ಆ್ಯಪ್ನಗರ

ವಿದ್ಯಾರ್ಥಿಗಳಲ್ಲಿ ಡ್ರಗ್ಸ್‌ ವ್ಯಸನ ಆಘಾತಕಾರಿ

ಈ ಪಿಡುಗಿನ ತೀವ್ರತೆಯನ್ನು ಗಮನಿಸಿದರೆ ಇದನ್ನು ಮಟ್ಟ ಹಾಕಲು ನಮ್ಮಲ್ಲಿರುವ ವ್ಯವಸ್ಥೆ ಏನೇನೂ ಸಾಲದು. ಇಡೀ ಸಮಸ್ಯೆಗೆ ಬೇರೆ ಬೇರೆ ಆಯಾಮಗಳಿವೆ. ಹೀಗಾಗಿ ಪೊಲೀಸರು, ನಾಗರಿಕ ಸಂಘಟನೆಗಳು, ವೈದ್ಯಕೀಯ ಸಿಬ್ಬಂದಿ, ಪೋಷಕರು, ಶಿಕ್ಷಕರು ಎಲ್ಲರೂ ಇಡಿಯಾಗಿ ಹಾಗೂ ಬಿಡಿ ಬಿಡಿ ನೆಲೆಯಲ್ಲಿ ಕೆಲಸ ಮಾಡಬೇಕು.

Vijaya Karnataka Web 21 Dec 2017, 5:04 am

ಬೆಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಸೇವನೆ ಹೆಚ್ಚಿದೆ ಎನ್ನುವ ವರದಿಗಳಿದ್ದವು. ಆದರೆ ಇದು ರಾಜಧಾನಿಯ ಕೆಲ ಸರಕಾರಿ ಮತ್ತು ಖಾಸಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೂ ಧಾರಾಳವಾಗಿ ಸಿಗುತ್ತದೆ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಳೆದ ವಾರ 14ಕ್ಕೂ ಹೆಚ್ಚು ಶಾಲೆಗಳ ಮುಖ್ಯೋಪಾಧ್ಯಾಯರು ಮಕ್ಕಳ ಸಹಾಯವಾಣಿ ಹಾಗೂ ಸರಕಾರೇತರ ಸೇವಾ ಸಂಸ್ಥೆಯೊಂದಕ್ಕೆ ಕರೆ ಮಾಡಿ ವಿದ್ಯಾರ್ಥಿಗಳು ಗಾಂಜಾ ವ್ಯಸನಿಗಳಾಗಿರುವುದನ್ನು ತಿಳಿಸಿ ಸಹಾಯ ಹಸ್ತಚಾಚಲು ಕೋರಿದ್ದಾರೆ. ಪದೇಪದೆ ಗೈರುಹಾಜರಿ, ತರಗತಿಗಳಲ್ಲಿ ನಿದ್ರೆ, ಪಾಠ ಪ್ರವಚನಗಳಲ್ಲಿ ನಿರಾಸಕ್ತಿ, ಮಂಕುತನ ಹಾಗೂ ಒಂಟಿತನವನ್ನು ಅನುಭವಿಸುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸಿದ ಶಿಕ್ಷಕರು ವಿದ್ಯಾರ್ಥಿಗಳ ಚೀಲಗಳನ್ನು ತಪಾಸಣೆ ಮಾಡಿದಾಗ ಗಾಂಜಾ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಹೊರ ರಾಜ್ಯದಿಂದ ವಲಸೆ ಬಂದ ಹಾಗೂ ಬಡ ಹಾಗೂ ಹಿಂದುಳಿದ ವರ್ಗದ ಮಕ್ಕಳು ಹೆಚ್ಚು ವ್ಯಸನಿಗಳಾಗಿರುವುದರ ಕಡೆ ಶಿಕ್ಷಕರು ಗಮನ ಸೆಳೆದಿದ್ದಾರೆ.

ಎಲ್ಲರ ಜತೆ ಒಡನಾಡಿ, ಶಿಕ್ಷಣ ಪಡೆದು ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಸಂಪತ್ತಾಗಬೇಕಾಗಿದ್ದ ಹದಿಹರೆಯದ ಮಂದಿ, ಚಟದಾಸರಾಗಿ ತಮ್ಮ ಭವಿಷ್ಯಕ್ಕೇ ಸಂಚಕಾರ ತಂದುಕೊಳ್ಳುತ್ತಿರುವುದು ಆತಂಕಕಾರಿ. ಈ ಸಾಮಾಜಿಕ ಅಪವರ್ತನೆ ಅಪರಾಧ ಮನೋಸ್ಥಿತಿಗೆ ಹಾದಿ ಮಾಡಿಕೊಡುತ್ತದೆ. ಶಾಲೆ, ಕಾಲೇಜುಗಳಲ್ಲಿ ನಡೆಯುತ್ತಿರುವ ಗಂಭೀರ ಅಪರಾಧ ಪ್ರಕರಣಗಳನ್ನು ಈ ಹಿನ್ನೆಲೆಯಲ್ಲೇ ಅರ್ಥಮಾಡಿಕೊಳ್ಳಬೇಕಾಗಿದೆ.

Vijaya Karnataka Web drug addiction
ವಿದ್ಯಾರ್ಥಿಗಳಲ್ಲಿ ಡ್ರಗ್ಸ್‌ ವ್ಯಸನ ಆಘಾತಕಾರಿ

ಹೀಗಾಗಿ ಡ್ರಗ್ಸ್‌ ದಂಧೆಯನ್ನು ಶತಾಯ ಗತಾಯ ನಿರ್ಮೂಲನೆ ಮಾಡಲೇಬೇಕು. ಇತ್ತೀಚಿನ ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವಡೆ ದೊಡ್ಡ ಪ್ರಮಾಣದಲ್ಲಿ ಮಾದಕ ಪದಾರ್ಥಗಳನ್ನು ಜಫ್ತಿ ಮಾಡಿಕೊಳ್ಳಲಾಗಿದೆ. ಜೂನ್‌ನಲ್ಲಿ ಸುಮಾರು 25 ಕೋಟಿ ರೂ. ಮೌಲ್ಯದ 475 ಕೆ.ಜಿ. ಡ್ರಗ್ಸ್‌ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಕಳೆದ ತಿಂಗಳು ಸಿಸಿಬಿ ಪೊಲೀಸರು 5 ಕೆ.ಜಿ. ಗಾಂಜಾ ಜಫ್ತಿ ಮಾಡಿದ್ದಲ್ಲದೆ, ಶಾಲಾ, ಕಾಲೇಜು, ಬಾರ್‌ಗಳ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಕಳೆದ ಎರಡು ವರ್ಷಗಳಲ್ಲಿ ನಗರದ 13 ಪೊಲೀಸ್‌ ಠಾಣೆಗಳಲ್ಲಿ ಡ್ರಗ್ಸ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು 31 ಮಂದಿ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಕಳೆದ ಅಧಿವೇಶನದಲ್ಲಿ ಗೃಹ ಸಚಿವರು ತಿಳಿಸಿದ್ದರು.

ಈ ಅಂಕಿ ಅಂಶಗಳು ಸಮಸ್ಯೆಯ ತೀವ್ರತೆಯನ್ನು ಮನದಟ್ಟು ಮಾಡಿಕೊಡುತ್ತವೆ. ಇತ್ತೀಚಿನ ದಿನಗಳಲ್ಲಿ ನಗರದ ಒಳಗೆ ಹೊರಗೆ ನಾಯಿಕೊಡೆಗಳಂತೆ ಖಾಸಗಿ ಕಾಲೇಜುಗಳು ತಲೆಯೆತ್ತಿವೆ. ಇಲ್ಲಿ ಕಲಿಯಲು ನೂರಾರು ವಿದೇಶಿ ವಿದ್ಯಾರ್ಥಿಗಳು ಬರುತ್ತಾರೆ. ಹಲವು ಪ್ರಕರಣಗಳಲ್ಲಿ ಮಾದಕ ವಸ್ತುಗಳ ಸರಬರಾಜಿನಲ್ಲಿ ಈ ವಿದ್ಯಾರ್ಥಿಗಳ ಕೈವಾಡವಿರುವುದು ಸಾಬೀತಾಗಿದೆ. ಪಾಕ್‌, ಬರ್ಮಾ, ಮಲೇಷಿಯಾ, ಆಫ್ರಿಕಾದಿಂದ ಇಲ್ಲಿಗೆ ಮಾದಕ ವಸ್ತುಗಳು ಸರಬರಾಜಾಗುತ್ತಿದೆ. ಗಾಂಜಾಗೆ ಯಾವುದೇ ನಿಷೇಧವಿಲ್ಲದ ದೇಶಗಳಿಂದ ಎಲೆಗಳಷ್ಟೇ ಅಲ್ಲ ಬೀಜಗಳನ್ನೂ ಖರೀದಿಸಿ ತಂದು ಬೆಳೆಸುವ ಜಾಲಗಳಿವೆ.
ಈ ಪಿಡುಗಿನ ತೀವ್ರತೆಯನ್ನು ಗಮನಿಸಿದರೆ ಇದನ್ನು ಮಟ್ಟ ಹಾಕಲು ನಮ್ಮಲ್ಲಿರುವ ವ್ಯವಸ್ಥೆ ಏನೇನೂ ಸಾಲದು. ಇಡೀ ಸಮಸ್ಯೆಗೆ ಬೇರೆ ಬೇರೆ ಆಯಾಮಗಳಿವೆ. ಹೀಗಾಗಿ ಪೊಲೀಸರು, ನಾಗರಿಕ ಸಂಘಟನೆಗಳು, ವೈದ್ಯಕೀಯ ಸಿಬ್ಬಂದಿ, ಪೋಷಕರು, ಶಿಕ್ಷಕರು ಎಲ್ಲರೂ ಇಡಿಯಾಗಿ ಹಾಗೂ ಬಿಡಿ ಬಿಡಿ ನೆಲೆಯಲ್ಲಿ ಕೆಲಸ ಮಾಡಬೇಕು. ಇದಕ್ಕಾಗಿ ಬಹುಪಯೋಗಿ ಕಾರ್ಯತಂತ್ರವನ್ನು ಅನುಸರಿಸಬೇಕು. ಮಕ್ಕಳ ಒತ್ತಡವನ್ನು ನಿವಾರಿಸಿ ಅವರಿಗೆ ಭಾವನಾತ್ಮಕ ರಕ್ಷಣೆಯನ್ನು ಒದಗಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ