ಆ್ಯಪ್ನಗರ

ಬಡ್ಡಿ ಮನ್ನಾ ವಿಷಯದಲ್ಲಿ ಶೀಘ್ರ ನಿರ್ಧಾರ, ಮೊರಾಟೋರಿಯಂ ಪಡೆದವರಿಗೆ ಸಿಗುತ್ತಾ ರಿಲೀಫ್‌?

ಅಕ್ಟೋಬರ್‌ 1ರಂದು ಇ-ಮೇಲ್‌ ಮೂಲಕ ಕೇಂದ್ರ ಸರಕಾರವು ಪ್ರತಿಕ್ರಿಯೆಯನ್ನು ಸಲ್ಲಿಸಲಿ. ಮತ್ತಷ್ಟು ಸಮಯವನ್ನು ಸರಕಾರ ಕೇಳಬಾರದು ಎಂದು ಸುಪ್ರೀಂ ಕೋರ್ಟ್‌ ಸೋಮವಾರದ ವಿಚಾರಣೆಯಲ್ಲಿ ಹೇಳಿದೆ.

PTI 28 Sep 2020, 7:46 pm
ಹೊಸದಿಲ್ಲಿ: ಸಾಲಗಳ ಇಎಂಐ ಅವಧಿ ಮುಂದೂಡಿಕೆ (ಮೊರಾಟೋರಿಯಂ) ಸಂದರ್ಭದಲ್ಲಿ ಬಡ್ಡಿ ದರ ವಿಧಿಸಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಮುಂದಿನ 2-3 ದಿನಗಳಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಸರಕಾರವು ಸುಪ್ರೀಂ ಕೋರ್ಟಿಗೆ ಸೋಮವಾರ ಮಾಹಿತಿ ನೀಡಿದೆ.
Vijaya Karnataka Web moratorium


ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 6 ತಿಂಗಳ ಮೊರಾಟೋರಿಯಂ ಪಡೆಯಲು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಆ ಅವಧಿಯಲ್ಲಿ ಬಡ್ಡಿ, ಚಕ್ರಬಡ್ಡಿ ಹಾಕುವ ಬ್ಯಾಂಕ್‌ನ ಧೋರಣೆಯನ್ನು ಅನೇಕರು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಸುಪ್ರೀಂ ಕೋರ್ಟ್‌ ನ್ಯಾಯಪೀಠವು, ಸರಕಾರವು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿತ್ತು. ಇದಕ್ಕೆ ಸರಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಕ್ರಿಯಿಸಿದ್ದು, "ಸಮಸ್ಯೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಸೂಕ್ತ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನ್ಯಾಯಾಲಯಕ್ಕೆ ಸದ್ಯದಲ್ಲೇ ಸರಕಾರವು ಪ್ರಮಾಣ ಪತ್ರ ಸಲ್ಲಿಸಲಿದೆ,’’ ಎಂದಿದ್ದಾರೆ.

ಅ.5ಕ್ಕೆ ಮುಂದಿನ ವಿಚಾರಣೆ

"ಅಕ್ಟೋಬರ್‌ 1ರಂದು ಇ-ಮೇಲ್‌ ಮೂಲಕ ಸರಕಾರವು ಪ್ರತಿಕ್ರಿಯೆಯನ್ನು ಸಲ್ಲಿಸಲಿ. ಮತ್ತಷ್ಟು ಸಮಯವನ್ನು ಸರಕಾರ ಕೇಳಬಾರದು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 5ರಂದು ಕೋರ್ಟ್‌ ನಡೆಸಲಿದೆ," ಎಂದು ನ್ಯಾಯಪೀಠ ತಿಳಿಸಿತು.

ಬಡ್ಡಿ ಮನ್ನಾ ಮಾಡಿದರೆ ಕಷ್ಟ

ಮೊರಾಟೋರಿಯಂ ಅವಧಿಯಲ್ಲಿನ ಬಡ್ಡಿ/ಚಕ್ರಬಡ್ಡಿಗಳನ್ನು ಮನ್ನಾ ಮಾಡಿದರೆ, ಠೇವಣಿದಾರರಿಗೆ ಅನ್ಯಾಯವಾಗುತ್ತದೆ ಎಂದು ಸರಕಾರವು ಈ ಮೊದಲು ಹೇಳಿತ್ತು. ಜಿಡಿಪಿ ಪಾತಾಳಕ್ಕೆ ಕುಸಿದಿದ್ದು, ಸರಕಾರದ ಮುಂದೆ ಹೆಚ್ಚಿನ ಸವಾಲುಗಳಿವೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಲು ಯತ್ನಿಸಿತ್ತು. ಆದರೆ, ಇದೆಲ್ಲವನ್ನೂ ತಳ್ಳಿಹಾಕಿದ್ದ ಸುಪ್ರೀಂ ಕೋರ್ಟ್‌, "ಆರ್‌ಬಿಐ ಹೇಳಿದ್ದನ್ನು ನಮಗೆ ವಿವರಿಸಬೇಡಿ," ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ