ಆ್ಯಪ್ನಗರ

ಚೇತರಿಕೆ ಹಾದಿ ಹಿಡಿದ ಹಸಿ ಶುಂಠಿ ದರ

ಬಹು ದಿನಗಳ ನಂತರ ಹಸಿ ಶುಂಠಿ ಬೆಲೆ ಏರುಗತಿ ಕಂಡಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ...

Vijaya Karnataka Web 9 Apr 2018, 5:00 am

ಆನಂದಪುರಂ(ಶಿವಮೊಗ್ಗ): ಬಹು ದಿನಗಳ ನಂತರ ಹಸಿ ಶುಂಠಿ ಬೆಲೆ ಏರುಗತಿ ಕಂಡಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಉತ್ತಮ ಗುಣಮಟ್ಟದ ಶುಂಠಿ ಕ್ವಿಂಟಾಲ್‌ಗೆ 3,500 ರೂ. ವರೆಗೆ ಮಾರಾಟವಾಗುತ್ತಿದೆ. ಆದರೆ, ಈಗಾಗಲೇ ಬಹುತೇಕ ರೈತರು ತಮ್ಮ ಜಮೀನಿನಿಂದ ಶುಂಠಿ ಕಿತ್ತು ಮಾರಾಟ ಮಾಡಿದ್ದು, ಉಳಿದ ಕೆಲವೇ ರೈತರಿಗೆ ಉತ್ತಮ ಬೆಲೆಯ ಲಾಭ ಸಿಗಲಿದೆ.

ಕಳೆದ ನಾಲ್ಕು ವರ್ಷಗಳ ನಿರಂತರ ಬೆಲೆ ಕುಸಿತದ ಕಾರಣದಿಂದ ಶುಂಠಿ ಬೆಳೆಗಾರರು ಕಂಗಾಲಾಗಿದ್ದರು. ಈಗ ಬೆಲೆ ಚೇತರಿಕೆಯ ಹಾದಿ ಹಿಡಿದಿದ್ದು, ಮೂರು ವರ್ಷಗಳ ಬಳಿಕ 3,500 ರೂ. ದರ ಲಭಿಸುವಂತಾಗಿದೆ. ಮಾರುಕಟ್ಟೆ ದರ ಏರಿಕೆಯ ಕಾರಣ ರೈತರು ಹಸಿ ಶುಂಠಿ ಕೀಳುವ ಭರಾಟೆ ಕಂಡುಬರುತ್ತಿದೆ.

ಕಳೆದ ನವೆಂಬರ್‌ನಿಂದ ಫೆಬ್ರವರಿ ಅಂತ್ಯದ ವರೆಗೆ ಕ್ವಿಂಟಾಲ್‌ ಒಂದಕ್ಕೆ 1,500 ರೂ.ನಿಂದ 1,800 ರೂ. ವರೆಗೆ ದರ ಇತ್ತು. ಮಾರ್ಚ್‌ ಎರಡನೇ ವಾರದಿಂದ 2000 ರೂ. ದಾಟುತ್ತಾ ಬಂದಿದ್ದು, ಈಗ ಮತ್ತಷ್ಟು ಚೇತರಿಕೆ ಕಂಡಿದೆ. 2012ರಲ್ಲಿ ಶುಂಠಿ ದರ ಕ್ವಿಂಟಾಲ್‌ಗೆ 18,000 ರೂ. ವರೆಗೆ ತಲುಪಿ ಇತಿಹಾಸ ನಿರ್ಮಿಸಿತ್ತು.

ಜೂಜಿನ ಬೆಳೆ:

ಬೀಜದ ಶುಂಠಿ ಖರೀದಿ, ನಾಟಿ ಮಾಡುವಿಕೆ, ನೀರಾವರಿ ವ್ಯವಸ್ಥೆ, ಗೊಬ್ಬರ, ಔಷಧ, ಕೂಲಿ ನಿರ್ವಹಣೆ ಮುಂತಾದವುಗಳ ಅಧಿಕ ಖರ್ಚು ಮತ್ತು ಸವಾಲುಗಳೊಂದಿಗೆ ಸಾಗುವ ಶುಂಠಿ ಕೃಷಿ ಗ್ರಾಮೀಣ ರೈತರಿಗೆ ಜೂಜಾಗಿ ಪರಿಣಮಿಸಿದೆ. ಕಳೆದ ವರ್ಷ ಬೀಜದ ಶುಂಠಿ ಕ್ವಿಂಟಾಲ್‌ ಒಂದಕ್ಕೆ 3,500 ರೂ. ವರೆಗೂ ಇತ್ತು. ದುಬಾರಿ ದರ ಕೊಟ್ಟು ಖರೀದಿಸಿ ಕೃಷಿ ನಡೆಸಿದ ರೈತರು ಮಾರಾಟ ಮಾಡುವ ಸಮಯದಲ್ಲಿ ಕ್ವಿಂಟಾಲ್‌ ಒಂದಕ್ಕೆ ರೂ.1500 ದರ ಕಂಡು ಕಂಗಾಲಾಗಿದ್ದರು.

Vijaya Karnataka Web raw ginger prices touched rs 3500
ಚೇತರಿಕೆ ಹಾದಿ ಹಿಡಿದ ಹಸಿ ಶುಂಠಿ ದರ


============

ಶುಂಠಿ ಕೃಷಿಗೆ ಸಾಕಷ್ಟು ಖರ್ಚು ತಗಲುವ ಕಾರಣ ಸರಾಸರಿ 3,500ರಿಂದ 4,000 ರೂ. ದರ ದೊರೆತರೆ ಮಾತ್ರ ರೈತರಿಗೆ ಸ್ವಲ್ಪವಾದರೂ ಲಾಭ ದೊರೆಯುತ್ತದೆ.

- ಶಂಕ್ರಪ್ಪ ಬಳ್ಳೀಬೈಲು, ಪ್ರಗತಿಪರ ಕೃಷಿಕ

ಮಲೆನಾಡು ಭಾಗದ ರೈತರಿಂದ ಖರೀದಿಸಿದ ಹಸಿ ಶುಂಠಿ ಮುಂಬಯಿ, ಕೋಲ್ಕೊತಾ, ದಿಲ್ಲಿ, ಗುಜರಾತ್‌ ಇತ್ಯಾದಿ ಭಾಗಗಳ ತರಕಾರಿ ಮಾರುಕಟ್ಟೆಗೆ ಸಾಗಣೆಯಾಗುತ್ತದೆ.

-ಎನ್‌.ಪಿ.ರಾಜು, ಚಿಕ್ಕಜೇನಿ, ಶುಂಠಿ ವ್ಯಾಪಾರಸ್ಥರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ