ಆ್ಯಪ್ನಗರ

ಬಾಲ ದುಡಿಮೆಗೆ ಮುಕ್ತಿ ಎಂದು?

ಮಕ್ಕಳು ಸುಂದರ ಸೃಷ್ಟಿಗಳು. ತಮ್ಮ ಮುಗ್ಧತೆ, ಅಕ್ಷಯ ಬೆರಗು, ಕುತೂಹಲ ಮತ್ತು ಎಲ್ಲವನ್ನೂ ಆಟವಾಗಿ ಭಾವಿಸುವ ಅವರ ಮನೋಸ್ಥಿತಿ ಎಲ್ಲರಿಗೂ ಹಿಗ್ಗನ್ನುಂಟು ಮಾಡುತ್ತದೆ.

Vijaya Karnataka Web 13 Jun 2017, 10:04 am
ಮಕ್ಕಳು ಸುಂದರ ಸೃಷ್ಟಿಗಳು. ತಮ್ಮ ಮುಗ್ಧತೆ, ಅಕ್ಷಯ ಬೆರಗು, ಕುತೂಹಲ ಮತ್ತು ಎಲ್ಲವನ್ನೂ ಆಟವಾಗಿ ಭಾವಿಸುವ ಅವರ ಮನೋಸ್ಥಿತಿ ಎಲ್ಲರಿಗೂ ಹಿಗ್ಗನ್ನುಂಟು ಮಾಡುತ್ತದೆ. ಆದರೆ ಮಕ್ಕಳನ್ನು ನಾವು ಮಕ್ಕಳಾಗಿ ಪರಿಭಾವಿಸಿದ್ದೇವೆಯೇ? ಅವರ ಬಾಲ್ಯ ಸ್ವಚ್ಛಂದವಾಗಿ ಅರಳಿಕೊಳ್ಳಲು ಸೂಕ್ತವಾದ ವಾತಾವರಣವನ್ನು ನಿರ್ಮಿಸಿದ್ದೇವೆಯೇ ಎನ್ನುವ ಪ್ರಶ್ನೆ ಹಾಕಿಕೊಂಡರೆ ಖಂಡಿತ ಸಮಾಧಾನಕರ ಉತ್ತರಗಳು ಸಿಗುವುದಿಲ್ಲ.
Vijaya Karnataka Web editorial
ಬಾಲ ದುಡಿಮೆಗೆ ಮುಕ್ತಿ ಎಂದು?


5ರಿಂದ 14 ವರ್ಷದ ವಯೋಮಾನದವರನ್ನು ಯಾವುದೇ ದುಡಿಮೆಗೆ ತೊಡಗಿಸುವಂತಿಲ್ಲ ಎನ್ನುವ ಕಾನೂನು ಇದೆ. ಆದರೆ ದೇಶದಲ್ಲಿ 3ಕೋಟಿ 30 ಮಂದಿ ಬಾಲ ಕಾರ್ಮಿಕರಿದ್ದಾರೆ. ದೇಶದ ಪ್ರತಿ 11 ಮಕ್ಕಳ ಪೈಕಿ ಒಬ್ಬರು ಕುಟುಂಬದ ಪಾಲಿಗೆ ಸಂಪಾದನೆಯ ಸಾಧನಗಳಾಗಿದ್ದಾರೆ. ದೇಶದ ರಾಜಧಾನಿ ದಿಲ್ಲಿಯೊಂದರಲ್ಲಿಯೇ ಹತ್ತು ಲಕ್ಷ ಬಾಲ ದುಡಿಮೆಗಾರರಿದ್ದಾರೆ. ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಬಾಲ ಕಾರ್ಮಿಕ ಪ್ರತಿಬಂಧಕ ಕಾನೂನನ್ನು ನಿಸ್ಸೀಮವಾಗಿ ಉಲ್ಲಂಘಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು ಐದು ಲಕ್ಷ ಮಕ್ಕಳಿಗೆ ಬಾಲ್ಯವೆಂಬುದು ದೂರದ ಕನಸು. ಇವರೆಲ್ಲರೂ ನಾನಾ ಬಗೆಯ ಉದ್ಯೋಗಗಳಲ್ಲಿ ದುಡಿಯುತ್ತಿದ್ದಾರೆ. ಒಮ್ಮೆ ಚಾಕ್ರಿಯ ನೊಗಕ್ಕೆ ಗೋಣು ಕೊಟ್ಟರೆ ಅದರಿಂದ ಯಾವತ್ತೂ ಬಿಡುಗಡೆ ಎಂಬುದು ಸಿಗುವುದೇ ಇಲ್ಲ. ಸಮಸ್ಯಾತ್ಮಕ ಬಾಲ್ಯದ ಕತೆ ಜೀವನದುದ್ದಕ್ಕೂ ಹಿಂಬಾಲಿಸುತ್ತದೆ; ದುಃಸ್ವಪ್ನದಂತೆ ಕಾಡುತ್ತದೆ; ವೈಯಕ್ತಿಕ ಆಸೆ, ಅಭಿಲಾಷೆ, ಪ್ರತಿಭೆ- ಎಲ್ಲವೂ ಮುರುಟಿ ಹೋಗುತ್ತದೆ - ಇದು ಮಕ್ಕಳ ಲೋಕದ ಒಂದು ಮುಖ. ಇನ್ನು ನಮ್ಮ ಕಾಲದ ಸಂಕೀರ್ಣ ಜೀವನ ಕ್ರಮ ಮಕ್ಕಳ ಮೇಲೆ ಮಾರಕ ಪರಿಣಾಮ ಬೀರಿದೆ. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಿರುವ ಪೋಷಕರು ಮಕ್ಕಳನ್ನು ಅಹೋರಾತ್ರಿ ‘ಪಾಠದ ದುಡಿಮೆ’ಗೆ ಹಚ್ಚುತ್ತಾರೆ. ಪಾಲಕರ ಹಂಬಲ, ಆಶಯಕ್ಕೆ ತಕ್ಕಂತೆ ಶಾಲೆಗಳು ಕೂಡ ಮಕ್ಕಳನ್ನು ಅಂಕಗಳ ಗುರಿಯತ್ತ ಓಡಿಸುತ್ತಿವೆ. ನಲಿ -ಕಲಿ ಎಂಬ ಘೋಷಣೆ ಇದ್ದರೂ ಅದನ್ನು ನಿತ್ಯವೂ ಅಣಕಿಸುವ ರೀತಿಯಲ್ಲಿ ಶಾಲೆಗಳ ವರ್ತನೆ ಇದೆ. ಯಾರಿಗೂ ಮಕ್ಕಳ ಬೇಕು, ಬೇಡಗಳ ಗೊಡವೆಯೇ ಇಲ್ಲ. ಡಾಕ್ಟರ್‌, ಎಂಜಿನಿಯರ್‌, ವಕೀಲ, ಅಧ್ಯಾಪಕರಾದವರು ತಮ್ಮ ಮಕ್ಕಳು ಕೂಡ ತಮ್ಮಂತೆ ಆಗಬೇಕು ಎಂದು ಹಂಬಲಿಸಿ ಅದಕ್ಕಾಗಿ ಯಮ ಸಾಹಸ ಮಾಡುತ್ತಿದ್ದಾರೆ. ಈ ‘ಪಡಿಯಚ್ಚು ಸಂಸ್ಕೃತಿ’ಯಿಂದ ನಿಜಕ್ಕೂ ಮಕ್ಕಳು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇವರೆಲ್ಲ ದುಡಿಮೆಯ ವ್ಯಾಪ್ತಿಯಿಂದ ಹೊರಗಿದ್ದರೂ ದುಡಿಮೆ ತರುವ ಒತ್ತಡ, ಕ್ಷೋಭೆ ಸೇರಿದಂತೆ ಎಲ್ಲ ಸಂಕಟಗಳಿಗೂ ಈಡಾಗುತ್ತಾರೆ. ಈ ವೈರುಧ್ಯವನ್ನು ಗಮನಿಸಲೇಬೇಕು. ಮಕ್ಕಳ ಕುರಿತು ನಮ್ಮ ಕಾಳಜಿ, ಬಾಲಕಾರ್ಮಿಕ ವಿರೋಧಿ ದಿನ(ಜೂನ್‌ 12)ದಲ್ಲಾಗಲಿ, ಮಕ್ಕಳ ದಿನಾಚರಣೆ (ನವೆಂಬರ್‌ 14)ಗೆ ಮಾತ್ರ ಸೀಮಿತವಾಗಬಾರದು. ಮಕ್ಕಳ ಹಕ್ಕುಗಳು ಅಕ್ಷರಶಃ ಜಾರಿಯಾಗಬೇಕು. ಇತ್ತೀಚೆಗೆ ಬಾಲ ದುಡಿಮೆ ನಿರ್ಬಂಧ ಕಾಯಿದೆಗೆ (2016) ಕೆಲವೊಂದು ತಿದ್ದುಪಡಿ ತರಲಾಗಿದೆ. 14ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ಯಾವುದೇ ಬಗೆಯ ಕೆಲಸಗಳಿಗೆ ತೊಡಗಿಸುವಂತಿಲ್ಲ ಎಂಬ ನಿಯಮದ ಜತೆ, ಕುಟುಂಬ ವ್ಯವಹಾರ- ಉದ್ದಿಮೆಯಂಥ ಘಟಕಗಳಲ್ಲೂ ಶಾಲೆ ಮುಗಿದ ನಂತರ ಕೇವಲ ಮೂರು ಗಂಟೆ ಮಾತ್ರ ಕೆಲಸದಲ್ಲಿ ತೊಡಗಿಸಬಹುದು- ಎಂದು ನಿರ್ದೇಶಿಸಲಾಗಿದೆ. ಇಂಥ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇದಲ್ಲದೆ ಶಿಶುಗಳ ಮೇಲೆ ಲೈಂಗಿಕ ದೌರ್ಜನ್ಯ, ಮಕ್ಕಳ ಕಳ್ಳಸಾಗಣೆಯಂಥ ಪಿಡುಗುಗಳನ್ನು ತೊಲಗಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳನ್ನು ಮಕ್ಕಳಂತೆ ಪರಿಭಾವಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕುಟುಂಬಗಳ ಪಾತ್ರ ಗುರುತರವಾದುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ