ಆ್ಯಪ್ನಗರ

ರೈತ ಹಿತಕ್ಕೆ ಬೇಕು ನೀತಿ

ಸಂಪಾದಕೀಯ ರೈತ ಹಿತಕ್ಕೆ ಬೇಕು ನೀತಿ ದೊಡ್ಡದೊಂದು ರೈತ ರಾರ‍ಯಲಿಗೆ ಮುಂಬಯಿ ನಗರ ಸೋಮವಾರ ಸಾಕ್ಷಿಯಾಯಿತು...

Vijaya Karnataka 14 Mar 2018, 11:29 am

ದೊಡ್ಡದೊಂದು ರೈತ ರಾರ‍ಯಲಿಗೆ ಮುಂಬಯಿ ನಗರ ಸೋಮವಾರ ಸಾಕ್ಷಿಯಾಯಿತು. ಮಹಾರಾಷ್ಟ್ರದ ನಾನಾ ಕಡೆಗಳ ರೈತರು ನಾಸಿಕ್‌ನಿಂದ ಮುಂಬಯಿಗೆ 180 ಕಿಲೋಮೀಟರ್‌ ಪಾದಯಾತ್ರೆ ಮಾಡಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು. ದೇಶದ ರೈತರನ್ನು ನೂರಾರು ಸಮಸ್ಯೆಗಳು ಕಾಡುತ್ತಿವೆಯಾದರೂ, ಮುಖ್ಯವಾಗಿ ಸಾಲ ಮನ್ನಾದಿಂದ ಹಿಡಿದು ನ್ಯಾಯೋಚಿತ ಬೆಂಬಲ ಬೆಲೆಯವರೆಗೆ ಕೆಲವೇ ಬೇಡಿಕೆಗಳನ್ನು ಅವರು ಸರಕಾರದ ಮುಂದೆ ಮಂಡಿಸಿದ್ದರು.

Vijaya Karnataka Web farmers mumbai rally
ರೈತ ಹಿತಕ್ಕೆ ಬೇಕು ನೀತಿ


ರೈತರ ಆಕ್ರೋಶವನ್ನು ಗ್ರಹಿಸಿದ ಮಹಾರಾಷ್ಟ್ರ ಸರಕಾರ ಕೂಡಲೇ ಬೇಡಿಕೆಗಳಿಗೆ ಸೈ ಎಂದಿದೆ. ಇದೊಂದು ಮಹತ್ವದ ವಿಜಯ. ರೈತ ಚಳವಳಿಗಳು ನಿಸ್ಸತ್ವವಾಗಿವೆ ಎಂದು ಭಾಸವಾಗುವ ಕಾಲದಲ್ಲಿ ಇಂಥದೊಂದು ಹೋರಾಟ ಭುಗಿಲೆದ್ದಿರುವುದು ಕುತೂಹಲಕಾರಿ; ಮಾತ್ರವಲ್ಲ, ಅದಕ್ಕೆ ನಗರದ ಜನತೆ ಪೂರಕವಾಗಿ ಸ್ಪಂದಿಸಿರುವುದು ಕೂಡ ನಮ್ಮ ದೇಶದ ಜನಸಾಮಾನ್ಯರ ಜಾಗೃತ ಅಂತಃಸ್ಸತ್ವದ ದೃಷ್ಟಾಂತ. ಸಾವಿರಗಟ್ಟಲೆ ಸಂಖ್ಯೆಯಲ್ಲಿ ರೈತರು ಸೇರಿದ್ದರೂ, ಅವರ ಮನದಲ್ಲಿ ತಮಗಾಗುತ್ತಿರುವ ಅನ್ಯಾಯದ ಕುರಿತು ಆಕ್ರೋಶವಿದ್ದರೂ, ಯಾವುದೇ ಗಲಭೆಗಳು ಏಳಲು ಅವಕಾಶ ಕೊಡದೆ ಶಾಂತಿಯುತವಾಗಿ, ವಿದ್ಯಾರ್ಥಿಗಳು ಓದುವ ಸಮಯದಲ್ಲಿ ತೊಂದರೆಯಾಗಬಾರದೆಂದು ರಾತ್ರಿಯ ವೇಳೆ ಪಾದಯಾತ್ರೆ ನಡೆಸಿದ್ದು ಕೂಡ ಐತಿಹಾಸಿಕ. ಇದನ್ನು ವ್ಯವಸ್ಥಿತವಾಗಿ ಸಂಘಟಿಸಿದ ಅಖಿಲ ಭಾರತ ಕಿಸಾನ್‌ ಸಭಾ ಸಾಧನೆ ಶ್ಲಾಘನೀಯ; ಹಾಗೆಯೇ ಇದನ್ನು ಗುರುತಿಸಿ ಕೃಷಿಕರ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಸರಕಾರದ ನಡೆ ಕೂಡ ವಿವೇಕಯುತವಾದುದು.

ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನಿಜ; ಆದರೆ ರೈತರ ಸಮಸ್ಯೆಗಳು ಕೇವಲ ಮಹಾರಾಷ್ಟ್ರಕ್ಕಷ್ಟೇ ಸಂಬಂಧಿಸಿದ್ದಲ್ಲ. ಅದು ದೇಶದುದ್ದಗಲಕ್ಕೂ ವ್ಯಾಪಿಸಿದೆ. ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು, ಸಾಲ ತೀರಿಸಲಾಗದೆ ನೊಂದವರ ಕೃತ್ಯಗಳಂತೆ ಮೇಲ್ನೋಟಕ್ಕೆ ಕಾಣಿಸುತ್ತವೆ. ಹೀಗಾಗಿ ರೈತ ಆತ್ಮಹತ್ಯೆಗಳು ನಿಜವಾದ ರೋಗವಲ್ಲ; ಅದು ಗ್ರಾಮಭಾರತಕ್ಕೆ ಬಡಿದಿರುವ ದೊಡ್ಡದೊಂದು ಮಾರಕರೋಗದ ಲಕ್ಷಣ, ಅಷ್ಟೇ.

ಬೆಳೆಗೆ ತಕ್ಕ ಬೆಲೆ ಸಿಗದಿರುವುದು, ದಲ್ಲಾಳಿಗಳ ಕಾಟ, ಮಾರುಕಟ್ಟೆ ಸಮಸ್ಯೆ, ಖಾಸಗಿ ಸಾಲದ ಸುಳಿ, ರೋಗಬಾಧೆ, ಏಕಬೆಳೆಯ ಹೆಚ್ಚಳ, ರಾಸಾಯನಿಕ- ಕೀಟನಾಶಕಗಳ ವಿಷಚಕ್ರ, ಅಗ್ಗದ ದರಕ್ಕೆ ಜಮೀನು ಮಾರಿ ಕೂಲಿ ಮಾಡಲು ಪೇಟೆ ಸೇರಿಕೊಳ್ಳುವ ರೈತರು- ಇತ್ಯಾದಿಗಳೆಲ್ಲ ಈ ರೋಗದ ಲಕ್ಷಣಗಳೇ. ಈ ದೇಶದಲ್ಲಿ ಉದ್ಯಮ ರಂಗದ ಹಿತ ಕಾಯಲು ನಾನಾ ನೀತಿಗಳಿವೆ; ಆದರೆ ಕೃಷಿಲೋಕದ ಹಿತವನ್ನು ರಕ್ಷಿಸುವ ಯಾವುದೇ ಒಂದು ಸಮಗ್ರ ನೀತಿ ಇಂದಿನವರೆಗೂ ಜಾರಿಯಾಗಿಲ್ಲ.

ಅಭಿವೃದ್ಧಿಯ ಹೆಸರಿನಲ್ಲಿ ಕೃಷಿಭೂಮಿಯ ಕಬಳಿಕೆ ತಡೆಯಲು ನಮಗೆ ಇಂದಿನವರೆಗೂ ಸಾಧ್ಯವಾಗಿಲ್ಲ. ದಶಕಗಳ ಹಿಂದೆ ನಡೆದ ಹಸಿರು ಕ್ರಾಂತಿ ಹಾಗೂ ಅಲ್ಲಲ್ಲಿ ನಡೆದ ಕ್ಷೀರ ಕ್ರಾಂತಿಗಳ ಹೊರತಾಗಿ ಒಟ್ಟು ರೈತ ಸಮುದಾಯದ ಸರ್ವಾಂಗೀಣ ಬೆಳವಣಿಗೆಯನ್ನು ಖಚಿತಪಡಿಸುವ ಯಾವುದೇ ದೊಡ್ಡ ಕ್ರಮಗಳು ಇದುವರೆಗೂ ಪ್ರಭುತ್ವಗಳಿಂದ ನೆರವೇರಿಲ್ಲ. ದೇಶದ ಕೃಷಿರಂಗವನ್ನು ಮೇಲೆತ್ತಲು ಪರಿಣತ ಕೃಷಿಕರು, ಕೃಷಿತಜ್ಞರು, ಆರ್ಥಿಕತಜ್ಞರು ಹಾಗೂ ರಾಜಕೀಯ ಮುತ್ಸದ್ದಿಗಳು ಜತೆಯಾಗಿ ಕೈಜೋಡಿಸದೆ ಸಾಧ್ಯವಾಗದು. ಇಂದು ಮಹಾರಾಷ್ಟ್ರದಲ್ಲಿ ನಡೆದ ಹೋರಾಟ ನಾಳೆ ಕರ್ನಾಟಕ, ಕೇರಳ, ಆಂಧ್ರಗಳಿಗೂ ವ್ಯಾಪಿಸಬಹುದು. ಯಾಕೆಂದರೆ ಎಲ್ಲ ಕಡೆಯೂ ಕೃಷಿಕ ಅನುಭವಿಸುವ ಬವಣೆ ಒಂದೇ ಆಗಿದೆ.

ಪ್ರತಿ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಬೇಕು. ಅನ್ನದಾತ ಸುಖಿಯಾಗಿಲ್ಲದಿದ್ದರೆ ಇತರರೂ ಸುಖಿಯಾಗಿ ಉಳಿಯುವುದು ಅಸಾಧ್ಯ ಎಂಬುದನ್ನು ಮನಗಾಣಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ