ಆ್ಯಪ್ನಗರ

ಬೆಳಗಾವಿ-ಬೆಂಗಳೂರು ಮಧ್ಯೆ ಸ್ಟಾರ್‌ ಏರ್‌ಲೈನ್ಸ್‌ ವಿಮಾನ

ಫೆ.5ರಿಂದ ಸೇವೆ ಆರಂಭ - ಮುಂಗಡ ಟಿಕೆಟ್‌ ಬುಕ್ಕಿಂಗ್‌ ಆರಂಭಿಸಿದ ಸಂಸ್ಥೆ

Vijaya Karnataka 14 Jan 2019, 5:00 am
Vijaya Karnataka Web star air to link belagavi with bengaluru
ಬೆಳಗಾವಿ-ಬೆಂಗಳೂರು ಮಧ್ಯೆ ಸ್ಟಾರ್‌ ಏರ್‌ಲೈನ್ಸ್‌ ವಿಮಾನ
ಬೆಳಗಾವಿ: ನಿರೀಕ್ಷೆಯಂತೆ ಸಂಜಯ್‌ ಘೋಡಾವತ್‌ ಮಾಲೀಕತ್ವದ ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥೆ ಬೆಳಗಾವಿ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗೆ ಸಜ್ಜಾಗಿದೆ. ಫೆ.5ರಿಂದ ಸ್ಟಾರ್‌ ಏರ್‌ಲೈನ್ಸ್‌ ವಿಮಾನ ಬೆಳಗಾವಿ ಮತ್ತು ಬೆಂಗಳೂರು ನಡುವೆ ಹಾರಾಡಲಿದೆ.

ಈಗಾಗಲೇ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ವಿಮಾನ ಹಾರಾಟದ ಮಾಹಿತಿ ದಾಖಲಿಸಿರುವ ಸ್ಟಾರ್‌ ಏರ್‌ಲೈನ್ಸ್‌ ಮುಂಗಡ ಬುಕ್ಕಿಂಗ್‌ ಕೂಡ ಆರಂಭಿಸಿದೆ. ಈ ವಿಮಾನ ಪ್ರತಿ ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 1.25ಕ್ಕೆ ಬೆಂಗಳೂರಿನಿಂದ ಹೊರಟು 2.30ಕ್ಕೆ ಬೆಳಗಾವಿ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಿಂದ ಹೊರಟು 4.05ಕ್ಕೆ ಬೆಂಗಳೂರು ತಲುಪಲಿದೆ. ಮಂಗಳವಾರ ಮಾತ್ರ ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು 5.35ಕ್ಕೆ ಬೆಳಗಾವಿ ತಲುಪಲಿದ್ದು, 6 ಗಂಟೆಗೆ ಬೆಳಗಾವಿಯಿಂದ ಹೊರಟು 7.05ಕ್ಕೆ ಬೆಂಗಳೂರು ತಲುಪಲಿದೆ.

ಉಡಾನ್‌-3ಕ್ಕೆ ಆಯ್ಕೆಗೊಂಡಿರುವ ಬೆಳಗಾವಿಯಿಂದ ಈ ವಿಮಾನ ಸಂಚಾರದ ಪ್ರಕಟಣೆ ಇನ್ನೂ ಅಧಿಕೃತಗೊಂಡಿಲ್ಲವಾದರೂ ಜ.14ರಂದು ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದು ವಿಮಾನಯಾನ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಉಡಾನ್‌ 3ರಲ್ಲಿ ಬೆಳಗಾವಿ-ಮೈಸೂರು ಮಧ್ಯೆ ವಿಮಾನ ಸಂಚಾರ ಖಚಿತವಾಗಿದೆ. ಈ ಸಂಬಂಧ ಮೈಸೂರು ಸಂಸದ ಪ್ರತಾಪ್‌ ಸಿಂಹ ಕೂಡ ಟ್ವೀಟ್‌ ಮಾಡಿದ್ದಾರೆ. ಇದಲ್ಲದೆ ಸುಮಾರು 14 ಸ್ಥಳಗಳಿಗೂ ಬೆಳಗಾವಿಯಿಂದ ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಹೊಸ ಸಂಚಲನ
ಸ್ಟಾರ್‌ ಏರ್‌ಲೈನ್ಸ್‌ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ತಿರುಪತಿಗೆ ವಿಮಾನ ಆರಂಭಿಸುವುದಾಗಿ ಈ ಹಿಂದೆ ಪ್ರಕಟಿಸಿತ್ತಾದರೂ ಬೆಳಗಾವಿಯ ಹೆಸರು ಪ್ರಸ್ತಾಪಿಸಿರಲಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆದು ಉತ್ತರ ಕರ್ನಾಟಕದ ಅತ್ಯಂತ ಹಳೇ ವಿಮಾನ ನಿಲ್ದಾಣವಾಗಿರುವ ಬೆಳಗಾವಿಯಿಂದ ವಿಮಾನ ಸಂಸ್ಥೆಗಳು ಹೊಸ ವಿಮಾನ ಸೇವೆ ನೀಡಬೇಕು ಎನ್ನುವ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಟಾರ್‌ ಏರ್‌ಲೈನ್ಸ್‌ ಬೆಳಗಾವಿಯತ್ತ ಮುಖ ಮಾಡಿ ಈಗ ಬುಕ್ಕಿಂಗ್‌ ಕೂಡ ಆರಂಭಿಸಿರುವುದು ಜಿಲ್ಲೆಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ