ಆ್ಯಪ್ನಗರ

ಟಿಕ್‌ಟಾಕ್‌ಗೆ ಸೆಪ್ಟೆಂಬರ್‌ 15ರ ಡೆಡ್‌ಲೈನ್‌ ನೀಡಿದ ಟ್ರಂಪ್‌, ತಪ್ಪಿದಲ್ಲಿ ಆ್ಯಪ್‌ ಬ್ಯಾನ್

ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ ಟಿಕ್‌ಟಾಕ್‌ ಜೊತೆ ಮಾತುಕತೆ ಆರಂಭಿಸಿದ್ದು, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ ವ್ಯವಹಾರಗಳನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದೆ.

TIMESOFINDIA.COM 4 Aug 2020, 10:21 am

ವಾಷಿಂಗ್ಟನ್‌: ಅಮೆರಿಕ ಮೂಲದ ಕಂಪನಿ ಟಿಕ್‌ಟಾಕ್‌ನ್ನು ಖರೀದಿಸದೇ ಇದ್ದಲ್ಲಿ ಸೆಪ್ಟೆಂಬರ್‌ 15ರಿಂದ ಆಪ್‌ ನಿಷೇಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಜೊತೆಗೆ ಮಾರಾಟದಲ್ಲಿ ಒಂದಷ್ಟು ಪಾಲು ಸರಕಾರದ ಖಜಾನೆ ಸೇರಬೇಕು ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.
Vijaya Karnataka Web Donald Trump


ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ ಟಿಕ್‌ಟಾಕ್‌ನ ಅಮೆರಿಕಾದ ವ್ಯವಹಾರಗಳನ್ನು ಖರೀದಿಸಲು ಮುಂದಾಗಿದ್ದು, ಅದರ ಮಾತೃ ಸಂಸ್ಥೆ ಬೈಟ್‌ಡ್ಯಾನ್ಸ್‌ ಜೊತೆ ಚರ್ಚೆ ನಡೆಸುತ್ತಿದೆ.

ಇದೇ ವೇಳೆ ಟಿಕ್‌ಟಾಕ್‌ನ ಶೇ. 100ರಷ್ಟು ಷೇರುಗಳನ್ನೂ ಖರೀದಿಸಬೇಕು ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಸದ್ಯ ಮಾತುಕತೆ ನಡೆಸುತ್ತಿರುವಂತೆ ಶೇ. 30ರಷ್ಟು ಷೇರುಗಳನ್ನು ಖರೀದಿಸಿದರೆ ಈ ಒಪ್ಪಂದ ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.

ಈ ಸಂಬಂಧ ಭಾರತ ಮೂಲದ ಮೈಕ್ರೋಸಾಫ್ಟ್‌ ಸಿಇಒ ಸತ್ಯಾ ನಾದೆಲ್ಲಾ ಜೊತೆ ಟ್ರಂಪ್‌ ಮಾತುಕತೆಯನ್ನೂ ನಡೆಸಿದ್ದಾರೆ.

"ನಾವು ಉತ್ತಮ ಸಂಭಾಷಣೆ ನಡೆಸಿದ್ದೇವೆ. ಇದರ ಬಗ್ಗೆ ನನ್ನ ಅಭಿಪ್ರಾಯ ಏನು ಎಂದು ತಿಳಿದುಕೊಳ್ಳಲು ಆತ (ನಾಡೆಲ್ಲಾ) ನನಗೆ ಕರೆ ಮಾಡಿದ್ದ. ನಾನು ಹೇಳಿದೆ, ನೋಡಿ, ಭದ್ರತಾ ಕಾರಣಗಳಿಗಾಗಿ ಚೀನಾ ಇದನ್ನು ನಿಯಂತ್ರಿಸುವುದು ಸರಿಯಲ್ಲ. (ಇದು) ತುಂಬಾ ದೊಡ್ಡದಾಗಿದೆ, ತುಂಬಾ ಆಕ್ರಮಣಕಾರಿ. ಇದೆಲ್ಲ ಸಾಧ್ಯವಿಲ್ಲ ... ಮೈಕ್ರೋಸಾಫ್ಟ್ ಆಗಲಿ ಅಥವಾ ಬೇರಾವುದೇ ದೊಡ್ಡ ಕಂಪನಿ... ಅಮೆರಿಕದ ಕಂಪನಿ ಇದನ್ನು ಖರೀದಿಸಲಿದೆ. ಶೇ. 30ರಷ್ಟನ್ನು ಖರೀದಿಸುವ ಬದಲು ಎಲ್ಲವನ್ನೂ ಖರೀದಿಸುವುದು ಸುಲಭ, " ಎಂದಿದ್ದೇನೆ ಎಂದು ಟ್ರಂಪ್‌ ಹೇಳಿದ್ದಾರೆ.

“ಶೇಕಡಾ 30 ರಷ್ಟು ಖರೀದಿಸುವುದು ಸಂಕೀರ್ಣವಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಆತನಿಗೆ ಈ ಡೀಲ್‌ನ ಮುಂದುವರಿಯಬಹುದು ಎಂದು ನಾನು ಸೂಚಿಸಿದೆ. ಅವರು ಪ್ರಯತ್ನಿಸಬಹುದು,” ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

45 ದಿನದಲ್ಲಿ ಅಮೆರಿಕಾದ ಮೈಕ್ರೋಸಾಫ್ಟ್‌ ತೆಕ್ಕೆಗೆ ಚೀನಾದ ಟಿಕ್‌ಟಾಕ್

ಸೆಪ್ಟೆಂಬರ್‌ 15ರ ವೇಳೆಗೆ ಅಮೆರಿಕದಲ್ಲಿ ತನ್ನ ಉದ್ಯಮವನ್ನು ಟಿಕ್‌ಟಾಕ್‌ ನಿಲ್ಲಿಸಬೇಕು ಎಂದು ಟ್ರಂಪ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.
ಒಂದೊಮ್ಮೆ ಬೇರೆ ಯಾರಾದರೂ, ಅದು ಮೈಕ್ರೋಸಾಫ್ಟ್‌ ಇರಲಿ, ಅಥವಾ ಇನ್ಯಾರೇ ಇರಲಿ ಅದನ್ನು ಖರೀದಿಸಿದರೆ, ಆಗ ವಿಷಯವೇ ಬೇರೆ. ನೀವು ಖರೀದಿಸಿದರೆ, ಅದು ಯಾರಿಗೆ ಸೇರಿದ್ದೋ ಅವರಿಗೆ ಹಣ ತಲುಪುತ್ತದೆ ಎಂದು ಹೇಳಿರುವ ಟ್ರಂಪ್‌, ಈ ಡೀಲ್‌ನ ಒಂದಷ್ಟು ಮೊತ್ತ ಅಮೆರಿಕಾ ಸರಕಾರಕ್ಕೆ ಸೇರಬೇಕು ಎಂದು ಹೇಳಿದ್ದಾರೆ.

ಕಾರಣ ನಾವು ಈ ಡೀಲ್‌ಗೆ ಒಪ್ಪುತ್ತಿದ್ದೇವೆ. ನಾವು ಅವಕಾಶ ನೀಡದೇ ಇದ್ದಲ್ಲಿ ಅವರಿಗೆ ಇದನ್ನು ಮುಂದುವರಿಸಲು ಯಾವುದೇ ದಾರಿ ಇಲ್ಲ. ಹಾಗಾಗಿ ನಾವು ಅವರಿಗೆ ಅವಕಾಶ ನೀಡುತ್ತೇವೆ. ಅದಕ್ಕೆ ಪ್ರತಿಯಾಗಿ ನಮಗೆ ಹಣ ನೀಡಬೇಕು ಎಂದು ಟ್ರಂಪ್‌ ಪಟ್ಟು ಹಿಡಿದ್ದಾರೆ.

ಟಿಕ್‌ಟಾಕ್‌ ದೊಡ್ಡ ಆಸ್ತಿ. ಆದರೆ ಅಮೆರಿಕ ಸರಕಾರದ ಒಪ್ಪಿಗೆ ಇಲ್ಲದೆ ಅದು ದೊಡ್ಡ ಆಸ್ತಿಯಾಗಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಮೈಕ್ರೋಸಾಫ್ಟ್‌ ಟಿಕ್‌ಟಾಕ್‌ ಜೊತೆ ಮಾತುಕತೆ ಆರಂಭಿಸಿದ್ದು, ಸೆಪ್ಟೆಂಬರ್‌ 15ರ ಮೊದಲು ಒಪ್ಪಂದ ಪೂರ್ಣಗೊಳಿಸಲು ಉದ್ದೇಶಿಸಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ ವ್ಯವಹಾರಗಳನ್ನು ವಶಕ್ಕೆ ಪಡೆದುಕೊಳ್ಳಲು ಮೈಕ್ರೋಸಾಫ್ಟ್‌ ಮುಂದಾಗಿದೆ. ಡೀಲ್‌ನಲ್ಲಿ ಸಣ್ಣ ಪ್ರಮಾಣದ ಹೂಡಿಕೆಗೆ ಅಮೆರಿಕಾದ ಇತರ ಕಂಪನಿಗಳನ್ನೂ ಮೈಕ್ರೋಸಾಫ್ಟ್‌ ಆಹ್ವಾನಿಸುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ