ಆ್ಯಪ್ನಗರ

ರಾಜಕೀಯ ಶುದ್ದೀಕರಣಕ್ಕೆ ದೃಢ ಹೆಜ್ಜೆ

ರೋಪ ಸಾಬೀತಾಗುವವರೆಗೂ ಯಾರೂ ಅಪರಾಧಿಗಳಲ್ಲ ನಿಜ. ಆದರೆ ರಾಜಕೀಯ ನಾಯಕರು ಅರೋಪ ಹೊತ್ತ ಕೂಡಲೇ ಎದುರಾಳಿಗಳು ಪ್ರತಿನಿತ್ಯ ಚಾರಿತ್ರ್ಯ ಹನನ ಮಾಡುತ್ತಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ಅವರನ್ನು ಅಪರಾಧಿಗಳು ಎಂಬಂತೆ ಬಿಂಬಿಸುತ್ತಾರೆ.

Vijaya Karnataka Web 14 Dec 2017, 5:04 am

ನಮ್ಮ ಶಾಸಕರು, ಸಂಸದರ ಮೇಲೆ ದೇಶದ ವಿವಿಧ ಕೋರ್ಟ್‌ಗಳಲ್ಲಿ 13, 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹತ್ತಾರು ವರ್ಷ ಹಳೆಯ ಪ್ರಕರಣಗಳ ಸಂಖ್ಯೆ ಕೂಡ ಗಮನಾರ್ಹವಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾ ಕಳೆದ ವರ್ಷವಷ್ಟೇ ಶಿಕ್ಷೆಗೆ ಗುರಿಯಾಗಿದ್ದರು.ಇದು 21 ವರ್ಷಗಳಷ್ಟು ಹಳೆಯ ಪ್ರಕರಣ. ಇದೇ ರೀತಿ ಜಯಂತಿ ನಟರಾಜನ್‌, ಕನಿಮೋಳಿ,ಎ. ರಾಜಾ, ಲಾಲೂ ಪ್ರಸಾದ್‌ ಯಾದವ್‌, ರಾಬ್ಡಿದೇವಿ, ತೇಜಸ್ವಿ ಯಾದವ್‌ ಮೊದಲಾದವರ ಮೇಲೆ ಹಲವು ಮೊಕದ್ದಮೆಗಳು ದಾಖಲಾಗಿವೆ. ಪ್ರತಿಯೊಂದು ರಾಜ್ಯದಲ್ಲೂ ಜನಪ್ರತಿನಿಧಿಗಳ ಮೇಲೆ ನೂರಾರು ಕೇಸ್‌ಗಳಿವೆ.

Vijaya Karnataka Web courts for netas
ರಾಜಕೀಯ ಶುದ್ದೀಕರಣಕ್ಕೆ ದೃಢ ಹೆಜ್ಜೆ

ನಮ್ಮನ್ನಾಳುವವರು ಪ್ರಾಮಾಣಿಕರು, ದಕ್ಷರು, ಶುದ್ಧ ಹಸ್ತರಾಗಿರಬೇಕೆಂದು ಜನತೆ ಬಯಸುತ್ತಾರೆ. ಆದರೆ ರಾಜಕೀಯ ಅಪರಾಧೀಕರಣವೆಂಬುದು ದಿನೇ ದಿನೇ ಹೆಚ್ಚುತ್ತಿದೆ. ಪಾತಕ ಚರಿತ್ರೆ ಇರುವವರು ಹೆಚ್ಚು ಹೆಚ್ಚು ರಾಜಕಾರಣಕ್ಕೆ ಪ್ರವೇಶಿಸುತ್ತಿದ್ದಾರೆ. ಇಂಥವರು ಶಾಸನಸಭೆಗಳಿಗೆ ಆಯ್ಕೆಯಾಗಿ ಬಂದರೆ ಅವರಿಗೆ ಜನಸೇವೆಗಿಂತ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹಾಗೂ ತಾವು ಗಳಿಸಿದ್ದನ್ನು ಉಳಿಸಿಕೊಳ್ಳುವುದೇ ದೊಡ್ಡ ಕಾರ್ಯವಾಗಿಬಿಡುತ್ತದೆ. ಇಂಥವರು ಅಧಿಕಾರವಿದ್ದರೆ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಹುದು ಎನ್ನುವ ಅಪಾಯಕಾರಿ ಧೋರಣೆಯನ್ನು ಪೋಷಿಸುತ್ತಾರೆ.

ಇದೀಗ ಕ್ರಿಮಿನಲ್‌ ರಾಜಕಾರಣಿಗಳ ಮೇಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರಕಾರ, ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ಉದ್ದೇಶಕ್ಕಾಗಿ 8 ಕೋಟಿ ರೂ. ಮೀಸಲಾಗಿಡಲಾಗಿದೆ ಎಂದು ಹೇಳಿದೆ. ಪ್ರತಿ ಕೋರ್ಟ್‌ ವರ್ಷವೊಂದರಲ್ಲಿ 1,125 ಮೊಕದ್ದಮೆಗಳನ್ನು ಇತ್ಯರ್ಥ ಪಡಿಸಲಿವೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಆರೋಪ, ಪ್ರತ್ಯಾರೋಪಗಳ ಆಡುಂಬೊಲವಾಗಿದೆ. ಸಾರ್ವಜನಿಕ ಜೀವನದಲ್ಲಿರುವವರ ಮೇಲೆ ಒಂದಲ್ಲ ಒಂದು ಕಳಂಕ, ಆರೋಪ ಹೊರಿಸುವ ಹಾಗೂ ಪ್ರಕರಣ ದಾಖಲಿಸುವ ಪ್ರವೃತ್ತಿ ಹೆಚ್ಚಿದೆ. ದಾಖಲಾದ ವ್ಯಾಜ್ಯಗಳೆಲ್ಲ ನೈಜವಾಗಿಯೇ ಇರುತ್ತದೆ ಎಂದೇನೂ ಅಲ್ಲ. ವಿಚಾರಣೆ ತ್ವರಿತವಾಗಿ ನಡೆದಾಗ ದೋಷಿಗಳಿಗೆ ಎಷ್ಟು ಬೇಗ ಶಿಕ್ಷೆಯಾಗುತ್ತದೆಯೋ ಅಷ್ಟೇ ವೇಗವಾಗಿ ನಿರ್ದೋಷಿಗಳು ಕಳಂಕ ಮುಕ್ತರಾಗುತ್ತಾರೆ. ವಿಳಂಬವಾಗಿ ಕೊಟ್ಟ ನ್ಯಾಯ, ನ್ಯಾಯವನ್ನೇ ನಿರಾಕರಿಸಿದಂತೆ.
ಆರೋಪ ಸಾಬೀತಾಗುವವರೆಗೂ ಯಾರೂ ಅಪರಾಧಿಗಳಲ್ಲ ನಿಜ. ಆದರೆ ರಾಜಕೀಯ ನಾಯಕರು ಅರೋಪ ಹೊತ್ತ ಕೂಡಲೇ ಎದುರಾಳಿಗಳು ಪ್ರತಿನಿತ್ಯ ಚಾರಿತ್ರ್ಯ ಹನನ ಮಾಡುತ್ತಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ಅವರನ್ನು ಅಪರಾಧಿಗಳು ಎಂಬಂತೆ ಬಿಂಬಿಸುತ್ತಾರೆ. ತೀರ್ಪುಗಳು ನಿರ್ದೋಷಿ ಎಂದು ಸಾರಿದಾಗಲೂ ಅದುವರೆಗೆ ಸಾಕಷ್ಟು ಹಾನಿಯಾಗಿರುತ್ತದೆ. ವಿಳಂಬಿತ ನ್ಯಾಯದಾನಕ್ಕೆ ಇಂಥ ಆಯಾಮಗಳೂ ಇವೆ ಎಂಬುದನ್ನು ಮರೆಯಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು, ಅಂಥವರನ್ನು ರಾಜಕೀಯದಿಂದಲೇ ದೂರವಿಡಬೇಕು ಎಂಬುದು ಎಷ್ಟು ಉಚಿತವೋ, ಕೇವಲ ಆರೋಪ ಹೊತ್ತ ಮಾತ್ರಕ್ಕೆ ಅವರನ್ನು ಅಪರಾಧಿಗಳಂತೆ ನೋಡುವುದು, ಕೋರ್ಟ್‌ಗಳ ಕೆಲಸವನ್ನು ಇನ್ಯಾರೋ ಕೈಗೆತ್ತಿಕೊಳ್ಳುವುದು ಕೂಡ ದೊಡ್ಡ ಪ್ರಮಾದ. ಇಂಥ ಹಾನಿಯನ್ನು ತ್ವರಿತ ನ್ಯಾಯಾಲಯಗಳು ಖಂಡಿತ ತಪ್ಪಿಸುತ್ತವೆ.

ಹಾಲಿ ಇರುವ ಕಾನೂನು ಎರಡು ಮತ್ತು ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾದವರನ್ನು ಆರು ವರ್ಷ ಮಾತ್ರ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುತ್ತದೆ. ಇಂಥವರಿಗೆ ಆಜೀವ ಪರ್ಯಂತ ನಿಷೇಧ ವಿಧಿಸಬೇಕು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.
ಚುನಾವಣೆ ಆಯೋಗ ಕೂಡ ಆಜೀವ ನಿಷೇಧದ ಪರ ನಿಲುವನ್ನು ಹೊಂದಿದೆ. ಜನತೆಯ ಹಂಬಲ ಕೂಡ ಇದೇ ಆಗಿದೆ, ಹೀಗಾಗಿ ಕೇಂದ್ರ ಸರಕಾರ, ವಿಶೇಷ ಕೋರ್ಟ್‌ಗಳ ಸ್ಥಾಪನೆಗೆ ಎಷ್ಟು ಕಾಳಜಿ ತೋರಿದೆಯೋ ಅಷ್ಟೇ ಕಾಳಜಿಯನ್ನು ಕ್ರಿಮಿನಲ್‌ಗಳು ರಾಜಕಾರಣ ಪ್ರವೇಶಿಸದಂತೆ ತಡೆಯಲು ತೋರಬೇಕು. ಇದಕ್ಕಾಗಿ ವಿಶೇಷ ಕಾಯಿದೆಯನ್ನು ರೂಪಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ