ಆ್ಯಪ್ನಗರ

ಓಖಿ ಸಂತ್ರಸ್ತರಿಗೆ ಆಸರೆ ಅಗತ್ಯ

ಒಂದೇ ಮಟ್ಟದ ತೀವ್ರತೆ ಇದ್ದ ನೈಸರ್ಗಿಕ ದುರಂತ ಎರಡು ರಾಜ್ಯಗಳಲ್ಲಿ ಉಂಟು ಮಾಡಿರುವ ಹಾನಿಯನ್ನು ಗಮನಿಸಿದಾಗ ಎಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರೋ ಅಲ್ಲಿ ಆದ ಆಸ್ತಿಪಾಸ್ತಿ ಮತ್ತು ಜೀವನಷ್ಟ ಕಡಿಮೆ ಪ್ರಮಾಣದ್ದಾದರೆ, ಎಲ್ಲಿ ಜಡತೆ ಮನೆ ಮಾಡಿತ್ತೋ ಅಲ್ಲಿ ಆಗಿರುವ ಹಾನಿ ತುಂಬ ತೀವ್ರ ಸ್ವರೂಪದ್ದಾಗಿದೆ

Vijaya Karnataka Web 20 Dec 2017, 5:04 am

ನವೆಂಬರ್‌ ಕೊನೆಯಲ್ಲಿ ಹಾಗೂ ಡಿಸೆಂಬರ್‌ ಮೊದಲ ವಾರದಲ್ಲಿ ಬೀಸಿದ ಓಖಿ ಚಂಡಮಾರುತ ತಮಿಳುನಾಡು ಮತ್ತು ಕೇರಳದ ಕರಾವಳಿಯಲ್ಲಿ ದೊಡ್ಡ ಅನಾಹುತವನ್ನೇ ಉಂಟು ಮಾಡಿತು. ಒಟ್ಟು 88 ಜನ ನೀರು ಪಾಲಾದರು. ನೂರಾರು ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಸಂತ್ರಸ್ತ ಕುಟುಂಬಗಳು ಈಗಲೂ ಸಾಗರದತ್ತ ಕಣ್ಣು ನೆಟ್ಟು ಕುಳಿತಿವೆ.

Vijaya Karnataka Web cyclone ockhi
ಓಖಿ ಸಂತ್ರಸ್ತರಿಗೆ ಆಸರೆ ಅಗತ್ಯ

ಕರಾವಳಿ ರಕ್ಷಣಾ ಪಡೆ, ವಾಯು ದಳ ಮತ್ತು ನೌಕಾದಳದ ಸಿಬ್ಬಂದಿ ದುರಂತ ನಡೆದು 20 ದಿನಗಳಾದರೂ ಇನ್ನೂ ಶೋಧ ಕಾರ್ಯ ನಡೆಸುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ನೊಂದ ಕುಟಂಬಗಳನ್ನು ಭೇಟಿ ಮಾಡಿ ಸಾಧ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಘೋಷಿಸಿದ್ದಾರೆ. '' ಇದೊಂದು ದುಃಖದ ಘಳಿಗೆ. ಈ ದುರಂತದ ಕುರಿತು ಭಾಷಣ ಮಾಡುವ ಸಮಯ ಇದಲ್ಲ. ನಿಮ್ಮ ನೋವಿನಲ್ಲಿ ಸಹಭಾಗಿಯಾಗಲು ಬಂದಿರುವೆ,'' ಎಂದು ಅವರು ಹೇಳಿದ್ದಾರೆ. ಹಿಮಾಚಲಪ್ರದೇಶ ಮತ್ತು ಗುಜರಾತ್‌ನಲ್ಲಿ ನಿಚ್ಚಳ ಬಹುಮತ ಗಳಿಸಿ ಸಂಭ್ರಮಾಚರಣೆಯಲ್ಲಿರುವಾಗ

ಮೋದಿ ಅವರು ಮೀನುಗಾರರ ಸಮುದಾಯದ ಕಷ್ಟಗಳಿಗೆ ಸ್ಪಂದಿಸಿದ್ದು ಗಮನಾರ್ಹ.

ಮಿನಿ ಸುನಾಮಿಯಂಥ ಈ ದುರಂತ ಹೇಗೆ ಸಂಭವಿಸಿತು? ಈ ಹಾನಿ ಪ್ರಮಾಣವನ್ನು ತಡೆಯುವ ಅವಕಾಶವಿತ್ತೇ? ಎಲ್ಲಿ ಲೋಪ ಸಂಭವಿಸಿತು ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ನೈಸರ್ಗಿಕ ಪ್ರಕೋಪವನ್ನು ಯಾರೊಬ್ಬರೂ ತಡೆಯಲು ಆಗುವುದಿಲ್ಲ ಎಂಬುದು ನಿಜ. ಆದರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಖಂಡಿತ ಹಾನಿ ಪ್ರಮಾಣವನ್ನು ತಗ್ಗಿಸಬಹುದು. ಆದರೆ ಆಡಳಿತಗಾರರ ಸಂವೇದನಾಶೂನ್ಯತೆ ಮತ್ತು ಅಧಿಕಾರಶಾಹಿಯ ಜಡತೆಯಿಂದ ಅಮಾಯಕ ಮೀನುಗಾರರು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಮ್ಮಲ್ಲಿ ಹವಾಮಾನ ವೈಪರೀತ್ಯದ ಬಗೆಗಾಗಲಿ, ಇಲ್ಲವೇ ಉಗ್ರರ ದಾಳಿ ವಿಷಯದಲ್ಲೇ ಆಗಲಿ ತಜ್ಞರು ನೀಡುವ ಎಚ್ಚರಿಕೆಯನ್ನು ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಓಖಿ ಚಂಡಮಾರುತದ ವಿಷಯದಲ್ಲಿ ಆಗಿದ್ದೂ ಇದೇ. ಓಖಿ ಚಂಡಮಾರುತ ಕೇರಳದ ದಕ್ಷಿಣ ಜಿಲ್ಲೆಗಳು ಹಾಗೂ ಲಕ್ಷ ದ್ವೀಪದ ಮಧ್ಯದಿಂದ ಹಾದು ಹೋಗುತ್ತದೆ. ಗಂಟೆಗೆ 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಮೀನುಗಾರಿಕೆಗೆ ಯಾರೂ ತೆರಳಬಾರದು ಎಂದು ಕೇಂದ್ರ ಹವಾಮಾನ ಇಲಾಖೆ ಎರಡು ದಿನಗಳ ಮುಂಚೆಯೇ ಮುನ್ಸೂಚನೆ ನೀಡಿತ್ತು. ಇದನ್ನು ತಮಿಳುನಾಡು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕನ್ಯಾಕುಮಾರಿಯಲ್ಲಿ ಮೀನುಗಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಹೀಗಾಗಿ ಇಲ್ಲಿ ಸಾವಿನ ಪ್ರಮಾಣ 18ಕ್ಕೆ ನಿಂತಿತು. ಆದರೆ ಕೇರಳದಲ್ಲಿ ಈ ಎಚ್ಚರಿಕೆಗೆ ಕವಡೆ ಕಿಮ್ಮತ್ತನ್ನೂ ಕೊಡಲಿಲ್ಲ. ಹೀಗಾಗಿ ಅಲ್ಲಿ 70ಕ್ಕೂ ಹೆಚ್ಚು ಮಂದಿ ಸತ್ತರು. ಕೋಟ್ಯಂತರ ರೂ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಯಿತು.

ಒಂದೇ ಮಟ್ಟದ ತೀವ್ರತೆ ಇದ್ದ ನೈಸರ್ಗಿಕ ದುರಂತ ಎರಡು ರಾಜ್ಯಗಳಲ್ಲಿ ಉಂಟು ಮಾಡಿರುವ ಹಾನಿಯನ್ನು ಗಮನಿಸಿದಾಗ ಎಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರೋ ಅಲ್ಲಿ ಆದ ಆಸ್ತಿಪಾಸ್ತಿ ಮತ್ತು ಜೀವನಷ್ಟ ಕಡಿಮೆ ಪ್ರಮಾಣದ್ದಾದರೆ, ಎಲ್ಲಿ ಜಡತೆ ಮನೆ ಮಾಡಿತ್ತೋ ಅಲ್ಲಿ ಆಗಿರುವ ಹಾನಿ ತುಂಬ ತೀವ್ರ ಸ್ವರೂಪದ್ದಾಗಿದೆ. ಸುನಾಮಿ ನಂತರ ಹವಾಮಾನ ಸೂಚನೆ, ಪ್ರಕೋಪ ನಿರ್ವಹಣೆಯಂಥ ಸಂಗತಿಗಳಲ್ಲಿ ದೊಡ್ಡ ಸುಧಾರಣೆಯಾಗಬೇಕಿತ್ತು ಆದರೆ ಅದು ಸೂಕ್ತರೀತಿಯಲ್ಲಿ ಆಗಿಲ್ಲ ಎಂಬುದಕ್ಕೆ ಓಖಿ ದುರಂತವೇ ಸಾಕ್ಷಿ.

ಇನ್ನಾದರೂ ಲಭ್ಯವಿರುವ ತಂತ್ರಜ್ಞಾನ, ಸಾಧನ ಸಲಕರಣೆ ಮತ್ತು ಮಾನವ ಸಂಪನ್ಮೂಲವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕಾಗಿದೆ. ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡುವ ಪ್ರವೃತ್ತಿಯನ್ನು ಬಿಡಬೇಕಾಗಿದೆ. ಪ್ರಕೋಪ ನಿರ್ವಹಣೆಗೆ ಕೇಂದ್ರ ಸರಕಾರ ದೊಡ್ಡ ಮಟ್ಟದಲ್ಲಿ ನೀಡಿರುವ ನೆರವನ್ನು ಉಭಯ ರಾಜ್ಯಗಳು ಯೋಗ್ಯವಾಗಿ ಬಳಸಿಕೊಳ್ಳಬೇಕು. ನೋವಿನಲ್ಲಿ ಮುಳುಗಿರುವವರಿಗೆ ಆಸರೆಯಾಗಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ