ಆ್ಯಪ್ನಗರ

ಗಾಂಧಿನಗರ ಬಿಜೆಪಿ ಚಿನ್ನದ ಗಣಿ

ಅಮಿತ್‌ ಶಾ ಅವರು ಗಾಂಧಿನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಹಿಂದಿನಿಂದಲೂ ಇತ್ತು. ಶಾ ಅವರ ಆಪ್ತ ಹರ್ಷದ್‌ ಪಟೇಲ್‌ ಅವರನ್ನು ಗಾಂಧಿನಗರ ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಿದ ಬಳಿಕ ಈ ಸುದ್ದಿಗೆ ರೆಕ್ಕೆ ಮೂಡಿತು.

Vijaya Karnataka 24 Mar 2019, 8:57 am
ಬಿಜೆಪಿಯ ಹಿರಿಯ ಮುತ್ಸದ್ಧಿ, ಎರಡು ಬಾರಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಮಾಡಿದ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರು ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರಿಗೆ ಬಿಟ್ಟುಕೊಡುವುದರೊಂದಿಗೆ ಆಡ್ವಾಣಿ ಅವರ ರಾಜಕೀಯ ಜೀವನ ಬಹುತೇಕ ಮುಕ್ತಾಯಗೊಂಡಂತಾಗಿದೆ. ಇನ್ನೊಬ್ಬ ನಾಯಕ ಮುರಳಿ ಮನೋಹರ ಜೋಶಿ ಅವರೊಂದಿಗೆ 'ಮಾರ್ಗದರ್ಶಕ ಮಂಡಲ'ದ ಸ್ಥಾನವೇ ಅವರಿಗೆ ಕಾಯಂ ಆಗಿದೆ.
Vijaya Karnataka Web amit shah


ಗಾಂಧಿನಗರ ಕ್ಷೇತ್ರದಿಂದ ಆಡ್ವಾಣಿಯವರು ಹಲವಾರು ಬಾರಿ ಸ್ಪರ್ಧಿಸಿ ಗೆದ್ದು ಬಂದಿದ್ದರೂ, ಆ ಕ್ಷೇತ್ರದ ಬಗ್ಗೆ ಖಚಿತ ಮಾಹಿತಿಗಳು ಗೊತ್ತಿದ್ದುದು ಅಮಿತ್‌ ಶಾ ಅವರಿಗೇ. 1989ರ ಬಳಿಕ ಈ ಸ್ಥಾನವನ್ನು ಬಿಜೆಪಿ ಸೋತಿಲ್ಲ. 2009ರಲ್ಲಿ ಪಾಟೀದಾರ ಸಮುದಾಯದ ಬಲಿಷ್ಠ ಮುಖಂಡ ಸುರೇಶ್‌ ಪಟೇಲ್‌ ಅವರೆದುರು ಆಡ್ವಾಣಿ ಸ್ಪರ್ಧಿಸಿದ್ದರು; ಆಗಲೂ ಗುಜರಾತ್‌ನ ಗೃಹಸಚಿವರಾಗಿದ್ದ ಶಾ, ''ಬಿಜೆಪಿ ಒಂದು ಲಕ್ಷ ಮತಗಳಿಗಿಂತಲೂ ಅಧಿಕ ಅಂತರದಿಂದ ಗೆಲ್ಲಲಿದೆ,'' ಎಂದಿದ್ದರು. ಹಾಗೆಯೇ ಆಗಿತ್ತು. ಆಡ್ವಾಣಿ 1.22 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಗಾಂಧಿನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲೇ ಇರುವ ವಿಧಾನಸಭೆ ಕ್ಷೇತ್ರಗಳಾದ ಸರ್‌ಖೇಜ್‌ನಿಂದ ಮೂರು ಬಾರಿ ಮತ್ತು ನಾರನ್‌ಪುರದಿಂದ ಒಮ್ಮೆ ಅಮಿತ್‌ ಶಾ ಸ್ಪರ್ಧಿಸಿ ಶಾಸಕರಾಗಿದ್ದರು. ಇಲ್ಲಿನ ಎಲ್ಲ ಕ್ಷೇತ್ರಗಳ ಪ್ರತಿ ಕಾರ್ಯಕರ್ತನೂ ಶಾಗೆ ಗೊತ್ತು. ಗುಜರಾತ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿರುವ ಶಾ, ನಾರನ್‌ಪುರದಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಕಟ್ಟಿಸುತ್ತಿದ್ದಾರೆ. ಇಲ್ಲಿ ಸಹಕಾರಿ ಸಂಸ್ಥೆಗಳ ವಲಯದಲ್ಲಿ ಶಾ ಸಾಕಷ್ಟು ಕೆಲಸ ಮಾಡಿದ್ದಾರೆ.

ಅಮಿತ್‌ ಶಾ ಅವರು ಗಾಂಧಿನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಹಿಂದಿನಿಂದಲೂ ಇತ್ತು. ಶಾ ಅವರ ಆಪ್ತ ಹರ್ಷದ್‌ ಪಟೇಲ್‌ ಅವರನ್ನು ಗಾಂಧಿನಗರ ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಿದ ಬಳಿಕ ಈ ಸುದ್ದಿಗೆ ರೆಕ್ಕೆ ಮೂಡಿತು. ಮಾ.16ರಂದು ಬಿಜೆಪಿ ಕಾರ್ಯಕರ್ತರು, ಗಾಂಧಿನಗರದಿಂದ ಶಾ ಚುನಾವಣೆಗೆ ನಿಲ್ಲಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿ ವಿಜಯ್‌ ರೂಪಾನಿ, ಶಾ ಅವರು ಗಾಂಧಿನಗರದಿಂದ ಸ್ಪರ್ಧಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಹೇಳಿದ್ದಾರೆ. ಗುಜರಾತ್‌ನ ರಾಜಧಾನಿಯಾಗಿರುವ ಗಾಂಧಿನಗರದಲ್ಲಿ ಬಿಜೆಪಿಯ ಕಾರ್ಯಕರ್ತ ಪಡೆಗೆ ಕೊರತೆಯೇನಿಲ್ಲ.

ಆಡ್ವಾಣಿಯವರು ಮಾತ್ರವಲ್ಲ; ಬಿಜೆಪಿಯ ಇನ್ನೊಬ್ಬ ಮಹಾನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರೂ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದುಂಟು. ಮಾಜಿ ಚುನಾವಣಾ ಆಯುಕ್ತ ಟಿಎನ್‌ ಶೇಷನ್‌, ಬಾಲಿವುಡ ಸೂಪರ್‌ಸ್ಟಾರ್‌ ರಾಜೇಶ್‌ ಖನ್ನಾ, ಕಲಾವಿದೆ ಮಲ್ಲಿಕಾ ಸಾರಾಭಾಯಿ, ವಿಟ್ಠಲ್‌ ಪಾಂಡ್ಯ, ಹರೇನ್‌ ಪಾಂಡ್ಯ ಮುಂತಾದ ಘಟಾನುಘಟಿಗಳೂ ಈ ಕ್ಷೇತ್ರದಿಂದ ತಮ್ಮ ಅದೃಷ್ಟಪರೀಕ್ಷೆ ಮಾಡಿದ್ದಾರೆ; ಬಿಜೆಪಿ ಅಭ್ಯರ್ಥಿಗಳೆದುರು ನೆಲಕಚ್ಚಿದ್ದಾರೆ. 1996ರಲ್ಲಿ, ಅಕ್ರಮ ಹಣ ವ್ಯವಹಾರದ ಪ್ರಕರಣದಲ್ಲಿ ಆಡ್ವಾಣಿ ಹೆಸರು ಕೇಳಿಬಂದಾಗ, ಅವರು ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ನಡೆದ ಮರುಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಟಾರ್‌ ಅಭ್ಯರ್ಥಿಯಾಗಿ ನಟ ರಾಜೇಶ್‌ ಖನ್ನಾ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಸಾಮಾನ್ಯ ಅಭ್ಯರ್ಥಿ ಎನ್ನಬಹುದಾದ ವಿಜಯ್‌ ಪಟೇಲ್‌ ಎಂಬವರ ಎದುರು 60,000 ಮತಗಳ ಅಂತರದಿಂದ ಸೋಲುಂಡಿದ್ದರು.

ಗಾಂಧಿನಗರದಲ್ಲಿ ಪಟೇಲ್‌ ಸಮುದಾಯ ಅತ್ಯಧಿಕ. ಅಮಿತ್‌ ಶಾ ಸ್ವತಃ ಪಟೇಲ್‌ ಸಮುದಾಯದವರಲ್ಲದಿದ್ದರೂ, ಅವರ ಸೊಸೆ ಆ ಸಮುದಾಯಕ್ಕೆ ಸೇರಿದವರು. ಇತ್ತೀಚೆಗೆ ಪಟೇಲ್‌ ಸಮುದಾಯದ ಯುವ ಮುಖಂಡ ಹಾಗೂ ಕಾಂಗ್ರೆಸ್‌ನ ಯುವನಾಯಕ ಹಾರ್ದಿಕ್‌ ಪಟೇಲ್‌, ಅಮಿತ್‌ ಶಾರನ್ನು ಪಾಟೀದಾರ್‌ ಸಮುದಾಯದ ದ್ವೇಷಿ ಎಂಬಂತೆ ಚಿತ್ರಿಸಲು ಯತ್ನಿಸಿದ್ದರೂ, ಅದರಲ್ಲಿ ವಿಫಲರಾಗಿದ್ದಾರೆ.

ಗಾಂಧಿನಗರದಲ್ಲಿ ಯಾರು ಯಾವಾಗ ಗೆದ್ದರು?

1998ರಿಂದ 2014: ಬಿಜೆಪಿ/ಎಲ್‌ಕೆ ಆಡ್ವಾಣಿ

1996: ಬಿಜೆಪಿ/ ಅಟಲ್‌ ಬಿಹಾರಿ ವಾಜಪೇಯಿ

1991: ಬಿಜೆಪಿ/ಎಲ್‌ಕೆ ಆಡ್ವಾಣಿ

1989: ಬಿಜೆಪಿ/ವಿಎಸ್‌ ಲಕ್ಷ್ಮಣ್‌ಜಿ

1984: ಕಾಂಗ್ರೆಸ್‌/ಜಿಐ ಪಟೇಲ್‌

1980: ಕಾಂಗ್ರೆಸ್‌/ಎಎಂ ಪಟೇಲ್‌

1977: ಭಾರತೀಯ ಲೋಕದಳ/ಪಿಜಿ ಮಾವಲಂಕರ್‌

1971: ಕಾಂಗ್ರೆಸ್‌(ಒ)/ಎಸ್‌ಎಂ ಸೋಲಂಕಿ

1967: ಕಾಂಗ್ರೆಸ್‌/ಎಸ್‌ಎಂ ಸೋಲಂಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ