ಆ್ಯಪ್ನಗರ

ವೊಡಾಫೋನ್‌ ಐಡಿಯಾ ಈಗ ‘Vi’ - ವಿಲೀನದ ಬೆನ್ನಲ್ಲೇ ಬ್ರ್ಯಾಂಡ್‌ ನೇಮ್‌ ಬದಲು

'ಹೆಸರು ಬದಲಾವಣೆಯೊಂದಿಗೆ ಜಗತ್ತಿನ ಅತೀ ದೊಡ್ಡ ಟೆಲಿಕಾಂ ಕಂಪನಿಗಳ (ವೊಡಾಫೋನ್‌-ಐಡಿಯಾ) ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ' ಎಂದು ಕಂಪನಿ ಹೇಳಿದೆ. ಬ್ರ್ಯಾಂಡ್‌ ನೇಮ್‌ ಜೊತೆಗೆ ಟ್ಯಾಗ್‌ ಲೈನ್‌ನ್ನೂ 'ಟುಗೆದರ್‌ ಫಾರ್‌ ಟುಮಾರೋ' ಎಂದು ಬದಲಾಯಿಸಿಕೊಂಡಿದೆ.

Agencies 7 Sep 2020, 5:03 pm
ಮುಂಬಯಿ: ದೇಶದ ಮೂರನೇ ಅತೀ ದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್‌ ಐಡಿಯಾ ತನ್ನ ಬ್ರ್ಯಾಂಡ್‌ ನೇಮ್‌ನ್ನು 'ವಿ' (Vi) ಎಂದು ಬದಲಾಯಿಸಿದೆ. ವೊಡಾಫೋನ್‌ - ಐಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಹೊಸ ಬ್ರ್ಯಾಂಡ್‌ಗೆ ಚಾಲನೆ ನೀಡಿದ್ದು ಸಂಸ್ಥೆಯ ಎಲ್ಲಾ ಉತ್ಪನ್ನಗಳು ಇನ್ನುಮುಂದೆ 'ವಿ' ಲೋಗೋದ ಅಡಿಯಲ್ಲಿ ಬರಲಿವೆ.
Vijaya Karnataka Web VI
ವೊಡಾಫೋನ್‌ ಐಡಿಯಾ ಸಂಸ್ಥೆಯ ನೂತನ ಲೋಗೋ Vi - ಇದರ ಉಚ್ಚಾರ 'ವಿ' ಎಂದು ಸ್ವತಃ ವೊಡಾಫೋನ್‌ ಐಡಿಯಾ ಹೇಳಿಕೊಂಡಿದೆ.


ಕಂಪನಿಯ ಸಿಇಒ ರವಿಂದರ್‌ ತಕ್ಕರ್‌ ಈ ಘೋಷಣೆ ಮಾಡಿದ್ದಾರೆ. 'ಹೆಸರು ಬದಲಾವಣೆಯೊಂದಿಗೆ ಜಗತ್ತಿನ ಅತೀ ದೊಡ್ಡ ಟೆಲಿಕಾಂ ಕಂಪನಿಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ,' ಎಂದು ಹೇಳಿರುವ ಅವರು, 1 ಬಿಲಿಯನ್‌ ಭಾತೀಯರಿಗೆ ನಮ್ಮ 4ಜಿ ನೆಟ್‌ವರ್ಕ್‌ ಮೂಲಕ ವಿಶ್ವದರ್ಜೆಯ ಡಿಜಿಟಲ್‌ ಅನುಭವ ನೀಡಲಿದ್ದೇವೆ. ವಿ ಮೂಲಕ ನಾವು ಹೆಮ್ಮೆಯ, ನಂಬಿಕೆಯ ಮತ್ತು ಎಲ್ಲರೂ ಇಷ್ಟಪಡುವ ಬ್ರ್ಯಾಂಡ್‌ ರೂಪಿಸುವ ಭರವಸೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಕಂಪನಿ 25,000 ಕೋಟಿ ರೂಪಾಯಿ ಹೂಡಿಕೆ ಪಡೆಯುವುದಾಗಿಯೂ ಹೇಳಿದೆ. ಷೇರುದಾರರ ಒಪ್ಪಿಗೆಯ ನಂತರವಷ್ಟೇ ಈ ನಿರ್ಧಾರ ಕಾರ್ಯರೂಪಕ್ಕೆ ಬರಲಿದ್ದು, ಸೆಪ್ಟೆಂಬರ್ 30 ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾಪವಿಡಲು ನಿರ್ಧರಿಸಲಾಗಿದೆ.

ಈ ಹೂಡಿಕೆ ಸಂಗ್ರಹದಿಂದ ಕಂಪನಿಗೆ ಉಸಿರಾಡಲು ಒಂದಷ್ಟು ಸಮಯ ಸಿಗಲಿದೆ. ಒಂದೆಡೆ ಕಂಪನಿ ಸತತವಾಗಿ ತೀವ್ರ ನಷ್ಟ ಅನುಭವಿಸುತ್ತಿದೆ, ಇನ್ನೊಂದೆಡೆ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿದೆ. ಅಷ್ಟೇ ಅಲ್ಲದೆ ಪ್ರತಿ ಗ್ರಾಹಕನಿಂದ ಸಂಗ್ರಹವಾಗುವ ಸರಾಸರಿ ಆದಾಯವೂ (ಎಆರ್‌ಪಿಯು) ಇಳಿಕೆಯಾಗುತ್ತಿದ್ದು, ಅತ್ತ ಕೇಂದ್ರ ಸರಕಾರಕ್ಕೆ 58,000 ಕೋಟಿ ರೂಪಾಯಿಗೂ ಹೆಚ್ಚು ಎಜಿಆರ್‌ ಬಾಕಿ ಸಂದಾಯ ಮಾಡಬೇಕಿದೆ. ಹೀಗೆ ಹಲವು ಒತ್ತಡಗಳನ್ನು ಕಂಪನಿ ಎದುರಿಸುತ್ತಿದ್ದು, ಇದರ ನಡುವೆಯೇ ಹೊಸ ಬ್ರ್ಯಾಂಡ್‌ ಮತ್ತು ಲೋಗೋ ಅನಾವರಣಗೊಂಡಿದೆ.

ವೊಡಾಫೋನ್‌ ಐಡಿಯಾಗೆ ಭಾರಿ ನಷ್ಟ, ಮೊದಲ ತ್ರೈಮಾಸಿಕದಲ್ಲಿ 25,460 ಕೋಟಿ ರೂ. ಲಾಸ್‌!

ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ ಎಜಿಆರ್‌ ಬಾಕಿ ಪಾವತಿಗೆ ಟೆಲಿಕಾಂ ಕಂಪನಿಗಳಿಗೆ 10 ವರ್ಷಗಳ ಕಾಲಾವಕಾಶ ನೀಡಿತ್ತು. ಇದಾದ ಬೆನ್ನಿಗೆ ಈ ನೂತನ ಬ್ರ್ಯಾಂಡ್‌ ನೇಮ್‌ ಹೊರಬಿದ್ದಿದೆ.

58,000 ಕೋಟಿ ರೂಪಾಯಿಗೂ ಮಿಕ್ಕಿ ಎಜಿಆರ್‌ ಬಾಕಿ ಉಳಿಸಿಕೊಂಡಿರುವ ಕಂಪನಿ ಕೇವಲ 7,850 ಕೋಟಿ ರೂಪಾಯಿಯನ್ನು ಮಾತ್ರ ಪಾವತಿ ಮಾಡಿದೆ. ಮುಂದಿನ 10 ವರ್ಷಗಳ ಕಾಲ ಪ್ರತಿ ತ್ರೈಮಾಸಿಕದಲ್ಲೂ ಕಂಪನಿ 1,128.4 ಕೋಟಿ ರೂಪಾಯಿಗಳನ್ನು ಸರಕಾರಕ್ಕೆ ಕಟ್ಟಬೇಕಿದೆ. ಬ್ರ್ಯಾಂಡ್‌ ಬದಲಾವಣೆ ಸುದ್ದಿಯ ಬೆನ್ನಿಗೆ ವೊಡಾಫೋನ್‌ ಷೇರುಗಳು ಅಲ್ಪ ಚೇತರಿಕೆ (ಶೇ.2.07) ಕಂಡಿದ್ದು, 12.30 ರೂಪಾಯಿಗೆ ಏರಿಕೆಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ