ಆ್ಯಪ್ನಗರ

ಸ್ನೇಹಿತರು, ಕಾರು, ಡ್ರೈವಿಂಗ್ ದರ್ಬಾರು..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 6

ಕನ್ನಡಿಗ ಹಾಗೂ ಅಮೆರಿಕ ನಿವಾಸಿ ಶ್ರೀನಾಥ್ ಭಲ್ಲೆ ಅವರು ಅಮೆರಿಕದಲ್ಲಿನ ತಮ್ಮ ಅನುಭವಗಳನ್ನು ವಿಜಯ ಕರ್ನಾಟಕ ವೆಬ್ ಓದುಗರ ಮುಂದಿಡುತ್ತಿದ್ದಾರೆ. ಈ ಸರಣಿಯ 6ನೇ ಲೇಖನವಿದು. ತಾವು ಎದುರಿಸಿದ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ ಭಲ್ಲೆ..

Authored byಶ್ರೀನಾಥ್ ಭಲ್ಲೆ | Vijaya Karnataka Web 14 May 2021, 2:06 pm
ಮುಂದಿನ ಅನುಭವಗಳನ್ನು ಹೇಳುವ ಮುನ್ನ ಒಂದು ವಿಷಯ ಹೇಳಲೇಬೇಕು. ನಾವು ಬಂದಿಳಿದ ದಿನದಿಂದ ಹಿಡಿದು, ಬರೋಬ್ಬರಿ ಆರೂವರೆ ವರ್ಷಗಳ ಕಾಲ, ನೂರಾರು ಅನುಭವಗಳನ್ನು ಪಡೆದ ನಮ್ಮ ಮನೆಯನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದ್ದ ಅಪಾರ್ಟ್ಮೆಂಟ್ ಹೆಸರು 'Springfield Apartments'.
Vijaya Karnataka Web srinath bhalle
ಸ್ನೇಹಿತರು, ಕಾರು, ಡ್ರೈವಿಂಗ್ ದರ್ಬಾರು..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 6


ನಮ್ಮ ಮನೆಯ ಮುಂದೆ ದಿನವೂ ವಾಕ್ ಮಾಡುತ್ತಾ ಸಾಗುವ ಉತ್ತರ ಭಾರತೀಯರೊಬ್ಬರ ಮೂಲಕ ಅರಿವಾಗಿದ್ದು ನಮ್ಮದೇ ಅಪಾರ್ಟ್ಮೆಂಟ್‌ನಲ್ಲಿ, ಅದೂ ಅವರ ಸ್ನೇಹಿತರಾದ, ಕನ್ನಡಿಗರು ಇದ್ದಾರೆ ಅಂತ. ಮರುದಿನ ಧಾರಾವಾಡದವರಾದ ಶ್ರೀನಿ ಮತ್ತು ಮೃಣಾಲಿನಿ ಅವರುಗಳ ಪರಿಚಯವಾಯ್ತು. ಬೆಂಗಳೂರು ಕಿವಿಗೆ ಪೇಡಾದಂತಹ ಭಾಷೆ ಹಿತವಾಗಿ ಕೇಳಿತ್ತು.

ಬಂದು ಎಷ್ಟು ದಿನವಾಯ್ತು ಎಂಬೆಲ್ಲಾ ಮಾತುಕತೆಗಳಾದ ಒಂದೆರಡು ದಿನದಲ್ಲೇ ಹೀಗೇ ಕಾರು, ಲೈಸೆನ್ಸ್ ಇತ್ಯಾದಿ ವಿಷಯ ಬಂದಾಗ ನನ್ನ ಸಮಸ್ಯೆ ಹೇಳಿಕೊಂಡೆ. ಒಂದು ಕ್ಷಣ ಯೋಚಿಸದೇ 'ಅದಕ್ಕೇನಂತೆ, ನನ್ನ ಕಾರು ತೊಗೊಂಡ್ ಲೈಸೆನ್ಸ್ ತೊಗೊಳ್ರೀ. ನಡ್ರೀ, ಶನಿವಾರ ಹೋಗೋಣ' ಅಂದಾಗ ಬೆಟ್ಟದಂತಹ ಸಮಸ್ಯೆ ಹತ್ತಿಯಂತೆ ಹಾರಿಹೋಯ್ತು ಅಂದುಕೊಂಡೆ. ನನ್ನ ಜೀವನದಲ್ಲಿ ತಂಪು ಹೊತ್ತಿನಲ್ಲಿ ನೆನಯಬಹುದು ಎಂಬ ಹಲವು ಮಂದಿಯಲ್ಲಿ ಈ ದಂಪತಿಯೂ ಇದ್ದಾರೆ.

ಶನಿವಾರ ಸಂಜೆ ಡಿಪಾರ್ಟ್ಮೆಂಟ್ ಆಫ್ ಮೋಟಾರ್ ವೆಹಿಕಲ್ಸ್‌ಗೆ ಹೊರಟು, ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿ ಲೈಸೆನ್ಸ್ ಪಡೆದೂ ಆಯ್ತು. ಇನ್ನು ಮುಂದಿನ ಹೆಜ್ಜೆ ಎಂದರೆ ಕಾರನ್ನು ಕೊಳ್ಳೋದು. ಕಚೇರಿಯಲ್ಲಿನ ಸ್ನೇಹಿತನ ಜೊತೆ ಒಂದು ವಾರಾಂತ್ಯ ಟೊಯೋಟಾ ಷೋ-ರೂಮಿಗೆ ಹೋಗಿ ಎರಡು ವರ್ಷ ಮಾತ್ರ ಹಳೆಯದಾದ ಒಂದು ಕಾರನ್ನು ಕೊಂಡಾಯ್ತು. ಕಾರಿನ ಕಾಗದ ಪತ್ರಗಳನ್ನು ಕೊಂಡೊಯ್ದು ಇನ್ಸೂರೆನ್ಸ್ ಕಂಪನಿಗೆ ಕರೆ ಮಾಡಿ, ವಾಹನದ ಇನ್ಸೂರೆನ್ಸ್ ತೆಗೆದುಕೊಂಡ ಮೇಲೆಯೇ ಕಾರಿನ ಡೆಲಿವೆರಿ ಕೊಟ್ಟಿದ್ದು ಎನ್ನಿ. ಕಪ್ಪು Corolla ಕಾರು ನಮ್ಮ ಮನೆಯ ಅವಿಭಾಜ್ಯ ಅಂಗವಾಯ್ತು.

‘ಫಸ್ಟ್‌ ಟೈಂ ಅಮೇರಿಕಾಕ್ಕೆ ಕಾಲಿಟ್ಟಾಗ ನನಗಾದ ಅನುಭವ ಎಲ್ಲರಂತೆ ವಿಭಿನ್ನ..!; ಶ್ರೀನಾಥ್ ಭಲ್ಲೆ- ಭಾಗ 01
ಮನೆಯ ಸಮೀಪದಲ್ಲೇ ಇದ್ದ ಹಿಂದೂ ಸೆಂಟರ್‌ನಲ್ಲಿ ಅಂದಿನ ಪುರೋಹಿತರಾದ ರಾಮಚಂದ್ರ ಭಟ್ಟರ ಕೈಯಲ್ಲಿ ಪೂಜೆಗೊಂಡ ಕಾರು ನಮ್ಮ ಮನೆಯ ಮುಂದಿನ ನಿಂತಿತು. ಭಾಸ್ಕರ, ರಾಜ್ ಮತ್ತು ವೆಂಕಟೇಶ್ ಅವರುಗಳಿಗೂ ಕಾರಿನ ವಿಷಯ ಹೇಳಿ, ಅವರುಗಳ ಸಹಾಯಕ್ಕೆ ಮನಃಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸಿದೆ. ಅಲ್ಲಿಂದಾಚೆ ಭಾಸ್ಕರ ಅವರು ನಮ್ಮ ನಿತ್ಯ ಜೀವನದಲ್ಲಿ, ಮೋಡದ ಮರೆಯ ಸೂರ್ಯನಂತೆ ಆದರು.

ಅರರೇ..! ಹೀಗೇಕೆ? ಇಷ್ಟೂ ದಿನ ಜೊತೆಗಿದ್ದು ದೂರವಾಗಿದ್ದೇಕೆ ಎಂಬ ಅನುಮಾನ ಬೇಡ. ಆ ಹೊತ್ತಿಗೆ ನಮಗೂ ಜೀವನ ಸ್ವಲ್ಪ ಅಡ್ಜಸ್ಟ್ ಆಗಿತ್ತು. ಕೈಗೆ ಕಾರು ಬಂದಾಗಿತ್ತು. ಆ ಒಂದು ಅವಲಂಬನೆ ಈಗ ಇಲ್ಲ ಎಂಬಷ್ಟೇ ಕಾರಣ. ಇಲ್ಲೊಂದು ಸೂಕ್ಷ್ಮ ಅರ್ಥಮಾಡಿಕೊಳ್ಳಬೇಕಾದುದು ಎಂದರೆ, 'ತಾನು ಇಷ್ಟೂ ದಿನ ಸಹಾಯ ಮಾಡಿದ್ದೇನೆ, ನೀನು ನನ್ನ ಮಾತು ಕೇಳಬೇಕು' ಎಂಬ ಅಧಿಕಾರ ಅವರದ್ದಾಗಿರಲಿಲ್ಲ. 'ಇಷ್ಟು ದಿನ ಸಹಾಯ ಮಾಡಿದ್ದೀರಿ, ಮುಂದೆಯೂ ಮಾಡಿ' ಎಂಬ ಧೋರಣೆ ಅಥವಾ ಆತುಕೊಳ್ಳುವ ಗುಣ ನನ್ನದೂ ಆಗಿರಲಿಲ್ಲ. ಹೀಗಾಗಿದ್ದರಿಂದ ಸ್ನೇಹ ಮುಂದುವರೆದಿತ್ತು. ಆದರೆ ಅವಲಂಬನೆ ಇರಲಿಲ್ಲ. ಅವಲಂಬನೆ ಕಡಿಮೆ ಇದ್ದಷ್ಟೂ ಸಂಬಂಧಗಳು ಚೆನ್ನಾಗಿರುತ್ತದೆ.

ಮನಸ್ಸಿಗೆ ಮುದ, ನಾಲಗೆಗೆ ಇಲ್ಲ ಹಿತ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 2
ಅದರಿಂದಾಚೆ ಅವರೇನೂ ಸಂಪೂರ್ಣ ದೂರ ಆಗಲಿಲ್ಲ ಎಂಬುದಕ್ಕೆ ಇಲ್ಲೊಂದು ಸನ್ನಿವೇಶ. ಒಮ್ಮೆ ನಮ್ಮ ಮನೆಗೆ ಬಂದು 'ನನ್ನ ಸ್ನೇಹಿತರೊಬ್ಬರು ಭಾರತಕ್ಕೆ ವಾಪಸ್ ಹೋಗುತ್ತಿದ್ದಾರೆ. ಅವರಲ್ಲಿರೋ ಹಲವಾರು ವಸ್ತುಗಳನ್ನು ಅತೀ ಕಡಿಮೆ ಬೆಲೆಗೆ ಕೊಡ್ತಿದ್ದಾರೆ. ಈಗ ತಾನೇ ನೀವು ಜೀವನ ಆರಂಭಿಸುತ್ತಾ ಇದ್ದೀರಾ, ನಿಮಗೆ ಓಕೆ ಅಂದ್ರೆ ಕರೆದುಕೊಂಡು ಹೋಗ್ತೀನಿ' ಅಂದರು. ಯಾಕಾಗಬಾರದು ಅಂತ ಅವರ ಮನೆಗೆ ಹೋಗಿ ಹಲವಾರು ದಿನನಿತ್ಯ ಬಳಕೆಯ ವಸ್ತುಗಳನ್ನು ನೋಡಿ ಅವುಗಳನ್ನು ಕೊಳ್ಳುವುದಾಗಿ ಹೇಳಿದೆವು. ಆ ನಂತರ ಅವರು ಕೇಳಲೊ-ಬೇಡವೋ ಎಂಬ ಹಿಂಜರಿಕೆಯಲ್ಲಿ ಒಂದು ಬೆಡ್ ಕೂಡಾ ಇದೆ. ಹೊಸತಾಗಿ ಕೊಂಡಿದ್ದು, ನಿಮಗೆ ಅಭ್ಯಂತರ ಇಲ್ಲಾ ಅಂದ್ರೆ ಕೊಳ್ಳಬಹುದು ಎಂದರು. ಸಾಮಾನ್ಯವಾಗಿ ಬಳಸಿರುವ ಹಾಸಿಗೆಯನ್ನು ಕೊಳ್ಳುವುದಿಲ್ಲ ಎಂದೇ ಹಾಗೆ ಹೇಳಿದರು ಅಂತ ಅರ್ಥವಾಯ್ತು. ಹೊಸತು ಎಂದ ಮೇಲೆ ನಮಗೂ ಅಭ್ಯಂತರವಿರಲಿಲ್ಲ. ಆದರೆ ಹಾಸಿಗೆ, ಟಿವಿ ಸ್ಟಾಂಡ್, ಹಲವು ಗಾಜಿನ ವಸ್ತುಗಳನ್ನು ತರುವುದಾದರೂ ಹೇಗೆ?

ಒಂದು ಪುಟ್ಟ ಟ್ರಕ್ ಬೇಕಿತ್ತು. ಇಲ್ಲಿ ಲಾರಿ ಎಂಬ ಶಬ್ದ ಬಳಕೆ ಇಲ್ಲ ಬದಲಿಗೆ ಟ್ರಕ್ ಎನ್ನುತ್ತಾರೆ. ಮುಂದಿನ ನಮ್ಮ ಪಯಣ u-haul ಟ್ರಕ್ ಅಂಗಡಿಯತ್ತ. ಹೆಸರಿನಲ್ಲೇ ಇರುವಂತೆ u-haul ಎಂದರೆ 'ನೀವೇ ಓಡಿಸಿ' ಅಂತ. ಗಂಟೆಗಿಷ್ಟು ಎಂಬ ಲೆಕ್ಕದಲ್ಲಿ ನಾಲ್ಕು ಘಂಟೆಗಳ ಕಾಲ ತೆಗೆದುಕೊಂಡು, ಡ್ರೈವರ್ ಸೀಟಿನಲ್ಲಿ ಕುಳಿತರೆ ಎಲ್ಲೋ ಕಳೆದುಹೋದಂತೆ ಅನ್ನಿಸಿತು. 'ಜೈ ಭಜರಂಗಬಲಿ' ಅಂತ ಗಾಡಿ ಓಡಿಸಿಯೇ ಬಿಟ್ಟೆ. ಅದೊಂದು ಅಪರೂಪದ ಮತ್ತು ವಿಶಿಷ್ಟವಾದ ಅನುಭವ ಎಂದೇ ಹೇಳಬೇಕು. ಆ ಸ್ನೇಹಿತರ ಮನೆಗೆ ಹೋಗಿ, ಆ ವಸ್ತುಗಳನ್ನು ಲೋಡ್ ಮಾಡಿಕೊಂಡು, ನಮ್ಮ ಮನೆಗೆ ತಂದು ಹಾಕಿ, ಗಾಡಿ ವಾಪಸ್ ಕೊಟ್ಟು ಬಂದ ಮೇಲೆ, ಖಾಲಿ ಖಾಲಿ ಮನೆ ಈಗ ಒಂದಷ್ಟು ತುಂಬಿಕೊಂಡಿತು ಅನ್ನಿಸಿತು.

ಬಾಡಿಗೆ ಮನೆಯಲ್ಲಿ ಮೈ-ಕೈ ನೋವು ತಂದ 'ಮೊದಲ ರಾತ್ರಿ': ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ ಭಾಗ - 3
ಇಷ್ಟೆಲ್ಲಾ ಆಗುವ ಹೊತ್ತಿಗೆ ಹಲವಾರು ಸಂಸಾರಗಳ ಪರಿಚಯವೂ ಆಗಿತ್ತು. ನನ್ನಾಕೆ ಹೆಸರಿನಂತೆಯೇ ಸ್ನೇಹಮಯಿ. ಆಕೆಯಿಂದ ಒಂದಷ್ಟು ಸ್ನೇಹಿತರಾದರು. ಆದರೆ ಇಬ್ಬರಿಗಿಂತಾ ಹೆಚ್ಚಿನ ಶಕ್ತಿ ಇದ್ದುದು ಇನ್ನೂ ಮಾತನ್ನೇ ಆಡಲು ಆರಂಭಿಸದೇ ಇದ್ದ ಮಗನಿಂದ. ಚಿಕ್ಕ ಮಕ್ಕಳೇ ಹಾಗೆ ನೋಡಿ. ನೋಡುಗರನ್ನು ತಮ್ಮತ್ತ ಸೆಳೆಯುತ್ತಾರೆ. ಮನೆಯ ಸುತ್ತಮುತ್ತಲೇ ಇರಬಹುದು, ಅಂಗಡಿಗೆ ಹೋದಾಗಲೂ ಅಷ್ಟೇ ಮೊದಲು ಅವನನ್ನು ಮಾತನಾಡಿಸಿ, ಆ ನಂತರ ನಮ್ಮನ್ನು ಮಾತನಾಡಿಸುತ್ತಿದ್ದರು ಮಂದಿ. ಏನೇನೂ ಬೇಸರವಿಲ್ಲ ಬಿಡಿ. ಹೀಗಾಗಿ ಒಂದೆರಡು ತಿಂಗಳಲ್ಲೇ ಹಲವಾರು ಮಂದಿ ಸ್ನೇಹಿತರಾದರು.

ಕಾರು ಎಂದ ಮೇಲೆ ಮಗರಾಯನಿಗಾಗಿ ಸಿಂಹಾಸನ ಬೇಕೇ ಬೇಕಲ್ಲವೇ? ಒಂದಂತೂ ನಿಜ, ಕಾರ್ ಸೀಟು ಅನ್ನೋದು ಈ ಮಕ್ಕಳಿಗೆ ಒಂಥರಾ ಬಂಧನ ಇದ್ದಂತೆ. ಅದರಲ್ಲಿ ಕೂರಿಸಿದ ಕೂಡಲೇ ಏನೋ ಆದವರಂತೆ ಅಳೋದು ಗ್ಯಾರಂಟಿ. ಬೆಲ್ಟ್ ಹಾಕಿ ಕೂರಿಸಿ, ಕೈಗೇನಾದರೂ ಆಟಿಕೆ ಕೊಟ್ಟು ಹೊರಡುವಾ ತನಕ ಅದೇನೋ ಇರುಸುಮುರುಸು ಆಗಿ ಒದ್ದಾಡುತ್ತಾ ಇರುತ್ತಾರೆ. ಗಾಡಿ ಹೊರಟ ಮೇಲೆ ಒಂದಷ್ಟು ಹೊತ್ತು ಸುಮ್ಮನಾದರೂ ಹೆಚ್ಚು ಹೊತ್ತು ಕೂರಲಾರರು. ಆದರೆ ಏನ್ ಮಜಾ ಎಂದರೆ ನಾವು ಕಂಡಂತೆ, ಅಮೇರಿಕನ್ ಮಕ್ಕಳು, ಕಾರಿನ ಸೀಟಿನಲ್ಲಿ ಕೂತಾಗ ಬಂಗಾರದ ಬೊಂಬೆಗಳಂತೆ ಕೂರುವುದನ್ನು ಕಂಡು ಅಚ್ಚರಿಯಾಗುತ್ತಿತ್ತು. ನನಗನ್ನಿಸಿದಂತೆ ಭಾರತೀಯ ಮಕ್ಕಳ ಬೇಸ್ ಕಾರಿನ ಸೀಟಿಗೆ ಮಾಡಿಸಿದ್ದಲ್ಲಾ ಅಂತ.

ಇಂಡಿಯನ್ ಸ್ಟೋರ್‌ನತ್ತ ಮುಗಿಯದ ಪಾದಯಾತ್ರೆ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 4
ಆರಂಭದಲ್ಲಿ ಹೆಚ್ಚು ಕಮ್ಮಿ ಪ್ರತೀ ಸಂಜೆ ನಗರ ಪ್ರದಕ್ಷಿಣೆ ಮಾಡುತ್ತಿದ್ದೆವು. ಹೆಚ್ಚು ಕಮ್ಮಿ ನಗರದ ಒಳಗೇ ಓಡಾಡುತ್ತಿದ್ದೆವೇ ಹೊರತು ಹೈವೇ ಮೇಲೆ ಹೋಗಲೇ ಇಲ್ಲ. ನಗರದ ಒಳಗಿನ ವೇಗದ ಮಿತಿ ಘಂಟೆಗೆ 45 ಮೈಲು, ಆದರೆ ಹೈವೇ ಮೇಲೆ ಘಂಟೆಗೆ 65-70 ಮೈಲು. ಹೆಚ್ಚು ಕಮ್ಮಿ ಅದೇ ವೇಗದಲ್ಲಿ ಸಾಗದಿದ್ದರೆ ಹಿಂದಿನಿಂದ horn ಹೊಡೀತಾರೆ. ಸ್ವಾರಸ್ಯ ಏನೆಂದರೆ, ಇಲ್ಲಿನ ರಸ್ತೆಗಳಲ್ಲಿ ನಿಮ್ಮ ಹಿಂದಿನ ಕಾರು horn ಬಾರಿಸಿದರೆ, ನೀವೇನೋ ತಪ್ಪು ಮಾಡಿದ್ದೀರಾ ಅಂತ..!

ಇರಲಿ, ಈಗ ಕಾಲ ನಿಂತಲ್ಲೇ ನಿಂತಿರುತ್ತಾ? ಇಲ್ಲಾ ತಾನೇ? ಜೀವನದ ಆ ಮಹತ್ವದ ದಿನ ಬಂದೇ ಬಿಡ್ತಲ್ಲಾ? ಮುಂದಿನ ವಾರದಲ್ಲಿ ನೋಡೋಣವೇ?
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ