ಆ್ಯಪ್ನಗರ

ಇಂದಿರಾ ಹೇರಿದ್ದ ತುರ್ತು ಪರಿಸ್ಥಿತಿಯನ್ನೂ ಸಮರ್ಥಿಸಿದ್ದ ಠಾಕ್ರೆ ಕಾಂಗ್ರೆಸ್‌ ಜತೆಗಿದ್ದರು!

ಬಿಜೆಪಿಯೇತರ ಪಕ್ಷಗಳ ಜತೆಗೆ ಶಿವಸೇನೆಗೆ ಮೈತ್ರಿ ಹೊಸತೆ? ಖಂಡಿತ ಅಲ್ಲ, ಶಿವಸೇನೆಯ ಮೊದಲ ಮಿತ್ರ ಬೇರಾರು ಅಲ್ಲ ಕಾಂಗ್ರೆಸ್‌!

Vijaya Karnataka Web 12 Nov 2019, 2:29 pm
ಬಾಳ್‌ ಠಾಕ್ರೆ ಅವರು ಶಿವಸೇನೆಯನ್ನು ರಚಿಸಿದ್ದು 1960ರಲ್ಲಿ. 1969ರಲ್ಲಿ ಕಾಂಗ್ರೆಸ್‌ ಪಕ್ಷ ಎರಡಾಗಿ ಒಡೆದಾಗ, ಇಂದಿರಾ ಗಾಂಧಿ ಅವರನ್ನು ವಿರೋಧಿಸಿದ ಕಾಂಗ್ರೆಸ್‌(ಒ) ಪಕ್ಷದ ಜೊತೆಗೆ 1971ರಲ್ಲಿ ಠಾಕ್ರೆ ಮೈತ್ರಿ ಮಾಡಿಕೊಂಡರು. ಆದರೆ ಲೋಕಸಭೆಗೆ ನಿಂತ ಸೇನೆಯ ಮೂರು ಅಭ್ಯರ್ಥಿಗಳಲ್ಲಿ ಒಬ್ಬರೂ ಗೆಲ್ಲಲಿಲ್ಲ.
Vijaya Karnataka Web Shivsena Tiger


1975ರಲ್ಲಿ ಇಂದಿರಾ ಅವರು ತುರ್ತು ಪರಿಸ್ಥಿತಿ ಹೇರಿದಾಗ ಠಾಕ್ರೆ ಈ ಕ್ರಮವನ್ನು ಸಮರ್ಥಿಸಿದರು ಹಾಗೂ 1977ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಿದರು. 1979ರಲ್ಲಿ ಮುಸ್ಲಿಂ ಲೀಗ್‌ ನಾಯಕ ಗುಲಾಮ್‌ ಮುಹಮ್ಮದ್‌ ಬನತ್‌ವಾಲ ಅವರ ಜೊತೆಗೂ ಗೆಳೆತನ ಬೆಳೆಸಿದರು. ಆದರೆ ಇದು ಚುನಾವಣಾ ಮೈತ್ರಿಯಾಗಿ ಬೆಳೆಯಲಿಲ್ಲ. 1980ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಅನ್ನು ಶಿವಸೇನೆ ಬೆಂಬಲಿಸಿತು. ಇದಕ್ಕೆ ಕಾರಣ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಎ.ಆರ್‌.ಅಂತುಳೆ ಅವರ ಜತೆಗೆ ಠಾಕ್ರೆಗಿದ್ದ ವೈಯಕ್ತಿಕ ಮಿತ್ರತ್ವ.

ಹೀಗಿದ್ದ ಶಿವಸೇನೆ ಬಿಜೆಪಿ ಜೊತೆಗೆ ಕೂಡಿಕೊಂಡಿದ್ದು ಹೇಗೆ? ಸುಮಾರು ಮೂರು ದಶಕಗಳ ವರೆಗೆ ಮೈತ್ರಿ ಬೆಳೆಸಿದ್ದು ಹೇಗೆ?
1984ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ, ಶರದ್‌ ಪವಾರ್‌ ಅವರು ಕಾಂಗ್ರೆಸ್‌ ವಿರೋಧಿ ಮೈತ್ರಿಕೂಟವೊಂದನ್ನು ರಚಿಸಿಕೊಂಡರು. ಇದರಲ್ಲಿ ಶಿವಸೇನೆಯನ್ನು ಸೇರಿಸಲಿಲ್ಲ. ಠಾಕ್ರೆಯವರು ಬಿಜೆಪಿ ಜೊತೆ ಮಾತುಕತೆ ನಡೆಸಿ, ತಮ್ಮ ಇಬ್ಬರು ಅಭ್ಯರ್ಥಿಗಳನ್ನು ಬಿಜೆಪಿ ಚಿಹ್ನೆಯಡಿ ನಿಲ್ಲಿಸಿದರು. ಮಹಾರಾಷ್ಟ್ರದ ಪ್ರಭಾವಿ ಬಿಜೆಪಿ ನಾಯಕ ಪ್ರಮೋದ್‌ ಮಹಾಜನ್‌ ಅವರ ಪ್ರಯತ್ನಗಳ ಫಲವಾಗಿ, 1989ರ ಹೊತ್ತಿಗೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡವು. 1990ರ ರಾಜ್ಯ ಚುನಾವಣೆಯ ಸಂದರ್ಭ ಮಾಡಿಕೊಂಡ ಸೀಟು ಹಂಚಿಕೆಯಂತೆ ವಿಧಾನಸಭೆ 288 ಸ್ಥಾನಗಳಲ್ಲಿ ಸೇನೆ 183 ಸೀಟುಗಳಲ್ಲಿ ಸ್ಪರ್ಧಿಸಿತು. ಇದೇ ಸೂತ್ರವೇ 1995ರ ಚುನಾವಣೆಯಲ್ಲೂ ಮುಂದುವರಿಯಿತು; ಮೊದಲ ಬಾರಿಗೆ ಈ ಒಕ್ಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. 1999ರಲ್ಲಿ ಹಾಗೂ 2004ರಲ್ಲಿ ಈ ಸೀಟು ಹಂಚಿಕೆಯಲ್ಲಿ ಕೊಂಚ ವ್ಯತ್ಯಾಸವಾಯಿತು; ಶಿವಸೇನೆ 171 ಸೀಟುಗಳನ್ನೂ ಬಿಜೆಪಿ 117 ಸೀಟುಗಳನ್ನೂ ಇಟ್ಟುಕೊಂಡವು. ಸಂಖ್ಯಾಶಾಸ್ತ್ರದಲ್ಲಿ ನಂಬಿಕೆಯಿಟ್ಟಿದ್ದ ಬಾಳ್‌ ಠಾಕ್ರೆ 171 ಸೀಟು ಆಯ್ಕೆ ಮಾಡಿಕೊಳ್ಳಲು ಕಾರಣ ಅದರ ಒಟ್ಟು ಮೊತ್ತ '9' ಆಗುತ್ತದೆ ಎಂಬುದಾಗಿತ್ತು. 2009ರಲ್ಲೂ ಈ ಮೈತ್ರಿಯಲ್ಲಿ ಶಿವಸೇನೆಯೇ ದೊಡ್ಡಣ್ಣನಾಗಿದ್ದು, 169 ಸ್ಥಾನಗಳನ್ನು ತನಗಿಟ್ಟುಕೊಂಡಿತ್ತು.

ಶರದ್‌ ಪವಾರ್‌ ತೋಡಿದ ಖೆಡ್ಡಾಗೆ ಬಿದ್ದ ಬಿಜೆಪಿ, ಶಿವಸೇನೆಯೆಂಬ ಮದಗಜಗಳು!

ಬಿಜೆಪಿ ಜತೆಗೆ ಸಂಬಂಧ ಹಳಸುಲು ಆರಂಭಗೊಂಡಿದ್ದು ಯಾವಾಗ?
2014ರ ಚುನಾವಣೆಯ ಹೊತ್ತಿಗೆ ಉಭಯ ಪಕ್ಷಗಳ ನಡುವಿನ ಮೈತ್ರಿಯಲ್ಲಿ ಬಿರುಕು ಉಂಟಾಯಿತು. ಅಷ್ಟು ಹೊತ್ತಿಗಾಗಲೇ ಶಿವಸೇನೆಯ ಸುಪ್ರೀಂ ಲೀಡರ್‌ ಬಾಳ್‌ ಠಾಕ್ರೆ ಮೃತಪಟ್ಟಿದ್ದರು. ಶಿವಸೇನೆಯ ಅಧಿಪತ್ಯ ಅವರ ಪುತ್ರ ಉದ್ಧವ ಠಾಕ್ರೆ ಪಾಲಾಗಿತ್ತು. ಕೇಂದ್ರದ ರಾಜಕೀಯದಲ್ಲಿ ಹಾಗೂ ಬಿಜೆಪಿಯ ಪರಮೋಚ್ಚ ಹೈಕಮಾಂಡ್‌ನಲ್ಲಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ತೀವ್ರಗತಿಯಲ್ಲಿ ಮೇಲೇರಿದ್ದರು. ಮೈತ್ರಿಯನ್ನು ಸಾಧಿಸಿಕೊಂಡಿದ್ದ ಹಳೆಯ ನಾಯಕರು ಯಾರೂ ಇರಲಿಲ್ಲ. ಮೋದಿ- ಶಾ ಜೋಡಿ ಮಹಾರಾಷ್ಟ್ರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಕನಸು ಕಂಡಿದ್ದರು. ಇದು ಶಿವಸೇನೆಗೆ ಇರಸುಮುರಸು ತಂದಿತು. ಉಭಯ ಪಕ್ಷಗಳು ಯಾವುದೇ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲಾಗದೆ, ಪ್ರತ್ಯೇಕವಾಗಿಯೇ ಸ್ಪರ್ಧಿಸಿದವು. ಬಿಜೆಪಿ 122 ಸೀಟು ಗೆದ್ದರೆ, ಸೇನೆ 63 ಸ್ಥಾನಕ್ಕೆ ತೃಪ್ತವಾಗಬೇಕಾಯಿತು. ಬಿಜೆಪಿಯ ದೇವೇಂದ್ರ ಫಡ್ನವಿಸ್‌ ಅವರು ಮುಖ್ಯಮಂತ್ರಿ ಆಗುವುದನ್ನು ಒಪ್ಪಿಕೊಂಡು ಮಿತ್ರಪಕ್ಷದ ಜೊತೆಗೆ ಸೇನೆ ಕೈಜೋಡಿಸಿತು.

'ಮಹಾ'ತಿರುವು: ಜನಾದೇಶವಿಲ್ಲವೆನ್ನುತ್ತಿದ್ದ ಶರದ್‌ ಪವಾರ್‌ಗೆ ಸರಕಾರ ರಚಿಸೋ ಪವರ್‌!

ಮುಂದುವರಿದ ಟೀಕೆ, ವಾಕ್ಸಮರಶಿವಸೇನೆಯ ಮುಖವಾಣಿಯಾದ 'ಸಾಮ್ನಾ' ಪತ್ರಿಕೆಯಲ್ಲಿ ಬಿಜೆಪಿಯ ನಿಲುವನ್ನು ಕಟುವಾಗಿ ಟೀಕಿಸಲಾಗಿದೆ. ಪ್ರಸ್ತುತ ಚುನಾವಣೆಯಲ್ಲಿ 50-50 ಸೀಟು ಹಂಚಿಕೆ ಮಾಡಿಕೊಳ್ಳುವುದಾಗಿ ಮಾತಾಗಿತ್ತು. ಮುಖ್ಯಮಂತ್ರಿ ಸ್ಥಾನವನ್ನೂ ಕೊಡುವುದಾಗಿ ಭರವಸೆ ನೀಡಲಾಗಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಾಗ ಬಿಜೆಪಿ ಸೇನೆಯ ಕೈಬಿಟ್ಟಿತ್ತು. ನಂತರ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಹತ್ತಿರ ಬಂತು. ಈಗ ಗೆಲುವಿನ ಬಳಿಕ ಮತ್ತೆ ಕೈಬಿಟ್ಟಿದೆ ಎಂದು ಸಾಮ್ನಾ ದೂರಿದೆ. 2004ರಿಂದಲೂ ಬಿಜೆಪಿಯನ್ನು ಶಿವಸೇನೆಯ ನಾಯಕರು ಟೀಕಿಸುತ್ತ ಬಂದಿದ್ದಾರೆ. ಅಗತ್ಯ ಬಿದ್ದಾಗಲೆಲ್ಲ ತನ್ನನ್ನು ಬಿಜೆಪಿ ಬಳಸಿಕೊಳ್ಳುತ್ತ ಬಂದಿದ್ದು, ಅಧಿಕಾರದಿಂದ ಮಾತ್ರ ದೂರವಿಟ್ಟಿದೆ ಎಂದು ಶಿವಸೇನೆ ದೂರಿದೆ. 2014-19ರ ಅವಧಿಯ ಮೋದಿಯವರ ಆಳ್ವಿಕೆಯನ್ನು ಶಿವಸೇನೆ ಟೀಕಿಸಿದಷ್ಟು ಕಾಂಗ್ರೆಸ್‌ ಪಕ್ಷವೂ ಟೀಕಿಸಿಲ್ಲ. ಮೋದಿ ಸರಕಾರದ ಹಲವು ಪ್ರಮುಖ ನಿರ್ಧಾರಗಳನ್ನು, ರಫೇಲ್‌ ವಿವಾದದ ಸಂದರ್ಭದಲ್ಲಿಯೂ ಉದ್ಧವ್‌ ಠಾಕ್ರೆ ಟೀಕಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ