ಆ್ಯಪ್ನಗರ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿ

ದಿಲ್ಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್‌ ಸೋಮವಾರ ಅಂತಿಮ ತೀರ್ಪು ನೀಡಿದೆ.

Vijaya Karnataka 10 Jul 2018, 8:24 am
ದಿಲ್ಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್‌ ಸೋಮವಾರ ಅಂತಿಮ ತೀರ್ಪು ನೀಡಿದೆ. ಕೊನೆಯ ಹಂತದ ಕಾನೂನು ಹೋರಾಟದಲ್ಲೂ ಅಪರಾಧಿಗಳಿಗೆ ಶಿಕ್ಷೆ ಕಾಯಂ ಆಗಿರುವುದರಿಂದ ನ್ಯಾಯಾಂಗದ ಮೇಲೆ ನಾವಿಟ್ಟ ಭರವಸೆಗೆ ಪುಷ್ಟಿ ದೊರೆತಂತಾಗಿದೆ. ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದದ್ದು 2012ರಲ್ಲಿ; ಶೀಘ್ರ ಗತಿಯ ನ್ಯಾಯಾಲಯ ವಿಚಾರಣೆ ಪ್ರಕ್ರಿಯೆ ಕೂಡ ಅಪರಾಧಿಗಳಿಗೆ ಶಿಕ್ಷೆ ದೊರೆಯುವಂತಾಗಲು 6 ವರ್ಷಗಳನ್ನು ತೆಗೆದುಕೊಂಡಿದೆ. ಅಪರಾಧಿಗಳು ರಾಷ್ಟ್ರಪತಿಗಳ ಕ್ಷಮಾದಾನಕ್ಕೆ ಅರ್ಜಿ ಹಾಕುವುದು ನಿಸ್ಸಂಶಯ; ಹಾಗಾಗಿ ಗಲ್ಲು ಶಿಕ್ಷೆ ಇನ್ನೊಂದಷ್ಟು ಕಾಲ ಮುಂದೆ ಹೋದರೂ ಆಶ್ಚರ‍್ಯವಿಲ್ಲ. ಆದರೆ ಪ್ರಕರಣದ ಗಂಭೀರತೆ, ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲದ ಪಾತಕಿಗಳ ನಿಲುವು ಇವುಗಳನ್ನೆಲ್ಲ ಗಮನಿಸಿದಾಗ, ಗಲ್ಲು ಶಿಕ್ಷೆಯನ್ನು ಕ್ಷಿಪ್ರಗತಿಯಲ್ಲಿ ಜಾರಿಗೊಳಿಸಿದರೆ ಮಾತ್ರವೇ ನಿರ್ಭಯಾಳ ಸಾವಿಗೊಂದು ತಾರ್ಕಿಕ ಅಂತ್ಯ ಸಿಗುತ್ತದೆ. ಇದನ್ನು ಸರಕಾರ ಶೀಘ್ರವೇ ಆಗುಮಾಡಬೇಕು.
Vijaya Karnataka Web hang


ಮರಣದಂಡನೆ ಅಮಾನವೀಯ; ಆದ್ದರಿಂದ ಅದನ್ನು ರದ್ದು ಮಾಡಬೇಕು ಎಂಬ ವಾದ ಮೊದಲಿನಿಂದಲೂ ಇದೆ. ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಕೂಡ ಈ ವಾದ ಮೇಲೇಳಬಹುದು; ಆದರೆ ಅದನ್ನು ಚರ್ಚಿಸುವುದಕ್ಕೂ ಪುರಸ್ಕರಿಸುವುದಕ್ಕೂ ಇದು ಸಮಯವಲ್ಲ. ಯಾಕೆಂದರೆ ಈ ಪ್ರಕರಣದಲ್ಲಿ ಪಾತಕಿಗಳು ತೋರಿಸಿದ ಅಮಾನವೀಯತೆ, ಕ್ರೌರ‍್ಯಗಳು ಊಹಿಸಲಸಾಧ್ಯವಾಗಿತ್ತು. ಇದರಲ್ಲಿ ಬಾಲಾಪರಾಧಿ ಎಂದು ಕರೆಸಿಕೊಂಡವನೇ ಅತ್ಯಧಿಕ ಕ್ರೌರ‍್ಯ ತೋರಿಸಿದ್ದು, ಬಾಲಾಪರಾಧದ ವ್ಯಾಖ್ಯೆಯನ್ನೇ ಬದಲಿಸಬೇಕಾದ ಅಗತ್ಯವನ್ನು ತೋರಿಸಿತ್ತು. ಇಂಥ ಕೃತ್ಯಗಳಿಗೆ ಕಠಿಣ ಶಿಕ್ಷೆ ನೀಡಿ, ಈ ಬಗೆಯ ಹೀನಾಪರಾಧಕ್ಕೆ ಮುಂದಾಗುವವರಿಗೆ ಎಚ್ಚರಿಕೆಯ ಸಂದೇಶವನ್ನು ಸಾರಬೇಕಾದ ಅಗತ್ಯವನ್ನು ಈ ಘಟನೆ ಸಾರಿ ಹೇಳಿತ್ತು. ಹಾಗಾಗಿ ಮರಣದಂಡನೆ ವಿಧಿಸಿದ್ದು ಸೂಕ್ತವೇ ಆಗಿದೆ. ಈಗ ಮರಣದಂಡನೆ ಜಾರಿ ಮಾಡುವ ಮೂಲಕ ನ್ಯಾಯಿಕ ವ್ಯವಸ್ಥೆಯ ಮೇಲೆ ಎಲ್ಲರೂ ಇಟ್ಟಿರುವ ನಂಬಿಕೆಯನ್ನು ಪುರಸ್ಕರಿಸಬೇಕಿದೆ.

ಈ ಘಟನೆಯ ಬಳಿಕ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದು, ಲೈಂಗಿಕ ದೌರ್ಜನ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಿರುವ ರೀತಿ, ಅದನ್ನು ಶಿಕ್ಷೆಗೊಳಪಡಿಸಬೇಕಾದ ಕ್ರಮ- ಇವೆಲ್ಲವೂ ಚರ್ಚೆಯಾದವು. ಇಡೀ ದೇಶವೇ ಒಗ್ಗಟ್ಟಾಗಿ, ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇತ್ತೀಚಿನ ವರ್ಷಗಳಲ್ಲಂತೂ ಅಭೂತಪೂರ್ವವಾಗಿತ್ತು. ದೇಶವಿದೇಶದ ಪ್ರಜ್ಞಾವಂತರು ಇದಕ್ಕೆ ಸ್ಪಂದಿಸಿದ್ದರು. ಅದೇ ವೇಳೆ ಲೈಂಗಿಕ ಅಪರಾಧ ಪ್ರಕರಣಗಳ ತನಿಖೆ- ವಿಚಾರಣೆ- ದಂಡನೆಯ ಬಗ್ಗೆ ದೇಶಾದ್ಯಂತ ವ್ಯಾಪಕವಾದ ಚರ್ಚೆ ನಡೆದು, 2013ರಲ್ಲಿ ಕಾನೂನು ತಿದ್ದುಪಡಿಯಾಯಿತು; ಸಾಮೂಹಿಕ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ಸೇರಿದಂತೆ, ದಂಡನೆಗಳನ್ನು ಹೆಚ್ಚು ಕಠಿಣಗೊಳಿಸಲಾಯಿತು. ಆದರೆ, ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ಕಠುವಾ, ಉನ್ನಾವೋಗಳಲ್ಲಿ ನಡೆದಂಥ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂದರೆ, ಶಿಕ್ಷೆಯ ಭಯವೂ ಪೂರ್ತಿ ಪರಿಣಾಮಕಾರಿಯಲ್ಲ. ಜನಜಾಗೃತಿ, ಶಿಕ್ಷಣಗಳೇ ಇದಕ್ಕೆ ಮದ್ದು. ಅತ್ಯಾಚಾರ ಮನೋಭಾವ ಎಲ್ಲಿಂದ ಹುಟ್ಟುತ್ತದೆ, ಹೇಗೆ ಬೆಳೆಯುತ್ತದೆ ಮತ್ತು ಎಲ್ಲಿ ವ್ಯಕ್ತವಾಗುತ್ತದೆ ಎಂಬುದನ್ನು ಗುರುತಿಸಿ, ಆ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಕ್ಕಳನ್ನು ಅತ್ಯಾಚಾರಿಗಳಾಗದಂತೆ ಹಾಗೂ ಬಲಿಪಶುಗಳಾಗದಂತೆ ಬೆಳೆಸುವುದು ಇಂದಿನ ತುರ್ತು. ಲೈಂಗಿಕ ಪೀಡನೆಗೆ ತುತ್ತಾಗುತ್ತಿರುವವರು ದೂರು ದಾಖಲಿಸಲು ಮೊದಲಿನಂತೆ ಅಂಜಿಕೊಳ್ಳುತ್ತಿಲ್ಲ; ಅದು ಸಕಾರಾತ್ಮಕ ಬೆಳವಣಿಗೆ. ಅಂದರೆ ಸಂತ್ರಸ್ತರು ದೂರು ಕೊಡಲು ಅಂಜುತ್ತಿಲ್ಲ. ಆದರೆ ಅದೇ ಗತಿಯಲ್ಲಿ ಶಿಕ್ಷೆಯ ಪ್ರಮಾಣ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ಗಳು ದುಡಿಯಬೇಕು. ದಿಲ್ಲಿ ಪ್ರಕರಣದ ಇನ್ನೊಂದು ಫಲಿತಾಂಶ, ಅತ್ಯಾಚಾರ ಪ್ರಕರಣಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ನಾನಾ ಕ್ರಮಗಳನ್ನು ಕೈಗೊಳ್ಳಲು ಸ್ಥಾಪನೆಯಾದ ನಿರ್ಭಯಾ ನಿಧಿ; ಆದರೆ ಅದು ಕೂಡ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ನಿಧಿಯ ಸೂಕ್ತ ಬಳಕೆಯೂ ಆಗಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ