್ಮಿಕ ಕಾನೂನು ರೂಪಿಸಿದೆ. ಹೂಡಿಕೆಗೆ ಅನುಕೂಲವಾಗುವಂತೆ ಹಣಕಾಸು ಮತ್ತು ಇತರ ಸಬ್ಸಿಡಿಗಳನ್ನು ನೀಡುವ ಮೂಲಕ ಸುಸ್ಥಿರ ಆಟಿಕೆ ಉತ್ಪಾದನಾ ವ್ಯವಸ್ಥೆ ನಿರ್ಮಿಸಲು ಮುಂದಾಗಿದ್ದೇವೆ.
ಗುಂಜನ್ ಕೃಷ್ಣ, ಕೈಗಾರಿಕಾಭಿವೃದ್ದಿ ಆಯುಕ್ತರು

ದೇಸಿ ಆಟಿಕೆಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಂತೆ ಹಾಗೂ ಅವುಗಳ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ಮಾರ್ಗೋಪಾಯಗಳ ಕುರಿತು ಪ್ರಧಾನಿ ನರೇಂದ ಮೋದಿ ಅವರು ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜತೆ ಇತ್ತೀಚೆಗೆ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರಕಾರ ದೇಶಿ ಮತ್ತು ವಿದೇಶಿ ಹೂಡಿಕೆದಾರರೊಂದಿಗೆ ಸಮಾಲೋಚನೆ ನಡೆಸಿದೆ.

ದೇಶದ ಪ್ರಮುಖ ಆಟಿಕೆ ಕ್ಲಸ್ಟರ್ ಆಗಿ ಹೊರಹೊಮ್ಮಲು ಸಜ್ಜಾಗಿರುವ ಕರ್ನಾಟಕ, ಆಟಿಕೆ ತಯಾರಿಸುವ ಕೈಗಾರಿಕೆಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಲಿದೆ. ಇದರ ಫಲವಾಗಿ ಆಟಿಕೆ ಉದ್ಯಮ ಶೇ.18ರಷ್ಟು ಪ್ರಗತಿ ಸಾಧಿಸಿದ್ದು, 2023ರ ವೇಳೆಗೆ 310 ದಶಲಕ್ಷ ಡಾಲರ್ ತಲುಪುವ ನಿರೀಕ್ಷೆಯಿದೆ.

ಕರ್ನಾಟಕವನ್ನು ಭಾರತದ ಆಟಿಕೆ ಉತ್ಪಾದನಾ ಕೇಂದ್ರವಾಗಿಸಲು ಮತ್ತು ಆಟಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ರಾಜ್ಯ ಸರಕಾರದ ಪ್ರಯತ್ನದ ಭಾಗವಾಗಿ, 'ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ' (ಪಿಎಸ್‌ಐಸಿಡಿ) ಕಾರ್ಯಕ್ರಮ ರೂಪಿಸಲಾಗಿದೆ. ಕೊಪ್ಪಳವನ್ನು ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಎಂದು ಗುರುತಿಸಲಾಗಿದ್ದು, ಅದನ್ನು ವಿಶ್ವ ದರ್ಜೆಯ ಕ್ಲಸ್ಟರ್ ಆಗಿ ರೂಪಿಸಲು ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ