ಆ್ಯಪ್ನಗರ

ನವೆಂಬರ್‌ನಲ್ಲಿ ಸತತ ಎರಡನೇ ಬಾರಿ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್‌ಟಿ ಆದಾಯ

​​ನವೆಂಬರ್‌ನಲ್ಲಿ ಜಿಎಸ್‌ಟಿ 1.05 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಕ್ಟೋಬರ್‌, ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಸತತ ಲಕ್ಷ ಕೋಟಿ ರೂ. ಗಡಿ ದಾಟಿದೆ. ನವೆಂಬರ್‌ 30ರ ಅಂತ್ಯಕ್ಕೆ 82 ಲಕ್ಷ ಜಿಎಸ್‌ಟಿಆರ್‌-3ಬಿ ರಿಟರ್ನ್ಸ್‌ ಸಲ್ಲಿಕೆಯಾಗಿದೆ.

Agencies 1 Dec 2020, 7:49 pm
ಹೊಸದಿಲ್ಲಿ: ಸತತ ಎರಡನೇ ತಿಂಗಳೂ ಜಿಎಸ್‌ಟಿ ಆದಾಯ 1 ಲಕ್ಷ ಕೋಟಿ ರೂಪಾಯಿ ದಾಟಿದೆ. ನವೆಂಬರ್‌ನಲ್ಲಿ 1,04,963 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಮಂಗಳವಾರ ಹೇಳಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಆದಾಯ ಶೇ.1.4ರಷ್ಟು ಹೆಚ್ಚಾಗಿದೆ.
Vijaya Karnataka Web GST


1.04 ಲಕ್ಷ ಕೋಟಿ ರೂಪಾಯಿಯಲ್ಲಿ ಕೇಂದ್ರ ಜಿಎಸ್‌ಟಿ ಆದಾಯ 19,189 ಕೋಟಿ ರೂ. ಇದ್ದರೆ, ರಾಜ್ಯ ಜಿಎಸ್‌ಟಿ ಆದಾಯ 25,504 ಕೋಟಿ ರೂ. ಇದೆ. ಸಂಯೋಜಿತ ಜಿಎಸ್‌ಟಿ ಆದಾಯ 51,992 ಕೋಟಿ ರೂ. ಹಾಗೂ ಸೆಸ್‌ ಆದಾಯ 8,242 ಕೋಟಿ ರೂ. ಆಗಿದೆ.

2019ರ ನವೆಂಬರ್‌ನಲ್ಲಿ 1.03 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಬಂದಿದ್ದರೆ, 2020ರ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಜಿಎಸ್‌ಟಿ ಆದಾಯ 192 ಕೋಟಿ ರೂ. ಕಡಿಮೆಯಾಗಿದೆ. ನವೆಂಬರ್‌ ಅಂತ್ಯಕ್ಕೆ 82 ಲಕ್ಷ ಜಿಎಸ್‌ಟಿಆರ್‌ - 3ಬಿ ರಿಟರ್ನ್ಸ್‌ ಸಲ್ಲಿಕೆಯಾಗಿದೆ.

ನವೆಂಬರ್‌ ತಿಂಗಳಲ್ಲಿ ಆಮದಾದ ವಸ್ತುಗಳಿಂದ ಗಳಿಸಿದ ಆದಾಯ ಶೇ.4.9ರಷ್ಟು ಹೆಚ್ಚಾಗಿದ್ದರೆ, ದೇಶಿ ವರ್ಗಾವಣೆಗಳಿಂದ ಗಳಿಸಿದ ಆದಾಯ ಶೇ. 0.5ರಷ್ಟು ಏರಿಕೆಯಾಗಿದೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ 7.5% ಕುಸಿತ, ಚೇತರಿಕೆ ಹಾದಿಯಲ್ಲಿ ಆರ್ಥಿಕತೆ
ಏಪ್ರಿಲ್‌ನಲ್ಲಿ ಲಾಕ್‌ಡೌನ್‌ ಘೋಷಣೆ ಬೆನ್ನಿಗೆ ಜಿಎಸ್‌ಟಿ ಆದಾಯ ಏಕಾಏಕಿ 32,172 ರೂಪಾಯಿಗೆ ಇಳಿಕೆಯಾಗಿತ್ತು. ಆದರೆ ಲಾಕ್‌ಡೌನ್‌ ಸಡಿಲಗೊಳಿಸುತ್ತಿದ್ದಂತೆ ಆದಾಯ ಹೆಚ್ಚಾಗುತ್ತಾ ಸಾಗಿದ್ದು ಇದೀಗ ಸತತ ಎರಡು ತಿಂಗಳು 1 ಲಕ್ಷ ಕೋಟಿ ರೂಪಾಯಿ ದಾಟಿದೆ.

2019-20ರ 12 ತಿಂಗಳಲ್ಲಿ 8 ತಿಂಗಳಲ್ಲಿ ಜಿಎಸ್‌ಟಿ ಆದಾಯ 1 ಲಕ್ಷ ಕೋಟಿ ರೂಪಾಯಿ ದಾಟಿತ್ತು. ಆದರೆ ಈ ವರ್ಷ ಕೊರೊನಾ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಆರ್ಥಿಕ ಹಿಂಜರಿತ ಸಂಭವಿಸಿದ್ದು, ಜಿಎಸ್‌ಟಿ ಆದಾಯವೂ ದೊಡ್ಡ ಮಟ್ಟಕ್ಕೆ ಕುಸಿದಿದೆ.

ಕರ್ನಾಟಕದಲ್ಲಿ 6,915 ಕೋಟಿ ರೂ. ಸಂಗ್ರಹ

ಕರ್ನಾಟಕದಲ್ಲಿ ಈ ವರ್ಷದ ನವೆಂಬರ್‌ನಲ್ಲಿ 6,915 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 6,972 ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ 57 ಕೋಟಿ ರೂ. ಇಳಿಕೆಯಾಗಿದೆ (ಮೈನಸ್‌ 1 ಪರ್ಸೆಂಟ್‌). ತಮಿಳುನಾಡಿನಲ್ಲಿ 7,084 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 10 ಪರ್ಸೆಂಟ್‌ ಏರಿಕೆಯಾಗಿದೆ.

2020ರಲ್ಲಿ ಜಿಎಸ್‌ಟಿ ಸಂಗ್ರಹ (ಕೋಟಿ ರೂ.ಗಳಲ್ಲಿ)

  1. ಜನವರಿ: 1,10,828
  2. ಫೆಬ್ರವರಿ: 1,05,366
  3. ಮಾರ್ಚ್: 97,597
  4. ಏಪ್ರಿಲ್‌: 32,172
  5. ಮೇ: 62,151
  6. ಜೂನ್‌: 90,917
  7. ಜುಲೈ: 87,422
  8. ಆಗಸ್ಟ್‌ : 86,449
  9. ಸೆಪ್ಟೆಂಬರ್‌:95,480
  10. ಅಕ್ಟೋಬರ್‌: 1,05,155
  11. ನವೆಂಬರ್‌: 1,04,963

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ