ಆ್ಯಪ್ನಗರ

812 ಅಂಕಗಳ ಭಾರಿ ಕುಸಿತ ಕಂಡ ಸೆನ್ಸೆಕ್ಸ್‌; ಜಿಂದಾಲ್‌ ಸ್ಟೀಲ್‌, ಇಂಡಸ್‌ಇಂಡ್‌ ಬ್ಯಾಂಕ್‌ಗೆ ಭಾರಿ ನಷ್ಟ

ಇದರ ನಡುವೆಯೂ ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಟಿಸಿಎಸ್‌ ಮತ್ತು ಇನ್ಫೋಸಿಸ್‌ ಕಂಪನಿಯ ಷೇರುಗಳು ಏರಿಕೆ ದಾಖಲಿಸಿದ್ದು ವಿಶೇಷ. ಆದರೆ ಈ ಕಂಪನಿಗಳ ಗಳಿಕೆ ಮಾತ್ರ ತೀರಾ ಕಡಿಮೆಯಾಗಿತ್ತು.

Agencies 21 Sep 2020, 5:11 pm
ಮುಂಬಯಿ: ವಾರದ ಮೊದಲ ದಿನವೇ ಬಾಂಬೆ ಷೇರು ಪೇಟೆ ಸೂಚ್ಯಂಕ (ಸೆನ್ಸೆಕ್ಸ್‌) 812 ಅಂಕಗಳ ನಷ್ಟ ಅನುಭವಿಸಿದ್ದು 38,034 ಅಂಕಗಳಿಗೆ ಕುಸಿತವಾಗಿದೆ. ಸೆನ್ಸೆಕ್ಸ್‌ ಶೇ. 2.09 ರಷ್ಟು ಕುಸಿದರೆ, ರಾಷ್ಟ್ರೀಯ ಷೇರು ಪೇಟೆ (ನಿಫ್ಟಿ) ಶೇ. 2.21ರಷ್ಟು ಕುಸಿತ ಅಥವಾ 254 ಅಂಕಗಳ ಕುಸಿತ ಕಂಡು ದಿನದ ಅಂತ್ಯಕ್ಕೆ 11,250 ಅಂಕಗಳಗೆ ವಹಿವಾಟು ಮುಗಿಸಿತು.
Vijaya Karnataka Web Sensex


ಜಿಂದಾಲ್‌ ಸ್ಟೀಲ್‌ ಷೇರುಗಳು ಶೇ. 13 ರಷ್ಟು ಹಾಗೂ ಇಂಡಸ್‌ಇಂಡ್‌ ಬ್ಯಾಂಕ್ ಷೇರುಗಳು ಶೇ. 9ರಷ್ಟು ಕುಸಿತವಾದವು. ಭಾರ್ತಿ ಏರ್‌ಟೆಲ್‌, ಟಾಟಾ ಸ್ಟೀಲ್‌, ಐಸಿಐಸಿಐ ಬ್ಯಾಂಕ್‌, ಎಂ&ಎಂ, ಮಾರುತಿ ಮತ್ತು ಆಕ್ಸಿಸ್‌ ಬ್ಯಾಂಕ್ ಷೇರುಗಳೂ ದೊಡ್ಡ ಪ್ರಮಾಣದಲ್ಲಿ ಕುಸಿತವಾದವು.

ಇದರ ನಡುವೆಯೂ ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಟಿಸಿಎಸ್‌ ಮತ್ತು ಇನ್ಫೋಸಿಸ್‌ ಷೇರುಗಳು ಗಳಿಕೆ ಕಂಡಿದ್ದು ವಿಶೇಷ. ಆದರೆ ಗಳಿಕೆ ಮಾತ್ರ ತೀರಾ ಕಡಿಮೆಯಾಗಿತ್ತು.

ಷೇರು ವ್ಯಾಪಾರಿಗಳ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಬಂದ ಮಾರಾಟದ ಒತ್ತಡ ಹಾಗೂ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ಪರಿಣಾಮವೇ ಈ ಕುಸಿತ ದಾಖಲಾಗಿದೆ. ಇದರ ಜೊತೆಗೆ ದೇಶ ಮತ್ತು ವಿದೇಶಗಳಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಹೂಡಿಕೆದಾರರು ಎಚ್ಚರಿಕೆಯಲ್ಲಿದ್ದಾರೆ.

ಕಳೆದ ವಾರ ಕೇಂದ್ರ ಸರಕಾರ ಮೂರು ಮಸೂದೆಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ ಅವುಗಳಿಗೆ ಅನುಮೋದನೆ ಪಡೆದುಕೊಂಡಿದೆ. ಇದಕ್ಕೆ ವಿರೋಧ ಪಕ್ಷಗಳು ಮತ್ತು ರೈತರಿಂದ ಭಾರಿ ವಿರೋಧ ವ್ಯಕ್ತವಾಗಿವೆ.

ಮಾರುಕಟ್ಟೆ ಪಾಲಿಗೆ ಇದೊಂದು ಧನಾತ್ಮಕ ಸುದ್ದಿ ಎಂದು ಪರಿಗಣಿಸಿದ್ದರೂ, ಇದು ಕಾನೂನು ರೂಪ ಪಡೆದುಕೊಳ್ಳುವವರೆಗೆ ಅನಿಶ್ಚಿತತೆ ಮುಂದುವರಿಯಲಿದೆ ಎಂದು ಅರಿಹಂತ್‌ ಕ್ಯಾಪಿಟಲ್‌ ಮಾರ್ಕೆಟ್‌ನ ನಿರ್ದೇಶಕಿ ಅನಿತಾ ಗಾಂಧಿ ರಾಯ್ಟರ್ಸ್‌ಗೆ ತಿಳಿಸಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚಿದ ಕಾರಣ ಡೆನ್ಮಾರ್ಕ್‌, ಗ್ರೀಸ್‌ ಮತ್ತು ಸ್ಪೇನ್‌ ಸೇರಿದಂತೆ ಹಲವು ಯುರೋಪ್‌ನ ದೇಶಗಳಲ್ಲಿ ಹೊಸದಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್‌ ಹೇರುವ ಸಾಧ್ಯತೆ ಇದೆ. ಹೀಗಾಗಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡು ಬಂದಿದೆ. ಇದರ ಪರಿಣಾಮ ಭಾರತದ ಮಾರುಕಟ್ಟೆಯಲ್ಲಿಯೂ ಕಾಣಿಸಿತು.

ಇನ್ನೊಂದು ಕಡೆ ಡಾಲರ್‌ ಎದುರು ರೂಪಾಯಿ ತನ್ನ ಮೌಲ್ಯವನ್ನು ಏಳು ಪೈಸೆಯಷ್ಟು ವೃದ್ಧಿಸಿಕೊಂಡು 73.38 ರೂ.ಗೆ ಏರಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ