ಆ್ಯಪ್ನಗರ

ಜುಕರ್‌ಬರ್ಗ್‌ ರಾಜೀನಾಮೆಗೆ ಹೂಡಿಕೆದಾರರ ಪಟ್ಟು

ವರದಿಯ ಪ್ರಕಾರ, ಫೇಸ್‌ಬುಕ್‌ ತನ್ನ ಪ್ರತಿಸ್ಪರ್ಧಿ ತಂತ್ರಜ್ಞಾನ ಕಂಪನಿಗಳನ್ನು , ಹಾಗೂ ಟೀಕಾಕಾರರ ವಿರುದ್ಧ ಅಪಪ್ರಚಾರ ಮಾಡಲು ಪ್ರತ್ಯೇಕ ಪಿಆರ್‌ ಕಂಪನಿಯನ್ನೇ ನೇಮಿಸಿದೆ.

Vijaya Karnataka Web 18 Nov 2018, 8:07 am
ವಾಷಿಂಗ್ಟನ್‌: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ನ ಸ್ಥಾಪಕ, ಅಧ್ಯಕ್ಷ ಹಾಗೂ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಹೂಡಿಕೆದಾರರು ಪಟ್ಟು ಹಿಡಿದಿದ್ದಾರೆ.
Vijaya Karnataka Web mark_zuckerberg


ಫೇಸ್‌ಬುಕ್‌ ತನ್ನ ಪ್ರತಿಸ್ಪರ್ಧಿಗಳನ್ನು ಹಣಿಯಲು ಸಾರ್ವಜನಿಕ ಸಂಪರ್ಕ (ಪಬ್ಲಿಕ್‌ ರಿಲೇಶನ್ಸ್‌) ಕಂಪನಿಯೊಂದನ್ನು ನೇಮಕ ಮಾಡಿದೆ. ಹಾಗೂ ಹಲವಾರು ಅಕ್ರಮಗಳನ್ನು ಎಸಗಿದೆ ಎಂದು ಮಾಧ್ಯಮಗಳಲ್ಲಿ ಶನಿವಾರ ವರದಿಯಾಗಿರುವ ಬೆನ್ನಲ್ಲೇ, ಜುಕರ್‌ಬರ್ಗ್‌ ಪದತ್ಯಾಗಕ್ಕೆ ಹೂಡಿಕೆದಾರರು ಒತ್ತಡ ಹೇರಿದ್ದಾರೆ.

ಆದರೆ ಜುಕರ್‌ಬರ್ಗ್‌ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಆರೋಪಿತ ಪಿ.ಆರ್‌ ಕಂಪನಿಯ ಜತೆಗೆ ಫೇಸ್‌ಬುಕ್‌ಗೆ ಸಂಬಂಧ ಇಲ್ಲ ಎಂದಿದ್ದಾರೆ.

ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫೇಸ್‌ಬುಕ್‌ ತನ್ನ ಪ್ರತಿಸ್ಪರ್ಧಿ ತಂತ್ರಜ್ಞಾನ ಕಂಪನಿಗಳನ್ನು , ಹಾಗೂ ಟೀಕಾಕಾರರ ವಿರುದ್ಧ ಅಪಪ್ರಚಾರ ಮಾಡಲು ಪ್ರತ್ಯೇಕ ಪಿಆರ್‌ ಕಂಪನಿಯನ್ನೇ ನೇಮಿಸಿತ್ತು. ಈ ಪಿಆರ್‌ ಕಂಪನಿಯು ಫೇಸ್‌ಬುಕ್‌ನ ಪ್ರತಿಸ್ಪರ್ಧಿ ಹಾಗೂ ಟೀಕಾಕಾರರನ್ನು ಜನಾಂಗೀಯ ವಿರೋಧಿಗಳು, ಆ್ಯಂಟಿ-ಸೆಮೆಟಿಕ್‌ ಎಂದು ಕೆಸರೆರಚುತ್ತಿತ್ತು. ಇಲ್ಲವೇ ಬಿಲಿಯನೇರ್‌ ಉದ್ಯಮಿ, ಮಾನವಹಕ್ಕುಗಳ ಪ್ರತಿಪಾದಕ, ಜಾರ್ಜ್‌ ಸೋರ್ಸ್‌ ಅವರ ಏಜೆಂಟರು ಎಂದು ಅಪಪ್ರಚಾರ ಮಾಡುತ್ತಿತ್ತು. ಈ ಮೂಲಕ ಫೇಸ್‌ಬುಕ್‌ ತನ್ನ ಪ್ರತಿಸ್ಪರ್ಧಿ ಕಂಪನಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶಗೊಳ್ಳುವಂತೆ ಮಾಡುತ್ತಿತ್ತು.

ರಿಪಬ್ಲಿಕನ್‌ ಪಕ್ಷದ ಮುಖಂಡರೊಬ್ಬರಿಗೆ ಸೇರಿದ ಪಿಆರ್‌ ಕಂಪನಿಯಾದ ಡಿಫೈನರ್ಸ್‌ ಪಬ್ಲಿಕ್‌ ಅಫೇರ್ಸ್‌ ಅನ್ನು ಈ ಕೃತ್ಯಗಳಿಗೆ ಫೇಸ್‌ಬುಕ್‌ ಬಳಸಿಕೊಂಡಿದೆ. 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ರಷ್ಯಾ ಮಧ್ಯಪ್ರವೇಶಿಸಿತ್ತು ಎಂಬ ಆರೋಪ ಹಾಗೂ ಕೇಂಬ್ರಿಡ್ಜ್‌ ಅನಾಲಿಟಿಕಾ ಹಗರಣದ ನಂತರ ಫೇಸ್‌ಬುಕ್‌ನ ವರ್ಚಸ್ಸು ಕುಸಿದಿತ್ತು. ಈ ಹೊಡೆತದಿಂದ ಚೇತರಿಸಿಕೊಳ್ಳಲು ಬಲಪಂಥೀಯ ಡಿಫೈನರ್ಸ್‌ ಪಬ್ಲಿಕ್‌ ಅಫೇರ್ಸ್‌ ನೆರವು ನೀಡಿತ್ತು ಎಂದು ವರದಿಯಾಗಿದೆ.

ಫೇಸ್‌ಬುಕ್‌ನಲ್ಲಿ ಷೇರು ಪಾಲು ಹೊಂದಿರುವ ಹೂಡಿಕೆದಾರ, ಹಿರಿಯ ಉಪಾಧ್ಯಕ್ಷ ಜಾನ್ಸ್‌ ಕ್ರೋನ್‌, ಜುಕರ್‌ಬರ್ಗ್‌ ಪದತ್ಯಾಗಕ್ಕೆ ಒತ್ತಾಯಿಸಿದ್ದಾರೆ. ಈ ಎಲ್ಲ ವಿವಾದಗಳ ಪರಿಣಾಮ ಫೇಸ್‌ಬುಕ್‌ನ ಉದ್ಯೋಗಿಗಳಲ್ಲಿ ಕಂಪನಿಯ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ