ಆ್ಯಪ್ನಗರ

ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಜೊತೆ ಪೋಸ್ಟ್‌ಪೇಯ್ಡ್‌ ಸಮರಕ್ಕಿಳಿದ ಜಿಯೋ

ಪೋಸ್ಟ್‌ಪೇಯ್ಡ್‌ ಸೇವೆಗಳ ಮೂಲಕ ಈಗಿರುವ ತನ್ನ ಗ್ರಾಹಕರ ಸಂಖ್ಯೆಯನ್ನು 40 ಕೋಟಿಯಿಂದ 50 ಕೋಟಿಗೆ ಏರಿಸುವುದು ಮತ್ತು ಪ್ರತಿ ಬಳಕೆದಾರನಿಂದ ಬರುವ ಸರಾಸರಿ ಆದಾಯವನ್ನು ಹೆಚ್ಚಿಸುವುದು ಜಿಯೋದ ಯೋಜನೆಯಾಗಿದೆ.

THE ECONOMIC TIMES 22 Sep 2020, 6:32 pm
ಮುಂಬಯಿ: ಇಲ್ಲಿಯವರೆಗೆ ಪೋಸ್ಟ್‌ಪೇಯ್ಡ್‌ ಸೇವೆಗಳಿಗೆ ಅಷ್ಟಾಗಿ ಆಸಕ್ತಿ ತೋರಿಸದೇ ಇದ್ದ ಜಿಯೋ ಇದೀಗ ಈ ಕ್ಷೇತ್ರದತ್ತ ಹೆಚ್ಚಿನ ಗಮನಹರಿಸಲು ಆರಂಭಿಸಿದೆ. ಪೋಸ್ಟ್‌ಪೇಯ್ಡ್‌ ಮೊಬೈಲ್‌ ಸೇವೆಗಳಲ್ಲಿ ಪಾರಮ್ಯ ಮೆರೆದಿರುವ ಏರ್‌ಟೆಲ್‌ ಮತ್ತು ‘ವಿ’ ಜೊತೆ ಸಮರಕ್ಕಿಳಿಯಲು ಜಿಯೋ ವೇದಿಕೆ ಸಿದ್ಧಪಡಿಸಿದೆ.
Vijaya Karnataka Web Jio


ಪೋಸ್ಟ್‌ಪೇಯ್ಡ್‌ ಒಂದು ರೀತಿಯಲ್ಲಿ ಮೊಬೈಲ್‌ ಸೇವಾ ವಲಯದ ಚಿನ್ನದ ಮೊಟ್ಟೆ ಇದ್ದಂತೆ. ಪೋಸ್ಟ್‌ಪೇಯ್ಡ್‌ ಗ್ರಾಹಕರ ಸಂಖ್ಯೆ ಕಡಿಮೆ, ಆದರೆ ಕಂಪನಿಗಳಿಗೆ ಇವರಿಂದ ಸಿಗುವ ಆದಾಯ ಜಾಸ್ತಿ. ಸಾಮಾನ್ಯವಾಗಿ ಶ್ರೀಮಂತರು ಮತ್ತು ಸ್ವಲ್ಪಮಟ್ಟಿನ ಉದಾಸೀನ ಪ್ರವೃತ್ತಿಯ ಜನರೇ ಪೋಸ್ಟ್‌ಪೇಯ್ಡ್‌ ಸೇವೆಗಳ ಗ್ರಾಹಕರು.

ಮಾರುಕಟ್ಟೆ ತಜ್ಞರ ಪ್ರಕಾರ ಕಂಪನಿಗಳ ಒಟ್ಟಾರೆ ಗ್ರಾಹಕರಲ್ಲಿ ಇವರ ಪಾಲು ಶೇ. 4- 5 ಅಷ್ಟೇ. ಆದರೆ ಇವರಿಂದ ಮೊಬೈಲ್‌ ಕಂಪನಿಗಳಿಗೆ ಶೇ. 25ರವರೆಗೆ ಆದಾಯ ಬರುತ್ತದೆ.

ಇವರನ್ನೀಗ ತನ್ನತ್ತ ಸೆಳೆದುಕೊಳ್ಳಲು ಜಿಯೋ ಮುಂದಾಗಿದೆ. ಇಲ್ಲಿಯವರೆಗೆ ಪ್ರಿಪೇಯ್ಡ್‌ನತ್ತಲೇ ಗಮನಹರಿಸಿದ್ದ ಜಿಯೋ 199 ರೂಪಾಯಿಗಳ ಪೋಸ್ಟ್‌ಪೇಯ್ಡ್‌ ಆಫರ್‌ನ್ನು ಮಾತ್ರ ನೀಡಿತ್ತು. ಇದೀಗ ರೂ. 399, 599, 799, 999 ಮತ್ತು 1499ರ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಫ್ಯಾಮಿಲಿ ಪ್ಯಾಕ್‌ ಮತ್ತು ಒಟಿಟಿ ಸೇವೆಗಳ ಅತ್ಯಾಕರ್ಷಕ ಕೊಡುಗೆಗಳನ್ನೂ ಜಿಯೋ ಗ್ರಾಹಕರ ಮುಂದಿಟ್ಟಿದೆ.

ಈಗಾಗಲೇ 40 ಕೋಟಿ ಪ್ರಿಪೇಯ್ಡ್‌ ಗ್ರಾಹಕರನ್ನು ಗಳಿಸಿರುವ ಜಿಯೋಗೆ ಪೋಸ್ಟ್‌ಪೇಯ್ಡ್‌ ಸೇವೆಗಳನ್ನು ಆರಂಭಿಸಲು ಇದ್ದಕ್ಕಿಂತ ಸುಸಮಯ ಬೇರೊಂದಿಲ್ಲ ಎಂದು ಜಿಯೋ ನಿರ್ದೇಶಕ ಆಕಾಶ್‌ ಅಂಬಾನಿ ಹೇಳಿದ್ದಾರೆ.

ಹೀಗಾಗಿ ಮುಂದಿನ ದಿನಗಳಲ್ಲಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಮತ್ತು ಜಿಯೋದ ನಡುವೆ ಪ್ರಿಪೇಯ್ಡ್‌ ಸಮರ ಕಾವೇರಲಿದೆ.

ಪ್ರತಿ ಬಳಕೆದಾರನಿಂದ ಬರುವ ಸರಾಸರಿ ಆದಾಯ (ಎಆರ್‌ಪಿಯು) ಗುರಿಯಾಗಿಸಿಕೊಂಡು ಜಿಯೋ ಪೋಸ್ಟ್‌ಪೇಯ್ಡ್‌ ಅಂಗಳಕ್ಕೆ ಕಾಲಿಟ್ಟಿದೆ. ಟೆಲಿಕಾಂ ವಲಯದ ಯಶಸ್ಸಿನ ಅಳತೆಗೋಲು ಎಂದೇ ಪರಿಗಣಿಸಲಾಗಿರುವ ‘ಎಆರ್‌ಪಿಯು’ನಲ್ಲಿ ಏರ್‌ಟೆಲ್‌ ಮುಂದಿದ್ದು ಪ್ರತಿ ಗ್ರಾಹಕನಿಂದ ಕಂಪನಿ ಪ್ರತಿ ತಿಂಗಳು ಸರಾಸರಿ 157 ರೂಪಾಯಿ ಆದಾಯ ಗಳಿಸುತ್ತಿದೆ. ಇನ್ನು ಜಿಯೋ 140 ರೂ. ಆದಾಯ ಪಡೆದುಕೊಂಡರೆ, ವೊಡಾಫೋನ್‌ ಐಡಿಯಾ ಪಾಲು 114 ರೂಪಾಯಿ.

ಪೋಸ್ಟ್‌ಪೇಯ್ಡ್‌ ಸೇವೆಗಳ ಮೂಲಕ ಈಗಿರುವ ತನ್ನ ಗ್ರಾಹಕರ ಸಂಖ್ಯೆಯನ್ನು 40 ಕೋಟಿಯಿಂದ 50 ಕೋಟಿಗೆ ಏರಿಸುವುದು ಮತ್ತು ಎಆರ್‌ಪಿಯು ಹೆಚ್ಚಿಸುವುದು ಜಿಯೋದ ಯೋಜನೆಯಾಗಿದೆ.

ಆದರೆ ಏರ್‌ಟೆಲ್‌, ವೊಡಾಫೋನ್‌ ಜೊತೆಗಿರುವ ಗ್ರಾಹಕರು ಉತ್ತಮ ರೋಮಿಂಗ್‌ ಸೇವೆ ಮತ್ತು ಕಸ್ಟಮರ್‌ ಕೇರ್‌ ಜೊತೆಗಿನ ನಿರಂತರ ಒಡನಾಟದಿಂದ ಅಷ್ಟು ಸುಲಭಕ್ಕೆ ಕಂಪನಿಗಳನ್ನು ಬದಲಿಸುವವರಲ್ಲ ಎಂಬುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ. ಇವರನ್ನು ಹೇಗೆ ಜಿಯೋ ತನ್ನತ್ತ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ