Please enable javascript.ರಾಜ್ಯ ಹಣಕಾಸು ಆಯೋಗದ ಸಭೆ : ಅನುದಾನ ಹೆಚ್ಚಳಕ್ಕೆ ಕೋರಿಕೆ - ರಾಜ್ಯ ಹಣಕಾಸು ಆಯೋಗದ ಸಭೆ : ಅನುದಾನ ಹೆಚ್ಚಳಕ್ಕೆ ಕೋರಿಕೆ - Vijay Karnataka

ರಾಜ್ಯ ಹಣಕಾಸು ಆಯೋಗದ ಸಭೆ : ಅನುದಾನ ಹೆಚ್ಚಳಕ್ಕೆ ಕೋರಿಕೆ

ವಿಕ ಸುದ್ದಿಲೋಕ 17 Dec 2016, 9:00 am
Subscribe

ಅನುದಾನ ಹೆಚ್ಚಳ, ಮೂಲ ಸೌಕರ್ಯಕ್ಕೆ ಮತ್ತಷ್ಟು ಅನುದಾನ, ಸದಸ್ಯರ ಗೌರವ ಸಂಭಾವನೆ ಹೆಚ್ಚಳ ಸೇರಿದಂತೆ ಹಲವು ಅಹವಾಲುಗಳು ಶುಕ್ರವಾರ ನಡೆದ 4ನೇ ರಾಜ್ಯ ಹಣಕಾಸು ಆಯೋಗದ ಸಮಾಲೋಚನಾ ಸಭೆಯಲ್ಲಿ ಜನಪ್ರತಿನಿಧಿಗಳಿಂದ ಸಲ್ಲಿಕೆಯಾದವು.

ರಾಜ್ಯ ಹಣಕಾಸು ಆಯೋಗದ ಸಭೆ : ಅನುದಾನ ಹೆಚ್ಚಳಕ್ಕೆ ಕೋರಿಕೆ

ಚಾಮರಾಜನಗರ: ಅನುದಾನ ಹೆಚ್ಚಳ, ಮೂಲ ಸೌಕರ್ಯಕ್ಕೆ ಮತ್ತಷ್ಟು ಅನುದಾನ, ಸದಸ್ಯರ ಗೌರವ ಸಂಭಾವನೆ ಹೆಚ್ಚಳ ಸೇರಿದಂತೆ ಹಲವು ಅಹವಾಲುಗಳು ಶುಕ್ರವಾರ ನಡೆದ 4ನೇ ರಾಜ್ಯ ಹಣಕಾಸು ಆಯೋಗದ ಸಮಾಲೋಚನಾ ಸಭೆಯಲ್ಲಿ ಜನಪ್ರತಿನಿಧಿಗಳಿಂದ ಸಲ್ಲಿಕೆಯಾದವು.

ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜೆ. ಚಿನ್ನಸ್ವಾಮಿ ಅವರ ಅಧ್ಯಕ್ಷ ತೆಯಲ್ಲಿ ನಗರ ಸಭೆ ಕಚೇರಿ ಸಭಾಂಗಣ ಹಾಗೂ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ನಡೆದ ಪ್ರತ್ಯೇಕ ಸಮಾಲೋಚನಾ ಸಭೆಯಲ್ಲಿ ನಗರಸಭೆ ಸದಸ್ಯರು, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಬಹುತೇಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು.

ಮೊದಲಿಗೆ ನಗರಸಭೆಯಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ನಗರಸಭೆ ಸದಸ್ಯರು, ಪಟ್ಟಣದ ರಸ್ತೆ, ಕುಡಿಯುವ ನೀರು, ಒಳಚರಂಡಿಯಂಥ ಮೂಲಸೌಕರ್ಯಕ್ಕೆ ಹೆಚ್ಚಿನ ಹಣ ನಿಗದಿ ಮಾಡಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ಒದಗಿಸಬೇಕಿರುವ ಸೌಲಭ್ಯಗಳಿಗೆ ಅನುಗುಣವಾಗಿ ಅನುದಾನ ಒದಗಿಸಬೇಕಿದೆ ಎಂದರು.

ಅನುದಾನ ಪೂರ್ಣ ಪ್ರಮಾಣದಲ್ಲಿ ನಿಗದಿತ ಅವಧಿಯೊಳಗೆ ವೆಚ್ಚವಾಗಿ ಅಭಿವೃದ್ಧಿ ಕೆಲಸ ಅನುಷ್ಠಾನವಾಗಲು ಕೆಲವು ಕಠಿಣ ಷರತ್ತುಗಳನ್ನು ಸಡಲಿಸಬೇಕಿದೆ. ಇಲ್ಲವಾದಲ್ಲಿ ಪ್ರಕ್ರಿಯೆ ವಿಳಂಬವಾಗುತ್ತದೆ. ಇದರಿಂದಾಗಿಯೇ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಪರ ಕೆಲಸಗಳು ಆಗುತ್ತಿಲ್ಲವೆಂದು ಕೆಲ ಸದಸ್ಯರು ಗಮನಕ್ಕೆ ತಂದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರು ಆದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು, ; 2012-13ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರಕ್ಕೆ ನೀರು ಪೂರೈಸುವ ಮಹತ್ವದ 183 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಇದು ಕಾರ್ಯರೂಪಕ್ಕೆ ಬರಲಿಲ್ಲ. ನಗರದ ಪೈಪ್‌ ಲೈನ್‌ ತೀರ ಹಳೆಯದಾಗಿದೆ. ಪೈಪ್‌ ಲೈನ್‌ ಪದೇ ಪದೇ ಕೆಡುತ್ತಿದೆ. ಹೀಗಾಗಿ 63 ಕೋಟಿ ರೂ. ವೆಚ್ಚದಲ್ಲಿ ಪೈಪ್‌ ಲೈನ್‌ ಕಾಮಗಾರಿಗೆ ಪ್ರಸ್ತಾವನೆ ಸಿದ್ಧವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ವಾಸಿಸುವ 17 ವಾರ್ಡ್‌ಗಳು ನಗರದಲ್ಲಿವೆ. ಆದ್ದರಿಂದ ಅಗತ್ಯಕ್ಕೆ ಅನುಗುಣವಾಗಿ ಅನುದಾನ ನಿಗದಿ ಮಾಡಬೇಕಿದೆ ಎಂದರು.

ನಂತರ ನಗರದ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಅಧ್ಯಕ್ಷ ರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ರನ್ನು ಒಳಗೊಂಡ ಸಮಾಲೋಚನ ಸಭೆ ನಡೆಯಿತು.

ಕ್ಷೇತ್ರ ಅನುದಾನ ಹೆಚ್ಚಲಿ: ಜಿ.ಪಂ. ಸದಸ್ಯರಾದ ಇಶ್ರತ್‌ ಬಾನು, ಸಿ.ಎನ್‌. ಬಾಲರಾಜು ಮಾತನಾಡಿ, ಜಿ.ಪಂ. ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನ ಸಾಲದಾಗಿದೆ. ಗ್ರಾಮ ಪಂಚಾಯತಿಗಳಿಗೆ ಇರುವಷ್ಟು ಅನುದಾನ ಅಧಿಕಾರ ಜಿಲ್ಲಾ ಪಂಚಾಯಿತಿಗಳಿಗೆ ಇಲ್ಲವಾಗಿದೆ. 30 ರಿಂದ 35 ಸಾವಿರ ಜನರನ್ನು ಪ್ರತಿನಿಧಿಸುವ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳಿಗೆ ಕುಡಿಯುವ ನೀರು ಹೊರತು ಪಡಿಸಿದರೆ ಇತರೆ ಸೌಕರ್ಯಗಳನ್ನು ಒದಗಿಸಲು ಅನುದಾನ ನೀಡಲಾಗುತ್ತಿಲ್ಲವೆಂದು ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌ ಮಾತನಾಡಿ, ಅನುದಾನ ಹೆಚ್ಚಳದ ಜತೆಗೆ ಸದಸ್ಯರ ಮಾಸಿಕ ಗೌರವಧನವನ್ನು ಹೆಚ್ಚಳ ಮಾಡಬೇಕಿದೆ. 4ನೇ ಹಣಕಾಸು ಆಯೋಗ ಪೂರ್ಣ ಪ್ರಮಾಣದಲ್ಲಿ ಜಿ.ಪಂ. ಸದಸ್ಯರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಂಡು ವರದಿ ಸಲ್ಲಿಸಬೇಕಿದೆ ಎಂದರು.

ತಾ.ಪಂ. ಅಧ್ಯಕ್ಷ ಎಚ್‌.ವಿ. ಚಂದ್ರು ಹಾಗೂ ರಾಜು ಮಾತನಾಡಿ, ತಾ.ಪಂ. ಕಡಿಮೆ ಅನುದಾನ ನಿಗದಿ ಮಾಡಲಾಗುತ್ತಿದೆ. ಇದರಿಂದ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಒದಗಿಸಲು ತೊಡಕಾಗಿದೆ ಎಂದರು.

ಜಿ.ಪಂ. ಉಪಾಧ್ಯಕ್ಷ ಎಸ್‌. ಬಸವರಾಜು ಮಾತನಾಡಿ, ಪ್ರಗತಿಪರ ಕೆಲಸಗಳು ನಡೆಯಲು ಪೂರಕವಾದ ಅನುದಾನವನ್ನು ಜಿ.ಪಂ.ಕ್ಷೇತ್ರಗಳಿಗೆ ನೀಡಬೇಕಿದೆ ಎಂದರು.

ವರದಿ ನೀಡಲಾಗುವುದು: ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಚಿನ್ನಸ್ವಾಮಿ, ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ, ಸಲಹೆಗಳನ್ನು ಕ್ರೋಢೀಕರಿಸಿ ವರದಿ ಸಲ್ಲಿಸಲಾಗುತ್ತದೆ. ಈಗಾಗಲೇ ಮಾಹಿತಿ ಕಳುಹಿಸುವಂತೆ ಆಯೋಗದಿಂದ ತಿಳಿಸಲಾಗಿತ್ತು. ಈ ಮಾಹಿತಿ ನಿಖರವಾಗಿ ನೀಡಿದಷ್ಟೂ ಪರಿಣಾಮಕಾರಿಯಾಗಿ ವರದಿ ಸಲ್ಲಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಆಯೋಗದ ಸದಸ್ಯರಾದ ಡಾ. ಎಚ್‌. ಶಶಿಧರ್‌, ಎಚ್‌.ಡಿ. ಅಮರನಾಥ್‌, ಸಮಾಲೋಚಕ ಡಾ. ಟಿ.ಆರ್‌. ಚಂದ್ರಶೇಖರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮುಖ್ಯ ಯೋಜನಾಧಿಕಾರಿ ಮಾದೇಶು, ನಗರಸಭೆ ಅಧ್ಯಕ್ಷ ಎಸ್‌.ಎನ್‌, ರೇಣುಕಾ, ಉಪಾಧ್ಯಕ್ಷ ಆರ್‌. ಎಂ. ರಾಜಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಕೆ.ಎಂ. ರವಿಕುಮಾರ್‌ ಇತರರು ಹಾಜರಿದ್ದರು.

ಬಾಕ್ಸ್‌

ಅಧಿಕಾರಿ, ಜನಪ್ರತಿನಿಧಿಗಳ ನಡುವೆ ಸಮನ್ವಯ ಅಗತ್ಯ

ಹಣಕಾಸು ವಿಕೇಂದ್ರೀಕರಣ ಹಾಗೂ ಪ್ರದೇಶಗಳ ಅಸಮಾನತೆಯನ್ನು ಹೋಗಲಾಡಿಸಿ ಸರಿಸಮಾನವಾಗಿ ಮೂಲ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಹಣಕಾಸು ಆಯೋಗ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಅಹವಾಲು ಆಲಿಸುತ್ತಿದೆ ಎಂದು ರಾಜ್ಯದ 4ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ, ಚಿನ್ನಸ್ವಾಮಿ ತಿಳಿಸಿದರು.

ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸಮನ್ವಯತೆ ಅಗತ್ಯವಿದೆ. ಪ್ರಸ್ತುತ ಬರಗಾಲ ಸೇರಿದಂತೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರು ಪಟ್ಟಣದತ್ತ ವಲಸೆ ಹೊರಟಿರುವುದು ಸಾಮಾನ್ಯವಾಗಿದೆ. ಹೀಗಾಗಿ ನಗರ ಪ್ರದೇಶಗಳಿಗೆ ಹೆಚ್ಚಿನ ಒತ್ತಡವಿದ್ದು ಅಗಶ್ಯಕತೆಗೆ ತಕ್ಕಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಸವಾಲು ಎದುರಿಸಬೇಕಿದೆ ಎಂದರು.

ಆಯೋಗವು ಪರಿಣಾಮಕಾರಿಯಾಗಿ ಶಿಫಾರಸುಗಳನ್ನು ಮಾಡಲು ಪೂರಕವಾಗಿರುವ ಮಾಹಿತಿ ಸ್ಥಳೀಯ ಪಟ್ಟಣ ಸಂಸ್ಥೆಗಳಿಂದ ಬರಬೇಕಿದೆ. ಆಯೋಗವು ಕಳೆದ ಜುಲೈ ತಿಂಗಳಿನಲ್ಲಿ ಕಾರ್ಯಾಗಾರ ನಡೆಸಿ ಪ್ರಶ್ನಾವಳಿ ಸಿದ್ಧಪಡಿಸಿತ್ತು. ಇದನ್ನು ಈಗಾಗಲೇ ಕಳುಹಿಸಿಕೊಡಲಾಗಿದ್ದು ನಿಗದಿತ ಅವಧಿಯೊಳಗೆ ಕೆಲ ಸಂಸ್ಥೆಗಳು ಸಲ್ಲಿಸಿಲ್ಲ. ಇನ್ನು ವಿಳಂಬ ಮಾಡದೆ ಶೀಘ್ರವಾಗಿ ಮಾಹಿತಿ ಕಳುಹಿಸಿಕೊಡಬೇಕು ಎಂದರು.

==

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ