Please enable javascript.ಕುಷ್ಠ ರೋಗ ಮುಕ್ತ ಜಿಲ್ಲೆಗೆ ಕಾರ್ಯೋನ್ಮುಖ - ರೋಗ ಮುಕ್ತ ಜಿಲ್ಲೆಗೆ ಆರೋಗ್ಯ ಇಲಾಖೆ ಪಣ - Vijay Karnataka

ಕುಷ್ಠ ರೋಗ ಮುಕ್ತ ಜಿಲ್ಲೆಗೆ ಕಾರ್ಯೋನ್ಮುಖ

Vijaya Karnataka Web 25 Jan 2017, 10:33 pm
Subscribe

2020ನೇ ಸಾಲಿನ ವೇಳೆಗೆ ಕುಷ್ಠ ರೋಗ ಮುಕ್ತ ರಾಜ್ಯ ಮಾಡುವ ಗುರಿ ಹೊಂದಲಾಗಿದ್ದು, ಅದರಂತೆ ಆ ಅವಧಿಯೊಳಗೆ ಜಿಲ್ಲೆಯನ್ನು ರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯೋನ್ಮುಖವಾಗಿದೆ.

ಕುಷ್ಠ ರೋಗ ಮುಕ್ತ ಜಿಲ್ಲೆಗೆ ಕಾರ್ಯೋನ್ಮುಖ

ಚಿಕ್ಕಬಳ್ಳಾಪುರ: 2020ನೇ ಸಾಲಿನ ವೇಳೆಗೆ ಕುಷ್ಠ ರೋಗ ಮುಕ್ತ ರಾಜ್ಯ ಮಾಡುವ ಗುರಿ ಹೊಂದಲಾಗಿದ್ದು, ಅದರಂತೆ ಆ ಅವಧಿಯೊಳಗೆ ಜಿಲ್ಲೆಯನ್ನು ರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯೋನ್ಮುಖವಾಗಿದೆ.

ಜಿಲ್ಲೆಯಲ್ಲಿ 2008ನೇ ಸಾಲಿನಿಂದ ಸುಮಾರು 803 ಮಂದಿಯಲ್ಲಿ ಕುಷ್ಠ ರೋಗ ಪತ್ತೆಯಾಗಿದೆ. ಇವರೆಲ್ಲರಿಗೂ ಚಿಕಿತ್ಸೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಸ್ತುತ 50 ಮಂದಿಗೆ ಚಿಕಿತ್ಸೆ ಮುಂದುವರಿಸಿದೆ.

ಕುಷ್ಠ ರೋಗದ ಬಗ್ಗೆ ಗ್ರಾಮೀಣ ಭಾಗದವರಲ್ಲಿ ಮೂಢನಂಬಿಕೆ ಇದೆ. ಈ ರೋಗಕ್ಕೆ ತುತ್ತಾದವರು ಶಾಪಗ್ರಸ್ಥರು, ಹಿಂದೆ ಅನ್ಯಾಯ ಮಾಡಿದವರು ಎಂದು ದೂಷಿಸುವ, ಅಂತಹ ರೋಗಿಗಳನ್ನು ಗ್ರಾಮದಿಂದ ಹೊರಗುಳಿಸಿರುವ ನಿರ್ದಶನವೂ ಇದೆ. ಆದರೆ, ಇದು ಮೈಕೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರಲಿದೆ ಎಂಬ ಅರಿವು ಕಡಿಮೆ.

ಕೆಲ ಸಾಂಕ್ರಾಮಿಕ ರೋಗಗಳ ಲಕ್ಷಣ ಕೂಡಲೆ ಕಂಡುಬರಲಿದೆ. ಆದರೆ, ಕುಷ್ಠ ರೋಗ ಲಕ್ಷಣ ಲೆಪ್ರೆ ರೋಗಾಣು ದೇಹ ಪ್ರವೇಶಿದಾಗಿನಿಂದ 6 ತಿಂಗಳಿಂದ 40 ವರ್ಷದವರೆಗೆ ಯಾವ ಸಂದರ್ಭದಲ್ಲಾದರೂ ಕಂಡುಬರಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರೋಗದ ಲಕ್ಷಣ: ರೋಗವನ್ನು ಹಲವು ಲಕ್ಷಣ ಮೂಲಕ ಪತ್ತೆ ಹಚ್ಚಬಹುದಾಗಿದೆ.

ದೇಹದ ಮೇಲೆ ಯಾವುದೆ ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ ಕಾಣಿಸುವುದು, ಕೈಕಾಲು ಜೋಮು ಹಿಡಿದು ಸ್ಪರ್ಶ ಜ್ಞಾನವಿಲ್ಲದಂತಾಗುವುದು, ಮುಖ ಅಥವಾ ಕೈ ಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಕಂಡುಬರುವುದು, ಇವು ರೋಗದ ಪ್ರಾರಂಭಿಕ ಲಕ್ಷಣಗಳು.

ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ: ರೋಗದ ಲಕ್ಷಣ ಕಂಡು ಬಂದ ಕೂಡಲೇ ಸರಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು.

ಔಷಧ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗಲಿದ್ದು, ಪ್ರಾರಂಭಿಕ ಹಂತದಲ್ಲಿ ಗುರುತಿಸಿ, ಕ್ರಮಬದ್ಧ ಚಿಕಿತ್ಸೆ ಪಡೆದಲ್ಲಿ, ಈ ರೋಗದಿಂದ ಉಂಟಾಗಬಹುದಾದ ಅಂಗವಿಕಲತೆ ತಡೆಗಟ್ಟಬಹುದು. ಚಿಕಿತ್ಸೆ ಅವಧಿ ಕೇವಲ 6 ಅಥವಾ 12 ತಿಂಗಳು. ಮನೆಯಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ.

41ಮಂದಿಯಲ್ಲಿ ಪತ್ತೆ: 2016ನೇ ಸಾಲಿನ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 41 ಮಂದಿಯಲ್ಲಿ ರೋಗ ಪತ್ತೆಯಾಗಿದೆ.

ಬಾಗೇಪಲ್ಲಿ ತಾಲೂಕಿನಲ್ಲಿ 6, ಚಿಕ್ಕಬಳ್ಳಾಪುರ 7, ಚಿಂತಾಮಣಿ 12, ಗೌರಿಬಿದನೂರು 9, ಗುಡಿಬಂಡೆ 3, ಶಿಡ್ಲಘಟ್ಟದಲ್ಲಿ 4 ಮಂದಿಯಲ್ಲಿ ಪತ್ತೆಯಾಗಿದ್ದು, ಒಟ್ಟು 50 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಶ್ವದಲ್ಲಿನ ಕುಷ್ಠ ರೋಗಿಗಳ ಒಟ್ಟು ಸಂಖ್ಯೆಯಲ್ಲಿ ಶೇ. 50ರಷ್ಟು ಮಂದಿ ಭಾರತದಲ್ಲಿದ್ದಾರೆ. ಬಿಹಾರ, ಚತ್ತೀಸ್‌ಘಡ್‌ ಮತ್ತಿತರ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಹಿಂದೆ ತಮಿಳುನಾಡಿಲ್ಲೂ ರೋಗಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಾಗಿತ್ತು. ಕರ್ನಾಟಕದಲ್ಲಿ ಕಡಿಮೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗಾಂಧೀಜಿ ಹುತಾತ್ಮ ದಿನದಂದು ಆಂದೋಲನ

ಕುಷ್ಠರೋಗಿಗಳನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿತ್ತು. ಮಹಾತ್ಮಾ ಗಾಂಧಿ, ಮದರ್‌ ತೆರೇಸಾ ಅವರಂತಹ ಮಹನೀಯರು, ಈ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಅವರೊಂದಿಗೆ ಬೆರೆತರು.

ಈ ಹಿಂದೆ ಕುಷ್ಠ ರೋಗ ನಿಯಂತ್ರಣ ದಿನವನ್ನಾಗಿ ಆಚರಣೆ ಮಾಡುತ್ತಿದ್ದ ಆರೋಗ್ಯ ಇಲಾಖೆ, ಪ್ರಸಕ್ತ ಸಾಲಿನಿಂದ ಮಹಾತ್ಮಾ ಗಾಂಧಿ ಅವರು ಹುತಾತ್ಮರಾದ ಜ. 30ರಂದು 'ಸ್ಪರ್ಶ್‌ ಕುಷ್ಠ ಅರಿವು ಆಂದೋಲನ'ಕ್ಕೆ ಮುಂದಾಗಿದೆ.

ಜ. 30ರಿಂದ ಫೆ.13ರವರೆಗೆ ಸ್ಪರ್ಶ್‌ ಕುಷ್ಠ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ. ತಾಲೂಕು ಆರೋಗ್ಯಾಧಿಕಾರಿ, ಆಡಳಿತ ವೈದ್ಯಾಧಿಕಾರಿಗೆ ತರಬೇತಿ, ಕ್ಷೇತ್ರ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಪುನರ್‌ ಮನನ ತರಬೇತಿ ನೀಡಲಾಗಿದೆ. ಆಂದೋಲನ ಅಂಗವಾಗಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ, ಶಿಕ್ಷಣ, ಸಂವಹನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸಲು ಉದ್ದೇಶಿಸಲಾಗಿದೆ.

ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ ತಂಡದ ಸಹಯೋಗದೊಂದಿಗೆ ವಸತಿ ಶಾಲೆ, ವಸತಿ ನಿಲಯ ವಿದ್ಯಾರ್ಥಿಗಳಿಗೆ ತಪಾಸಣೆ, ಮಾಹಿತಿ, ಶಿಕ್ಷಣ, ಸಂವಹನ ಮೂಲಕ ಅರಿವು ಮೂಡಿಸಲು ನಿರ್ಧರಿಸಿದೆ.

ಸಮಿತಿ ರಚನೆ: 'ಕೈ ಕೈ ಜೋಡಿಸಿ, ಕುಷ್ಠ ನಿವಾರಿಸಿ' ಎಂಬ ಘೋಷಣೆಯೊಂದಿಗೆ ಸ್ಪರ್ಶ್‌ ಕುಷ್ಠ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ 6 ತಾಲೂಕು, 56 ಪ್ರಾಥಮಿಕ ಆರೋಗ್ಯ ಕೇಂದ್ರ, 198 ಆರೋಗ್ಯ ಉಪಕೇಂದ್ರ ಹಾಗೂ 1,288 ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸಲು ಸಮಿತಿ ರಚನೆ ಮಾಡಲು ಸೂಚಿಸಲಾಗಿದೆ.

ತಾಲೂಕು ಮಟ್ಟದ ಸಮಿತಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷ, ತಾಲೂಕು ಆರೋಗ್ಯಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುವರು. ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಗ್ರಾಪಂ ಅಧ್ಯಕ್ಷ ನೇತೃತ್ವದಲ್ಲಿ ಸಮಿತಿ ರಚಿಸಲಿದ್ದು, ಆಡಳಿತ ವೈದ್ಯಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುವರು. ಆರೋಗ್ಯ ಉಪಕೇಂದ್ರ ಮಟ್ಟದ ಸಮಿತಿಯಲ್ಲಿ ಗ್ರಾಪಂ ಸದಸ್ಯ ಅಧ್ಯಕ್ಷ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸದಸ್ಯ ಕಾರ್ಯದರ್ಶಿ, ವಿಎಚ್‌ಎಸ್ಪಿ ಮಟ್ಟದ ಸಮಿತಿಯಲ್ಲಿ ಗ್ರಾಪಂ ಸದಸ್ಯ ಅಧ್ಯಕ್ಷ, ಆಶಾ ಕಾರ್ಯಕರ್ತೆ ಸದಸ್ಯ ಕಾರ್ಯದರ್ಶಿಯಾಗಿರುವರು.

ಸಮಿತಿಯು ಸಭೆ ಏರ್ಪಡಿಸಿ, ಜ. 30ರಿಂದ ಫೆ. 7ರೊಳಗೆ ಆಂದೋಲನ ಹಮ್ಮಿಕೊಂಡು, ಅರಿವು ಮೂಡಿಸಲು ಇಲಾಖೆ ಈಗಾಗಲೇ ಸೂಚನೆ ನೀಡಿದೆ.

ಪ್ರತಿಜ್ಞಾ ವಿಧಿ ಬೋಧನೆ

ಆಂದೋಲನ ಆರಂಭವಾಗುವ ಮಹಾತ್ಮಾ ಗಾಂಧೀಜಿ ಹುತಾತ್ಮ ದಿನ(ಜ. 30)ದಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುತ್ತದೆ.

ಸಮಾಜದಲ್ಲಿ ಯಾವುದೇ ವ್ಯಕ್ತಿಗಳಿಗೆ ಕುಷ್ಠರೋಗ ಲಕ್ಷ ಣಗಳಾದ ಚರ್ಮದ ಮೇಲಿನ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಹಾಗೂ ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆ ಬಗ್ಗೆ ನೆರೆಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಿ, ಅವಶ್ಯಕ ಚಿಕಿತ್ಸೆ ನೀಡುವಾಗ ಬೇಧ ಭಾವ ಮಾಡದೆ ಗೌರವಯುಕ್ತವಾಗಿ ಉಪಚರಿಸಲಾಗುವುದು. ರೋಗಿ ಗುಣಮುಖರಾಗಲು ಸಹಕರಿಸಲಾಗುವುದು. ರೋಗದ ಬಗ್ಗೆ ಸೂಕ್ತ ತಿಳಿವಳಿಕೆ ನೀಡಿ ಪ್ರಾರಂಭದ ಹಂತದಲ್ಲೇ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಬಹುದು. ಮುಂದಾಗಬಹುದಾದ ಅಂಗವಿಕಲತೆ ಕೂಡ ತಡೆಗಟ್ಟಬಹುದು, ಇದಕ್ಕೆಲ್ಲ ಮಿಗಿಲಾಗಿ ಸಮಾಜದಲ್ಲಿರುವ ನಾವೆಲ್ಲರು ಒಗ್ಗಟ್ಟಾಗಿ ಈ ದಿಸೆಯಲ್ಲಿ ಕೆಲಸ ಮಾಡಿದರೆ ಗಾಂಧೀಜಿಯವರ 'ಕುಷ್ಠರೋಗ ಮುಕ್ತ ಭಾರತ' ಕನಸು ನನಸಾಗಿಸಬಹುದು ಎಂದು ಪ್ರತಿಜ್ಞಾ ವಿಧಿ ಅಂದು ಬೋಧಿಸಲಾಗುತ್ತದೆ.

ಜಿಲ್ಲೆಯಲ್ಲಿ 2016ನೇ ಸಾಲಿನ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 41 ಮಂದಿಯಲ್ಲಿ ಕುಷ್ಠ ರೋಗ ಪತ್ತೆಯಾಗಿದೆ. ಪ್ರಸ್ತುತ 50 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ. ಜ. 30ರಂದು ಸ್ಪರ್ಶ್‌ ಕುಷ್ಠ ರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ. -ಡಾ. ಚಂದ್ರಮೋಹನ್‌, ಕುಷ್ಠ ರೋಗ ಜಿಲ್ಲಾ ನಿಯಂತ್ರಣಾಧಿಕಾರಿ

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ