ಆ್ಯಪ್ನಗರ

ನೈಸ್‌ ವಿರುದ್ದ ಹೋರಾಟಕ್ಕೆ ಗೌಡರಿಂದ ವಿರಾಮ

ನೈಸ್‌ ಕಂಪನಿಯ ಬಹು ವಿವಾದಿತ ಬೆಂಗಳೂರು -ಮೈಸೂರು ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆ ಅಕ್ರಮ ಕುರಿತಂತೆ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ದನಿ ಎತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಸೇರಿ ಹಲವು ನಾಯಕರು ಪ್ರಸ್ತುತ ಮೌನ ವಹಿಸಿರುವ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ವಿಕ ಸುದ್ದಿಲೋಕ 17 Aug 2016, 4:00 am

- ವಿಧಾನಸಭೆಯಲ್ಲಿ ಅಕ್ರಮದ ವಿರುದ್ದ ಗುಡುಗಿದ್ದವರ ಮೌನ? ಸದನ ಸಮಿತಿ ಇದೆಯೋ, ಇಲ್ಲವೋ? ತನಿಖೆ ಏನಾಯ್ತು? -

Vijaya Karnataka Web deve gowda announced a break in the fight against nice
ನೈಸ್‌ ವಿರುದ್ದ ಹೋರಾಟಕ್ಕೆ ಗೌಡರಿಂದ ವಿರಾಮ


ಬೆಂಗಳೂರು: ನೈಸ್‌ ಕಂಪನಿಯ ಬಹು ವಿವಾದಿತ ಬೆಂಗಳೂರು -ಮೈಸೂರು ಇನ್ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿ) ಯೋಜನೆ ಅಕ್ರಮ ಕುರಿತಂತೆ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ದನಿ ಎತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಸೇರಿ ಹಲವು ನಾಯಕರು ಪ್ರಸ್ತುತ ಮೌನ ವಹಿಸಿರುವ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

''ಬಿಎಂಐಸಿ ಯೋಜನೆಗೆ ತಮ್ಮ ಆಕ್ಷೇಪ ಇರಲಿಲ್ಲ. ಟೌನ್‌ಶಿಫ್‌ ನೆಪದಲ್ಲಿ ಅಕ್ರಮವಾಗಿ ಹೆಚ್ಚುವರಿ ಭೂಮಿ ಪಡೆದು ನೈಸ್‌ ಕಂಪನಿ ವಂಚಿಸಿದ ಕಾರಣ ರಾಜ್ಯದ ಹಿತದೃಷ್ಟಿಯಿಂದ ಹೋರಾಟ ಆರಂಭಿಸಿದೆ. ಆದರೆ, ಯೋಜನೆಗೆ ವಿರೋಧ ಮುಂದುವರಿಸಿದರೆ ನನಗೆ ಅಭಿವೃದ್ದಿ ವಿರೋಧಿ ಹಣೆಪಟ್ಟಿ ಕಟ್ಟುವ ಕಾರಣ ಹೋರಾಟ ನಿಲ್ಲಿಸುತ್ತೇನೆ. ನೈಸ್‌ ಕಂಪನಿ ಅಕ್ರಮ ನಿಲ್ಲಿಸುವುದು ಅಥವಾ ರಾಜ್ಯದ ಆಸ್ತಿ ದೋಚಲು ಬಿಡುವುದು ಎರಡೂ ಸರಕಾರದ ವಿವೇಚನೆಗೆ ಬಿಟ್ಟದ್ದು'' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿಷಾದದಿಂದಲೇ ಸ್ಪಷ್ಟಪಡಿಸಿದರು.

ವರ್ಷದ ಹಿಂದೆ ವಿಧಾನಸಭೆಯಲ್ಲಿ ನೈಸ್‌ ಅಕ್ರಮ ಪ್ರಸ್ತಾಪವಾದಾಗ ಸಿಎಂ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸ್ಪೀಕರ್‌ ಕಾಗೋಡು ತಿಮ್ಮಪ್ಪ ಕಟುವಾಗೇ ಮಾತನಾಡಿದ್ದರು. ಅಕ್ರಮವಾಗಿ ಭೂಮಿ ದೋಚುತ್ತಿರುವ ಬಗ್ಗೆ ಸದನದೊಳಗೆ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ತನಿಖೆ ನಡೆಸಲು ಸದನ ಸಮಿತಿ ರಚನೆಯಾಗಿತ್ತು. ಆದರೆ, ಸಮಿತಿಯ ತನಿಖೆ ನಡೆಯಿತೇ? ಯಾವ ಹಂತದಲ್ಲಿದೆ? ಸಮಿತಿ ಅಸ್ತಿತ್ವದಲ್ಲಿದೆಯೇ? ಎಂಬ ಮಾಹಿತಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೈಸ್‌ ಕಂಪನಿ 30 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅಕ್ರಮ ನಡೆಸಿರುವ ಬಗ್ಗೆ ಅಧಿಕಾರಿಗಳೇ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ ಕೋರ್ಟ್‌ ಸೂಚನೆಯಂತೆ ರಾಜ್ಯ ಮುಖ್ಯ ಕಾರ್ಯದರ್ಶಿ, ಸರಕಾರಿ ವಕೀಲರು ಹಾಗೂ ಯೋಜನೆ ಪರ ವಕೀಲರು ಒಟ್ಟಿಗೆ ಸಭೆ ನಡೆಸಿದ್ದರು. ಆದರೆ, ಸಭೆಯ ನಡಾವಳಿಯನ್ನು ಮಾತ್ರ ಗೌಪ್ಯವಾಗಿಡಲಾಗಿದೆ. ಆರ್‌ಟಿಐ ಅಡಿ ಕೇಳಿದರೂ ಮಾಹಿತಿ ಕೊಡುತ್ತಿಲ್ಲ. ಸಭೆಯ ನಡಾವಳಿಯನ್ನು ಸುಪ್ರೀಂಕೋರ್ಟ್‌ಗೂ ಸಲ್ಲಿಸಿಲ್ಲ. ಸರಕಾರ ಈ ರೀತಿ ನಡವಳಿಕೆ ತೋರಿದರೆ ನೈಸ್‌ ಅಕ್ರಮ ಬಯಲಾಗುವುದು ಹೇಗೆ? ವಂಚನೆ ತಪ್ಪಿಸುವುದು ಹೇಗೆ? ಎಂದು ಪ್ರಶ್ನಿಸಿದರು.

ಕಂಪನಿ ಮತ್ತು ಸರಕಾರ ಒಟ್ಟಿಗೆ ಸಭೆ ನಡೆಸಿ ತೀರ್ಮಾನವನ್ನು ತಿಳಿಸುವಂತೆ ಸುಪ್ರೀಂಕೋರ್ಟ್‌ ನೀಡಿದ್ದ ಸೂಚನೆ ಪಾಲನೆ ಆಗಬೇಕು. ಈ ತಿಂಗಳ ಅಂತ್ಯದಲ್ಲಿ ಸುಪ್ರೀಂಕೋರ್ಟ್‌ ಅಂತಿಮ ತೀರ್ಪು ಬರಲಿದ್ದು, ಅಷ್ಟರೊಳಗೆ ಸಭೆ ನಡಾವಳಿಯನ್ನು ಸರಕಾರ ಕೋರ್ಟ್‌ಗೆ ಸಲ್ಲಿಸಬೇಕು. ಇನ್ನು ಈ ಅಕ್ರಮವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಸರಕಾರಕ್ಕೆ ಬಿಟ್ಟದ್ದು. ಸಿಎಂ ಸಿದ್ದರಾಮಯ್ಯ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಾರೆ ಅನ್ನುವ ವಿಶ್ವಾಸವಿದೆ. ಬಡವರ ಮನೆ ಒಡೆದಿದ್ದಷ್ಟೇ ಅಲ್ಲ, ಬಿಲ್ಡರ್‌ಗಳನ್ನೂ ಬಿಡಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಯಾವ ರೀತಿ ಬಿಲ್ಡರ್‌ಗಳನ್ನು ಮಟ್ಟಹಾಕುತ್ತಾರೋ ನೋಡೋಣ..., ಎಂದರು.

ಬಿಎಂಐಸಿ ಯೋಜನೆಗೆ ಸಂಬಂಧಿಸಿ 1995ರಲ್ಲೇ ಒಪ್ಪಂದ ಮಾಡಿಕೊಂಡ ಖೇಣಿ ವಾಸ್ತವದಲ್ಲಿ 680 ಕೋಟಿ ರೂ. ಪಾವತಿಸಬೇಕಿತ್ತು. ಆದರೆ, 2002ರ ವರೆಗೆ ಭೂಸ್ವಾಧೀನಕ್ಕೆ ಒಂದು ರೂ. ಕೂಡ ಪಾವತಿಸದೆ ಸಾವಿರಾರು ಕೋಟಿ ರೂ.ಗಳ ಅಕ್ರಮ ನಡೆಸಿದರು. ಈ ಕುರಿತು ಏಕ ಸದಸ್ಯ ಆಯೋಗ ರಚಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದೆ. ಏನೂ ಪ್ರಯೋಜನ ಆಗಲಿಲ್ಲ. ನ್ಯಾ.ಸಂತೋಷ್‌ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ತನಿಖೆಗೆ ಆದೇಶ ನೀಡಿದರೂ ಅದಕ್ಕೆ ಅಶೋಕ್‌ ಖೇಣಿ 24 ತಾಸುಗಳಲ್ಲಿ ತಡೆಯಾಜ್ಞೆ ತಂದರು. ಇನ್ನು ನಾನಂತೂ ಈ ವಿಚಾರದಲ್ಲಿ ಹೋರಾಟ ಮುಂದುವರಿಸುವುದಿಲ್ಲ. ಅಭಿವೃದ್ದಿ ವಿರೋಧಿ ಹಣೆಪಟ್ಟಿ ನನಗೆ ಬೇಡ. ಈ ವಿಚಾರದಲ್ಲಿ ನಾನು ಇನ್ನು ಮುಂದೆ ಯಾರಿಗೂ ಪತ್ರ ಬರೆಯುವುದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ