ಆ್ಯಪ್ನಗರ

ಜಾಧವ್‌ ಗಲ್ಲು ಶಿಕ್ಷೆ ರದ್ದು

ಭಾರತಕ್ಕೆ ಐಸಿಜೆಯಲ್ಲಿ ರಾಜತಾಂತ್ರಿಕ ಗೆಲವು

Vijaya Karnataka Web 18 Jul 2019, 5:00 am
ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ನೌಕಾದಳದ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ವಿಧಿಸಿದ ಶಿಕ್ಷೆಯನ್ನು ಪಾಕಿಸ್ತಾನ ರದ್ದುಪಡಿಸಿ, ಸೂಕ್ತ ಕಾನೂನು ನೆರವಿನೊಂದಿಗೆ ಮರುಪರಿಶೀಲಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಮಂಡಳಿ (ಐಸಿಜೆ) ತೀರ್ಪು ನೀಡಿದೆ. ಹಲವು ವರ್ಷಗಳಿಂದ ನ್ಯಾಯವಂಚಿತರಾಗಿ ಪಾಕ್‌ ಜೈಲಿನಲ್ಲಿ ಕೊಳೆಯುತ್ತಿರುವ ಜಾಧವ್‌ ಅವರ ಪರ ಭಾರತ ನಡೆಸುತ್ತಿರುವ ರಾಜತಾಂತ್ರಿಕ ಹೋರಾಟಕ್ಕೆ ಇದರಿಂದ ದೊಡ್ಡದೊಂದು ವಿಜಯ ಸಿಕ್ಕಂತಾಗಿದೆ.
Vijaya Karnataka Web edit


2016ರಲ್ಲಿ ಕುಲಭೂಷಣ್‌ ಜಾಧವ್‌ ಅವರನ್ನು ಪಾಕಿಸ್ತಾನ ಅಕ್ರಮವಾಗಿ ಬಂಧಿಸಿತ್ತು. ಬಲೂಚಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾಗ ಜಾಧವ್‌ ಅವರನ್ನು ಬಂಧಿಸಿದ್ದಾಗಿ ಪಾಕ್‌ ಹೇಳಿಕೊಂಡಿತ್ತು.ಆದರೆ, ನೌಕಾದಳದಿಂದ ನಿವೃತ್ತರಾದ ಬಳಿಕ ಉದ್ಯಮ ನಿಮಿತ್ತ ಇರಾನ್‌ಗೆ ತೆರಳಿದ್ದ ಅವರನ್ನು ಇರಾನ್‌ನ ಚಾಬಹಾರ್‌ನಲ್ಲಿ ಜೈಷ್‌-ವುಲ್‌-ಅಬ್ದುಲ್‌ ಎಂಬ ಉಗ್ರಗಾಮಿ ಸಂಘಟನೆಯ ಶಸ್ತ್ರಸಜ್ಜಿತ ಉಗ್ರರು ಅಪಹರಿಸಿ, ಪಾಕಿಸ್ತಾನಕ್ಕೆ ಕರೆತಂದು, ಅಲ್ಲಿನ ಗೂಢಚರ ಸಂಸ್ಥೆ ಐಎಸ್‌ಐ ವಶಕ್ಕೆ ಒಪ್ಪಿಸಿದ್ದರು. ಐಎಸ್‌ಐ ಆಣತಿಯಂತೆಯೇ ಜಾಧವ್‌ ಅವರ ಅಪಹರಣ ನಡೆದಿತ್ತು ಎಂಬುದಕ್ಕೆ ಈಗ ಸಾಕ್ಷ್ಯಗಳು ಲಭ್ಯವಾಗಿವೆ. ಆ ಬಳಿಕ ಜಾಧವ್‌ ಅವರ ವಿರುದ್ಧ ಸುಳ್ಳು ಬೇಹುಗಾರಿಕೆ ಪ್ರಕರಣಗಳನ್ನು ಪಾಕಿಸ್ತಾನ ದಾಖಲಿಸಿ, ಮಿಲಿಟರಿ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ ನಾಟಕವಾಡಿ, 2017ರಲ್ಲಿ ಮರಣದಂಡನೆ ವಿಧಿಸಿತ್ತು. ಇದನ್ನು ಭಾರತ ತೀವ್ರವಾಗಿ ವಿರೋಧಿಸಿದ್ದೂ ಅಲ್ಲದೆ, ಪಾಕ್‌ ವರ್ತನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಜಾಧವ್‌ಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಸೂಕ್ತ ಕಾನೂನು ನೆರವನ್ನು ಒದಗಿಸುವ ಭಾರತದ ಪ್ರಯತ್ನವನ್ನು ಕೂಡ ಪಾಕ್‌ ಪುರಸ್ಕರಿಸಿರಲಿಲ್ಲ. 2017ರ ಮೇ ತಿಂಗಳಿನಲ್ಲಿ, ಜಾಧವ್‌ ಶಿಕ್ಷೆಯನ್ನು ತಡೆಯಲು ಕೋರಿ ಭಾರತ ಐಸಿಜೆ ಮೊರೆ ಹೋಗಿತ್ತು. ಅಂತಾರಾಷ್ಟ್ರೀಯ ಕೈದಿಗಳ ವಿಚಾರದಲ್ಲಿ ನಡೆದುಕೊಳ್ಳಬೇಕಾದ ರೀತಿಯಲ್ಲಿ ಪಾಕಿಸ್ತಾನ ನಡೆದುಕೊಳ್ಳದೆ, ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ; ಜಾಧವ್‌ರ ಭೇಟಿಗೆ ಭಾರತದ ರಾಯಭಾರಿ ಅಥವಾ ಪ್ರತಿನಿಧಿಗೆ ಅವಕಾಶ ಹಾಗೂ ಕಾನೂನು ನೆರವನ್ನು ಪಾಕ್‌ ನಿರಾಕರಿಸಿದೆ ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ. ಭಾರತದ ದೂರನ್ನು ಪುರಸ್ಕರಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಸೂಕ್ತ ತೀರ್ಪು ನೀಡಿದೆ.

ಈ ತೀರ್ಪು ಅನೇಕ ಬಗೆಯಲ್ಲಿ ಮುಖ್ಯವಾಗುತ್ತದೆ. ಭಾರತದ ನಿಲುವು ಸರಿ ಎಂದು ಐಸಿಜೆ ಒಪ್ಪಿರುವುದರಿಂದ, ಅಂತಾರಾಷ್ಟ್ರೀಯ ಕೈದಿಗಳ ವಿಚಾರದಲ್ಲಿ ಪಾಕಿಸ್ತಾನ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂಬುದನ್ನು ಖಚಿತವಾಗಿ ಹೇಳಿದಂತಾಗಿದೆ; ಇದು ಪಾಕಿಸ್ತಾನಕ್ಕೆ ಆದ ಮುಖಭಂಗ. ನೂರಾರು ಬಾರಿ ಜಾಧವ್‌ಗೆ ಕಾನೂನು ನೆರವು, ಪ್ರತಿನಿಧಿ ಭೇಟಿಗೆ ಭಾರತ ಸಲ್ಲಿಸಿದ ಮನವಿಗಳನ್ನು ಪಾಕ್‌ ತಳ್ಳಿಹಾಕಿರುವುದು, ವಿಯೆನ್ನಾ ಒಪ್ಪಂದದ ಪ್ರಕಾರ ಪಾಕಿಸ್ತಾನ ನಡೆದುಕೊಳ್ಳುತ್ತಿಲ್ಲ ಎಂಬುದನ್ನು ಬಹಿರಂಗಪಡಿಸಿದೆ ಮಾತ್ರವಲ್ಲ; ಕೈದಿಗಳ ಬಗ್ಗೆ ಮಾನವೀಯ ನಿಲುವು ಕೂಡ ಪಾಕ್‌ಗೆ ಇಲ್ಲ ಎಂಬುದನ್ನೂ ಕಾಣಿಸಿದೆ. ಒಂದು ಕಡೆ, ಭಾರತಕ್ಕೆ ವಿಚಾರಣೆಗೆ ಬೇಕಾದ ಮಾಸೂದ್‌ ಅಜರ್‌, ಹಫೀಜ್‌ ಸಯೀದ್‌ರಂಥವರನ್ನು ಎಷ್ಟೇ ಮನವಿ ಮಾಡಿದರೂ ಒಪ್ಪಿಸದೆ ಇರುವುದು; ಇನ್ನೊಂದು ಕಡೆ, ಅಮಾಯಕರಾದ ಭಾರತೀಯರನ್ನು ಬೇಹುಗಾರಿಕೆಯ ನೆಪ ಒಡ್ಡಿ ಬಂಧಿಸಿ ಶಿಕ್ಷೆಗೊಳಪಡಿಸುವುದು- ಇದು ಪಾಕಿಸ್ತಾನವು ಭಾರತದ ಮೇಲೆ ಸಾರಿರುವ ಛಾಯಾಸಮರವೇ ಸರಿ. ಇಂಥ ಮರೆಮೋಸದ ಸಮರಗಳನ್ನು ಸೂಕ್ತ ಅಂತಾರಾಷ್ಟ್ರೀಯ ವೇದಿಕೆಯಲ್ಲೇ ಭಾರತ ತಕ್ಕ ರೀತಿಯಲ್ಲಿ ಎದುರಿಸಿ ಜಯ ಸಾಧಿಸಿದೆ. ಮಾಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿರುವುದು, ಉಗ್ರ ಹಫೀಜ್‌ ಸಯೀದ್‌ನನ್ನು ಪಾಕ್‌ ಬಂಧಿಸುವಂತೆ ಒತ್ತಡ ಸೃಷ್ಟಿಸಿ ಸಫಲವಾಗಿರುವುದು ಇದಕ್ಕೆ ಉದಾಹರಣೆಗಳು. ಇವುಗಳಿಂದ ಪಾಕಿಸ್ತಾನ ಪಾಠ ಕಲಿಯಬೇಕು. ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ಇನ್ನೊಂದು ನೆಲೆಯಲ್ಲೂ ಅದಕ್ಕೆ ಮುಖಭಂಗವಾಗಿದೆ. ವ್ಯೂಹಾತ್ಮಕ ಹಾಗೂ ರಾಜತಾಂತ್ರಿಕ- ಎರಡೂ ಬಗೆಯಲ್ಲಿ ತನ್ನ ತಪ್ಪಿತಸ್ಥ ನೆಲೆಯನ್ನು ಜಾಗತಿಕ ಸಮುದಾಯದ ಮುಂದೆ ಪ್ರದರ್ಶನಕ್ಕೆ ಒಡ್ಡಿಕೊಂಡಿರುವ ಪಾಕಿಸ್ತಾನದಿಂದ ಭಾರತ ಸದ್ಯ ನಿರೀಕ್ಷಿಸುವುದು ಜಾಧವ್‌ ಪ್ರಕರಣದಲ್ಲಿ ನ್ಯಾಯಯತ ನಡೆಯನ್ನು. ಐಸಿಜೆ ನಿರ್ದೇಶಿಸಿರುವಂತೆ ಅದು ಜಾಧವ್‌ ಶಿಕ್ಷೆಯನ್ನು ರದ್ದುಪಡಿಸಿ, ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಇಲ್ಲವಾದರೆ ಇಂಥ ಇನ್ನಷ್ಟು ಇಂಥ ಮುಖಭಂಗಗಳನ್ನು ಎದುರಿಸಲು ಸಿದ್ಧವಾಗಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ