ಆ್ಯಪ್ನಗರ

ಅಭಿನಂದನ್‌ ಸುರಕ್ಷಿತವಾಗಿ ಬರಲಿ

ಇದೀಗ ಉಭಯ ದೇಶಗಳ ನಡುವೆ ಉಂಟಾಗಿರುವ ಸಂಘರ್ಷದ ಸನ್ನಿವೇಶದ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ಇಲ್ಲಿ ಮೆಲುಕು ಹಾಕಬೇಕಿದೆ. ಪಾಕಿಸ್ತಾನ ಉದ್ಭವವಾದ ಲಾಗಾಯ್ತನಿಂದಲೂ ಪಾಕ್‌ ಮೂಲದ ಮತ್ತು ಪಾಕ್‌ ಪ್ರೇರಿತ ಜೆಹಾದಿ ಉಗ್ರರ ಕ್ರೂರ ಉಪಟಳವನ್ನು ಭಾರತ ಅನುಭವಿಸುತ್ತಲೇ ಬಂದಿದೆ. ಇಷ್ಟಾದರೂ ಉಗ್ರರ ನಿಗ್ರಹಕ್ಕೆ ಭಾರತ ರಾಜತಾಂತ್ರಿಕ ಮಾರ್ಗವನ್ನೇ ಅನುಸರಿಸಿದೆಯೇ ಹೊರತು, ಸೇನಾ ಕಾರ್ಯಾಚರಣೆಯ ಮಾರ್ಗವನ್ನಲ್ಲ. ಯಾವೆಲ್ಲ ಸಂದರ್ಭಗಳಲ್ಲಿ ಪಾಕ್‌ ಸೇನೆ ಹದ್ದುಮೀರಿ ವರ್ತಿಸಿದೆಯೋ ಆಗೆಲ್ಲ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಅಷ್ಟೆ.

Vijaya Karnataka 28 Feb 2019, 5:00 am
ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಗಡಿ ಉಲ್ಲಂಘಿಸಿದ ಕಾರಣಕ್ಕೆ ಬುಧವಾರ ಮುಂಜಾನೆ ಪ್ರತಿದಾಳಿ ಕರ್ತವ್ಯದಲ್ಲಿದ್ದ ಭಾರತದ ವಾಯು ಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ಕೂದಲೂ ಕೂಡ ಕೊಂಕದಂತೆ ನೋಡಿಕೊಳ್ಳುವಂತೆ ಮತ್ತ ತಕ್ಷಣ ಅವರನ್ನು ಸುರಕ್ಷಿತವಾಗಿ ಹಿಂದಿರುಗಿಸುವಂತೆ ಭಾರತ ಪಾಕಿಸ್ತಾನಕ್ಕೆ ಬಲವಾದ ಆಗ್ರಹ ಮಾಡಿದೆ. ಪಾಕ್‌ ಸರಕಾರದ ಉಗ್ರರ ವಿರೋಧಿ ನಿಲುವಿನಲ್ಲಿ ಸಾಚಾತನವಿದ್ದದ್ದೇ ಆದಲ್ಲಿ ಭಾರತ ಸರಕಾರದ ಆಗ್ರಹವನ್ನು ಒಪ್ಪಿಕೊಂಡು ಭಾರತದ ಯೋಧರನ್ನು ಗೌರವದಿಂದ ಮರಳಿಸುವ ಕೆಲಸ ಮಾಡಬೇಕಿದೆ.
Vijaya Karnataka Web abhinandhan


ಇದೀಗ ಉಭಯ ದೇಶಗಳ ನಡುವೆ ಉಂಟಾಗಿರುವ ಸಂಘರ್ಷದ ಸನ್ನಿವೇಶದ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ಇಲ್ಲಿ ಮೆಲುಕು ಹಾಕಬೇಕಿದೆ. ಪಾಕಿಸ್ತಾನ ಉದ್ಭವವಾದ ಲಾಗಾಯ್ತನಿಂದಲೂ ಪಾಕ್‌ ಮೂಲದ ಮತ್ತು ಪಾಕ್‌ ಪ್ರೇರಿತ ಜೆಹಾದಿ ಉಗ್ರರ ಕ್ರೂರ ಉಪಟಳವನ್ನು ಭಾರತ ಅನುಭವಿಸುತ್ತಲೇ ಬಂದಿದೆ. ಇಷ್ಟಾದರೂ ಉಗ್ರರ ನಿಗ್ರಹಕ್ಕೆ ಭಾರತ ರಾಜತಾಂತ್ರಿಕ ಮಾರ್ಗವನ್ನೇ ಅನುಸರಿಸಿದೆಯೇ ಹೊರತು, ಸೇನಾ ಕಾರ್ಯಾಚರಣೆಯ ಮಾರ್ಗವನ್ನಲ್ಲ. ಯಾವೆಲ್ಲ ಸಂದರ್ಭಗಳಲ್ಲಿ ಪಾಕ್‌ ಸೇನೆ ಹದ್ದುಮೀರಿ ವರ್ತಿಸಿದೆಯೋ ಆಗೆಲ್ಲ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಅಷ್ಟೆ.

ಇತ್ತೀಚಿನ ವಿದ್ಯಮಾನಗಳಲ್ಲೂ ಅಷ್ಟೆ, ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಉಗ್ರರು ಆತ್ಮಾಹುತಿ ದಾಳಿ ಮಾಡಿ 40ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಹತ್ಯೆ ಮಾಡಿತ್ತು. ಬಳಿಕ ಭಾರತವು ಬಾಲಾಕೋಟ್‌ ಸೇರಿದಂತೆ ಗಡಿ ನಿಯಂತ್ರಣ ರೇಖೆಗುಂಟ ಇರುವ ಉಗ್ರರ ಶಿಬಿರಗಳನ್ನಷ್ಟೇ ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಉಗ್ರರ ಮೇಲಿನ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿಗೆ ಮುಂದಾಗಿರುವುದು ವಿಪರ್ಯಾಸವೇ ಸರಿ.

ಪಾಕಿಸ್ತಾನ ಇನ್ನಾದರೂ ಒಂದು ವಿಷಯವನ್ನು ಅರ್ಥಮಾಡಿಕೊಳ್ಳುವುದು ಒಳಿತು. ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಉಗ್ರರ ಪೋಷಣೆ ಮಾಡುತ್ತಿರುವ ರಾಷ್ಟ್ರ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಅದೇ ಕಾರಣಕ್ಕೆ ಅಮೆರಿಕ ಆದಿಯಾಗಿ ಪ್ರಪಂಚದ ಬಹುತೇಕ ರಾಷ್ಟ್ರಗಳು ಅಮೆರಿಕದ ಸಖ್ಯ ತೊರೆದಿವೆ. ಪಾಕಿಸ್ತಾನಕ್ಕೆ ನೀಡುವ ಸೈನಿಕ ಮತ್ತು ಆರ್ಥಿಕ ನೆರವನ್ನು ಸ್ಥಗಿತಗೊಳಿಸಿವೆ. ಇದುವರೆಗೂ ಪಾಕ್‌ ಪರ ವಹಿಸಿ ಮಾತನಾಡುತ್ತಿದ್ದ ಚೀನಾ ಕೂಡ ಪುಲ್ವಾಮಾ ಉಗ್ರರ ದಾಳಿ ಬಳಿಕ ತನ್ನ ನಿಲುವು ಬದಲಿಸಿ ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ರವಾನಿಸಿದೆ. ಅದೇ ವೇಳೆ ಪುಲ್ವಾಮಾ ಉಗ್ರರ ದಾಳಿ ಮತ್ತು ಬಾಲಾಕೋಟ್‌ ಉಗ್ರರ ದಾಳಿಯ ಬೆಳವಣಿಗೆಗಳ ನಂತರ ಅಮೆರಿಕ ಕೂಡ ಉಗ್ರರ ದಮನದ ವಿಚಾರದಲ್ಲಿ ಪಾಕಿಸ್ತಾನ ಪ್ರಾಮಾಣಿಕ ನಿಲುವನ್ನು ಪ್ರದರ್ಶಿಸಬೇಕೆಂದು ಫರ್ಮಾನು ಹೊರಡಿಸಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಕೂಡ ಪಾಕಿಸ್ತಾನಕ್ಕೆ ಅಮೆರಿಕದ ಧಾಟಿಯಲ್ಲೇ ಸಂದೇಶ ನೀಡಿ ಕಿವಿ ಹಿಂಡಿದೆ.

ಇಷ್ಟಾದರೂ ಈ ಕ್ಷಣದವರೆಗೆ ಪಾಕಿಸ್ತಾನ ವಿವೇಚನೆಯಿಂದ ವರ್ತಿಸುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂಬುದೇ ದುಃಖದ ಸಂಗತಿ. ಅದಕ್ಕೆ ಒಂದೇ ಒಂದು ಉದಾಹರಣೆ ಎಂದರೆ ನಿಶ್ಯಸ್ತ್ರವಾಗಿ ಸೆರೆಸಿಕ್ಕ ಭಾರತೀಯ ಯೋಧ ಅಭಿನಂದನ್‌ಗೆ ಪಾಕ್‌ ಯೋಧರು ಚಿತ್ರಹಿಂಸೆ ನೀಡಿರುವುದು. ಇದು ಆ ದೇಶದ ಯೋಧರ ಕ್ರೂರ ಮಾನಸಿಕತೆಗೆ ಸ್ಪಷ್ಟ ನಿದರ್ಶನ. ಈ ಮಾನಸಿಕತೆಯನ್ನು ಬದಲಾಯಿಸಿಕೊಳ್ಳದೇ ಹೋದಲ್ಲಿ ಅದರಿಂದ ಆ ದೇಶಕ್ಕೆ ನಷ್ಟವೇ ಹೊರತು ಬೇರೆಯವರಿಗಲ್ಲ.

ಪಾಕಿಸ್ತಾನ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಭಾರತೀಯರ ಮಾನಸಿಕತೆ ಬದಲಾಗಿದೆ; ಭಾರತದ ನೇತೃತ್ವ ಬದಲಾಗಿದೆ. ಭಾರತ ಶಾಂತಿ ಮತ್ತು ಶಸ್ತ್ರ ಇವೆರಡರ ಮೂಲಕ ವ್ಯವಹರಿಸಲು ಸಮರ್ಥ ಎಂಬುದರ ಒಂದು ಝಲಕನ್ನು ಈಗಾಗಲೇ ಈಗಾಗಲೇ ತೋರಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ವೀರ ಯೋಧ ಅಭಿನಂದನ್‌ ವಿಷಯದಲ್ಲಿ ಪಾಕಿಸ್ತಾನ ಜವಾಬ್ದಾರಿಯಿಂದ ವರ್ತಿಸುವುದು ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ