ಆ್ಯಪ್ನಗರ

'ಕನಿಷ್ಠ ಬೆಂಬಲ ಬೆಲೆ' ಖಾತ್ರಿ ಪರಿಶೀಲನೆಗೆ ಸಮಿತಿ ರಚಿಸಲು ನಿರ್ಧಾರ

ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಿದ ಬಳಿಕವೂ ಉಳಿಯುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಿಕ್ಕಟ್ಟಿನ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.

Vijaya Karnataka 27 Nov 2021, 10:55 pm
ಹೊಸದಿಲ್ಲಿ: ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸಿದ ಬಳಿಕವೂ ಉಳಿಯುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬಿಕ್ಕಟ್ಟಿನ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ.
Vijaya Karnataka Web pm modi new


''ಕಾಯಿದೆಗಳ ರದ್ದತಿ ಬಳಿಕವೂ ಕೃಷಿ ಸುಧಾರಣೆಯ ಅಭಿಯಾನ ಮುಂದುವರಿಯುತ್ತದೆ. ವಿಶೇಷವಾಗಿ ವೈವಿಧ್ಯ ಬೆಳೆ ಪದ್ಧತಿ, ಶೂನ್ಯ ಬಂಡವಾಳ ಕೃಷಿ ಮತ್ತು ಎಂಎಸ್‌ಪಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು. ಇವುಗಳ ಸಾಧ್ಯಾಸಾಧ್ಯತೆ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲಾಗುವುದು,'' ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಶನಿವಾರ ತಿಳಿಸಿದರು.

'ಕೃಷಿ ಕಾನೂನುಗಳ ರದ್ದು' ಅನುಮೋದಿಸಲು ನ.24ಕ್ಕೆ ಕೇಂದ್ರ ಸಂಪುಟ ಸಭೆ!

ಕೃಷಿ ಕಾಯಿದೆಗಳ ರದ್ದು ಘೋಷಣೆ ಮಾಡಿದ ಬೆನ್ನ ಹಿಂದೆಯೇ ಬೆಂಬಲ ಬೆಲೆಗೆ ಕಾನೂನುಬದ್ಧ ಖಾತರಿ ನೀಡುವಂತೆ ರೈತ ಮುಖಂಡರು ಆಗ್ರಹ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, ''ರೈತರ ಒಳಿತಿನ ಸರ್ವ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಂಎಸ್‌ಪಿ ಪರಿಶೀಲನೆಗೆ ಸಮಿತಿ ರಚಿಸಲಾಗುವುದು,'' ಎಂದು ಭರವಸೆ ನೀಡಿದಿದ್ದರು. ಇದನ್ನು ದೃಢೀಕರಿಸಿದ ಸಚಿವ ತೋಮರ್‌, ''ರೈತರ ಹಿತಕ್ಕೆ ಕಿಂಚಿತ್ತು ಧಕ್ಕೆ ಒದಗಿದರೂ ಅದನ್ನು ಸರಕಾರ ಸಹಿಸುವುದಿಲ್ಲ. ಅನ್ನದಾತನ ಹಿತರಕ್ಷಣೆಯೇ ಸರಕಾರದ ಪ್ರಧಾನ ಆಶಯ. ಕಾಯಿದೆ ರದ್ದಿನ ಬಳಿಕದ ಕ್ರಮಗಳ ಕುರಿತು ಪರಿಶೀಲಿಸಲು ರಚನೆಯಾಗುವ ತಜ್ಞರ ಸಮಿತಿಯಲ್ಲಿ ರೈತ ಪ್ರತಿನಿಧಿಗಳಿಗೂ ಅವಕಾಶ ನೀಡಲಾಗುವುದು,'' ಎಂದು ತಿಳಿಸಿದರು.

ಬೆಂಬಲ ಬೆಲೆಗೆ ಕಾನೂನು ಬರುವವರೆಗೂ ಹೋರಾಟ ಮುಂದುವರಿಕೆ: ಸಿಂಘು ಗಡಿಯಲ್ಲಿ ರೈತರ ಘೋಷಣೆ

ಕೃಷಿ ಕಾಯಿದೆ ವಿರೋಧಿಸಿ ಕಳೆದ ವರ್ಷ ನವೆಂಬರ್‌ 26ರಿಂದ ಇದುವರೆಗೆ ರೈತರು ದಿಲ್ಲಿ ಗಡಿಯಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತ ಬಂದಿದ್ದಾರೆ. ಕಾಯಿದೆಗಳ ರದ್ದು ನಿರ್ಧಾರಕ್ಕೆ ಸಂಸತ್‌ ಅನುಮೋದನೆ ನೀಡಿದ ಬಳಿಕವೇ ಪ್ರತಿಭಟನೆ ಸ್ಥಗಿತಗೊಳಿಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ. ಎಂಎಸ್‌ಪಿ ಖಾತರಿಗೆ ಹೊಸ ಪಟ್ಟನ್ನು ಈಗ ರೈತ ಸಂಘಟನೆಗಳು ಪ್ರಯೋಗಿಸಿವೆ.

''ಉದ್ದೇಶಿತ ಸಮಿತಿಯು ರೈತರ ಅರ್ಹ ಬೇಡಿಕೆಗಳನ್ನು ಈಡೇರಿಸುತ್ತದೆ. ಜಮೀನಿನಲ್ಲಿ ಕೂಳೆ ಸುಡುವುದನ್ನು ಅಪರಾಧ ಮುಕ್ತಗೊಳಿಸುವಂತೆ ರೈತ ಸಂಘಟನೆಗಳು ಒತ್ತಾಯಿಸಿವೆ. ಈ ಬೇಡಿಕೆಗೂ ಸರಕಾರ ಸಮ್ಮತಿ ಸೂಚಿಸಿದೆ. ಆದ್ದರಿಂದ ಪ್ರತಿಭಟನೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ರೈತರು ಪ್ರತಿಭಟನೆ ಕೊನೆಗೊಳಿಸಿ ಮನೆಗೆ ತೆರಳಬೇಕು,'' ಎಂದು ತೋಮರ್‌ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ