Please enable javascript.ಬಾತಿ ಗುಡ್ಡದಲ್ಲಿ ಕನ್ನಡಮ್ಮನ ಜಾತ್ರೆ ಇಂದು - ದಾವಣಗೆರೆ, ಡೊಡ್ಡಬಾತಿ, ತಾಲೂಕು ಕನ್ನಡ ಸಮ್ಮೇಳನ, davangere, doddabathi, taluk, kannada, convention - Vijay Karnataka

ಬಾತಿ ಗುಡ್ಡದಲ್ಲಿ ಕನ್ನಡಮ್ಮನ ಜಾತ್ರೆ ಇಂದು

ವಿಕ ಸುದ್ದಿಲೋಕ 25 Dec 2013, 2:00 am
Subscribe

ಸಮ್ಮೇಳನದ ಅಧ್ಯಕ್ಷ ಪ್ರೊ.ಬಾತಿ ಬಸವರಾಜ್ ನೇತೃತ್ವದಲ್ಲಿ ಸಾಹಿತ್ಯಾ ಸಕ್ತರು, ಕನ್ನಡ ಅಭಿಮಾನಿಗಳು ಗುಡ್ಡದಲ್ಲಿ ಕನ್ನಡದ ತೇರು ಎಳೆಯಲು ಸಜ್ಜಾಗಿದ್ದಾರೆ. ಸಮೇಳನಕ್ಕಾಗಿ ಬಾತಿ ನವ ವಧುವಿನಂತೆ ಸಿಂಗರಿಸಿಕೊಂಡು ಸಿದ್ಧವಾಗಿದೆ.

 davangere doddabathi taluk kannada convention
ಬಾತಿ ಗುಡ್ಡದಲ್ಲಿ ಕನ್ನಡಮ್ಮನ ಜಾತ್ರೆ ಇಂದು
ದಾವಣಗೆರೆ:

ಜೋಳದ ಹೊಲದ ತೆನೆ ತೆನೆಯು ತೂಗಿ ಬೀಸುವ ಗಾಳಿಯಲ್ಲಿ ನೂರು ಬಗೆ ಮರ್ಮರ, ಸಂಜೆಯ ಕಳೆಗೆ ಅಲ್ಲಲ್ಲಿ ಥಳ ಥಳ ನೀರು, ಪಿರಮಿಡ್ಡಿನಂತೆದ್ದು ಕೂತ ಬಾತಿಯ ಗುಡ್ಡ, ಮಿಣಿ ಮಿಣಿ ದೀಪ ಅದರ ತುದಿಗೆ...

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ‘ನನ್ನ ದಾವಣಗೆರೆಯ ನೆನಪುಗಳು’ ಪದ್ಯದಲ್ಲಿ ಬಾತಿ ಗುಡ್ಡ ಕುರಿತು ಬಿಚ್ಚಿಕೊಳ್ಳುವ ನೆನಪಿನ ಸಾಲುಗಳಿವು.

ಅವರನ್ನು ಕಾಡಿದ ಈ ತಾಣದಲ್ಲಿಯೇ ಇಂದು ಕನ್ನಡಮ್ಮನ ಜಾತ್ರೆ ನಡೆಯಲಿದೆ. ಡೊಡ್ಡಬಾತಿಯಲ್ಲಿ ಡಿ. 24 ರಂದು ನಡೆಯಬೇಕಿದ್ದ ದಾವಣಗೆರೆ ತಾಲೂಕು ಕನ್ನಡ ಸಮ್ಮೇಳನವನ್ನು ಕವಿ ನಿಧನದ ಹಿನ್ನೆಲೆಯಲ್ಲಿ ಒಂದು ದಿನ ಮುಂದೂಡಿ ಡಿ. 25 ರಂದು ಅವರ ಸ್ಮರಣಾರ್ಥ ಈ ಸಮ್ಮೇಳನ ನಡೆಸುತ್ತಿರುವುದು ಇನ್ನೂ ವಿಶೇಷ.

ಸಮ್ಮೇಳನದ ಅಧ್ಯಕ್ಷ ಪ್ರೊ.ಬಾತಿ ಬಸವರಾಜ್ ನೇತೃತ್ವದಲ್ಲಿ ಸಾಹಿತ್ಯಾ ಸಕ್ತರು, ಕನ್ನಡ ಅಭಿಮಾನಿಗಳು ಗುಡ್ಡದಲ್ಲಿ ಕನ್ನಡದ ತೇರು ಎಳೆಯಲು ಸಜ್ಜಾಗಿದ್ದಾರೆ. ಸಮೇಳನಕ್ಕಾಗಿ ಬಾತಿ ನವ ವಧುವಿನಂತೆ ಸಿಂಗರಿಸಿಕೊಂಡು ಸಿದ್ಧವಾಗಿದೆ.

ಇಲ್ಲಿನ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಹಾಲಿಂಗ ರಂಗ ಹೆಸರಲ್ಲಿ ವೇದಿಕೆ, ರೇವಣ ಸಿದ್ದೇಶ್ವರ ಮಹಾದ್ವಾರ ಸಿದ್ಧವಾಗಿದೆ. ಡಿ. 25 ರ ಬೆಳಗ್ಗೆ 7.30 ಕ್ಕೆ ರಾಷ್ಟ್ರ ಧ್ವಜಾರೋಹಣದ ಮೂಲಕ ಸಮ್ಮೇಳನದ ಚಟುವಟಿಕೆಗಳು ಗರಿಗೆದರಲಿವೆ. 8 ಗಂಟೆಗೆ ಪೂರ್ಣ ಕುಂಭ ಮೇಳ, ನಂತರ ಜನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.

ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಸಮ್ಮೇಳನ ಉದ್ಘಾಟಿಸುವರು. ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಚಿತ್ರಕಲಾ ಪ್ರದರ್ಶನ, ಶಾಸಕರಾದ ಕೆ. ಶಿವಮೂರ್ತಿ ನಾಣ್ಯಪ್ರದರ್ಶನ, ಶಾಸಕ ಎಚ್.ಎಸ್.ಶಿವಶಂಕರ್ ಪುಸ್ತಕ ಮಳಿಗೆ ಉದ್ಘಾಟಿಸುವರು.

ಸಾಹಿತಿ ಶ್ರೀಕಂಠಕೂಡಿಗೆ ಮುಖ್ಯ ಅತಿಥಿ ಭಾಷಣ ಹಾಗೂ ಪ್ರೊ.ಬಾತಿ ಬಸವರಾಜ್ ಸಮ್ಮೇಳನಾಧ್ಯಕ್ಷರ ಭಾಷಣ ಮಾಡುವರು. ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಎ.ಆರ್.ಉಜ್ಜನಪ್ಪ, ಜಿ.ಪಂ.ಸದಸ್ಯ ಕರಿಬಸಪ್ಪ ಅತಿಥಿಗಳಾಗಿದ್ದಾರೆ.

ಮಧ್ಯಾಹ್ನ 12.30 ಕ್ಕೆ ಸಾಹಿತಿ ಡಾ. ಪ್ರಹ್ಲಾದ್ ಅಗಸನಕಟ್ಟೆ ಅಧ್ಯಕ್ಷತೆಯಲ್ಲಿ ದಾವಣಗೆರೆ ತಾಲೂಕಿನ ಪರಂಪರೆ ಕುರಿತು ಗೋಷ್ಠಿ ನಡೆಯಲಿದ್ದು , ಬುರುಡೇಕಟ್ಟೆ ಮಂಜಣ್ಣ, ಪ್ರೊ.ಎಸ್.ಎಚ್.ಪಟೇಲ್ ವಿಷಯ ಮಂಡಿಸುವರು. ಮಧ್ಯಾಹ್ನ 2 ಕ್ಕೆ ಡಾ. ಪ್ರಕಾಶ್ ಹಲಗೇರಿ ಅಧ್ಯಕ್ಷತೆಯಲ್ಲಿ ಕನ್ನಡದ ತಲ್ಲಣಗಳು ಗೋಷ್ಠಿ ನಡೆಯಲಿದ್ದು ಸಾಹಿತಿ ಎಸ್.ಟಿ. ಶಾಂತ ಗಂಗಾಧರ, ಗಿರಿಜಾ ಕಾಡಯ್ಯನಮಠ ಉಪನ್ಯಾಸ ನೀಡುವರು.

ಮಧ್ಯಾಹ್ನ 3.30 ಕ್ಕೆ ಪ್ರಾಧ್ಯಾಪಕಿ ಪಿ.ಎಂ. ಅನುರಾಧ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಂಜೆ 5 ಕ್ಕೆ ಕಸಾಪ ತಾಲೂಕು ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಅಧ್ಯಕ್ಷತೆಯಲ್ಲಿ ಬಹಿರಂಗ ಅವೇಶನ ನಡೆಯಲಿದ್ದು ಕೋಶಾಧ್ಯಕ್ಷ ನಾಗರಾಜಪ್ಪ ಬೆಳವನೂರು ನಿರ್ಣಯ ಮಂಡಿಸುವರು.

ಸಂಜೆ 5.15ಕ್ಕೆ ಸಮಾರೋಪ ನಡೆಯಲಿದ್ದು, ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಸಮಾರೋಪ ಭಾಷಣ ಮಾಡುವರು. ಕನ್ನಡ ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಸ್.ಎಚ್. ಶಿವರುದ್ರಪ್ಪ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿ ಸುವರು. ಡಿಡಿಪಿಐ ಡಿ.ಕೆ. ಶಿವಕುಮಾರ್, ಕಸಾಪ ಗೌರವ ಕಾರ್ಯದರ್ಶಿ ಗಳಾದ ಬಾ.ಮ. ಬಸವರಾಜಯ್ಯ, ಎಚ್.ಮಲ್ಲಿಕಾರ್ಜುನ ಉಪಸ್ಥಿತರಿರುವರು.

ಅಧ್ಯಾಪನದಿಂದ ಅಧ್ಯಕ್ಷ ಸ್ಥಾನದವರೆಗೆ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಪ್ರೊ.ಬಾತಿ ಬಸವರಾಜ್ ಸ್ಥಳೀಕರು. ಅವರ ಹೆಸರಿನ ಜತೆಯೇ ತನ್ನ ಹುಟ್ಟೂರಿನ ಹೆಸರನ್ನು ಸೇರಿಸಿಕೊಂಡಿದ್ದಾರೆ. ಮಾ.6, 1948ರಂದು ಜನಿಸಿದ ಅವರು ತನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ದಾವಣಗೆರೆಯ ಡಿಆರ್‌ಎಂ ಕಾಲೇಜಿನಲ್ಲಿ ಪದವಿ, ಮೈಸೂರು, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಎಂಎಸ್‌ಬಿ ಕಾಲೇಜು, ಎವಿಕೆ ಮಹಿಳಾ ಕಾಲೇಜು, ಎಆರ್‌ಜಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದ ಅವರು 2006ರಲ್ಲಿ ನಿವೃತ್ತರಾದರು. ಪ್ರಸ್ತುತ ದವನ್ ಕಾಲೇಜು ಪ್ರಾಚಾರ್ಯರಾಗಿದ್ದಾರೆ.
ಬರವಣಿಗೆ: ಬಿಡಿ ಕವನ, ಲೇಖನಗಳು. ಡಾ.ಚಿಮೂ ನೇತೃತ್ವದಲ್ಲಿ ಹಂಪಿಯ ಉತ್ಖನನ ಕಾರ್ಯ, ವ್ಯಾಸರಾಯ ಬಲ್ಲಾಳರ ಬಂಡಾಯ ಕಾದಂಬರಿ ಒಂದು ನೋಟ ಲೇಖನ. ದೇವರ ದಾಸಿಮಯ್ಯ ಕುರಿತ ಒಂದು ಕೃತಿ. ಕುವೆಂಪು ವಿವಿಗಾಗಿ ‘ವಾಣಿಜ್ಯ ಕನ್ನಡ ’ಕೃತಿ (ಸಂಪಾದನೆ). ಪ್ರವಾಸ: ಮಲೇಶಿಯಾದ ತೆಂಗ ವಿವಿಗೆ ಭೇಟಿ. ಉತ್ತರ ಅಮೆರಿಕಾದ ನ್ಯೂ ಹೆವೆನ್‌ನಲ್ಲಿರುವ ‘ಯಲೆ’ ವಿವಿಯಲ್ಲಿ ಉಪನ್ಯಾಸ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ