ಆ್ಯಪ್ನಗರ

ಎಕ್ಸಾನ್‌ ಮೊಬಿಲ್‌ ಹಿಂದಿಕ್ಕಿದ ಅಂಬಾನಿ, ರಿಲಯನ್ಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

ವರ್ಷದ ಆರಂಭದಲ್ಲಿ ಎಕ್ಸಾನ್‌‌ ಮೊಬಿಲ್‌ ಮತ್ತು ರಿಲಯನ್ಸ್‌ ನಡುವೆ ದೊಡ್ಡ ಅಂತರವಿತ್ತು. ಜನವರಿಯಿಂದ ರಿಲಯನ್ಸ್‌ ಮೌಲ್ಯ ಶೇ. 43ರಷ್ಟು ಹೆಚ್ಚಾಗಿದ್ದರೆ, ಎಕ್ಸಾನ್‌ ಮೊಬಿಲ್‌ ಮೌಲ್ಯ ಶೇ. 39ರಷ್ಟು ಕುಸಿದಿದೆ. ಹೀಗಾಗಿ ರಿಲಯನ್ಸ್‌ ಎರಡನೇ ಸ್ಥಾನಕ್ಕೆ ಬಂದು ಕುಳಿತಿದೆ.

TIMESOFINDIA.COM 27 Jul 2020, 4:47 pm

ಮುಂಬಯಿ: ಏಷ್ಯಾದ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಧನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮೆರೆದಿದೆ. ಈ ಕ್ಷೇತ್ರದ ದೈತ್ಯ ಕಂಪನಿ ಎಕ್ಸಾನ್‌ ಮೊಬಿಲ್‌ ಹಿಂದಿಕ್ಕಿರುವ ರಿಲಯನ್ಸ್‌ ಇಂಡಸ್ಟೀಸ್‌ ಲಿ., ಎನರ್ಜಿ ವಲಯದ ಅಗ್ರಗಣ್ಯ ಕಂಪನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
Vijaya Karnataka Web Mukesh Ambani


ಸದ್ಯ ರಿಲಯನ್ಸ್‌ನಿಂದ ಮೇಲಿನ ಸ್ಥಾನದಲ್ಲಿರುವುದು ಸೌದಿ ಅರೇಬಿಯಾದ ಸರಕಾರಿ ಸಂಸ್ಥೆ 'ಅರಾಮ್ಕೋ' ಮಾತ್ರ.

ಜಗತ್ತಿನಲ್ಲಿಯೇ ಅತಿದೊಡ್ಡ ತೈಲ ಸಂಸ್ಕರಣಾ ಘಟಕವನ್ನು ಹೊಂದಿರುವ ರಿಲಯನ್ಸ್‌ನ ಕಂಪನಿ ಮೌಲ್ಯ ಶುಕ್ರವಾರ ಶೇ. 4.3ರಷ್ಟು (8 ಬಿಲಿಯನ್‌ ಡಾಲರ್‌) ಏರಿಕೆಯಾಗುವುದರೊಂದಿಗೆ 189 ಬಿಲಿಯನ್‌ ಡಾಲರ್‌ (14.13 ಲಕ್ಷ ಕೋಟಿ ರೂ.)ಗೆ ಏರಿಕೆಯಾಗಿತ್ತು. ಇದೇ ಅವಧಿಯಲ್ಲಿ ಎಕ್ಸಾನ್‌ ಮೊಬಿಲ್‌ ಮೌಲ್ಯ 1 ಬಿಲಿಯನ್‌ ಡಾಲರ್‌ ಕುಸಿದಿದ್ದರಿಂದ ರಿಲಯನ್ಸ್‌ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮೊದಲ ಸ್ಥಾನದಲ್ಲಿರುವ ಅರಾಮ್ಕೋ ಮೌಲ್ಯ 131.6 ಲಕ್ಷ ಕೋಟಿ ರೂ. ಆಗಿದ್ದು, ರಿಲಯನ್ಸ್‌ನಿಂದ ತುಂಬಾ ದೂರದಲ್ಲಿದೆ.

ಬಿಗ್‌ ಬಜಾರ್‌, ಬ್ರ್ಯಾಂಡ್‌ ಫ್ಯಾಕ್ಟರಿ ಅಂಬಾನಿ ತೆಕ್ಕೆಗೆ; ಫ್ಯೂಚರ್‌ ಗ್ರೂಪ್‌ ಖರೀದಿಯತ್ತ ರಿಲಯನ್ಸ್‌

ಹಾಗೆ ನೋಡಿದರೆ ಎಕ್ಸಾನ್‌‌ ಮೊಬಿಲ್‌ ಮತ್ತು ರಿಲಯನ್ಸ್‌ ನಡುವೆ ದೊಡ್ಡ ಅಂತರವಿತ್ತು. ಆದರೆ ಜನವರಿಯಿಂದ ರಿಲಯನ್ಸ್‌ ಮೌಲ್ಯ ಶೇ. 43ರಷ್ಟು ಹೆಚ್ಚಾಗಿದ್ದರೆ, ಎಕ್ಸಾನ್‌ ಮೊಬಿಲ್‌ ಮೌಲ್ಯ ಶೇ. 39ರಷ್ಟು ಕುಸಿದಿದೆ. ಕಾರಣ ಜಾಗತಿಕ ಮಟ್ಟದಲ್ಲಿ ತೈಲ ಬೇಡಿಕೆ ಕುಸಿದಿರುವುದು. ಹೀಗಾಗಿ ರಿಲಯನ್ಸ್‌ ಎರಡನೇ ಸ್ಥಾನಕ್ಕೆ ಬಂದು ಕುಳಿತಿದೆ.

ಇನ್ನು ರಿಲಯನ್ಸ್‌ ಗ್ರೂಪ್‌ನಲ್ಲಿ ಆಯಿಲ್‌ ಮಾತ್ರವಲ್ಲದೆ ಇತರ ಉದ್ಯಮಗಳೂ ಇವೆ. ಆದರೆ ಕಂಪನಿಯ ವಾರ್ಷಿಕ ಆದಾಯದಲ್ಲಿ ತೈಲದ ಪಾಲು ಶೇ. 80ರಷ್ಟಿದೆ. ಹೀಗಿದ್ದೂ ಕಂಪನಿಯ ಮೌಲ್ಯ ಈ ವರ್ಷ ದೊಡ್ಡ ಮಟ್ಟಕ್ಕೆ ಹೆಚ್ಚಾಗಿದ್ದು, ತೈಲದಿಂದ ಅಲ್ಲ; ಜಿಯೋಗೆ ಭರಪೂರ ಹೂಡಿಕೆಗಳು ಹರಿದು ಬಂದಿದ್ದರಿಂದ ಕಂಪನಿ ಮೌಲ್ಯ ರಾಕೆಟ್‌ ವೇಗದಲ್ಲಿ ಮೇಲೇರುತ್ತಲೇ ಇದೆ.

ಪರಿಣಾಮ ವಿಶ್ವದ ಸಿರಿವಂತರ ಪಟ್ಟಿಯಲ್ಲಿಯೂ ಅಂಬಾನಿ ಒಂದೊಂದೇ ಸ್ಥಾನಗಳನ್ನು ನೆಗೆಯುತ್ತಾ ಐದನೇ ಸ್ಥಾನಕ್ಕೆ ಬಂದು ಕುಳಿತಿದ್ದಾರೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಗ್‌ ಝುಕರ್‌ಬರ್ಗ್‌ ನಂತರದ ಸ್ಥಾನದಲ್ಲಿ ಅವರು ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ