ಆ್ಯಪ್ನಗರ

ಕಟ್ಟಡ ಕಾರ್ಮಿಕರನ್ನು 'ಬಂಧು' ಎಂದರೆ ಸಾಲದು

ಕಟ್ಟಡ ಕಾರ್ಮಿಕರನ್ನು 'ಬಂಧು' ಎಂದರೆ ಸಾಲದು ರಿಯಲ್‌ ಎಸ್ಟೇಟ್‌ ತೇಜಿಯಿಂದ ಎಲ್ಲೆಡೆ ಕಟ್ಟಡ ಕಾಮಗಾರಿಗಳು ಭರದಿಂದ ಸಾಗುತ್ತಿವೆ...

Vijaya Karnataka Web 27 Dec 2017, 5:04 am

ರಿಯಲ್‌ ಎಸ್ಟೇಟ್‌ ತೇಜಿಯಿಂದ ಎಲ್ಲೆಡೆ ಕಟ್ಟಡ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ನಗರಗಳಲ್ಲಷ್ಟೇ ಅಲ್ಲ ಸಣ್ಣಪುಟ್ಟ ಪಟ್ಟಣಗಳಲ್ಲೂ ಗಗನಚುಂಬಿಗಳು ಎದ್ದು ನಿಲ್ಲುತ್ತಿವೆ. ಆದರೆ ದೊಡ್ಡ ಕಟ್ಟಡಗಳ ಪಕ್ಕದಲ್ಲಿ ತಗಡಿನ ಗುಡಿಸಿಲುಗಳನ್ನು ನಿರ್ಮಿಸಿಕೊಂಡು ಭವ್ಯ ಸೌಧಗಳನ್ನು ಕಟ್ಟುವ ಕಟ್ಟಡ ಕಾರ್ಮಿಕರ ಕಡೆ ಯಾರ ಗಮನವೂ ಹೋಗುವುದಿಲ್ಲ. ಇವರ ಕಲ್ಯಾಣಕ್ಕೆ ಸರಕಾರದ ಯೋಜನೆಯೊಂದು ಹೆಸರಿಗೆ 'ಭರ್ಜರಿ'ಯಾಗಿದೆ. ಆದರೆ ಜಾರಿ ಮಾತ್ರ ಶೋಚನೀಯವಾಗಿದೆ.

ಹೊಸ ಕಟ್ಟಡವೊಂದು ಕಟ್ಟುವ ಸಂದರ್ಭದಲ್ಲಿ ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರು ಮೇಲ್ತೆರಿಗೆ(ಸೆಸ್‌) ಪಾವತಿಸಬೇಕು. ಈ ಹಣವನ್ನು ಕಾರ್ಮಿಕರ ಅಭ್ಯುದಯಕ್ಕೆ ಬಳಸಬೇಕು. ಇಂಥ ಯೋಜನೆ ಜಾರಿಗೆ ಬಂದು ದಶಕವೇ ಕಳೆದಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. 2007ರಿಂದ 2017ರ ವರೆಗೆ ಹೀಗೆ ಸಂಗ್ರಹವಾದ ಮೊತ್ತ 7 ಸಾವಿರ ಕೋಟಿ ರೂ. ವಾರ್ಷಿಕ ಬಡ್ಡಿಯ ಮೊತ್ತ 600 ಕೋಟಿ. ಆದರೆ ಇಷ್ಟೊಂದು ಭಾರಿ ಹಣ ಖರ್ಚಾಗದೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೊಳೆಯುತ್ತಿದೆ. ಹತ್ತು ವರ್ಷಗಳಲ್ಲಿ ಖರ್ಚು ಮಾಡಿರುವ 223 ಕೋಟಿ. ಇದು ಒಟ್ಟು ನಿಧಿಯಲ್ಲಿ ಶೇ. 5ಕ್ಕಿಂತ ಕಡಿಮೆ. ಹಣವಿದೆ ಆದರೆ ಅದನ್ನು ಪಡೆದುಕೊಳ್ಳುವವರೇ ಇಲ್ಲ ! ಇದರ ಅರ್ಥ ಕಟ್ಟಡ ಕಾರ್ಮಿಕರು ತುಂಬ ಸ್ಥಿತಿವಂತರಾಗಿದ್ದಾರೆ ಎಂದೇನೂ ಅಲ್ಲ.

Vijaya Karnataka Web construction workers
ಕಟ್ಟಡ ಕಾರ್ಮಿಕರನ್ನು 'ಬಂಧು' ಎಂದರೆ ಸಾಲದು

ಕಾರ್ಮಿಕ ಇಲಾಖೆಯ ಜಡತೆಯಿಂದ ಜನೋಪಯೋಗಿ ಯೋಜನೆಯೊಂದು ನಿಷ್ಫಲವಾಗಿದೆ. ಒಂದು ಅಂದಾಜಿನ ಪ್ರಕಾರ 20 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದು, 12 ಲಕ್ಷ ಕಾರ್ಮಿಕರು ಮಾತ್ರ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈಗ ನೋಂದಣಿ ಮಾಡಿಸುವ ಸಲುವಾಗಿಯೇ ಇಲಾಖೆಯು 'ಕಾರ್ಮಿಕ ಬಂಧು' ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ನೋಂದಣಿಯದು ಒಂದು ಸಮಸ್ಯೆ. ಇದಕ್ಕಾಗಿ ಈ ಮಾರ್ಗೋಪಾಯವನ್ನು ಕಂಡುಕೊಳ್ಳಲಾಗಿದೆ. ಆದರೆ ಇಷ್ಟು ವರ್ಷ ನೋಂದಣಿ ಮಾಡಿಸಿಕೊಂಡವರಿಗೆ ಮಂಡಳಿ ಏನು ಮಾಡಿದೆ ಎಂಬುದು 'ಶೇಷ' ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ.
12 ಲಕ್ಷ ಕಾರ್ಮಿಕ ಕುಟುಂಬಗಳ ಬವಣೆಗಳಿಗೆ ಸ್ಪಂದಿಸಿದ್ದರೆ ಇಷ್ಟೊಂದು ಭಾರಿ ಮೊತ್ತ ಉಳಿಕೆಯೇ ಆಗುತ್ತಿರಲಿಲ್ಲ. ಇಲ್ಲಿ ಆಡಳಿತ ಶಾಹಿಯ ವೈಫಲ್ಯ ಎದ್ದು ಕಾಣುತ್ತದೆ.
ಕಾರ್ಮಿಕ ಕಲ್ಯಾಣವೆಂದರೆ ಅವರ ಕುಟುಂಬಗಳಿಗೆ ವಿದ್ಯಾಭ್ಯಾಸ, ತರಬೇತಿಗೆ ಹಣಕಾಸು ನೆರವು ನೀಡುವುದು, ಅಪಘಾತ ಪರಿಹಾರ, ವಾರ್ಷಿಕ ಪಿಂಚಣಿ, ಕಾರ್ಮಿಕರು ಮದುವೆ ಮಾಡಿಕೊಂಡರೆ ಸಹಾಯ ಧನ- ಇತ್ಯಾದಿ ಈ ಯೋಜನೆಯ ತಿರುಳು. ಈ ಪಟ್ಟಿಗೆ ಇನ್ನೂ ಹಲವು ಸೌಲಭ್ಯಗಳನ್ನು ಸೇರಿಸಿಕೊಳ್ಳಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ ಈಗಿರುವ ನಿಧಿಯನ್ನು ಹಣಕಾಸು ಕೊರತೆ ಇರುವ ಯೋಜನೆಗಳಿಗೆ ಬಳಸಿಕೊಳ್ಳಲು ಸರಕಾರ ಆಲೋಚಿಸುತ್ತಿದೆ. ಖಂಡಿತ ಇದು ಅನಪೇಕ್ಷಣೀಯ.

ಕಟ್ಟಡ ಕಾರ್ಮಿಕರ ಪರಿಸ್ಥಿತಿ ಆಶಾದಾಯಕವಾಗಿಯೇನೂ ಇಲ್ಲ. ದೊಡ್ಡ ದೊಡ್ಡ ಮನೆ ಕಟ್ಟುವವರಿಗೆ ಸ್ವಂತ ಸೂರು ಇರುವುದಿಲ್ಲ. ಈಗಿರುವ ಯೋಜನೆಗೆ ಇನ್ನಷ್ಟು ಮೂಲ ಸೌಕರ್ಯದ ಅಂಶಗಳನ್ನು ಸೇರಿಸಿಕೊಳ್ಳಬೇಕು. ಇದಲ್ಲದೆ ಹಣಕಾಸು ನೆರವು ನೀಡುವ ನಿಯಮಾವಳಿಗಳು ಸರಳ ಹಾಗೂ ಪಾರದರ್ಶಕವಾಗಿರಬೇಕು. ಇದಲ್ಲದೆ ಮಂಡಳಿ ನೀಡುವ ಸಹಾಯಧನ ತಕ್ಷಣ ಸಂದಾಯವಾಗುವಂತಿರಬೇಕು.
ಒಂದು ವೇಳೆ ಇಂಥ ನೆರವು ದುರುಪಯೋಗವಾಗುತ್ತಿದೆ ಎಂದು ಕಂಡು ಬಂದರೆ ಸೂಕ್ತ ನಿಗಾ ವಹಿಸಬೇಕು. ಕಾರ್ಮಿಕ ಕಲ್ಯಾಣ ಎಂಬುದು ತಾನೇ ತಾನಾಗಿ ಆಗುವುದಿಲ್ಲ; ಇದಕ್ಕೆ ಸರಕಾರಿ ಸಿಬ್ಬಂದಿ ಕಾಳಜಿಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ಜನಪರ ಯೋಜನೆಗಳು ಇದ್ದೂ ಇಲ್ಲದಂತಾಗುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ