ಆ್ಯಪ್ನಗರ

ಪತಿ ಹುತಾತ್ಮರಾದರೆಂದು ಧೃತಿಗೆಡದೆ ಸೇನೆಗೆ ಸೇರಿದ ಗೌರಿ ಮಹದಿಕ್‌

ಸರ್ವಿಸ್‌ ಸೆಲೆಕ್ಷನ್‌ ಬೋರ್ಡ್‌(ಎಸ್‌ಎಸ್‌ಬಿ) ಪರೀಕ್ಷೆಯಲ್ಲಿ ಎರಡನೇ ಯತ್ನದಲ್ಲಿ ಟಾಪರ್‌ ಆಗಿ ಹೊರ ಹೊಮ್ಮಿದ್ದು ಚೆನ್ನೈನಲ್ಲಿ ಕಠಿಣ ತರಬೇತಿ ಪಡೆಯುತ್ತಿರುವ ಗೌರಿ ಮಹದಿಕ್‌ 2020ರಲ್ಲಿ ಲೆಫ್ಟಿನೆಂಟ್‌ ಆಗಿ ಹೊರಹೊಮ್ಮಲಿದ್ದಾರೆ.

Vijaya Karnataka 8 Mar 2019, 11:05 am
ವೀರ ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಆದರೆ ಕುಟುಂಬಗಳಿಗೆ ಆಸರೆ ಮತ್ತು ಶಕ್ತಿಯಾಗಿದ್ದವರು ಏಕಾಏಕಿ ಇಲ್ಲವಾದರೆ ಆ ನೋವು ಮತ್ತು ಶೂನ್ಯವನ್ನು ಯಾರಿಂದಲೂ ಯಾವುದರಿಂದಲೂ ತುಂಬಲಾಗುವುದಿಲ್ಲ. ಇಂಥ ಶೋಕಕ್ಕೆ ಸಿಲುಕಿಯೂ ಅದರಿಂದ ಪಾರಾಗಿ ಕೆಚ್ಚಿನ ಜೀವನ ರೂಪಿಸಿಕೊಂಡಿದ್ದಾರೆ ಮುಂಬಯಿನ ಗೌರಿ ಮಹದಿಕ್‌. ಒಬ್ಬರಿಗೆ ಸಲ್ಲಿಸುವ ಅತ್ಯುನ್ನತ ಗೌರವವೆಂದರೆ ಅವರ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸುವುದು, ಅವರ ಪ್ರತಿರೂಪವೇ ಆಗಿ ಬಿಡುವುದು - ಎಂಬುದು ಗೌರಿ ಮಹದಿಕ್‌ ಅವರ ಜೀವನ ತತ್ತ್ವ. ಇದನ್ನವರು ತಮ್ಮ ಜೀವನ ಕ್ರಮದಲ್ಲೇ ನಿಜ ಮಾಡಿ ತೋರಿಸಿದ್ದಾರೆ.
Vijaya Karnataka Web Gowri Mahadik


2017 ಡಿಸೆಂಬರ್‌ನಲ್ಲಿ ಭಾರತ- ಚೀನಾ ಗಡಿಯ ತವಾಂಗ್‌ನಲ್ಲಿ ಬೆಂಕಿ ಆಕಸ್ಮಿಕ ಘಟನೆಯೊಂದರಲ್ಲಿ ಬಿಹಾರ್‌ ರೆಜಿಮೆಂಟ್‌ನಲ್ಲಿದ್ದ ಮೇಜರ್‌ ಪ್ರಸಾದ್‌ ಗಣೇಶ್‌ ಮಹದಿಕ್‌ ಮೃತರಾದರು. ವಿವಾಹವಾಗಿ ಎರಡೇ ವರ್ಷಗಳಲ್ಲಿ ಬಂದೆರಗಿದ ಈ ದುರಂತ ಗೌರಿ ಅವರಲ್ಲಿದ್ದ ಧೀಶಕ್ತಿಯನ್ನು ಬಡಿದೆಬ್ಬಿಸಿತು. ಮೂಲೆಯಲ್ಲಿ ಕುಳಿತು ಅಳುವುದಕ್ಕಿಂತ ಪತಿಯ ಹಾದಿಯಲ್ಲೇ ಸಾಗುವುದೇ ನಿಜವಾದ ಸಾರ್ಥಕತೆ ಎಂದೆನಿಸಿತು. ಅವರು ಭೂಸೇನೆ, ವಾಯುದಳ, ಮತ್ತು ನೌಕಾದಳ ಹುದ್ದೆಗಳಿಗೆ ನಡೆಸುವ ಸರ್ವಿಸ್‌ ಸೆಲೆಕ್ಷನ್‌ ಬೋರ್ಡ್‌(ಎಸ್‌ಎಸ್‌ಬಿ) ಪರೀಕ್ಷೆಗೆ ಕುಳಿತರು. ಮೊದಲ ಯತ್ನದಲ್ಲಿ ವಿಫಲರಾದರು. ಎರಡನೇ ಯತ್ನದಲ್ಲಿ ಟಾಪರ್‌ ಆಗಿ ಹೊರ ಹೊಮ್ಮಿದ್ದು ಇದೀಗ ಚೆನ್ನೈನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. 2020ರಲ್ಲಿ ಅವರು ಲೆಫ್ಟಿನೆಂಟ್‌ ಆಗಿ ಹೊರ ಹೊಮ್ಮಲಿದ್ದಾರೆ. ''ಇನ್ನೊಂದೇ ವರ್ಷದಲ್ಲಿ ನನ್ನ ಹೆಸರು ಲೆಫ್ಟಿನೆಂಟ್‌ ಗೌರಿ ಪ್ರಸಾದ್‌ ಮಹದಿಕ್‌ ಎಂದು ಬದಲಾಗುತ್ತದೆ. ನನ್ನ ಪತಿ ಧರಿಸುತ್ತಿದ್ದ ಸಮವಸ್ತ್ರ ಮತ್ತು ಸ್ಟಾರ್‌ಗಳು ನನ್ನ ಮೈ ಮೇಲಿರುತ್ತದೆ. ಅವು ನೈಜ ತಾರೆಗಳಿಗಿಂತ ಸಾವಿರ ಪಟ್ಟು ಹೊಳೆಯುತ್ತದೆ. ಪತಿ ಕರ್ತವ್ಯವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಅದನ್ನು ಪೂರ್ಣಗೊಳಿಸಿ ಅವರಿಗೆ ನಾನು ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ,'' ಎಂದು ಗೌರಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ಪತಿ ಇನ್ನಿಲ್ಲ ಎಂದಾಗ ನಾನೇನು ಮಾಡಲಿ ಎನ್ನುವ ಪ್ರಶ್ನೆ ಮೂಡಿತು. ಮೂಲೆಯಲ್ಲಿ ಕುಳಿತು ಅಳುವುದರಿಂದ ಏನೂ ಪ್ರಯೋಜನವಿಲ್ಲ. ಅವರಿಗಾಗಿ ಏನಾದರೂ ಮಾಡಬೇಕು, ಅವರು ಅಭಿಮಾನ ಪಡುವಂಥದ್ದನ್ನು ಸಾಧಿಸಬೇಕು ಎಂದೆನಿಸಿತು. ಅವರ ಹೆಜ್ಜೆ ಗುರುತುಗಳ ಮೇಲೆ ಹೆಜ್ಜೆ ಇಡಲು ತೀರ್ಮಾನಿಸಿದೆ.
ಗೌರಿ ಮಹದಿಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ