ಆ್ಯಪ್ನಗರ

ಕರ್ನಾಟಕದ ಮೊದಲ ಫೈಟರ್‌ ಪೈಲಟ್‌ ಮೇಘನಾ ಶಾನಭಾಗ್‌

2017ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಫೈಟರ್‌ ಜೆಟ್ಟನ್ನು ಹಾರಿಸಿದ್ದು ಆಕೆಯ ಮರೆಯಲಾರದ ದಿನ. ಸದ್ಯ ಬ್ರಿಟಿಷ್‌ ಹಾಕ್‌ ಏರ್‌ಕ್ರಾಫ್ಟ್‌ನಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿರುವ ಆಕೆಯ ಸಾಧನೆ ಬಗ್ಗೆ ಹೆತ್ತವರಿಗೆ ಹೆಮ್ಮೆ.

Vijaya Karnataka 8 Mar 2019, 11:12 am
ಕರ್ನಾಟಕದ ಚಿಕ್ಕಮಗಳೂರಿನ ಮಾರ್ಲೆ ಗ್ರಾಮದ ಮೇಘನಾ ಶಾನಭಾಗ್‌, ರಾಜ್ಯ ಹಾಗೂ ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಫೈಟರ್‌ ಪೈಲಟ್‌ ಎನಿಸಿಕೊಂಡಿದ್ದಾರೆ. ಅವನಿ ಚತುರ್ವೇದಿ ಅವರ ಬಳಿಕದ ನಾಲ್ಕನೇ ಫೈಟರ್‌ ಪೈಲಟ್‌ ಇವರು. ಹೈದರಾಬಾದ್‌ನ ದುಂಡಿಗಲ್‌ನ ಇಂಡಿಯನ್‌ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ 2018ರ ಜೂನ್‌ನಲ್ಲಿ ಫ್ಲೈಯಿಂಗ್ ಆಫೀಸರ್‌ ಪದವಿ ಪಡೆದಿದ್ದಾರೆ. ಎದುರಿಸಿದ ಮೊದಲ ಐಎಎಫ್‌ ಪರೀಕ್ಷೆಯಲ್ಲಿಯೇ ತೇರ್ಗಡೆಯಾದವರು.
Vijaya Karnataka Web meghana shanbough


ಮೇಘನಾ ಅವರ ತಂದೆ ಎಂಕೆ ರಮೇಶ್‌ ಹಾಗೂ ಶೋಭಾ ಇಬ್ಬರೂ ವಕೀಲರು. ಉಡುಪಿಯಲ್ಲಿ ಲಿಟಲ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಕಲಿತ ಮೇಘನಾಗೆ ಈಗ 23 ವರ್ಷ. ಬೋರ್ಡಿಂಗ್‌ ಸ್ಕೂಲಿನಲ್ಲಿ ಇದ್ದು ಓದಬೇಕೆಂಬ ಆಕೆಯ ಹಂಬಲಕ್ಕೆ ತಂದೆ ನೀರೆರೆದರು. ನಂತರ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್‌ನಲ್ಲಿ ಇಂಜಿನಿಯರಿಂಗ್‌ ಕಲಿಕೆ. ಅಲ್ಲಿಯೇ 'ಸಾಹಸ್‌' ಎಂಬ ಅಡ್ವೆಂಚರ್‌ ಕ್ಲಬ್‌ ಆರಂಭಿಸಿ ಅದರ ಮೂಲಕ ಟ್ರೆಕ್ಕಿಂಗ್‌, ರ್ಯಾಫ್ಟಿಂಗ್‌, ಪರ್ವತಾರೋಹಣ ಮುಂತಾದ ಸಾಹಸಗಳು.

ಅಲ್ಲಿದ್ದಾಗಲೇ ಪ್ಯಾರಾಗ್ಲೈಡಿಂಗ್‌ ತರಬೇತಿ ಪಡೆದರು. ಅದನ್ನು ನಡೆಸಿಕೊಡುತ್ತಿದ್ದ ಟ್ರೇನರ್‌ಗಳು ಏರ್‌ಫೋರ್ಸ್‌ ನಿವೃತ್ತ ಆಫೀಸರ್‌ಗಳಾಗಿದ್ದರು. ಅವರ ಮೂಲಕ ವಾಯುಸೇನೆಯ ಯೋಧರ ಬದುಕಿನ ಒಳನೋಟ ಸಿಕ್ಕಿತು. ಅಲ್ಲಿಂದಲೇ ಮೂಡಿದ್ದು ಐಎಎಫ್‌ ಸೇರುವ ಹಂಬಲ. 20ರ ಹರೆಯದಲ್ಲಿ ಗೋವಾದಲ್ಲಿ ನಡೆದ ಸೋಲೋ ಪ್ಯಾರಾಗ್ಲೈಡಿಂಗ್‌ನಲ್ಲಿ ಯಶಸ್ವಿಯಾದರು. 2015ರಲ್ಲಿ ಇಂಜಿನಿಯರಿಂಗ್‌ ಮುಗಿಯಿತು. ಸಾಮಾನ್ಯತೆಗೂ ಮಿಗಿಲಾದದ್ದನ್ನು ಸಾಧಿಸುವ ಹಂಬಲ. ಅವನಿ ಚತುರ್ವೇದಿ ಮುಂತಾದವರ ಸಾಧನೆ ಕಣ್ಣೆದುರಿಗಿತ್ತು. ಏರ್‌ಫೋರ್ಸ್‌ನ ಸಾಮಾನ್ಯ ಅರ್ಹತಾ ಪರೀಕ್ಷೆಯಲ್ಲಿ ಮೊದಲ ಸುತ್ತಿಗೇ ಪಾಸು. ತರಬೇತಿಯ ಅವಧಿಯಲ್ಲಿ ಅಧಿಕಾರಿಗಳ ಮೆಚ್ಚುಗೆ ಪಡೆದ ಸಾಧನೆ. 2017ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಫೈಟರ್‌ ಜೆಟ್ಟನ್ನು ಹಾರಿಸಿದ್ದು ಆಕೆಯ ಮರೆಯಲಾರದ ದಿನ. ಸದ್ಯ ಬ್ರಿಟಿಷ್‌ ಹಾಕ್‌ ಏರ್‌ಕ್ರಾಫ್ಟ್‌ನಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿರುವ ಆಕೆಯ ಸಾಧನೆ ಬಗ್ಗೆ ಹೆತ್ತವರಿಗೆ ಹೆಮ್ಮೆ. ಅಂದಹಾದೆ ಮೇಘನಾಗೆ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಗೊತ್ತು.

ಪೈಲಟ್‌ ಆಗುವ ಕನಸು ಅತ್ಯಂತ ದೊಡ್ಡದಾಗಿರಬೇಕು. ಆ ಕ್ಷಣಕ್ಕೆ ಅವು ಸಾಧಿಸಲು ಅಸಾಧ್ಯ ಎನಿಸಬಹುದು; ಆದರೆ ನಿಜಕ್ಕೂ ಅದಕ್ಕಾಗಿ ನಿಮ್ಮ ಪ್ರಯತ್ನ ಎಷ್ಟಿರಬೇಕೆಂದರೆ, ಅದಕ್ಕೆ ನಿಮ್ಮನ್ನು ಆರಿಸಿಕೊಳ್ಳುವುದಲ್ಲದೆ ಬೇರೆ ನಿರ್ವಾಹವೇ ಇರಕೂಡದು.
ಮೇಘನಾ ಶಾನಭಾಗ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ