ಆ್ಯಪ್ನಗರ

ಕ್ಯೂಆರ್ ಕೋಡ್‌ ಆಧರಿತ ಆಫ್‌ಲೈನ್‌ ಆಧಾರ್‌ ಬಳಕೆಗೆ ಅನುಮತಿ: ಸರಕಾರ, ಆರ್‌ಬಿಐ ಚರ್ಚೆ

ಆಧಾರ್‌ ಕಡ್ಡಾಯಗೊಳಿಸುವ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್‌) ಕಂಪನಿಗಳು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಆರ್‌ಬಿಐ ಈ ಉಪಕ್ರಮಕ್ಕೆ ಮುಂದಾಗಿವೆ. ಸದ್ಯಕ್ಕೆ ಕಾಯಿದೆ ತಿದ್ದುಪಡಿ ಅಸಾಧ್ಯವಾಗಿದ್ದು, ಪರ್ಯಾಯ ವಿಧಾನ ಬಳಸಲು ಸರಕಾರ ಚಿಂತಿಸುತ್ತಿದೆ. ಆಧಾರ್‌ ಕಡ್ಡಾಯಗೊಳಿಸುವ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್‌) ಕಂಪನಿಗಳು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಆರ್‌ಬಿಐ ಈ ಉಪಕ್ರಮಕ್ಕೆ ಮುಂದಾಗಿವೆ.

Vijaya Karnataka Web 3 Dec 2018, 1:19 pm
[This story originally published in Times of India on Dec 03, 2018]
Vijaya Karnataka Web Aadhaar


ಹೊಸದಿಲ್ಲಿ:
ಆಧಾರ್‌ ಬಳಕೆ ಕುರಿತಂತೆ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ, ಬ್ಯಾಂಕ್‌ ಖಾತೆಗಳನ್ನು ತೆರೆಯಲು, ಪೇಮೆಂಟ್ ವ್ಯಾಲೆಟ್‌ಗಳ ಸುಗಮ ಕಾರ್ಯಾಚರಣೆ ಮತ್ತು ವಿಮಾ ಸೌಲಭ್ಯಗಳನ್ನು ಪಡೆಯುವಲ್ಲಿ ಬಯೋಮೆಟ್ರಿಕ್ ಇ-ಕೆವೈಸಿ ಬದಲು ಕ್ಯೂಆರ್‌ ಕೋಡ್‌ ಆಧರಿತ 'ಆಫ್‌ಲೈನ್ ಆಧಾರ್‌' ಬಳಕೆಗೆ ಅನುಮತಿಸಲು ಸರಕಾರ ಮತ್ತು ಆರ್‌ಬಿಐ ಮಾತುಕತೆ ನಡೆಸುತ್ತಿವೆ.

ಆಧಾರ್‌ ಕಡ್ಡಾಯಗೊಳಿಸುವ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಹಣಕಾಸು ತಂತ್ರಜ್ಞಾನ (ಫಿನ್‌ಟೆಕ್‌) ಕಂಪನಿಗಳು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಆರ್‌ಬಿಐ ಈ ಉಪಕ್ರಮಕ್ಕೆ ಮುಂದಾಗಿವೆ. ಸದ್ಯಕ್ಕೆ ಕಾಯಿದೆ ತಿದ್ದುಪಡಿ ಅಸಾಧ್ಯವಾಗಿದ್ದು, ಪರ್ಯಾಯ ವಿಧಾನ ಬಳಸಲು ಸರಕಾರ ಚಿಂತಿಸುತ್ತಿದೆ. ಖಾಸಗಿ ಕಂಪನಿಗಳಿಗೆ ಆಧಾರ್‌ ಆಧರಿತ ದೃಢೀಕರಣಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ತಿಳಿಸಿತ್ತು.

ಕಲ್ಯಾಣ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ ಮಾಡದಿರಲು ಕೋರ್ಟ್ ನಿರ್ಧರಿಸಿದ್ದರೂ, ಆಫ್‌ಲೈನ್‌ ಆಧಾರ್‌ ದೃಢೀಕರಣಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಯುಐಡಿಎಐ ಡಿಜಿಟಲ್‌ ಸಹಿ ಮಾಡಿದ ಕ್ಯೂ ಆರ್ ಕೋಡ್‌ನ ಮುದ್ರಿತ ಪ್ರತಿಯನ್ನು ದೃಢೀಕರಣಕ್ಕೆ ಬಳಸಬಹುದಾಗಿದೆ. ರೇಶನ್ ಕಾರ್ಡ್, ವೋಟರ್ ಐಡಿಯಂತೆ ಇದನ್ನೂ ಬಳಸಬಹುದಾಗಿದೆ.

ಆದರೆ ಆಫ್‌ಲೈನ್ ಆಧಾರ್‌ ಮೂಲಕ ದೃಢೀಕರಿಸಲು ಆರ್‌ಬಿಐ ಅಧಿಸೂಚನೆ ಹೊರಡಿಸಬೇಕಿದೆ. ಈಗಾಗಲೇ ಈ ನಿಟ್ಟಿನಲ್ಲಿ ಯುಐಡಿಎಐ ಜತೆ ಆರ್‌ಬಿಐ ಎರಡು ಸುತ್ತಿನ ಸಮಾಲೋಚನೆ ನಡೆಸಿದೆ.

ಕೆವೈಸಿ ಕುರಿತ ಮೂಲ ಸುತ್ತೋಲೆಯನ್ನು ತಿದ್ದುಪಡಿ ಮಾಡುವಂತೆ ಯುಐಡಿಎಐ ರಿಸರ್ವ್‌ ಬ್ಯಾಂಕಿಗೆ ಸಲಹೆ ನೀಡಿದ್ದು, ಸುಪ್ರೀಂ ಕೋರ್ಟ್‌ ಆದೇಶಕ್ಕೆ ಪೂರಕವಾಗಿ ತಿದ್ದುಪಡಿ ಮಾಡಬೇಕಿದೆ. ನೇರ ಲಾಭಗಳ ವರ್ಗಾವಣೆ ಅಥವಾ ಆದಾಯ ತೆರಿಗೆ ಇಲಾಖೆಯ ಪಾನ್‌ ಸಂಖ್ಯೆ ಬಳಸಿ ನಡೆಸುವ ವಹಿವಾಟುಗಳ ಹೊರತು ಬೇರೆ ಯಾವುದಕ್ಕೂ ಆಧಾರ್‌ ಕಡ್ಡಾಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತ್ತು.

ಆದರೆ ಆರ್‌ಬಿಐನ ಮೊದಲಿನ ಸುತ್ತೋಲೆಯಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಬ್ಯಾಂಕುಗಳಿಗೆ ಸೂಚಿಸಿತ್ತು. ಇದಕ್ಕಾಗಿ ಬ್ಯಾಂಕುಗಳು ತಮ್ಮ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ.

ಕೆವೈಸಿ ದೃಢೀಕರಣಕ್ಕೆ ಆಫ್‌ಲೈನ್ ಆಧಾರ್‌ ಬಳಕೆ ಅತ್ಯಂತ ಸುರಕ್ಷಿತವಾಗಿದ್ದು ವ್ಯಕ್ತಿಯ ಹೆಸರು, ಭಾವಚಿತ್ರ ಮತ್ತು ವಿಳಾಸದ ಹೊರತು ಬೇರೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಯುಐಡಿಎಐ ಪ್ರತಿಪಾದಿಸುತ್ತಿದೆ.

ಪಾಸ್‌ಪೋರ್ಟ್‌ ಕಚೇರಿ ಮತ್ತು ಬ್ಯಾಂಕುಗಳಂತಹ ಏಜೆನ್ಸಿಗಳಿಗೆ ಡಿಜಿಟಲ್ ಸಹಿಯುಳ್ಳ ಕ್ಯೂಆರ್ ಕೋಡ್‌ ಆಧರಿತ ಆಧಾರ್‌ ದೃಢೀಕರಣ ಹೆಚ್ಚು ಸೂಕ್ತವಾಗಿದೆ ಎಂದು ಯುಐಡಿಎಐ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ