ಆ್ಯಪ್ನಗರ

ಕೊರೊನಾಗೆ ಅಮೆರಿಕಾ ತತ್ತರ, ದೇಶದ ಆರ್ಥಿಕತೆ 32.9% ಕುಸಿತ

1950ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕಾದ ಜಿಡಿಪಿ ಶೇ. 10ರಷ್ಟು ಕುಸಿದಿತ್ತು. ಈ ಬಾರಿ ಶೇ. 9.5 ಕುಸಿದಿದೆ. ಗ್ರಾಹಕರು ತಮ್ಮ ಹಣವನ್ನು ಖರ್ಚು ಮಾಡಲು ಹಿಂದೇಟು ಹಾಕಿದ್ದೇ ಹೀಗೊಂದು ಕುಸಿತಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

Vijaya Karnataka 30 Jul 2020, 7:16 pm
ನ್ಯೂಯಾರ್ಕ್‌: ಎರಡನೇ ತ್ರೈಮಾಸಿಕದಲ್ಲಿ ಅಮೆರಿಕಾದ ಆರ್ಥಿಕತೆ ಕಂಡು ಕೇಳರಿಯದ ಮಟ್ಟಕ್ಕೆ ಕುಸಿದಿದೆ. ಶೇ. 32.9ರಷ್ಟು ದೇಶದ ಆರ್ಥಿಕತೆ ಮುಗ್ಗರಿಸಿದೆ ಎಂದು ಬ್ಯೂರೋ ಆಫ್‌ ಎಕನಾಮಿಕ್‌ ಅನಾಲಿಸಿಸ್‌ ಹೇಳಿದೆ. ಇದು ಅಮೆರಿಕಾದ ಇತಿಹಾಸದ ಅತ್ಯಂತ ಕೆಟ್ಟ ಕುಸಿತವಾಗಿ ದಾಖಲಾಗಿದೆ.
Vijaya Karnataka Web us economy


ಫೆಬ್ರವರಿಯಲ್ಲಿ ಆರ್ಥಿಕ ಹಿಂಜರಿತದತ್ತ ಅಮೆರಿಕಾ ಮೊದಲ ಹೆಜ್ಜೆ ಇಟ್ಟಿತ್ತು. ಹಾಗಾಗಿ ಜನವರಿಯಿಂದ ಮಾರ್ಚ್‌ವರೆಗಿನ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇ. 5ರಷ್ಟು ಕುಸಿತ ಕಂಡಿತ್ತು.

ಆದರೆ ಏಪ್ರಿಲ್‌ನಿಂದ ಜೂನ್‌ ನಡುವಿನ ಆರ್ಥಿಕ ಕುಸಿತ ದೇಶವನ್ನಷ್ಟೇ ಅಲ್ಲ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಕಾರಣ ಅಮೆರಿಕಾದ ಆರ್ಥಿಕ ಸಮುದ್ರಕ್ಕೆ ಕಲ್ಲು ಬಿದ್ದರೆ ಅದರಿಂದ ಹೊರಡುವ ಅಲೆಗಳು ಉಳಿದ ದೇಶಗಳಲ್ಲೂ ಸಾಕಷ್ಟು ಹಾನಿ ಮಾಡುತ್ತವೆ.

ಈ ಹಿಂದೆ 1950ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕಾದ ಜಿಡಿಪಿ ಶೇ. 10ರಷ್ಟು ಕುಸಿದಿತ್ತು. ಈ ಬಾರಿಯ ಲೆಕ್ಕ ಶೇ. 9.5. ಗ್ರಾಹಕರು ತಮ್ಮ ಹಣವನ್ನು ಖರ್ಚು ಮಾಡಲು ಹಿಂದೇಟು ಹಾಕಿದ್ದೇ ಹೀಗೊಂದು ಕುಸಿತಕ್ಕೆ ಕಾರಣ ಎನ್ನುವುದು ಆರ್ಥಿಕ ತಜ್ಞರ ವಿಶ್ಲೇಷಣೆ.

ಅಮೆರಿಕಾದ ಆರ್ಥಿಕತೆಯಲ್ಲಿ ಗ್ರಾಹಕರ ಖರ್ಚು ಮೂರನೇ ಒಂದು ಭಾಗವಿದೆ. ಹೀಗಾಗಿ ಹಣ ಖರ್ಚು ಮಾಡುವುದರಲ್ಲಿ ಚೂರೇ ಚೂರು ಏರುಪೇರಾದರೂ ಆರ್ಥಿಕತೆಯ ಮೇಲೆ ಅದು ಅಗಾಧ ಹೊಡೆತವನ್ನು ನೀಡುತ್ತದೆ.

ಈ ಅಂಕಿ ಅಂಶಗಳೊಂದಿಗೆ ಕಳೆದ 11 ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕಾ ಆರ್ಥಿಕತೆ ಹಿಂಜರಿತವನ್ನು ಪ್ರವೇಶಿಸಿದೆ. ಜೊತೆಗೆ ಅಮೆರಿಕಾದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಉದ್ಯಮ ವಿಸ್ತರಣೆಗೆ ಬ್ರೇಕ್‌ ಬಿದ್ದಿದೆ.

ಸತತ ಎರಡು ತ್ರೈಮಾಸಿಕದಲ್ಲಿ ಜಿಡಿಪಿ ಋಣಾತ್ಮಕವಾಗಿದ್ದರೆ ಅದನ್ನು ಆರ್ಥಿಕ ಹಿಂಜರಿತ ಎಂದು ಪರಿಗಣಿಸಲಾಗುತ್ತದೆ. ಅಮೆರಿಕಾದಲ್ಲಿ ಸದ್ಯ ಇದು ಘಟಿಸಿದೆ. ಹಾಗಂಥ ವರ್ಷದ ಇನ್ನೆರಡು ತ್ರೈಮಾಸಿಕದಲ್ಲೂ ಇದು ಚೇತರಿಕೆ ಕಾಣುವ ಲಕ್ಷಣಗಳು ಕಾಣಿಸುತ್ತಿಲ್ಲ.

ಕೊರೊನಾ ವೈರಸ್‌ನ ಜೊತೆ ಜೊತೆಗೆ ಈ ಆರ್ಥಿಕ ಹಿಂಜರಿತ ಅಮೆರಿಕಾದ ಪಾಲಿಗೆ ಭಾರಿ ಹೊಡೆತ ನೀಡಲಿದೆ. 'ಅಮೆರಿಕಾದವರು ಇಂದು ಎದುರಿಸುತ್ತಿರುವ ಸಮಸ್ಯೆಗಳ ಆಳ-ಅಗಲವನ್ನು ಈ ಅಂಕಿ ಅಂಶಗಳು ಹಿಡಿದಿಡಲಾರವು. ಅದನ್ನು ಮೀರಿದ ಬಿಕ್ಕಟ್ಟನ್ನು ಕೋಟ್ಯಂತರ ಜನರು ಎದುರಿಸುತ್ತಿದ್ದಾರೆ,' ಎಂದು ದೇಶದ ಪ್ರಖ್ಯಾತ ಮಾಧ್ಯಮ ಸಂಸ್ಥೆಗಳು ವಿಶ್ಲೇಷಣೆ ಮಾಡಿವೆ.

ಏಪ್ರಿಲ್‌ನಲ್ಲಿ ಅಮೆರಿಕಾದಲ್ಲಿ ಕನಿಷ್ಠ 2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದರು. ಉದ್ಯೋಗಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ದೇಶದಲ್ಲಿ ಲೆಕ್ಕ ಹಾಕಲು ಆರಂಭವಾದ ನಂತರ ಕಳೆದ 80 ವರ್ಷಗಳಲ್ಲಿ ಇಂಥಹ ಬೆಳವಣಿಗೆ ನಡೆದಿಲ್ಲ. ಇವರಲ್ಲಿ ಗರಿಷ್ಠ 50 ಲಕ್ಷ ಜನ ಮರಳಿ ಉದ್ಯೋಗಕ್ಕೆ ಸೇರಿರಬಹುದು. ಉಳಿದ 1.5 ಕೋಟಿ ಜನರು ಇನ್ನೂ ನಿರುದ್ಯೋಗಿಗಳಾಗಿದ್ದಾರೆ. ದಿನದಿಂದ ದಿನಕ್ಕೆ ನಿರುದ್ಯೋಗ ಸೌಲಭ್ಯ ಕೋರಿ ಅರ್ಜಿ ಹಾಕುವವರ ಸಂಖ್ಯೆ ಬೆಳೆಯುತ್ತಲೇ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ