ಆ್ಯಪ್ನಗರ

‘ಫಸ್ಟ್‌ ಟೈಂ ಅಮೇರಿಕಾಕ್ಕೆ ಕಾಲಿಟ್ಟಾಗ ನನಗಾದ ಅನುಭವ ಎಲ್ಲರಂತೆ ವಿಭಿನ್ನ..!; ಶ್ರೀನಾಥ್ ಭಲ್ಲೆ- ಭಾಗ 01

ಇಪ್ಪತ್ತು ವರುಷಗಳ ನನ್ನೆಲ್ಲಾ ಅನುಭವಗಳನ್ನು ಒಂದೇ ಬಾರಿಗೆ ಹೇಳಲಾರೆ, ಅದರಂತೆಯೇ ಮೂರ್ನಾಲ್ಕು ವರುಷಗಳ ಕಾಲವಂತೂ ಖಂಡಿತ ಹೇಳಲಾರೆ. ಜೀವನದ ಅಂಗವಾದ ಸಾವು, ನೋವು, ಹತಾಶೆಗಳನ್ನು ಹೆಚ್ಚು ಎಳೆಯದೇ, ಸಾಧ್ಯವಾದಷ್ಟೂ ಸೋಜಿಗದ ಅನುಭವಗಳನ್ನು ಹಾಸ್ಯ ಲೇಪನ ಹಚ್ಚಿ ಹೇಳಬಯಸುತ್ತೇನೆ. ನಿರ್ಭೀತರಾಗಿ ಓದಿ..

Authored byಶ್ರೀನಾಥ್ ಭಲ್ಲೆ | Vijaya Karnataka Web 9 Apr 2021, 9:07 am
ನಾನು ಯಾರು? ಇಲ್ಲಿಗೇಕೆ ಬಂದೆ? ನನ್ನ ಕರ್ತವ್ಯ ಏನು? ಹೋಗುವುದಾದರೂ ಎಲ್ಲಿಗೆ? ಎಲ್ಲಿದ್ದೆ? ಹೇಗಿದ್ದೆ? ಹೇಗಾದೆ? ಮುಂದೇನು? ಎಂಬೆಲ್ಲಾ ಪ್ರಶ್ನೆಗಳು ತಲೆಯಲ್ಲಿ ಉದ್ಭವ ಆಗಿ, ಉತ್ತರ ಕಂಡುಕೊಳ್ಳಲು ಹಿಮಾಲಯದ ತುಟ್ಟತುದಿಗೆ ಹೋಗಿ ತಪಸ್ಸು ಮಾಡಲು ಪ್ರೇರೇಪಿಸಿದೆ ಅಂತ ನಮ್ಮಪ್ಪನಾಣೆಗೂ ಹೇಳುತ್ತಿಲ್ಲ ಬದಲಿಗೆ ಇವಿಷ್ಟು ಪ್ರಶ್ನೆಗಳು ತಲೆಗೆ ಬಂದಿದ್ದು, ಅಮೆರಿಕದಲ್ಲೇ ಫೆವಿಕಾಲ್ ಅಂಟಿಸಿಕೊಂಡು ಠಿಕಾಣಿ ಹೂಡಿರೋ ಅನುಭವಗಳನ್ನು ನಮಗೂ ತಿಳಿಸಿ ಎಂದು ಕೇಳಿದಾಗ!
Vijaya Karnataka Web Srinath Bhalle


ಅಬ್ಬಾ! ಪೀಠಿಕೇನೇ ಫುಲ್-ಸ್ಟಾಪ್ ಇಲ್ಲದೇ ನಾನ್-ಸ್ಟಾಪ್ ಆದರೆ, ಮುಂದೇನು ಎಂಬ ಭೀತಿಯೇ ಬೇಡ. ಇಪ್ಪತ್ತು ವರುಷಗಳ ನನ್ನೆಲ್ಲಾ ಅನುಭವಗಳನ್ನು ಒಂದೇ ಬಾರಿಗೆ ಹೇಳಲಾರೆ, ಅದರಂತೆಯೇ ಮೂರ್ನಾಲ್ಕು ವರುಷಗಳ ಕಾಲವಂತೂ ಖಂಡಿತ ಹೇಳಲಾರೆ. ಜೀವನದ ಅಂಗವಾದ ಸಾವು, ನೋವು, ಹತಾಶೆಗಳನ್ನು ಹೆಚ್ಚು ಎಳೆಯದೇ, ಸಾಧ್ಯವಾದಷ್ಟೂ ಸೋಜಿಗದ ಅನುಭವಗಳನ್ನು ಹಾಸ್ಯ ಲೇಪನ ಹಚ್ಚಿ ಹೇಳಬಯಸುತ್ತೇನೆ. ನಿರ್ಭೀತರಾಗಿ ಓದಿ.. ಸೋಜಿಗದ ಬರಹಗಳನ್ನು ಓದುವಾಗ ನಾನಿರುವ ಜಾಗದಲ್ಲಿ ನಿಮ್ಮನ್ನು ಊಹಿಸಿಕೊಂಡು ಓದಿ ಅನುಭವಿಸುವಿರಾದರೆ ಬರಹಗಳು ಸಾರ್ಥಕ.

ಮೊದಲ ಬಾರಿಗೆ ಅಮೇರಿಕಾದ ನೆಲದ ಮೇಲೆ ಕಾಲಿಡುವ ಎಲ್ಲರಿಗೂ ಒಂದೊಂದು ರೀತಿ ಅನುಭವ ಇರುತ್ತದೆ. ನನ್ನದೂ ಹಾಗೆಯೇ ಎನ್ನಬಹುದು, ಆದರೆ ಎಲ್ಲರ ಕಥೆಯೂ ನನಗೆ ಗೊತ್ತಿಲ್ಲ ಹಾಗಾಗಿ ಭಿನ್ನವೂ ಇರಬಹುದು. ಮೊದಲಲ್ಲೇ ಅತೀ ಭಿನ್ನವಾದ ಪಯಣದ ಬಗ್ಗೆ ಹೇಳಿಬಿಡುತ್ತೇನೆ. ಜೀವನದಲ್ಲಿ ಎಂದೂ ವಿಮಾನ ಹತ್ತಿದ್ದಿಲ್ಲ. ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯವರು ಅಮೆರಿಕದಲ್ಲಿನ ಕ್ಲೈಂಟ್ ಲೊಕೇಶನ್'ಗೆ ಹೋಗಿ ಬಾ ಅಂತ ಹೇಳಿದರು. ಮೊದಲಿಗೆ ನಾನೊಬ್ಬನೇ ಹೋಗಿ ಬರೋದು ಅಂತ ಇದ್ದಿದ್ದು ಕಾರಣ ಅವರು ಹೇಳಿದ್ದು 'ಹೋಗಿ' 'ಬಾ' ಅಂತ.
ವೃತ್ತಪತ್ರಿಕೆ ಬಗ್ಗೆ ಒಂದಷ್ಟು ತಲೆಸುತ್ತುವ ವಿಷಯಗಳು: ಶ್ರೀನಾಥ್ ಭಲ್ಲೆ ವ್ಯಾಖ್ಯಾನ - ಭಾಗ 1
ಮೊದಲಿಗೆ ಮೂರು ತಿಂಗಳ ಪ್ರಾಜೆಕ್ಟ್ ಅಂತ ಹೇಳಿದ್ದು ಆ ನಂತರ ಮೂರೇ ದಿನಗಳಲ್ಲಿ ಆರು ತಿಂಗಳು ಅಂತ ಹೇಳಿದ್ದರು. ಆ ವೇಳೆಗೆ ಒಂದಷ್ಟು ರೆಸಿಪಿಗಳು ಬರೆದುಕೊಂಡಿದ್ದೆ. ಚಪಾತಿ ಮಾಡುವ ಮೆಷೀನ್ ಎಲ್ಲಾ ತೊಗೊಂಡಾಗಿತ್ತು. ಇನ್ನೂ ಇತರೇ ಪಯಣದ ಸಿದ್ದತೆಗಳು ನಡೆಯುವಾಗಲೇ ವಿಷಯ ತಿಳಿದಿದ್ದು ಏನೆಂದರೆ, ಬಹುಶ: ಪ್ರಾಜೆಕ್ಟ್ ಒಂದು ವರ್ಷದ್ದಾಗುತ್ತದೆ ಅಂದರು. ಅಲ್ಲಿಗೆ ಒಂದು ನಿರ್ಧಾರವು ಪೂರ್ಣರೂಪ ತಳೆದಿತ್ತು. ನಾನು, ನನ್ನಾಕೆ ಮತ್ತು ಎಂಟು ತಿಂಗಳ ಮಗರಾಯ ವಿಮಾನ ಹತ್ತಿದ್ದೆವು. ವಿಭಿನ್ನವಾದ ಅನುಭವ ಆರಂಭವಾಗಿದ್ದೇ ವಿಮಾನ ಯಾನದ ಹಾದಿಯದ್ದು. ನಿಮ್ಮಲ್ಲೂ ಎಷ್ಟೋ ಮಂದಿ ಅಮೇರಿಕ ಯಾನ ಮಾಡಿದ್ದೀರಿ. ಒಂದೆರಡು ಸ್ಯಾಂಪಲ್ ಹೇಳುವುದಾದರೆ ಬೆಂಗಳೂರು, ಚೆನ್ನೈ, ಮುಂಬೈ ಹೀಗೆ ಯಾವುದೋ ಒಂದು ನಗರದಿಂದ ವಿಮಾನ ಹತ್ತುವಿರಿ. ದುಬೈ, ಫ್ರಾಂಕ್ಫರ್ಟ್, ಹೀಥ್ರೋ ಹೀಗೆ ಯಾವುದೋ ಒಂದು ನಿಲ್ದಾಣ ಸೇರಿ ಅಲ್ಲಿಂದ ಅಮೇರಿಕಾದ ಒಂದು ದೊಡ್ಡ ನಗರ. ಅಲ್ಲಿಂದ ಕಾರಿನಲ್ಲೋ ಅಥವಾ ಮತ್ತೊಂದು ವಿಮಾನದಲ್ಲೋ ಅಂತಿಮ ನಿಲ್ದಾಣ ತಲುಪುವಿರಿ. ಆದರೆ ನನ್ನ ಮೊದಲ ಪಯಣ ಇಷ್ಟು ಸಲೀಸಾಗಿ ಇರಲಿಲ್ಲ.

ಮೊದಲಿಗೆ ಬೆಂಗಳೂರಿನಿಂದ ಚೆನ್ನೈಗೆ ಪಯಣ. ಹೀಗೇಕೆ ಅಂದಿರಾ? ನಿಜವಾದ ವಿಚಾರವನ್ನು ಹೇಳುವುದಾದರೆ ಅಂದು ಬೆಂಗಳೂರಿನಿಂದ ವಿದೇಶಿ ನೆಲಕ್ಕೆ ನೇರವಾದ ವಿಮಾನ ಇರಲಿಲ್ಲ. ಹಾಗಾಗಿ ಚೆನ್ನೈಗೆ ಬರಲೇಬೇಕಾಯ್ತು. ವಿಭಿನ್ನವಾಗಿ ಹೇಳುವುದಾದರೆ, ಬಿಲ್ಲಿನಿಂದ ಬಾಣವು ಹಾರಬೇಕಾದರೆ, ಆ ಹೆದೆಯನ್ನು ಮೊದಲು ಹಿಂದಕ್ಕೆ ಎಳೆಯಬೇಕು, ಆ ನಂತರವೇ ಬಾಣವು ಮುಂದೆ ಚಿಮ್ಮೋದು. ಬೆಂಗಳೂರಿನಿಂದ ಹಿಂದಕ್ಕೆ ಬಂದು ಮುಂದಕ್ಕೆ ಅಥವಾ ಮೇಲಕ್ಕೆ ಹಾರಿದ್ದು. ಆ ನಂತರ ಚೆನ್ನೈನಿಂದ ಸಿಂಗಪೂರ್‌, ಅಲ್ಲಿಂದ ತೈವಾನ್'ನ 'ತೈಪೇ'. ಅಲ್ಲಿಂದ ಅಮೇರಿಕಾದ ಲಾಸ್ ಏಂಜೆಲಿಸ್. ಅಲ್ಲಿಂದ ಮಿನಿಯಾಪೋಲಿಸ್ ಆ ನಂತರ ಪಿಟ್ಸ್ಬರ್ಗ್. ಅಲ್ಲಿರುವ ಕಂಪನಿಯಲ್ಲಿ ಹಾಜರಾತಿ ಹಾಕಿ ಮರುದಿನ ಮತ್ತೊಂದು ವಿಮಾನ ಏರಿ ಬಂದಿಳಿದಿದ್ದು ವರ್ಜೀನಿಯಾದ ರಿಚ್ಮಂಡ್. ಕೇವಲ ಮೂರು ದಿನಗಳ ಪಯಣ ಎಂದರೆ ಅಚ್ಚರಿಯೇನಲ್ಲ ಎನಿಸಿರಬೇಕು. ಸಾಗುತ್ತಿದ್ದ ದಿಕ್ಕಿನಲ್ಲೇ ಇನ್ನೊಂದು ದಿನ ಮುಂದೆ ಸಾಗಿದ್ದರೆ ಬೆಂಗಳೂರು ಸಿಕ್ಕಿರೋದು.
ನಮ್ಮಲ್ಲಿ ಹುದುಗಿರುವ ಒಂದೇ ರೂಪ ಎರಡು ಗುಣ..! ಓದಲೇಬೇಕಾದ ಲೇಖನವಿದು..!
ಎಂದೂ ವಿಮಾನ ಏರದ ನಾವು, ಎರಡು ವಿಮಾನಗಳ ಪಯಣವನ್ನು ಎಂಟು ವಿಮಾನಗಳಿಗೆ ಹಂಚಿ, ತಲೆಗೆ ಎಂಟು ನೂರು ಡಾಲರ್'ಗಳ ಟಿಕೆಟ್'ನಲ್ಲಿ ವಿಶ್ವವನ್ನೇ ಸುತ್ತಿದ್ದೆವು. ಒಂದರ್ಥದಲ್ಲಿ ಒಂದೊಂದೂ ವಿಮಾನಕ್ಕೆ ನೂರು ಡಾಲರ್ ಕೊಟ್ಟು ಸುತ್ತಿದ್ದೆವು. ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು ಎನ್ನುವ ಹಾಗೆ. ಅದೆಷ್ಟರ ಮಟ್ಟಿಗೆ ಮೊದಲ ವಿಮಾನ ಪಯಣ ಸುಸ್ತು ಹೊಡೆಸಿತ್ತು ಎಂದರೆ, ಮತ್ತೊಂದು ಬಾರಿ ವಿಮಾನ ಹತ್ತಲೇಬಾರದು ಎಂಬಷ್ಟು. ನಮ್ಮ ಮನ ಇಷ್ಟರ ಮಟ್ಟಿಗೆ ರೋಸಿಹೋಗಿತ್ತು. ಅಂತಲೇ Lufthansa ಕಂಪನಿಯವರು ಮೊದಲ ಬಾರಿಗೆ ನೇರವಾಗಿ ಬೆಂಗಳೂರಿಗೆ ವಿಮಾನ ಹಾರಿಸಿದ್ದರು. ನಾವು ಬಂದಿಳಿದಿದ್ದು ರಿಚ್ಮಂಡ್ ನಗರಕ್ಕೆ. ಅಲ್ಲಿನ Quality Inn ಹೋಟೆಲ್ಲಿಗೆ. ಬಿಸಿ ಬಿಸಿ ನೀರಿನ ಸ್ನಾನವಾಗಿ ಒಂದಷ್ಟು ಸುಧಾರಿಸಿಕೊಂಡ ಮೇಲೆ ಹೊರಗಡೆ ಊಟಕ್ಕೆ ಹೋಗುವ ಕಾರ್ಯಕ್ರಮ. ಕ್ಲೈಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಕಂಪನಿಯ ಮ್ಯಾನೇಜರ್ ನಮ್ಮನ್ನು ಊಟಕ್ಕೆ ಕರೆದುಕೊಂಡು ಹೋಗುವವರಿದ್ದರು. ಅದೊಂದು ಭಾರತೀಯ ರೆಸ್ಟೋರೆಂಟ್ ಅಂತ ವಿಶೇಷವಾಗಿ ಹೇಳಬೇಕಿಲ್ಲ ಅಲ್ಲವೇ?

ಮುಂದಿನ ಒಂದು ವರ್ಷದ ಕಾಲ, ನಾವು ತಳ ಊರಲ್ಲಿದ್ದ ನಾಡಿನ ಮೊದಲ ಊಟ ಹೇಗಿತ್ತು ಅನ್ನೋದನ್ನ ಮುಂದಿನ ಲೇಖನದಲ್ಲಿ ನೋಡೋಣ ಅಲ್ಲವೇ?
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ