Please enable javascript.ಸಿರಿಧಾನ್ಯ ಮೇಳದಲ್ಲಿ ಆರೋಗ್ಯ ಜಾಗೃತಿ - ಸಿರಿಧಾನ್ಯ ಮೇಳದಲ್ಲಿ ಆರೋಗ್ಯ ಜಾಗೃತಿ - Vijay Karnataka

ಸಿರಿಧಾನ್ಯ ಮೇಳದಲ್ಲಿ ಆರೋಗ್ಯ ಜಾಗೃತಿ

ವಿಕ ಸುದ್ದಿಲೋಕ 27 Aug 2016, 9:00 am
Subscribe

ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ,ಸಂಪ್ರದಾಯ,ಆಹಾರ ಪದ್ಧತಿ ಮರೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ತಿಂಡಿತಿನಿಸು ಮತ್ತು ಸಿರಿಧಾನ್ಯಗಳನ್ನು ಅಡುಗೆಮನೆಗೆ ತರುವ ಉದ್ದೇಶದಿಂದ ನಗರದಲ್ಲಿ 'ಗ್ರಾಹಕರ ಆರೋಗ್ಯಕ್ಕಾಗಿ ಸಿರಿಧಾನ್ಯ ಮೇಳ' ಆಯೋಜಿಸಲಾಗಿದೆ.

ಸಿರಿಧಾನ್ಯ ಮೇಳದಲ್ಲಿ ಆರೋಗ್ಯ ಜಾಗೃತಿ

-ಒಂದೇ ಸೂರಿನಡಿ ಸಾಂಪ್ರದಾಯಿಕ ತಿಂಡಿ ತಿನಿಸು, ಧಾನ್ಯಗಳ ಮಾರಾಟ

ಮೈಸೂರು: ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೌಷ್ಟಿಕಾಂಶಗಳ ಆಗರವಾದ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಸಿರಿಧಾನ್ಯಗಳನ್ನು ಅಡುಗೆ ಮನೆಗೆ ತರುವ ಉದ್ದೇಶದಿಂದ ನಗರದಲ್ಲಿ 'ಗ್ರಾಹಕರ ಆರೋಗ್ಯಕ್ಕಾಗಿ ಸಿರಿಧಾನ್ಯ ಮೇಳ' ಆಯೋಜಿಸಲಾಗಿದೆ.

ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಯುಕ್ತಾಶ್ರದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ಸಿರಿಧಾನ್ಯ ಮೇಳವನ್ನು ಆಯೋಜಿಸಿದೆ.

ಸಿರಿ ಧಾನ್ಯಗಳು ಅಕ್ಕಿ ಮತ್ತು ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನ ಪ್ರಮಾಣದ ಪ್ರೋಟಿನ್‌, ವಿಟಮಿನ್‌ ಖನಿಜಾಂಶಗಳನ್ನು ಹೊಂದಿದೆ ಎಂಬ ಆಹಾರ ತಜ್ಞರ ಮಾತಿನಂತೆ ಸಿರಿ ಧಾನ್ಯಗಳಾದ ರಾಗಿ, ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲು ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸಾವಯವ ಕೃಷಿಯಿಂದ ಬೆಳೆದ ತರಕಾರಿ ಪದಾರ್ಥಗಳು, ಸೊಪ್ಪಿನ ಪದಾರ್ಥಗಳು, ಬೀಜಗಳು, ದಿನಬಳಕೆಯ ವಸ್ತುಗಳಾದ ಸೋಪು, ಪೇಸ್ಟ್‌, ಜೇನುತುಪ್ಪ, ಸಾಂಬಾರ ಪುಡಿಗಳು, ರಾಗಿ ಹಿಟ್ಟು ಸೇರಿದಂತೆ ನಾನಾ ಬಗೆಯ ವಸ್ತುಗಳು ಒಂದೇ ಸೂರಿನಡಿ ದೊರಕಲಿದೆ. ಮಧುಮೇಹಕ್ಕೆ ರಾಮಾಬಾಣ ಎನ್ನಲಾದ ಕೊರಲು ಅಕ್ಕಿ ಹಾಗೂ ದೇಶಿ ಅಕ್ಕಿಗಳ ಪ್ರದರ್ಶನ ಮತ್ತು ಮಾರಾಟ ಕೂಡ ನಡೆದಿದೆ.

''ಹಲವು ರೋಗಗಳಿಗೆ ಆಹಾರ ರೂಪದಲ್ಲಿ ಔಷಧಿಯಾಗುವ ಸಿರಿಧಾನ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ತಮ್ಮ ಹಿಂದಿನ ತಲೆಮಾರಿನ ಆಹಾರ ಪದ್ಧತಿಯನ್ನು ಇಂದಿನ ಮಕ್ಕಳಿಗೆ ನೀಡಿ ಉತ್ತಮ ಆರೋಗ್ಯವಂತರಾಗಲು ಇದು ಅವಶ್ಯಕವಾಗಿದೆ. ಇಂದಿನ ಆಹಾರ ಪದ್ಧತಿಯಲ್ಲಿ ಯಾವುದೇ ಸತ್ವಾಂಶವಿಲ್ಲ'' ಎನ್ನುವುದು ಆಯೋಜಕರ ಮಾತು.

ಮೇಳದಲ್ಲಿ ಮೈಸೂರು, ಮಂಡ್ಯ, ಹಾಸನ, ಬಳ್ಳಾರಿ, ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ 14 ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಸಿರಿಧಾನ್ಯ ಬೆಳೆಗಾರರು ಭಾಗವಹಿಸಿದ್ದಾರೆ.

ಇದಕ್ಕೂ ಮುನ್ನ ಮೇಳವನ್ನು ಸಿರಿಧಾನ್ಯ ಕುಟುಂಬಗಳಾದ ಬಳ್ಳಾರಿ ಜಿಲ್ಲೆಯ ಹಡಗಲಿಯ ಕಲ್ಲಪ್ಪ ಉತ್ತಂಗಿ ಮತ್ತು ಸುಮಂಗಲ ಹಾಗೂ ಮಂಡ್ಯ ಜಿಲ್ಲೆಯ ಬೋರೇಗೌಡ ಮತ್ತು ಹೇಮಾವತಿ ದಂಪತಿಗಳು ಸಾಂಪ್ರದಾಯಿಕವಾಗಿ ಕಣಜಕ್ಕೆ ಭತ್ತ ಹಾಕುವ ಮತ್ತು ಭತ್ತ ಬೀಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಆಂಧ್ರ ಪ್ರದೇಶದ ಸಿರಿಧಾನ್ಯ ಸಂಸ್ಕರಣಾ ತಜ್ಞ ಎಂ.ಎನ್‌.ದಿನೇಶ್‌ಕುಮಾರ್‌, ''ಇತ್ತೀಚೆಗೆ ಮನೆಗಳಲ್ಲಿ ಸಾಂಪ್ರದಾಯಿಕ ಮತ್ತು ಪೌಷ್ಟಿಕಾಂಶಗಳ ಖಣಜವಾದ ತಮ್ಮ ಹಿಂದಿನ ತಲೆಮಾರಿನ ತಿಂಡಿಗಳ ಬಗ್ಗೆ ತಿಳಿಹೇಳದೇ ವಿದೇಶಿ ತಿಂಡಿಗಳಿಗೆ ಮಾರುಹೋಗಿ ಶೀಘ್ರವಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ'' ಎಂದರು.

''ಕಬ್ಬು ಮತ್ತು ಭತ್ತದ ಬೆಳೆಗಳು ರೈತರನ್ನು ಕಷ್ಟಕ್ಕೆ ತಳ್ಳಿದೆ. ಜಾಗತಿಕ ತಾಪಮಾನದಿಂದ ಮಳೆ ಕಡಿಮೆಯಾಗುತ್ತಿದೆ. ಆದ್ದರಿಂದ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅವುಗಳನ್ನು ಬೆಳೆಯಬೇಕು. ಆದ್ದರಿಂದ ಈ ಮೇಳದಲ್ಲಿ ಕೊರಲು ಮತ್ತು ಬರಗು ಸಿರಿಧಾನ್ಯವನ್ನು ಪರಿಚಯಿಸಲಾಗುತ್ತದೆ'' ಎಂದು ಹೇಳಿದರು.

ಅದ್ಭುತ ಸಿರಿಧಾನ್ಯ-ಕೊರಲೆ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಜಿ.ಪಂ. ಸದಸ್ಯೆ ಪುಷ್ಪಾ ಅಮರ್‌ನಾಥ್‌, ಬದಲಾದ ಕೃಷಿ ಪದ್ಧತಿಯಿಂದ ಸಿರಿಧಾನ್ಯಗಳು ರೈತನ ಕೈ ತಪ್ಪುತ್ತಿವೆ. ಪಟ್ಟಣದ ಜನರಿಗೆ ಅವುಗಳ ಪರಿಚಯ ಮತ್ತು ಬಳಕೆಗೆ ಬಾರದೆ ಅವುಗಳು ತೆರೆಮರೆಗೆ ಸರಿಯುತ್ತಿದೆ. ಗ್ರಾಹಕರ ಆರೋಗ್ಯವನ್ನು ಕಾಪಾಡುವ ಈ ಸಿರಿಧಾನ್ಯಗಳು ಭವಿಷ್ಯದ ಆಹಾರ. ಬರಗಾಲದ ಮಿತ್ರ ಕೊರಲು ರೈತರ ಪಾಲಿಗೆ ನೆಮ್ಮದಿ ಮತ್ತು ಸಮೃದ್ಧಿಯನ್ನು ಹಾಗೂ ಗ್ರಾಹಕರ ಆರೋಗ್ಯವನ್ನು ಕಾಪಾಡುವ ಶಕ್ತಿ ಹೊಂದಿದೆ'' ಎಂದರು.

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮಸುಂದರ್‌, ನಾಗನಹಳ್ಳಿ ಸಾವಯವ ಕೃಷಿ ಕೇಂದ್ರದ ಮುಖ್ಯಸ್ಥ ಡಾ.ಸಿ.ಗೋವಿಂದರಾಜು, ಅದ್ಭುತ ಸಿರಿಧಾನ್ಯ ಕೊರಲೆ ಪುಸ್ತಕ ಕರ್ತೃ ಮಲ್ಲಿಕಾರ್ಜುನ ಹೊಸಪಾಳ್ಯ, ಸಹಜ ಸಮೃದ್ಧ ಸಾವಯವ ಕೃಷಿ ಬಳಗದ ಅಧ್ಯಕ್ಷ ಎನ್‌.ಆರ್‌.ಶೆಟ್ಟಿ, ರೈತ ಮುಖಂಡ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜು ಮತ್ತಿತರರು ಇದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ