ಆ್ಯಪ್ನಗರ

1,500 ಕೋಟಿ ರೂ. ಸಾಲ ಪಡೆಯಲು ಏರ್‌ ಇಂಡಿಯಾ ಯತ್ನ

ನಷ್ಟದ ಹೊರೆ ಹೊತ್ತಿರುವ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಾರಾಟಕ್ಕೆ ಕೇಂದ್ರ ಸರಕಾರ ಪ್ರಯತ್ನ ನಡೆಸಿದೆ...

Vijaya Karnataka Web 21 Oct 2017, 4:00 am

ಹೊಸದಿಲ್ಲಿ: ನಷ್ಟದ ಹೊರೆ ಹೊತ್ತಿರುವ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಮಾರಾಟಕ್ಕೆ ಕೇಂದ್ರ ಸರಕಾರ ಪ್ರಯತ್ನ ನಡೆಸಿದೆ. ಆದರೆ, ಕಾರ್ಯ ನಿರ್ವಹಣೆ ಸಲುವಾಗಿ ತುರ್ತು ಬಂಡವಾಳ ಕ್ರೋಡೀಕರಿಸಲು 1,500 ಕೋಟಿ ರೂ. ಅಲ್ಪಾವಧಿ ಸಾಲ ಪಡೆಯಲು ಏರ್‌ ಇಂಡಿಯಾ ಮುಂದಾಗಿದೆ.

ಅ.18ರಂದು ಸಿದ್ಧಗೊಳಿಸಲಾಗಿರುವ ಏರ್‌ ಇಂಡಿಯಾದ ದಾಖಲೆಯೊಂದರಲ್ಲಿ ಸಾಲದ ಪ್ರಸ್ತಾವನೆ ಕಂಡು ಬಂದಿದೆ. ''ದುಡಿಮೆ ಬಂಡವಾಳದ ತುರ್ತು ಅಗತ್ಯ ಸೃಷ್ಟಿಯಾಗಿದ್ದು, ಸರಕಾರದ ಗ್ಯಾರಂಟಿ ಆಧಾರಿತ ಅಲ್ಪಾವಧಿ ಸಾಲವನ್ನು 1,500 ಕೋಟಿ ರೂ. ತನಕ ಪಡೆಯಲು ಪ್ರಯತ್ನ ನಡೆದಿದೆ,'' ಎಂದು ಏರ್‌ ಇಂಡಿಯಾ ಹೇಳಿದೆ.

ಹೂಡಿಕೆ ಕಡಿತಗೊಳಿಸಲು 2018ರ ಜೂ.27ರ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಅಲ್ಲಿಯ ತನಕ ಸಾಲಗಳಿಗೆ ಸರಕಾರದ ಗ್ಯಾರಂಟಿ ಲಭ್ಯ. ಇದರ ಅನ್ವಯ ಸಾಲ ಮಾಡಲು ಏರ್‌ ಇಂಡಿಯಾ ಮುಂದಾಗಿದೆ. ಸಾಲದ ಮನವಿಯನ್ನು ಬ್ಯಾಂಕ್‌ ಮುಂದೆ ಇಟ್ಟಿದ್ದು, ಬ್ಯಾಂಕ್‌ಗಳು ಸಮ್ಮತಿಸಿದರೆ ಸದ್ಯದಲ್ಲೇ ಅಲ್ಪಾವಧಿ ಸಾಲವನ್ನು ಪಡೆಯಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ತಿಂಗಳಷ್ಟೇ 3,250 ಕೋಟಿ ರೂ. ತನಕ ಅಲ್ಪಾವಧಿ ಸಾಲ ಪಡೆಯುವ ಪ್ರಸ್ತಾವನೆಯನ್ನು ಏರ್‌ ಇಂಡಿಯಾ ಸಿದ್ಧಪಡಿಸಿತ್ತು. ತುರ್ತು ಅಗತ್ಯಗಳನ್ನು ನಿಭಾಯಿಸಲು ಸಾಲ ಪಡೆಯುವುದು ಅನಿವಾರ್ಯ ಎಂದು ಪ್ರತಿಪಾದಿಸಿತ್ತು. ಆದರೆ, ಸರಕಾರದ ಕಡೆಯಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದೀಗ, ಹೊಸ ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ.

ವಿಮಾನಯಾನ ವಲಯದಲ್ಲಿನ ತೀವ್ರ ಸ್ಪರ್ಧೆ ಮತ್ತು ನಷ್ಟದ ಹೊರೆಯಿಂದಾಗಿ ಏರ್‌ ಇಂಡಿಯಾ ತನ್ನ ಅಸ್ತಿತ್ವಕ್ಕಾಗಿ ಕಸರತ್ತು ಮಾಡುತ್ತಿದೆ. ಕಳೆದ ಜೂನ್‌ನಲ್ಲಿ, ಈ ವಿಮಾನಯಾನ ಸಂಸ್ಥೆಯಿಂದ ಬಂಡವಾಳ ವಾಪಸ್‌ ಪಡೆಯಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಅನುಮೋದನೆ ನೀಡಿತ್ತು. ಸುಮಾರು 50 ಸಾವಿರ ಕೋಟಿ ರೂ.ಗೂ ಹೆಚ್ಚಿನ ಸಾಲವನ್ನು ಏರ್‌ ಇಂಡಿಯಾ ಹೊಂದಿದೆ.

ಏರ್‌ ಇಂಡಿಯಾ ಖಾಸಗೀಕರಣ ಅಥವಾ ಮಾರಾಟಕ್ಕೆ ಪ್ರಯತ್ನಗಳು ನಡೆದಿದ್ದು, ಖರೀದಿದಾರರ ನಿರೀಕ್ಷೆಯಲ್ಲಿ ಸರಕಾರ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ