ಆ್ಯಪ್ನಗರ

ವಿದೇಶಿ ಶಾಲಾ ಪದ್ಧತಿಯ ವಿಶೇಷತೆ ಏನು ಗೊತ್ತಾ?: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 65

ಭಾನುವಾರದ ಹಗಲು ಸಾಮಾನ್ಯವಾಗಿ ಒಂಬತ್ತು ಘಂಟೆಗೆ ಚರ್ಚ್‌ಗಳಲ್ಲಿ ಸೇವಾಕಾರ್ಯ ಇರುತ್ತದೆ. ಪ್ರತೀ ಕ್ರಿಶ್ಚಿಯನ್ ಕೂಡಾ ಚರ್ಚ್‌ಗೆ ಹೋಗುತ್ತಾರೆ ಎಂದೇನೂ ಇಲ್ಲ. ಬದಲಿಗೆ, ಹೋಗುವವರು ಶಿಸ್ತಾಗಿ ಸೂಟುಬೂಟು ಹಾಕಿಕೊಂಡು ಹೋಗಿ ಹನ್ನೆರಡಕ್ಕೆ ವಾಪಸ್ ಬಂದು ವ್ಯವಹಾರದ ಮಳಿಗೆಗೆ ಬರುತ್ತಾರೆ. ಒಂದೆಡೆ ಸೂಟು ಧರಿಸಿರುವ ಮಂದಿಯಾದರೆ, ಮತ್ತೊಂದೆಡೆ ರಾತ್ರಿಯ ದಿರಿಸಿನಲ್ಲೇ ಇರುವ, ಬಾತ್ರೂಮ್ ಚಪ್ಪಲಿ ಧರಿಸಿರುವ ಮತ್ತು ತಲೆಗೂದಲೂ ಬಾಚದ ಮಂದಿ. ಸೂಟುಬೂಟು ಧರಿಸಿ ಅಂಗಡಿಗೆ ಬನ್ನಿ ಎಂಬ ಅಹವಾಲು ಅಲ್ಲ, ಆದರೆ ಉಡುವ ವಸ್ತ್ರವನ್ನೇ ಸರಿಯಾಗಿ ಧರಿಸಿ ಅಂಗಡಿಗಳಿಗೆ ಬನ್ನಿ.

Authored byಶ್ರೀನಾಥ್ ಭಲ್ಲೆ | Vijaya Karnataka Web 1 Jul 2022, 7:44 pm
ಹಿಂದಿನ ಸಂಚಿಕೆಯಲ್ಲಿ ಹೇಳಿದಂತೆ, ಹಗಲಿನಲ್ಲಿ ಬೇಗನೆ ಬಂದು, ಒಂದು ಮಗ್ ಕಾಫಿ ತುಂಬಿಸಿಕೊಂಡು, ತಂದಿರುವ ತಿಂಡಿಯನ್ನು ಬಿಸಿ ಮಾಡಿಕೊಂಡೋ ಅಥವಾ ಹಾಲನ್ನು ಬಿಸಿ ಮಾಡಿಕೊಂಡು ಅದಕ್ಕೆ ಒಂದು ಚಿಕ್ಕ ಪ್ಯಾಕ್ ಸೀರಿಯಲ್ ಸುರಿದುಕೊಂಡೋ ತಿನ್ನುತ್ತಾ, ಕುಡಿಯುತ್ತಾ ಒಂದೆರಡು ಘಂಟೆಯ ಕೆಲಸಗಳನ್ನು ಮುಗಿಸಿ ಒಂಬತ್ತಕ್ಕೆ ಮೀಟಿಂಗ್ ರೂಮಿಗೆ ಹೋದ ಐದು ನಿಮಿಷದ ಮೇಲೆ ಭಾರತೀಯ ಎದ್ದುಬಿದ್ದು ರೂಮಿನೊಳಗೆ ಬಂದು ಕೂರುತ್ತಾನೆ. ತನ್ನ ಬ್ಯಾಗಿನಿಂದ ಲ್ಯಾಪ್‌ಟಾಪ್‌ ತೆಗೆಯುವಾಗ ಆ ಜಿಪ್‌ನ ಸದ್ದು, ಲಾಗಿನ್ ಆಗಲು ಲ್ಯಾಪ್‌ಟಾಪ್‌ ಆನ್ ಮಾಡಿದಾಗ ಅದರ ಸಂಗೀತ ಹೀಗೆ ಒಂಥರಾ ಕಿರಿಕಿರಿ ಮುಗಿಯುವಷ್ಟರಲ್ಲಿ ಒಂಬತ್ತೂ ಕಾಲು. ಇದಿಷ್ಟೂ ಉತ್ಪ್ರೇಕ್ಷೆಯಲ್ಲ ಅಥವಾ ನಿಂದನೆಯಲ್ಲ ಬದಲಿಗೆ ನಾನೇ ಕಂಡ ಮತ್ತು ಅನುಭವಿಸಿರುವ ಸನ್ನಿವೇಶ.
Vijaya Karnataka Web Untitled-3 copy


ಬೇಗನೇ ಎದ್ದು, ಮನೆಯಿಂದ ಹೊರಡುವುದೇ ಒಂದೈದು ನಿಮಿಷ ಮುಂಚೆ ಹೊರಟರೂ ಇಂಥ ಸನ್ನಿವೇಶ ಎದುರಾಗದು ಎಂಬುದು ಸಲಹೆ ಅಷ್ಟೇ. ತೆಗೆದುಕೊಳ್ಳುವವರು ಪಾಲಿಸುತ್ತಾರೆ. ಆದರೆ ಕೆಲವರು ಅರ್ಥ ಮಾಡಿಕೊಳ್ಳುವುದಿಲ್ಲ. ವಿದೇಶಕ್ಕೆ ಬಂದು ಅಲ್ಲಿನವರಂತೆ ಕುಡಿತವನ್ನೋ ಅಥವಾ ದಿರಿಸನ್ನು ಧರಿಸುವುದೋ ಕಲಿಯುವುದು ಸರ್ವೇಸಾಮಾನ್ಯ. ಅದರ ಜೊತೆ ಕೊಂಚ ಶಿಸ್ತನ್ನೂ ಕಲಿತರೆ ಚೆನ್ನ. ದಿರಿಸು ಮತ್ತು ಶಿಸ್ತಿನ ವಿಷಯಕ್ಕೆ ಬಂದರೆ ಭಾನುವಾರದ ಹಗಲಿನ ವಿಷಯವೇ ತಲೆಗೆ ಬರುತ್ತದೆ.

ಟೆಕ್ಕಿಗಳ ಔದ್ಯೋಗಿಕ ಬದುಕಿನ ಕಷ್ಟ, ಸುಖ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 64
ಭಾನುವಾರದ ಹಗಲು ಸಾಮಾನ್ಯವಾಗಿ ಒಂಬತ್ತು ಘಂಟೆಗೆ ಚರ್ಚ್‌ಗಳಲ್ಲಿ ಸೇವಾಕಾರ್ಯ ಇರುತ್ತದೆ. ಪ್ರತೀ ಕ್ರಿಶ್ಚಿಯನ್ ಕೂಡಾ ಚರ್ಚ್‌ಗೆ ಹೋಗುತ್ತಾರೆ ಎಂದೇನೂ ಇಲ್ಲ. ಬದಲಿಗೆ, ಹೋಗುವವರು ಶಿಸ್ತಾಗಿ ಸೂಟುಬೂಟು ಹಾಕಿಕೊಂಡು ಹೋಗಿ ಹನ್ನೆರಡಕ್ಕೆ ವಾಪಸ್ ಬಂದು ವ್ಯವಹಾರದ ಮಳಿಗೆಗೆ ಬರುತ್ತಾರೆ. ಒಂದೆಡೆ ಸೂಟು ಧರಿಸಿರುವ ಮಂದಿಯಾದರೆ, ಮತ್ತೊಂದೆಡೆ ರಾತ್ರಿಯ ದಿರಿಸಿನಲ್ಲೇ ಇರುವ, ಬಾತ್ರೂಮ್ ಚಪ್ಪಲಿ ಧರಿಸಿರುವ ಮತ್ತು ತಲೆಗೂದಲೂ ಬಾಚದ ಮಂದಿ. ಸೂಟುಬೂಟು ಧರಿಸಿ ಅಂಗಡಿಗೆ ಬನ್ನಿ ಎಂಬ ಅಹವಾಲು ಅಲ್ಲ, ಆದರೆ ಉಡುವ ವಸ್ತ್ರವನ್ನೇ ಸರಿಯಾಗಿ ಧರಿಸಿ ಅಂಗಡಿಗಳಿಗೆ ಬನ್ನಿ. ಇಂದು 'ಮಾಸ್ಕ್ ಧರಿಸಿದರೆ ಮಾತ್ರ ಪ್ರವೇಶ' ಎಂಬ ಸಾರ್ವಜನಿಕ ಪ್ರಕಟಣೆ ಇರುವಂತೆ, ನಾಳೆ 'ರಾತ್ರಿ ದಿರಿಸಿನಲ್ಲಿ ಬರುವವರಿಗೆ ಪ್ರವೇಶವಿಲ್ಲ' ಎಂದು ಫಲಕ ಹಾಕುವಂತೆ ಮಾಡದಿರಿ.

ವಿದೇಶಿ ಶಾಲಾ ಪದ್ದತಿಯ ವಿಶೇಷತೆ ಏನಪ್ಪಾ ಎಂದರೆ, ಬರವಣಿಗೆ ಮತ್ತು ದಿಟ್ಟತನದಿಂದ ನಾಲ್ಕು ಮಂದಿಯ ಮುಂದೆ ಮಾತನಾಡುವ ಪರಿ. ಅರ್ಥಾತ್ presentation skill. ಬರೆಯುವ ವಿಷಯ ಎಂದರೆ Essay Writing. ಎಲಿಮೆಂಟರಿ ಶಾಲೆಯಿಂದಲೇ ವಿಚಾರಯುಕ್ತ ಬರಹಗಳಿಗೆ ಪ್ರಾಜೆಕ್ಟ್‌ಗಳ ಮೂಲಕ ಚಾಲನೆ ನೀಡಿರುತ್ತಾರೆ. ಗೂಗಲ್ ನೋಡಿ ಅದೇ ವಿಚಾರವನ್ನು ತೆಗೆದುಕೊಂಡು ಬರೆಯದ ಹಾಗೆ, plagiarism ಅಥವಾ ಕೃತಿಚೌರ್ಯದ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ. ನಾಲ್ಕಾರು ಪುಸ್ತಕಗಳಿಂದ ಮಾಹಿತಿ ಓದಿಕೊಂಡು ಬರೆದ ಲೇಖನವನ್ನು Easybib ಅಥವಾ ಮತ್ತಿತರ ವೆಬ್ಸೈಟ್ ಬಳಸಿಕೊಂಡು ಇಂಥಾ ಪುಸ್ತಕದಿಂದ ಮಾಹಿತಿ ಪಡೆದದ್ದು ಎಂಬ ಉಲ್ಲೇಖ ಮಾಡಬೇಕಾದುದು ಧರ್ಮ. ಇಂಥಾ ವಿಚಾರಗಳನ್ನು ನಾಲ್ಕನೆಯ ತರಗತಿಯ ಹೊತ್ತಿಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗಿರುತ್ತದೆ. ಒಂದು ವೇಳೆ ಈ ಕ್ರಮ ಪಾಲಿಸದೆ ಇದ್ದರೆ, ಇನ್ನೆಷ್ಟೇ ಚೆನ್ನಾಗಿ ಲೇಖನ ಸಿದ್ಧಪಡಿಸಿದ್ದರೂ ಸಿಗುವುದು ದೊಡ್ಡ ಶೂನ್ಯವೇ.

ಅಮೆರಿಕದಲ್ಲಿ ಭಾರತೀಯರ ನಡೆ-ನುಡಿ, ತಪ್ಪು-ಒಪ್ಪು: ಶ್ರೀನಾಥ್ ಭಲ್ಲೆ ಅನುಭವ ಕಥನ - ಭಾಗ 63
ಮನೆಯಲ್ಲೂ, ಹೊರಗೂ ಆಂಗ್ಲವನ್ನೇ ಮಾತನಾಡುವ ಮತ್ತು ಈ ಪರಿಯ ಓದನ್ನೇ ಮಾಡಿಕೊಂಡು ಬಂದಿರುವ ಅಪ್ಪ, ಅಮ್ಮ ಮತ್ತಿತರ ಹಿರಿಯರ ಮಾರ್ಗದರ್ಶನ ಉಳ್ಳ ಇಲ್ಲಿನ ಮಕ್ಕಳಿಗೆ ಆಂಗ್ಲದಲ್ಲಿ ಧಡಧಡ ಅಂತ ಬರೆಯುವ ಮತ್ತು ಕಲಾತ್ಮಕವಾಗಿ ಮಾತನಾಡುವುದು ರಕ್ತಗತವಾಗಿ ಬಂದಿರುವ ಕಲೆಯೇ ಆಗಿರುತ್ತದೆ. ಇನ್ನು ಭಾರತೀಯರ ವಿಚಾರ ತೆಗೆದುಕೊಂಡರೆ ಅದೊಂದು ಆಳವಾದ ವಿಚಾರ.

ನೂರಾರು ಭಾಷೆಗಳ ತವರೂರು ಭಾರತ. ಇದರಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕೃತ ಭಾಷೆಯೇ ಆಗಿವೆ. ಮಿಕ್ಕ ಸಾಕಷ್ಟು ಭಾಷೆಗಳು ಲಿಖಿತ ಭಾಷೆ ಉಳ್ಳದ್ದಾಗಿದ್ದರೆ ಕೆಲವು ಭಾಷೆಗಳಿಗೆ ಬರಹದ ಭಾಗ್ಯವೇ ಇಲ್ಲ. ಇಷ್ಟೆಲ್ಲಾ ಹಿನ್ನೆಲೆ ಇಟ್ಟುಕೊಂಡು ಓದಿನಲ್ಲಿ ಮುಂದೆ ಬಂದ ಮಂದಿಯು ಹೊರದೇಶಕ್ಕೆ ಬಂದಿರುವಾಗ, ಏಕ್ದಂ ಆಂಗ್ಲಭಾಷೆಯಲ್ಲೇ ಮಾತನಾಡಿ ಎಂದರೆ ಮೈಮೇಲೆ ಚೇಳು ಬಿಟ್ಟಂತೆ ಆಗಬಹುದು. ಏನಾದರೂ ವಿಷಯ ಮಾತನಾಡಬೇಕು ಎಂದಾಗ ಮನಸ್ಸಿನಲ್ಲಿ ತಮ್ಮ ಮಾತೃಭಾಷೆಯಲ್ಲಿ ಆಲೋಚಿಸಿ ನಂತರ ಅದನ್ನು ಆಂಗ್ಲಕ್ಕೆ ತರ್ಜುಮೆ ಮಾಡಿಕೊಂಡು ಮಾತನಾಡುತ್ತಾರೆ. ಇದು ತಪ್ಪಲ್ಲ ಬಿಡಿ. ಒಬ್ಬ ಆಂಗ್ಲನಿಗೆ ನಾಳೆಯಿಂದ ನೀನು ಚೈನೀಸ್ ಭಾಷೆಯಲ್ಲಿ ಮಾತನಾಡು ಎಂದರೆ ಹೇಗೋ ಹಾಗೆ. ನಮ್ಮದಲ್ಲದ ಹವ್ಯಾಸವನ್ನು ಅಹೋರಾತ್ರಿ ನಮ್ಮದಾಗಿಸಿಕೊಳ್ಳಲಾಗದು. ಹುಟ್ಟಿದಾಗ ಕನ್ನಡ ಭಾಷೆ ಅಥವಾ ಅಕ್ಷರಮಾಲೆಯು ನಮ್ಮದಾಗಿರಲಿಲ್ಲ ಆದರೆ ಕಲಿಯಲಿಲ್ಲವೇ? ಏನ ಹೇಳಹೊರಟೆ ಎಂದರೆ, ಹುಟ್ಟಿನಿಂದ ಅರಿಯದೇ ಹೋದ ವಿವಿಧ ವಿಚಾರಗಳನ್ನು ಹೇಗೆ ದಿನನಿತ್ಯದಲ್ಲಿ ಕಲಿಯುತ್ತಾ ಸಾಗುತ್ತೇವೆಯೋ, ಹಾಗೆಯೇ ಅರಿಯದ ಆ ಒಂದು ಭಾಷೆಯನ್ನೂ ಸರಿಯಾಗಿ ಕಲಿಯಿರಿ. ಕಲಿತಷ್ಟೂ ಒಳ್ಳೆಯದೇ. ಇದು ನಿಮಗೂ ಒಳಿತು, ನಿಮ್ಮ ಮುಂದಿನವರಿಗೂ ಒಳಿತು.

ಭಾಷೆಯ ಮೇಲಿನ ಹಿಡಿತವಿರದೇ ಇದ್ದಾಗ, ಯಾರಾದರೂ ಪ್ರಶ್ನೆ ಕೇಳಿದಾಗ ಉತ್ತರವೀಯಲು ತಡವರಿಸುವಂತೆ ಆಗುತ್ತದೆ. ಹತ್ತಾರು ಘಂಟೆ ಕೆಲಸ ಮಾಡಿಯೂ ಕೇಳಿದ ಪ್ರಶ್ನೆಗೆ ಅರ್ಧ ನಿಮಿಷ ಉತ್ತರ ನೀಡಲು ಕಷ್ಟಪಡುವಾಗ ಮಾತನ್ನು ಆಡುವವರಿಗೂ, ಕೇಳುಗರಿಗೂ ಹಿಂಸೆಯಾಗುತ್ತದೆ. ಕೆಲವೊಮ್ಮೆ ಭಾಷೆಯ ತೊಂದರೆ ಇರದಿದ್ದರೂ ಮಾತುಗಾರಿಕೆಯ ಮೇಲೆ ಹಿಡಿತ ಇರದೇ ಹೋದಾಗ, ಹೇಳಿದ್ದನ್ನೇ ಹೇಳುವ ಅಥವಾ ಮಾತನಾಡುತ್ತಲೇ ಸಾಗಿ ಮತ್ತೊಬ್ಬರಿಗೆ ಮಾತನಾಡಲು ಅವಕಾಶವನ್ನೂ ನೀಡದೇ ಇರುವುದೂ ನಡೆಯುತ್ತದೆ.

ಅಪಾರ್ಟ್‌ಮೆಂಟ್ ಪ್ಲೇ ಏರಿಯಾ ಬಳಕೆಗೂ ಇದೆ ನಿಯಮ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ - ಭಾಗ 62
ಒಮ್ಮೆ ನಮ್ಮದೇ ಡಿಪಾರ್ಟ್ಮೆಂಟ್'ಗೆ ಕೆಲವರನ್ನು ಸಂದರ್ಶನ ಮಾಡಬೇಕಿತ್ತು. ಹೆಚ್ಚು ಮಂದಿ ಇದ್ದುದರಿಂದ ನಾನು ಮತ್ತು ನಮ್ಮ ಟೀಮಿನ ಮತ್ತೊಬ್ಬರು ಈ ಕೆಲಸವನ್ನು ಹಂಚಿಕೊಂಡೆವು. ದಿನದ ಕೊನೆಯಲ್ಲಿ ಇಬ್ಬರೂ ನಮ್ಮ ನಮ್ಮ ಅನಿಸಿಕೆಗಳ ಚಾರ್ಟ್ ಹಂಚಿಕೊಂಡಾಗ ಒಬ್ಬ ಭಾರತೀಯ ಅಭ್ಯರ್ಥಿಯ ಬಗ್ಗೆ ಅವನು ಬರೆದಿದ್ದು "ವಿಪರೀತ ಮಾತನಾಡುತ್ತಾನೆ, ನನಗೆ ಪ್ರಶ್ನೆ ಕೇಳಲು ಅವಕಾಶ ಕೊಡುತ್ತಿರಲಿಲ್ಲ" ಅಂತ.

ಭಾಷೆ ಮತ್ತು ಮಾತುಗಾರಿಕೆಯ ಬಗ್ಗೆ ಏಕೆ ಹೇಳಿದೆ ಎಂದರೆ ಒಂದು ದೇಶದಿಂದ ಬೇರೊಂದು ದೇಶಕ್ಕೆ ಬಂದವರಿಗೆ ಅಲ್ಲಿನ ರೀತಿರಿವಾಜು ಅರಿಯುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ Communication Skill ಅಥವಾ ಸಂವಹನ ಕೌಶಲ್ಯ. ಅಂದ ಹಾಗೆ ನಾನು ಹೇಳಿದ ಈ ಮಾತುಗಳು ಹೊರದೇಶಕ್ಕೆ ಬಂದವರಿಗೆ ಮಾತ್ರವಲ್ಲ ಬದಲಿಗೆ ಮತ್ತೊಬ್ಬರೊಂದಿಗೆ ವ್ಯವಹರಿಸುವಾಗಲೂ ಭಾಷೆಯ ಮೇಲೆ ಗೌರವವಿರಲಿ ಮತ್ತು ಹಿಡಿತವಿರಲಿ. ಭಾಷೆ ಯಾವುದು ಎಂಬುದು ಮುಖ್ಯವಲ್ಲ.

ಮುಂದಿನ ವಾರ ಒಂದಷ್ಟು ದೇಶ ಸುತ್ತಿ ಬರೋಣವೇ?
ಲೇಖಕರ ಬಗ್ಗೆ
ಶ್ರೀನಾಥ್ ಭಲ್ಲೆ
ಅಮೆರಿಕದ ರಿಚ್ಮಂಡ್ ನಿವಾಸಿಯಾಗಿರುವ ಶ್ರೀನಾಥ್ ಭಲ್ಲೆ ಅವರು ಬೆಂಗಳೂರಿನ ಚಾಮರಾಜಪೇಟೆಯವರು. ಜೀವನದ ಅನುಭವವನ್ನು ಎರಕಹೊಯ್ದು ಹಾಸ್ಯರಸ ಹೊಮ್ಮಿಸುವ ಲೇಖನಗಳನ್ನು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಶ್ರೀನಾಥ್ ಭಲ್ಲೆ ಅವರು ಯಾವುದೇ ವಿಷಯದ ಬಗ್ಗೆ ಅಧಿಕಾರಯುತವಾಗಿ ಕನ್ನಡದಲ್ಲಿ ಬರೆಯಬಲ್ಲರು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ