ಆ್ಯಪ್ನಗರ

ನಾಲ್ಕು ಜನರಿಗೆ ಒಪ್ಪುವಂತೆ ಮಾತಾಡುವುದು ಎಂದರೆ...

ಸಂವೇದನಾರಹಿತ ಮಾತುಗಾರಿಕೆಯನ್ನು ನಿಷ್ಪಕ್ಷಪಾತವಾಗಿ ಖಂಡಿಸುವ ಪ್ರವೃತ್ತಿ ಬೆಳೆಯಬೇಕು

Vijaya Karnataka Web 13 Mar 2019, 5:30 am
ಕುಸುಮಾ ಆಯರಹಳ್ಳಿ
Vijaya Karnataka Web rev


''ಹೀಗೆಲ್ಲ ಮಾಡ್ತಾರಾ? ನಂಗೇನಿಲ್ಲಪ್ಪ, ನೋಡ್ದೋರು ಈ ಮಗು ಪೆದ್ದು ಅಂತಾರಷ್ಟೆ.'' ''ಅಯ್ಯೋ...ಕೈ ತೊಳೀದೇ ಊಟ ಮಾಡ್ತಾರಾ? ನೋಡ್ದೋರು ಈ ಮಗು ಕೊಳಕ ಅಂತಾರಷ್ಟೆ.'' ಇದು ನಾವು ಸಣ್ಣಮಕ್ಕಳಿಗೆ ಆಗಾಗ ಹೇಳುವ ಮಾತುಗಳು. ಮೊಳಕೆಯಲ್ಲಿರುವಾಗಲೇ ನಾವು ಸುತ್ತಲ ಸಮಾಜಕ್ಕೆ ಅಂಜಿ ಬದುಕಬೇಕು ಎಂಬುದು ಮನಸಲ್ಲಿ ನಿಲ್ಲುವಂತೆ ಮಾಡುತ್ತವೆ ಇವು. ಸ್ವಲ್ಪ ಬೆಳೆದು ದೊಡ್ಡವರಾಗುತ್ತಾ, 'ನಾಕ್‌ ಜನ ಏನಂತಾರೆ?' ಅನ್ನಲು ಶುರುಮಾಡುವ ಅಪ್ಪಾಮ್ಮನ ಮಾತು ನಮಗೆ ಸೇರುವುದಿಲ್ಲ. ಜನರಿಗೆ ಹೆದರುತ್ತಾ ಬದುಕುವ ಅಪ್ಪ, ಅಮ್ಮ. ಹಾಗೆ ಹೆದರಿದ್ದರಿಂದ ಕೇಳಿಸಿಕೊಳ್ಳಬೇಕಾದ ಮಾತುಗಳು, ಉಂಡ ನೋವುಗಳು ನಮ್ಮನ್ನು ರೆಬೆಲ್‌ ಮಾಡುತ್ತವೆ. ನಾವ್ಯಾಕೆ ಆ ನಾಲ್ಕು ಜನರಿಗಾಗಿ ಬದುಕಬೇಕು? ನಮಗಾಗಿ ನಾವು ಬದುಕಬೇಕು ಅಂತ ಪಂಥ ಹೂಡುತ್ತೇವೆ.

ಆ ನಾಲ್ಕು ಜನ ಸಜ್ಜನರಾಗಿದ್ದರೆ? ಸಂವೇದನೆ ಉಳ್ಳವರಾಗಿದ್ದರೆ, ನಾವು ತಪ್ಪು ದಾರಿಗೆಳಸುವಾಗ ಸರಿಹಾದಿ ತೋರುವ ಸೂಕ್ಷ್ಮತನ ಉಳ್ಳವರಾದರೆ, ಎಚ್ಚರಿಸುವರಾದರೆ ಆ ನಾಕು ಜನರ ಮಾತು ಕೇಳುವುದೇ ಒಳ್ಳೆಯದೇನೋ. ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವವರು. ನಾಲ್ಕು ಜನರ ಸೇವೆ ಮಾಡುವ ಕೆಲಸಕ್ಕೇ ಇರುವವರು. ಅವರ ಕ್ರಿಯೆ, ಪ್ರತಿಕ್ರಿಯೆ, ಮಾತು, ನಡೆಗಳು ನಾಕು ಜನ ಅಹುದೆನ್ನುವಂತೆ ಇರಲೇಬೇಕಾಗುತ್ತದೆ. ಈಗೀಗ ಸಾರ್ವಜನಿಕ ಬದುಕಿನಲ್ಲಿರುವವರು ಸಂವೇದನಾರಹಿತರಾಗಿ, ಮಾತಾಡುವಾಗ, ನಡೆದುಕೊಳ್ಳುತ್ತಿರುವ ಹೊತ್ತಲ್ಲಿ ಇದಕ್ಕೆ ಅವರು ಹೊಣೆಗಾರರೋ, ನಾಲ್ಕು ಜನವೋ ಅಂತಲೂ ಗೊಂದಲ ಮೂಡುತ್ತಿದೆ.

ಈಚಿನ ಕೆಲ ಉದಾಹರಣೆಗಳನ್ನು ನೋಡುವುದಾದರೆ ಚಿಕ್ಕಮಗಳೂರಿನ ಶಾಸಕ ಸುಧಾಕರ್‌, ''ಈ ಪುಟಗೋಸಿ ಮಾಲಿನ್ಯ ನಿಯಂತ್ರಣ ಮಂಡಳಿ ಅದ್ಯಕ್ಷ ಸ್ಥಾನ ಯಾರಿಗೆ ಬೇಕಿತ್ತು?'' ಅಂದಿದ್ದಾರೆ. ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಕೋಪದಲ್ಲಿ ಅವರೀ ಮಾತಾಡಿದ್ದಾರೆ. ಅದೊಂದು ಪುಟಗೋಸಿ, ನನಗ್ಯಾವ್‌ ಲೆಕ್ಕಕ್ಕೂ ಇಲ್ಲ ಎಂಬರ್ಥ ಅದು. ಹಾಗನ್ನುತ್ತಲೇ ಜನರ ಕರತಾಡನ. ಮಾಲಿನ್ಯ ನಿಯಂತ್ರಣ ಮಂಡಳಿ ಎಷ್ಟೊಂದು ಮಹತ್ವದ್ದು. ಅದು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಹೋದರೆ ನಾವೂ ಸೇರಿದಂತೆ ಮುಂದಿನ ತಲೆಮಾರು ಉಸಿರಾಡಲು ಒಳ್ಳೆಯ ಗಾಳಿ ಸಿಗದೇ, ಕುಡಿಯಲು ನೀರು ಇರದೇ ಒದ್ದಾಡಬಹುದು. ಆ ಸಂಕಷ್ಟದಲ್ಲಿ ಇದೇ ಸುಧಾಕರರ ಮೊಮ್ಮಕ್ಕಳು, ಮರಿಮಕ್ಕಳು ಕೂಡ ಸಿಲುಕಬಹುದು. ಹಾಗಾಗದಂತೆ ತಡೆಯಬೇಕಾದ ಅತ್ಯಂತ ಜವಾಬ್ದಾರಿಯುತ ಸ್ಥಾನವನ್ನು ಸುಧಾಕರ್‌ ಪುಟಗೋಸಿ ಅಂದಾಗ ಸಭೆಯಲ್ಲಿದ್ದ ನಾಕು ಜನ ಚಪ್ಪಾಳೆ ತಟ್ಟಿದರು. ಸುಧಾಕರ್‌ ಮತ್ತಷ್ಟು ಉತ್ಸಾಹದಿಂದ ಮಾತು ಮುಂದುವರೆಸಿದರು.

ಪ್ರಕರಣವೊಂದರಲ್ಲಿ ತನ್ನ ಹೆಸರು ಕೇಳಿಬಂದ ಸಂದರ್ಭ ವಿವರಿಸುತ್ತಾ, ಸೂಕ್ಷ್ಮ ಸಂವೇದನೆ ಉಳ್ಳವರು ಅಂತ ಗುರುತಿಸಲ್ಪಡುವ ರಮೇಶ್‌ಕುಮಾರ್‌, ಸಭಾಧ್ಯಕ್ಷ ಕುರ್ಚಿಯಲ್ಲಿ ಕೂತು ತನ್ನ ಸ್ಥಿತಿಯನ್ನು ರೇಪ್‌ ಸಂತ್ರಸ್ತೆಗೆ ಹೋಲಿಸಿಕೊಂಡರು. ರೇಪ್‌ ಸಂತ್ರಸ್ತೆಯನ್ನು ವಿಚಾರಣೆ ವೇಳೆ ಏನೇನು ಪ್ರಶ್ನೆ ಕೇಳಲಾಗುತ್ತದೆ ಎಂಬುದನ್ನು ನಗುತ್ತಾ ವಿವರಿಸಿದ ರಮೇಶ್‌ಕುಮಾರ್‌ ಅವರ ಮಾತನ್ನು ಇಲ್ಲಿ ಬರೆಯಲು ಮುಜುಗರವಾಗುತ್ತದೆ. ಅವರ ಮಾತಿಗೆ ತನ್ನ ಸೊಲ್ಲು ಸೇರಿಸಿದ ಈಶ್ವರಪ್ಪನವರ ಮಾತಂತೂ ಅಕ್ಷರಗಳಲ್ಲಿ ಹೇಳಬಾರದಂತವು. ಆದರೆ ವಿಧಾನಸೌಧದಲ್ಲಿ ಈ ಮಾತುಗಳಿಗೆ ನಾಕಾರು ಜನ ಬೆಂಚು ಬಡಿದು ನಗೆಯಾಡಿದರೇ ವಿನಾ, ಯಾರೊಬ್ಬರೂ ವಿರೋಧಿಸಲಿಲ್ಲ. ಮಹಿಳೆಯರನ್ನೂ ಸೇರಿ. ಹಾಗೊಂದು ವೇಳೆ ನಾಲ್ಕು ಜನ ಎದ್ದು ಆ ಮಾತಿಗೆ ಧಿಕ್ಕಾರ ಹೇಳಿದ್ದರೆ, ಸೌಧದೊಳಗೆ ಸಂವೇದನೆ ಜಾಗೃತವಾಗುತಿತ್ತು. ಆ ಕ್ಷಣವೇ ಕ್ಷಮೆ ಕೇಳುವಂತಾಗುತ್ತಿತ್ತು. ಮತ್ತು ಇಂಥಾ ಮಾತು ಇನ್ಯಾರಾದರೂ ಆಡುವ ಮುನ್ನ ತುಸುವಾದರೂ ಹಿಂಜರಿಕೆ ಉಂಟಾಗುತ್ತಿತ್ತು. ಹಾಗಾಗದೇ ಎಲ್ಲರೂ ಬೆಂಚು ಕುಟ್ಟಿ ಸಂತೋಷಪಟ್ಟರು ಎಂಬಲ್ಲಿಗೆ ಅವತ್ತಿನ ಸಭೆಯಲ್ಲಿ ಆ ಘಟನೆ ಮುಕ್ತಾಯವಾಯ್ತು.

ಸಿದ್ದರಾಮಯ್ಯನವರು ಸಂದರ್ಶನವೊಂದರಲ್ಲಿ, ''ನನ್ನ ದೊಡ್ಡ ಮಗನಿಗೆ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದೇನೆ,'' ಎಂದರು. ಕ್ಷೇತ್ರ ನೋಡಿಕೊಳ್ಳಲು ಆತ ಯಾರು? ಅಂತ ಯಾರೂ ಕೇಳಲಿಲ್ಲ. ಚುನಾವಣೆಗೂ ಮುನ್ನ, ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ಕರೆದಾಗ ಎಲ್ಲರೂ ಫೈಲು ಹಿಡಿದು ಓಡಿಬಂದರೇ ಹೊರತು, ಸಭೆ ನಡೆಸಲು ನೀವ್ಯಾರು? ಅಂತ ಪ್ರಶ್ನಿಸಲಿಲ್ಲ. ಮುಚ್ಚಮ್ಮ ಬಾಯ್ನ, ಕೊಡಮ್ಮ ಮೈಕ್ನ ಅಂತ ಸಿದ್ದರಾಮಯ್ಯ ಮಹಿಳೆಯಿಂದ ಮೈಕ್‌ ಕಿತ್ತುಕೊಂಡಾಗಲೂ ಸುತ್ತ ನಿಂತಿದ್ದವರು ಕಮಕ್‌ ಕಿಮಕ್‌ ಅನ್ನಲೇ ಇಲ್ಲ. ನಾಲ್ಕು ಜನ ಸುಮ್ಮನಿದ್ದರು ಅಂದರೆ ತಾನು ಮಾಡಿದ್ದು ತಪ್ಪೇನೂ ಅಲ್ಲ ಅಂತ ಅವರೂ ಅಂದುಕೊಂಡರು. ಅನಂತಕುಮಾರ್‌ ಅವರು 'ಕೈ ಕಡಿಯಿರಿ' ಅಂದಾಗ ಕರತಾಡನ. ಯಡಿಯೂರಪ್ಪ ಅಂಧ ಮಕ್ಕಳಿಗೆ ಚಾಕುವಿನಲ್ಲಿ ಕೇಕು ತಿನ್ನಿಸುತ್ತಾ ಫೋಟೋಗೆ ಪೋಸು ಕೊಟ್ಟಾಗಲೂ ಜೈಕಾರ. ಸುತ್ತ ನಾಲ್ಕು ಜನ ತನ್ನನ್ನು ಸೈ ಅನ್ನುತ್ತಿದ್ದಾರೆ ಅಂತಲೇ ಅವರ ಲೆಕ್ಕ. ತಪ್ಪು ಅನ್ನುವವರಿರಲಿಲ್ಲ ಅಕ್ಕ-ಪಕ್ಕ.

ಈಗಂತೂ ಮೊನ್ನೆಯಿಂದ ಸನ್ಮಾನ್ಯ ರೇವಣ್ಣನವರು ನೆಟ್ಟಿಗರ ಹಾಟ್‌ ಫೇವರಿಟ್‌ ಆಗಿಬಿಟ್ಟಿದ್ದಾರೆ. ಆಗೊಮ್ಮೆ ಕೊಡಗು ದುರಂತದ ವೇಳೆ ಜನರಿಗೆ ಬಿಸ್ಕೆಟ್‌ ಬಿಸಾಕಿ ಬೈಸಿಕೊಂಡಿದ್ದ ಇವರಿಗೆ, ಇನ್ನೂ ಸಾರ್ವಜನಿಕ ಬದುಕಿನಲ್ಲಿ ಇರಬೇಕಾದ ರೀತಿನೀತಿ ಯಾವ ಏಲಕ್ಕಿ ದೇವರೂ ಕಲಿಸಲಿಲ್ಲ. ಮಂಡ್ಯದಲ್ಲಿ ಯಾರು ಬೇಕಾದರೂ ನಿಲ್ಲಲಿ, ಗೆಲ್ಲಲಿ, ಸೋಲಲಿ ಅದು ಅಲ್ಲಿನ ಮತದಾರರಿಗೆ ಬಿಟ್ಟ ವಿಷಯ. ಆದರೆ, ''ಗಂಡ ಸತ್ತೋರ್ಗೆ ಯಾಕ್‌ ಬೇಕು ರಾಜ್ಕೀಯ,'' ಅಂತ ಕೇಳ್ಬಿಟ್ರಲ್ಲಾ...ಅಲ್ಲಿಗೆ ಇದು ರೇವಣ್ಣೋರ ಬದಲಾಗದ ಜಾಯಮಾನ ಅಂತ ಎಲ್ರಿಗೂ ಅರ್ಥ ಆಗಿಹೋಯ್ತು ನೋಡಿ. ಸಾರ್ವಜನಿಕ ಜೀವನದಲ್ಲಿರೋರಿಗೆ ಯಾವ್ಯಾವುದೋ ಒತ್ತಡದಿಂದಾಗಿ ಅಪರೂಪಕ್ಕೆ ಕೋಪ ಬಂದರೆ, ದುಡುಕಿ ಮಾತಾಡಿದರೆ ಅವರೂ ನಮ್ಮಂತಾ ಮನುಷ್ಯರೇ ಅಂತ ಕ್ಷಮಿಸಬಹುದು. ಆದರೆ ಪದೇ ಪದೆ ಅದನ್ನೇ ಮಾಡುತ್ತಿದ್ದಾರೆಂದರೆ ಅದು ಅಸಲು ಸ್ವಭಾವ. ಸ್ವಭಾವ ಗೊತ್ತಾಗಿ ಪ್ರಯೋಜನ ಏನು ಬಂತು? ಅವ್ರು ಬಿಸ್ಕೆಟ್‌ ಎಸೆದಾಗ ಎದ್‌ ನಿಂತು 'ನಾವೇನ್‌ ನಿಮ್ಮನೆ ನಾಯ್ಗಳಾ' ಅಂತ ನಾಲ್ಕು ಜನ ಕೇಳಿದ್ದರೆ? ಈಗ ಅವರು ಓಟು ಕೇಳಲು ಹೋದ ಕಡೆ ಎಲ್ಲ, ತಲೆ ಮೇಲೆ ತೆನೆ ಹೊತ್ತ ಹೆಣ್ಣಿನ ಲಾಂಛನ ಇಟ್ಕೊಂಡು, ಹೆಣ್ಣಿಗೆ ಅವಮಾನಿಸುವ ನೀವು ಕ್ಷಮೆ ಕೇಳಿ ಆಮೇಲೆ ಓಟು ಕೇಳಿ ಅಂತ ಧಿಕ್ಕಾರ ಕೂಗಿದರೆ? ಆಗ ನಾಲ್ಕು ಜನ ಸರಿ ಅನ್ನೋ ಹಾಗೆ ಮಾತಾಡಬೇಕಪ್ಪ ಅಂತ ಅವರಿಗೂ ಅನಿಸಬಹುದೋ ಏನೋ.

ಒಟ್ಟಿನಲ್ಲಿ ನಾಲ್ಕು ಜನ ಸರಿ ಅನ್ನುವಂಗಿರಬೇಕು ಅನ್ನೋ ಭಾರತೀಯ ಸಾಮಾಜಿಕ ನೀತಿ ಒಂದು ಹಂತದವರೆಗೆ ಸರಿಯೇ ಇದೆ ಅನಿಸುತ್ತದೆ. ಆದರೀಗ ಹೊಸ ಅಪಾಯವೆಂದರೆ ಆ ನಾಲ್ಕು ಜನವೇ ಎಡ-ಬಲವೆಂದು ಇಬ್ಭಾಗವಾಗಿ, ಮತ್ತೂ ಕೆಲವು ವಿಷಯಗಳಲ್ಲಿ ನಾಲ್ಕೂ ದಿಕ್ಕಿಗೂ ಹಂಚಿಹೋಗಿರುವುದು. ಮತ್ತು ನವಮಾಧ್ಯಮಗಳಲ್ಲಿ ಎಲ್ಲರಿಗೂ ಈಗ ಸಾರ್ವಜನಿಕ ಬದುಕೇ ಸಿಕ್ಕಿ, ಭಿನ್ನ ಅಭಿಪ್ರಾಯ ಉಳ್ಳವರನ್ನು ಸಂವೇದನಾರಹಿತರಾಗಿ ವೈಯಕ್ತಿಕ ದಾಳಿ ಮಾಡುವುದು. ಎಚ್ಚರಿಸಬೇಕಾದ ನಾಕು ಜನರೇ ತಮ್ಮ ಸಂವೇದನೆಗಳನ್ನು ಕಳೆದುಕೊಂಡರೆ ಉಳಿಯುವುದೇನು?

ಸಿದ್ದರಾಮಯ್ಯ, ರೇವಣ್ಣ ಮುಂತಾದವರ ಘಟನೆಗಳಲ್ಲಿ ಹೀಗಾಗಲಿಲ್ಲ. ಅನೇಕರು ತಮ್ಮ ಪಂಥ ಪಕ್ಕಕ್ಕಿಟ್ಟು, ತಪ್ಪು ಯಾರು ಮಾಡಿದರೂ ತಪ್ಪೇ ಅಂದರು. ವ್ಯಾಪಕ ವಿರೋಧ ವ್ಯಕ್ತವಾಯ್ತು. ಅವರು ಕ್ಷಮೆ ಯಾಕೆ ಕೇಳ್ಳಿ? ಅಂದರು ಎಂಬುದು ಅವರ ಸಂವೇದನಾಶೂನ್ಯತೆಗೆ ಸಾಕ್ಷಿ. ಇದರ ಹೊರತಾಗಿ, ಎಲ್ಲರೂ ಒಟ್ಟಾಗಿ ನಿಂತು ವಿರೋಧಿಸಿದ್ದು ಮಾತ್ರ ನಿಜವಾಗಿಯೂ ಹೊಸ ಭರವಸೆ ಹುಟ್ಟಿಸುವ ವಾತಾವರಣ. ಇಂತಹ ನಡೆ ನಾಲ್ಕು ಜನರು ಅನಿಸಿಕೊಂಡವರಲ್ಲಿ ಹೆಚ್ಚಾಗಬೇಕು. ಸಂವೇದನಾ ದಾರಿದ್ರ್ಯದಿಂದ ಮಾತಾಡುವ ಯಾರೇ ಆದರೂ ಅವರು ನಮ್ಮವರು ಎಂಬುದನ್ನು ಪಕ್ಕಕ್ಕಿಟ್ಟು ಖಂಡಿಸಬೇಕು. ಆಗ, ನಾಲ್ಕು ಜನರು ಸರಿ ಅನ್ನುವಂತೆ ಬದುಕುವ, ಸಂವೇದನಾಸಹಿತ ಸಮಾಜ ಉಳಿದೀತು. ಇಲ್ಲವಾದರೆ ಸಂವೇದನಾಶೀಲತೆ ಹಲ್ಲಿನ ಆಳದಿಂದ ಬರುತ್ತದೆ ಎಂಬ ಜಾೕರಾತಿನ ಮಾತಷ್ಟೇ ನಿಜವಾದೀತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ