ಆ್ಯಪ್ನಗರ

ಪೆಟ್ರೋಲ್‌ 4.26 ರೂ., ಡಿಸೇಲ್‌ 6.37 ರೂ. ಕಡಿತ...! ಇದು ಇಲ್ಲಲ್ಲ, ಆಗಿರೋದು ಪಾಕಿಸ್ತಾನದಲ್ಲಿ...

ಇಂಧನ ದರ ಏರಿಕೆಯ ಪ್ರಭಾವವನ್ನು ತಗ್ಗಿಸಿ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪಾಕಿಸ್ತಾನ ಸರಕಾರವು ಪೆಟ್ರೋಲ್‌ ದರವನ್ನು ಲೀಟರ್‌ಗೆ ರೂ.4.26, ಡೀಸೆಲ್‌ ದರವನ್ನು ರೂ.6.37 ಇಳಿಕೆ ಮಾಡಿದೆ.

Vijaya Karnataka 9 Jul 2018, 9:46 am
ಇಸ್ಲಾಮಾಬಾದ್‌: ಇಂಧನ ದರ ಏರಿಕೆಯ ಪ್ರಭಾವವನ್ನು ತಗ್ಗಿಸಿ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಪಾಕಿಸ್ತಾನ ಸರಕಾರವು ಪೆಟ್ರೋಲ್‌ ದರವನ್ನು ಲೀಟರ್‌ಗೆ ರೂ.4.26, ಡೀಸೆಲ್‌ ದರವನ್ನು ರೂ.6.37 ಇಳಿಕೆ ಮಾಡಿದೆ. ಅಷ್ಟು ಮಾತ್ರವಲ್ಲದೇ ಸೀಮೆಎಣ್ಣೆ ದರವನ್ನು ಲೀಟರ್‌ಗೆ ರೂ.3.36, ಲೈಟ್‌ ಡೀಸೆಲ್‌ ಅನ್ನು ರೂ.5.54 ಕಡಿತ ಮಾಡಿದೆ.
Vijaya Karnataka Web Petrol


ಕಚ್ಚಾ ತೈಲದ ದರಗಳು ಏರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರವೂ ಇಂಧನ ದರ ಏರಿಕೆ ಮಾಡಿತ್ತು. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲಿ, ದರ ಕಡಿತಕ್ಕೆ ಸರಕಾರ ಸಮ್ಮತಿಸಿದೆ.

ಜೂನ್‌ 30ರಂದು ಪಾಕ್‌ ಸರಕಾರವು ಇಂಧನ ಮತ್ತು ಅನಿಲ ನಿಯಂತ್ರಕ ಪ್ರಾಧಿಕಾರದ(ಒಜಿಆರ್‌ಎ) ಶಿಫಾರಸಿನ ಅನ್ವಯ, ಪೆಟ್ರೋಲ್‌ ದರವನ್ನು ಲೀಟರ್‌ಗೆ ರೂ.7.54, ಹೈಸ್ಪೀಡ್‌ ಡೀಸೆಲ್‌ ಅನ್ನು ರೂ.14, ಸೀಮೆಎಣ್ಣೆಯನ್ನು ರೂ.3.36, ಲೈಟ್‌ ಡೀಸೆಲ್‌ ಆಯಿಲ್‌ ಅನ್ನು ರೂ.5.92ರಷ್ಟು ಏರಿಸಿತ್ತು.

ಸಾರ್ವಜನಿಕರ ಹಿತಾಸಕ್ತಿಯಿಂದ ಈ ಬಗ್ಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್‌, ದರ ಏರಿಕೆ ಕ್ರಮವನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಜನಸಾಮಾನ್ಯರ ಸಂಕಷ್ಟವನ್ನು ಸಾಧ್ಯವಾಗುವ ಮಟ್ಟಿಗೆ ಕಡಿಮೆ ಮಾಡುವಂತೆ ಹೇಳಿತ್ತು. ಇದಕ್ಕೆ ಪ್ರತಿಸ್ಪಂದಿಸಿರುವ ಸರಕಾರ, ಹೆಚ್ಚಿಸಿದ್ದ ಇಂಧನ ದರದಲ್ಲಿ ಕಡಿತ ಮಾಡಿದೆ.

''ಜನರ ಸಮಸ್ಯೆಗಳು ಸರಕಾರಕ್ಕೆ ಅರಿವಿದೆ. ಹೀಗಾಗಿಯೇ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಸಾಕಷ್ಟು ಕಡಿತ ಮಾಡಿದ್ದೇವೆ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 1,000 ಕೋಟಿ ರೂಪಾಯಿ ಹೊರೆ ಬೀಳಲಿದೆ. ಆದಾಗ್ಯೂ, ಜನರ ಹಿತದೃಷ್ಟಿಯಿಂದ ದರಗಳನ್ನು ತಗ್ಗಿಸಿದ್ದೇವೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಜತೆಗೆ ಆರ್ಥಿಕ ಚಟುವಟಿಕೆ ವೃದ್ಧಿಗೂ ಪೂರಕವಾಗಲಿದೆ,'' ಎಂದು ಇಂಧನ ಸಚಿವ ಸೈಯದ್‌ ಅಲಿ ಜಾಫರ್‌ ಹೇಳಿದ್ದಾರೆ.

ಭಾರತದಲ್ಲಿ ಹೇಗೆ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರಗಳು ಏರುತ್ತಿದ್ದು, ಸರಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳನ್ನು ಒಂದೇ ಸಮನೆ ಏರಿಕೆ ಮಾಡುತ್ತಿದೆ. ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರವು ಅಬಕಾರಿ ಸುಂಕ ಕಡಿತ ಮಾಡಬೇಕು ಎನ್ನುವ ಒತ್ತಡಗಳಿವೆ. ಆದರೆ, ಅದು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ರಾಜ್ಯಗಳೂ ಸ್ಥಳೀಯ ತೆರಿಗೆ ಇಳಿಸಲು ನಿರಾಕರಿಸುತ್ತಿವೆ. ಈ ಮಧ್ಯೆ, ರೈತರ ಸಾಲಮನ್ನಾ ಉದ್ದೇಶವನ್ನು ಮುಂದಿಟ್ಟಿರುವ ಕರ್ನಾಟಕ ಸರಕಾರವು ದರ ಏರಿಸಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಲೀಟರ್‌ಗೆ ಒಂದು ರೂಪಾಯಿಗೂ ಜಾಸ್ತಿಯಾಗಿದೆ.

ನಾಲ್ಕನೇ ದಿನವಾದ ಭಾನುವಾರವೂ ಪೆಟ್ರೋಲ್‌, ಡೀಸೆಲ್‌ ದರಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿವೆ. ಪೆಟ್ರೋಲ್‌ ಲೀಟರ್‌ಗೆ 14 ಪೈಸೆ, ಡೀಸೆಲ್‌ 10 ಪೈಸೆ ಏರಿಕೆಯಾಗಿದೆ.

ಪಾಕ್‌ನಲ್ಲಿ ಈಗ ದರವೆಷ್ಟು?

ಪೆಟ್ರೋಲ್‌ ದರವನ್ನು ಲೀಟರ್‌ಗೆ ರೂ.4.26 ಇಳಿಕೆ ಮಾಡಿದರೂ ರೂ.95.24 ಇದೆ. ಹೈಸ್ಪೀಡ್‌ ಡೀಸೆಲ್‌ ದರವನ್ನು ರೂ.6.37 ಕಡಿತ ಮಾಡಿದ್ದು, ಈಗ ರೂ.112.94 ಇದೆ. ಸೀಮೆಎಣ್ಣೆ ದರ ರೂ.83.96ಕ್ಕೆ, ಲೈಟ್‌ ಡೀಸೆಲ್‌ ದರ ರೂ.75.37ಕ್ಕೆ ಇಳಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ