ಆ್ಯಪ್ನಗರ

ಗ್ರಾಚ್ಯುಯಿಟಿ ಬಿಲ್‌ಗೆ ಸಂಸತ್‌ ಅಸ್ತು: 20 ಲಕ್ಷದವರೆಗೆ ತೆರಿಗೆ ಇಲ್ಲ

ಸಂಘಟಿತ ವಲಯದ ಉದ್ಯೋಗಿಗಳ ತೆರಿಗೆಮುಕ್ತ ಗ್ರಾಚ್ಯುಯಿಟಿ ಮಿತಿಯನ್ನು ದುಪ್ಪಟ್ಟು ಅಂದರೆ, 20 ಲಕ್ಷ ರೂ.ಗೆ ಹೆಚ್ಚಿಸಲು ಪೂರಕವಾದ ವಿಧೇಯಕಕ್ಕೆ ಗುರುವಾರ ಸಂಸತ್‌ ಅಂಗೀಕಾರ ಸಿಕ್ಕಿದೆ.

Vijaya Karnataka Web 23 Mar 2018, 7:20 am
ಹೊಸದಿಲ್ಲಿ: ಸಂಘಟಿತ ವಲಯದ ಉದ್ಯೋಗಿಗಳ ತೆರಿಗೆಮುಕ್ತ ಗ್ರಾಚ್ಯುಯಿಟಿ ಮಿತಿಯನ್ನು ದುಪ್ಪಟ್ಟು ಅಂದರೆ, 20 ಲಕ್ಷ ರೂ.ಗೆ ಹೆಚ್ಚಿಸಲು ಪೂರಕವಾದ ವಿಧೇಯಕಕ್ಕೆ ಗುರುವಾರ ಸಂಸತ್‌ ಅಂಗೀಕಾರ ಸಿಕ್ಕಿದೆ. ಈ ವಿಧೇಯಕದಿಂದಾಗಿ ಖಾಸಗಿ ಮತ್ತು ಸರಕಾರಿ ವಲಯದ ಕಂಪನಿಗಳ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
Vijaya Karnataka Web ಗ್ರಾಚ್ಯುಯಿಟಿ ಬಿಲ್‌ಗೆ ಸಂಸತ್‌ ಅಸ್ತು
The Payment of Gratuity Act, 1972 has divided non-government employees into two categories.


ಕಳೆದ ವಾರವಷ್ಟೇ ಲೋಕಸಭೆ ಅನುಮೋದಿಸಿದ್ದ 'ಗ್ರಾಚ್ಯುಯಿಟಿ ಪಾವತಿ ತಿದ್ದುಪಡಿ ವಿಧೇಯಕ-2017' ಕ್ಕೆ, ಗುರುವಾರ ರಾಜ್ಯಸಭೆಯೂ ಯಾವುದೇ ಚರ್ಚೆಯಿಲ್ಲದೇ ಅನುಮೋದನೆ ನೀಡಿದೆ. ಗ್ರಾಚ್ಯುಯಿಟಿ ಜತೆಗೆ, ಈ ವಿಧೇಯಕವು ಮಹಿಳೆಯರ ಹೆರಿಗೆ ರಜೆ ಅವಧಿಯನ್ನು ನಿಗದಿ ಪಡಿಸುವ ಅಧಿಕಾರವನ್ನೂ ಸರಕಾರಕ್ಕೆ ನೀಡುತ್ತದೆ.

ಪ್ರಸ್ತುತ, ಖಾಸಗಿ ವಲಯದ ನೌಕರರಿಗೆ ಐದು ವರ್ಷಗಳು ಅಥವಾ ಅದಕ್ಕೂ ಹೆಚ್ಚಿನ ನಿರಂತರ ಸೇವೆಯ ನಂತರ 10 ಲಕ್ಷ ರೂ.ವರೆಗೆ ತೆರಿಗೆ ಮುಕ್ತ ಗ್ರಾಚ್ಯುಯಿಟಿ ಪಡೆಯಲು ಅವಕಾಶವಿದೆ. ಅದನ್ನು 20 ಲಕ್ಷ ರೂ.ಗೆ ಏರಿಕೆ ಮಾಡಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದವು. ಕಾರ್ಮಿಕ ಸಚಿವಾಲಯವು ಗ್ರಾಚ್ಯುಯಿಟಿ ಮಿತಿ ಏರಿಕೆ ಮಾಡುವ ಸಂಬಂಧ ಕಾರ್ಮಿಕ ಒಕ್ಕೂಟಗಳು ಮತ್ತು ನೌಕರರ ನಾನಾ ಸಂಸ್ಥೆಗಳ ಪ್ರತಿನಿಧಿಗಳ ಜತೆ ತ್ರಿಪಕ್ಷಿಯ ಮಾತುಕತೆ ನಡೆಸಿತ್ತು. ಅಂತಿಮವಾಗಿ ಕಾಯಿದೆ ತಿದ್ದುಪಡಿಗೆ ಸರಕಾರ ಒಪ್ಪಿತ್ತು.

ಕೇಂದ್ರ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗದಲ್ಲಿ 20 ಲಕ್ಷ ರೂ.ವರೆಗೆ(ಮೊದಲು 10 ಲಕ್ಷ ರೂ. ಇತ್ತು) ತೆರಿಗೆ ಮುಕ್ತ ಗ್ರಾಚ್ಯುಯಿಟಿ ಸೌಲಭ್ಯವನ್ನು ಸರಕಾರ ಕಲ್ಪಿಸಿದೆ. ಈಗ ಇದೇ ಸೌಲಭ್ಯವನ್ನು ಖಾಸಗಿ ವಲಯಕ್ಕೂ ವಿಸ್ತರಿಸುವ ಸಲುವಾಗಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತಿದೆ.

ಯಾರಿಗೆ ಗ್ರಾಚ್ಯುಯಿಟಿ? :

1972ರ ಗ್ರಾಚ್ಯುಯಿಟಿ ಪಾವತಿ ಕಾಯ್ದೆ ಪ್ರಕಾರ, ನೌಕರರು ನಿವೃತ್ತರಾದ ಬಳಿಕ ಅಥವಾ ಐದು ವರ್ಷ ಸೇವೆ ಸಲ್ಲಿಸಿ ಕೆಲಸ ತೊರೆದ ಸಂದರ್ಭದಲ್ಲಿ ಗ್ರಾಚ್ಯುಯಿಟಿಯನ್ನು ನೀಡಲಾಗುತ್ತದೆ. ಕಾರ್ಖಾನೆಗಳು, ಗಣಿಗಳು, ಬಂದರು, ರೈಲ್ವೆ ಕಂಪನಿಗಳು ಸೇರಿದಂತೆ ಖಾಸಗಿ ವಲಯದ ನೌಕರರಿಗೆ ಅನ್ವಯವಾಗುತ್ತದೆ. ಆದರೆ, 10ಕ್ಕಿಂತ ಹೆಚ್ಚಿನ ನೌಕರರಿರುವ ಕಂಪನಿ ಅಥವಾ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಸೇವೆಯ ಪ್ರತಿವರ್ಷದ 15 ದಿನಗಳ ವೇತನವನ್ನು ಗ್ರಾಚ್ಯುಯಿಟಿಯಾಗಿ ಪರಿಗಣಿಸಲಾಗುತ್ತದೆ.

ಗ್ರಾಚ್ಯುಯಿಟಿ ಲೆಕ್ಕಾಚಾರದ ಸೂತ್ರ:

ಕಡೆಯದಾಗಿ ಪಡೆದ ಸಾಲ(ಮೂಲವೇತನ ಮತ್ತು ತುಟ್ಟ ಭತ್ಯೆ)ಘ್ಕಿ ಗಿ ಪೂರ್ಣಗೊಳಿಸಿದ ಸೇವೆಗಳ ವರ್ಷ ಘ್ಕಿಗಿ 15/26.

ಮಹತ್ವದ ಜನಪರ ಕ್ರಮವನ್ನು ಸಂಸತ್ತು ಅಂಗೀಕರಿಸಿದೆ. ಗ್ರಾಚ್ಯುಯಿಟಿ ಮಿತಿ ಏರಿಸುವ ೕ ವಿಧೇಯಕದಿದ ಲಕ್ಷಾಂತರ ಭಾರತೀಯರಿಗೆ ಅನುಕೂಲವಾಗಲಿದೆ.

- ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ