ಆ್ಯಪ್ನಗರ

ಕಾಂಗ್ರೆಸ್‌ ಅಸ್ಥಿರತೆಯ ಮೂಲದಲ್ಲಿದೆ ರಾಹುಲ್ ಅಧಿಪತ್ಯ

ಬೇರುಮಟ್ಟದಿಂದ ಬದಲಾವಣೆಯೇ ಕಾಂಗ್ರೆಸ್‌ಗೆ ಪರಿಹಾರ

Vijaya Karnataka 28 May 2019, 10:27 am
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ ದಾರುಣ ಸೋಲಿನ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆತಂಕ ಕವಿದಿರುವುದು ಸಹಜ. ಸೋಲಿನ ಬಳಿಕ ಕಾಂಗ್ರೆಸ್‌ನೊಳಗೆ ಒಂದು ಬಗೆಯ ಬದಲಾವಣೆಯ ಚಟುವಟಿಕೆಗಳು ಗರಿಗೆದರಿರುವುದು ನಿರೀಕ್ಷಿತ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಪ್ರಸ್ತಾಪವನ್ನು ಮಾಡಿದರು. ಅದನ್ನು ಪಕ್ಷದ ಕಾರ್ಯಕಾರಿ ಸಮಿತಿ ತಿರಸ್ಕರಿಸಿದ್ದು, ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಪಕ್ಷದ ಆಂತರಿಕ ಸಮಿತಿ ಸಭೆಯಲ್ಲಿ, ಕುಟುಂಬ ರಾಜಕಾರಣದತ್ತ ಒಲವು ತೋರಿದ್ದ ಕೆಲವು ಹಿರಿಯ ನಾಯಕರನ್ನು ರಾಹುಲ್‌ ತರಾಟೆಗೂ ತೆಗೆದುಕೊಂಡಿದ್ದಾರೆ. ಇತ್ತ ರಾಜ್ಯದಲ್ಲಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ಉಸ್ತುವಾರಿಯನ್ನು ವಹಿಸಲು ಚಿಂತಿಸಲಾಗುತ್ತಿದೆ; ಪಕ್ಷದ ನಾಯಕತ್ವದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳೂ ಇವೆ. ಕೊನೆಗೂ ಕಾಂಗ್ರೆಸ್‌ ಆಂತರಿಕ ಬದಲಾವಣೆಗೆ ಮುಂದಾಗಿರುವುದು ಒಳ್ಳೆಯದು; ಆದರೆ ಇದು ಸೋಲಿನ ಹಿನ್ನೆಲೆಯಲ್ಲಿ ನಡೆದ ತಕ್ಷಣದ ಪಲ್ಲಟಗಳಾಗಿರದೆ, ದೂರಗಾಮಿ ಚಿಂತನೆಯ ನಡೆಗಳಾಗಿರಬೇಕಷ್ಟೆ.
Vijaya Karnataka Web edit


ಶತಮಾನ ಕಂಡ ಪಕ್ಷವಾದ ಕಾಂಗ್ರೆಸ್‌ ಈಗ ಎಂಥ ಸ್ಥಿತಿಗಿಳಿದಿದೆ ಎಂದರೆ, ಸತತ ಎರಡನೇ ಅವಧಿಗೆ ಅಧಿಕೃತ ಪ್ರತಿಪಕ್ಷ ಸ್ಥಾನದಲ್ಲಿ ಕೂರುವ ಅರ್ಹತೆಯನ್ನೂ ಪಡೆದಿಲ್ಲ. ಲೋಕಸಭೆಯಲ್ಲಿರುವ ಇತರ ಪಕ್ಷಗಳೆಲ್ಲ ಪ್ರಾದೇಶಿಕ ಪಕ್ಷಗಳಾಗಿದ್ದು, ಯಾವುದರ ಸ್ಥಾನಬಲವೂ ಮೂವತ್ತನ್ನು ದಾಟಿಲ್ಲ. ಹೀಗಾಗಿ ಲೋಕಸಭೆಯಲ್ಲಿ ಒಂದು ಪ್ರಬಲವಾದ ಪ್ರತಿಪಕ್ಷವೇ ಇಲ್ಲದಂತಾಗಿದೆ. ಸ್ಥಿರ ಸರಕಾರಕ್ಕೆ ಅಗತ್ಯವಾದ ಸಾಕಷ್ಟು ಬಹುಮತದ ಆಡಳಿತ ಪಕ್ಷ ಹಾಗೂ ಅದರ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಪ್ರಬಲ ಪ್ರತಿಪಕ್ಷ- ಇವೆರಡೂ ಪ್ರಜಾಪ್ರಭುತ್ವದ ಜೀವಾಳ. ಒಟ್ಟಾರೆ ದೇಶದ ಜನತೆಯ ಆಶಯ- ಅಭಿವ್ಯಕ್ತಿಗಳಿಗೆ ದನಿ ನೀಡುವ ರಾಷ್ಟ್ರೀಯ ಪಕ್ಷಗಳು ಇಂದಿನ ಅಗತ್ಯವಾಗಿದ್ದು, ಅದನ್ನು ತಮ್ಮ ರಾಜ್ಯಗಳ ಹಿತಾಸಕ್ತಿಗೆ ಸೀಮಿತವಾದ ಪ್ರಾದೇಶಿಕ ಪಕ್ಷಗಳಿಂದ ನಿರೀಕ್ಷಿಸಲಾಗದು. ಅಮೆರಿಕದಂಥ ಮುಂದುವರಿದ ದೇಶಗಳ ರಾಜಕೀಯ ಆಗುಹೋಗುಗಳು ಇಂದು ದ್ವಿಪಕ್ಷ ವ್ಯವಸ್ಥೆಯ ಮೇಲೇ ನಿಂತಿದ್ದು, ಇದು ಸ್ಥಿರ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಗೆ ಪೂರಕ ಎಂಬುದು ದೃಢಪಟ್ಟಿದೆ.

ಸದ್ಯದ ಬಿಜೆಪಿಯ ಗೆಲುವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ದೃಢ ನಾಯಕತ್ವ ಹಾಗೂ ಸಕ್ರಿಯ ಕಾರ್ಯಕರ್ತರ ಗೆಲುವು ಎಂಬುದು ಗೋಚರವಾಗುತ್ತದೆ. ಆರೆಸ್ಸೆಸ್‌ ಮುಂತಾದ ಸಾಮಾಜಿಕ ಸೇವಾ ಸಂಘಟನೆಗಳಿಂದ ಆಗಮಿಸಿದ ಪರಿಣತ ಹಾಗೂ ಸಕ್ರಿಯ ಕಾರ್ಯಕರ್ತರು ಹಾಗೂ ನಾಯಕರು ಬಿಜೆಪಿಗೆ ಬಲ ತುಂಬಿದ್ದಾರೆ. ಸದ್ಯ ಕಾಂಗ್ರೆಸ್‌ನಲ್ಲಿ ಗಟ್ಟಿಯಾದ ನಾಯಕರು ಹಾಗೂ ಪ್ರಬಲವಾದ ಕಾರ್ಯಕರ್ತರ ಪಡೆಯ ಕೊರತೆಯಿದೆ. ಈ ಅನಾಯಕ ಪರಿಸ್ಥಿತಿಯನ್ನು ಕೇಂದ್ರದಲ್ಲೂ ರಾಜ್ಯಗಳಲ್ಲೂ ಮೀರಲು ಅದು ಪರಿಶ್ರಮಿಸಬೇಕಿದೆ. ವರ್ಷಗಳ ಹಿಂದೆ ಕಾಂಗ್ರೆಸ್‌ನಲ್ಲಿ ಸ್ವಾತಂತ್ರ್ಯಹೋರಾಟ, ಜೆಪಿ, ವಿನೋಬಾ ಮುಂತಾದವರ ಚಳವಳಿಗಳ ಹಿನ್ನೆಲೆಯಿಂದ ಬಂದ, ಜನಮತವನ್ನು ಅರ್ಥ ಮಾಡಿಕೊಳ್ಳಬಲ್ಲ ನಾಯಕರು ಸಕ್ರಿಯರಾಗಿದ್ದರು. ಕಾಂಗ್ರೆಸ್‌ನಲ್ಲೂ ಅಂಗ ಸಂಘಟನೆಗಳು ಇವೆಯಾದರೂ ಅವು ಸಕ್ರಿಯವಾಗಿಲ್ಲ.

ಮುಖ್ಯವಾಗಿ, ದೇಶದ ಮತದಾರ, ಕಾಂಗ್ರೆಸ್‌ನ ಕುಟುಂಬ ರಾಜಕಾರಣ, ಪಾಳೇಗಾರಿಕೆ ಪ್ರವೃತ್ತಿ ಹಾಗೂ ಸೈದ್ಧಾಂತಿಕ ಗೊಂದಲವನ್ನು ತಿರಸ್ಕರಿಸಿದ್ದಾನೆ. ಕಾಂಗ್ರೆಸ್‌ನ ಹಿರಿಯ ನಾಯಕರು ಹೊಸ, ಉಜ್ವಲ ಚಿಂತನೆಗಳ ಯುವನಾಯಕರಿಗೆ ಆಸ್ಪದ ನೀಡದೆ ಇರುವುದರಿಂದ ಇಲ್ಲಿ ಹೊಸ ಚಿಂತನೆಗಳು ಮೊಳೆಯುವುದು ಅಸಾಧ್ಯವಾಗಿದೆ. ಹೀಗಾಗಿ ಜನತೆಯನ್ನು ತಲುಪುವುದೂ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ. ಸೆಕ್ಯುಲರ್‌ ಚಿಂತನೆಯನ್ನು ತನ್ನ ಸಿದ್ಧಾಂತವೆಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತದಾದರೂ ಸಾಫ್ಟ್‌ ಹಿಂದುತ್ವವನ್ನೂ ಈ ಬಾರಿ ಪ್ರಯತ್ನಿಸಿದೆ; ಹೀಗಾಗಿ ತನ್ನ ನಿಲುವೇನು ಎಂಬ ಬಗ್ಗೆ ಗೊಂದಲ ಪಕ್ಷದೊಳಗೆ ಇದ್ದಂತಿದೆ. ಈ ಬಾರಿಯ ಚುನಾವಣೆ ಅಭಿವೃದ್ಧಿ ಕೇಂದ್ರಿತವಾಗಿ ನಡೆದಿದ್ದು, ಇತರ ಯಾವುದೇ ಜಾತಿ- ಧರ್ಮ ಧ್ರುವೀಕರಣಗಳು ಇಲ್ಲಿ ಕೆಲಸ ಮಾಡಿಲ್ಲವೆಂಬುದನ್ನೂ ಕಾಂಗ್ರೆಸ್‌ ಗಮನಿಸಬೇಕು. ಎಂದರೆ ಪ್ರಗತಿಯ ಕಡೆಗೆ ನಡೆಯುವ ಸ್ಥಿರ ನಾಯಕತ್ವವನ್ನು ಜನತೆ ಅಪೇಕ್ಷಿಸಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ತನ್ನನ್ನು ಬೇರುಮಟ್ಟದಿಂದ ಪುನಶ್ಚೇತನ ಮಾಡಿಕೊಳ್ಳದೆ ಗತ್ಯಂತರವಿಲ್ಲ. ಈ ನಿಟ್ಟಿನಲ್ಲಿ ಚಿಂತನ- ಮಂಥನ ನಡೆಯಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ