ಆ್ಯಪ್ನಗರ

ನೀರವ್ ಬಳಿಕ ಪಿಎನ್‌ಬಿ ಬಲು ಚುರುಕು: 7,700 ಕೋಟಿ ರೂ. ಸಾಲ ವಸೂಲು

ನೀರವ್‌ ಮೋದಿ ಹಗರಣದಿಂದ ತತ್ತರಿಸಿದ್ದ ಸರಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ), ಈಗ ಸಾರ್ವಜನಿಕರಲ್ಲಿ ತುಸು ಆಶಾಭಾವವನ್ನು ಮೂಡಿಸಿದೆ.

Vijaya Karnataka 16 Jul 2018, 9:02 am
ಹೊಸದಿಲ್ಲಿ: ನೀರವ್‌ ಮೋದಿ ಹಗರಣದಿಂದ ತತ್ತರಿಸಿದ್ದ ಸರಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ), ಈಗ ಸಾರ್ವಜನಿಕರಲ್ಲಿ ತುಸು ಆಶಾಭಾವವನ್ನು ಮೂಡಿಸಿದೆ.
Vijaya Karnataka Web Money


ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ) 7,700 ಕೋಟಿ ರೂ. ಸಾಲಗಳನ್ನು(ಎನ್‌ಪಿಎ) ವಸೂಲಿ ಮಾಡಿದೆ. ಕಳೆದ ವರ್ಷ ಕೇವಲ 5,400 ಕೋಟಿ ಎನ್‌ಪಿಎ ಇತ್ಯರ್ಥಗೊಳಿಸಿದ್ದ(ವಸೂಲಿ) ಪಿಎನ್‌ಬಿ, ಕಳೆದ ಮೂರು ತಿಂಗಳಲ್ಲಿಯೇ ಒಟ್ಟು 7,700 ಕೋಟಿ ರೂ. ವಸೂಲಿ ಮಾಡಿದೆ. ಇದು ಬ್ಯಾಂಕ್‌ ಮತ್ತೆ ಸರಿಮಾರ್ಗಕ್ಕೆ ಬರುತ್ತಿದೆ ಅನ್ನುವುದರ ಸಂಕೇತವಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಜ್ರದ ವ್ಯಾಪಾರಿ ನೀರವ್‌ ಮೋದಿ ಮತ್ತು ಅವರ ಆಪ್ತರು ಭಾಗಿಯಾಗಿರುವ ಬೃಹತ್‌ 14,000 ಕೋಟಿ ರೂ.ಗಳ ಬ್ಯಾಂಕಿಂಗ್‌ ವಂಚನೆಯಿಂದ ಪಿಎನ್‌ಬಿ ತತ್ತರಿಸಿತ್ತು. ''ಕೇಂದ್ರ ಸರಕಾರದ ಹಣಕಾಸು ನಷ್ಟ ಮತ್ತು ದಿವಾಳಿ ವಿಧೇಯಕದಿಂದ(ಐಬಿಸಿ) ಎನ್‌ಪಿಎಗೆ ಸಂಬಂಧಿಸಿದ ಸಾಲ ವಸೂಲಿಗೆ ಅನುಕೂಲವಾಗಿದೆ. ಮೊದಲ ತ್ರೈಮಾಸಿಕದಲ್ಲಿ ಭೂಷನ್‌ ಸ್ಟೀಲ್‌ ಸೇರಿದಂತೆ 2-3 ದೊಡ್ಡ ಖಾತೆಗಳ ಸಾಲ ಇತ್ಯರ್ಥವಾಗಿದೆ,'' ಎಂದು ಪಿಎನ್‌ಬಿ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಮೆಹ್ತಾ ಹೇಳಿದ್ದಾರೆ.

2018-19ನೇ ಸಾಲಿನ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಭೂಷಣ್‌ ಸ್ಟೀಲ್‌, ಎಲೆಕ್ಟ್ರೊಸ್ಟೀಲ್‌ ಖಾತೆಗಳಿಗೆ ಸೇರಿದ ಸಾಲವನ್ನು ಐಬಿಸಿ ಮೂಲಕ ಇತ್ಯರ್ಥ ಮಾಡಲಾಗಿದೆ. ಎರಡನೇ ಹಂತದಲ್ಲಿ 20 ಖಾತೆಗಳಿಂದ ಬಾಕಿ ಬರಬೇಕಾದ 6,500 ಕೋಟಿ ರೂ.ಗಳನ್ನು ಬ್ಯಾಂಕ್‌ ವಸೂಲಿ ಮಾಡಲಿದೆ,'' ಎಂದು ಮೆಹ್ತಾ ತಿಳಿಸಿದ್ದಾರೆ.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು 7.34 ಲಕ್ಷ ಕೋಟಿ ರೂ.ಗಳ ವಸೂಲಾಗದ ಸಾಲಗಳನ್ನು(ಎನ್‌ಪಿಎ) ಹೊಂದಿವೆ. ಎಸ್‌ಬಿಐ ಮೊದಲ ಸ್ಥಾನ(1.86 ಲಕ್ಷ ಕೋಟಿ ರೂ.), ಪಿಎನ್‌ಬಿ(49,307 ಕೋಟಿ ರೂ.) ಎರಡನೇ ಸ್ಥಾನದಲ್ಲಿವೆ.

ದಿಲ್ಲಿ ಮೂಲದ ಪಿಎನ್‌ಬಿ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ 5,367 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ 307 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಏನಿದು ದಿವಾಳಿ ಸಂಹಿತೆ?


ಹಣಕಾಸು ನಷ್ಟ ಮತ್ತು ದಿವಾಳಿ ವಿಧೇಯಕ(ಐಬಿಸಿ) ಸುಸ್ತಿದಾರರ ಮೇಲೆ ದಂಡ ಬೀಸಲು ಪೂರಕವಾಗಿದೆ. ಇದರ ಭೀತಿಯಿಂದ 83,000 ಕೋಟಿ ರೂ.ಗಳನ್ನು 2,100ಕ್ಕೂ ಅಧಿಕ ಕಂಪನಿಗಳು ತಮ್ಮ ಹಳೆಯ ಸಾಲವನ್ನು ಮರು ಪಾವತಿ ಮಾಡಿವೆ. ಐಬಿಸಿ ಪ್ರಕಾರ - 90 ದಿನಗಳ ಕಾಲ ಪಾವತಿಯಾಗದ ಸಾಲವನ್ನು ಅನುತ್ಪಾದಕ ಆಸ್ತಿ(ಎನ್‌ಪಿಎ) ಎಂದು ವರ್ಗೀಕರಿಸಲಾಗುತ್ತದೆ. ಈ ಆಸ್ತಿಯ ಒಡೆಯರು/ಹೂಡಿಕೆದಾರರು ತಮ್ಮ ಕಂಪನಿಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ