ಆ್ಯಪ್ನಗರ

ಮಾತಿನಲ್ಲಿ ಹಿತ, ಹಿಡಿತ ಇರಲಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಅದು ಭಾರತದ ಸಂವಿಧಾನವನ್ನು ಬದಲಾಯಿಸಲಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಹೇಳಿದ್ದಾರೆ.

Vijaya Karnataka Web 14 Jul 2018, 10:51 am
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಅದು ಭಾರತದ ಸಂವಿಧಾನವನ್ನು ಬದಲಾಯಿಸಲಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಹೇಳಿದ್ದಾರೆ. ಇಷ್ಟನ್ನೇ ಹೇಳಿದ್ದರೆ ಅದೇನೂ ದೊಡ್ಡ ಸಂಗತಿ ಅಲ್ಲ. ಆದರೆ ಅವರು ಒಂದು ಹೆಜ್ಜೆ ಮುಂದೆ ಹೋಗಿ ಆಡಿರುವ ಇನ್ನೊಂದು ಮಾತು ಈಗ ಭಾರಿ ವಿವಾದ, ವಿರೋಧ ಸೃಷ್ಟಿಸಿದೆ. ಬಿಜೆಪಿಗೆ ಮತ್ತೆ ಅಧಿಕಾರ ದೊರೆತರೆ ಅದು ಭಾರತವನ್ನು 'ಹಿಂದು ಪಾಕಿಸ್ತಾನ'ವನ್ನಾಗಿ ಬದಲಾಯಿಸಲಿದೆ ಎಂಬುದೇ ಆ ಹೇಳಿಕೆ. ''ಇದು ತರೂರ್‌ ಅವರ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ,'' ಎಂದು ಕಾಂಗ್ರೆಸ್‌ ಪಕ್ಷ ಹೇಳಿಕೆ ನೀಡಿ ಕೈತೊಳೆದುಕೊಂಡಿದೆ. ಆದರೆ ಬಿಜೆಪಿ ಮಾತ್ರ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ''ಇದು ಭಾರತೀಯ ಸಂವಿಧಾನ ಹಾಗೂ ಹಿಂದೂಗಳ ಮೇಲಿನ ದಾಳಿ. ಪ್ರಧಾನಿ ಮೇಲೆ ದ್ವೇಷ ಕಾರುವ ಭರದಲ್ಲಿ ಕಾಂಗ್ರೆಸ್‌ ಪಕ್ಷ ಪುನಃ ಲಕ್ಷ್ಮಣರೇಖೆ ದಾಟಿದೆ,'' ಎಂದು ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ಇಷ್ಟಾದರೂ ಶಶಿ ತರೂರ್‌ ಅವರು ತಮ್ಮ ಹೇಳಿಕೆಗೆ ಈಗಲೂ ಬದ್ಧ. ಅದನ್ನು ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ ಎಂದಿದ್ದು ಈ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲ.
Vijaya Karnataka Web taroor


ಮೊದಲು ಈ ರೀತಿಯ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳ ಸಂಖ್ಯೆಯೇ ವಿರಳವಾಗಿರುತ್ತಿತ್ತು. ಹಾಗೊಮ್ಮೆ ಯಾರಾದರೂ ವಿವಾದಾತ್ಮಕ, ಆಕ್ಷೇಪಾರ್ಹ ಹೇಳಿಕೆ ನೀಡಿದರೂ ಸ್ವಪಕ್ಷೀಯರೇ ಅವರಿಗೆ ಬುದ್ಧಿ ಹೇಳಿ ಸುಮ್ಮನಾಗಿಸುತ್ತಿದ್ದರು. ಪ್ರತಿಪಕ್ಷಗಳೂ ಅದನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುವ ಪ್ರಸಂಗಗಳೂ ಹೆಚ್ಚಾಗಿರಲಿಲ್ಲ. ಆದರೆ ಈಗ ಈ ರೀತಿಯ ಹೇಳಿಕೆ ಬಂದಿದ್ದೇ ತಡ ಅದು ರಾಜಕೀಯ ಆರೋಪ, ಪ್ರತ್ಯಾರೋಪದ ವಸ್ತುವಾಗಿಬಿಡುತ್ತದೆ. ಹೀಗಾಗಿ ಇಂಥ ವಿವಾದಾತ್ಮಕ ಹೇಳಿಕೆ ನೀಡಿದರೆ ತಮ್ಮ ಖ್ಯಾತಿ ಹೆಚ್ಚಾಗುವುದೆಂಬ ಭಾವನೆ ಬೆಳೆಯುತ್ತಿದೆ. ಎಲ್ಲ ರಾಜಕಾರಣಿಗಳೂ ಹೀಗೇ ಇರುತ್ತಾರೆ ಎಂದಲ್ಲ. ಆದರೆ ಇಂಥವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ವಿಷಯ. ಮತ್ತೊಬ್ಬ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರೂ ಈ ವಿಚಾರದಲ್ಲಿ ಕಮ್ಮಿ ಇಲ್ಲ. ಇಂಥ ಅನೇಕ ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ. ಮೋದಿ ವಿರುದ್ಧ ಅವರು ನೀಡಿದ್ದ ಚಾಯ್‌ವಾಲಾ ಹೇಳಿಕೆ ಕಾಂಗ್ರೆಸ್‌ ಪಕ್ಷಕ್ಕೆ ಬಹಳ ದುಬಾರಿಯಾದದ್ದು ಸುಳ್ಳಲ್ಲ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಅಜಂಖಾನ್‌, ಸಾಕ್ಷಿ ಮಹಾರಾಜ್‌ ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಪ್ರಶ್ನೆ ಇದಲ್ಲ. ರಾಜಕೀಯ ಮೇಲಾಟಕ್ಕೋ, ಬಾಯಿಚಪಲಕ್ಕೋ ಅನುಚಿತವಾದ, ಅಹಿತಕರವಾದ ಹೇಳಿಕೆಗಳನ್ನು ಅನೇಕರು ಆಗಾಗ ನೀಡುವುದುಂಟು. ಆದರೆ ದೇಶ, ಧರ್ಮ, ಲಿಂಗ ಮೊದಲಾದ ಸೂಕ್ಷ್ಮ ವಿಚಾರಗಳಲ್ಲಿ ಯಾರೇ, ಏನೇ ಹೇಳಿಕೆ ನೀಡಬೇಕಾದರೂ ಯೋಚನೆ ಮಾಡಬೇಕು. ತಮ್ಮ ಹೇಳಿಕೆಯಿಂದ ಆಗಬಹುದಾದ ಪರಿಣಾಮದ ಬಗ್ಗೆ ಎಚ್ಚರ ವಹಿಸಬೇಕು. ತರೂರ್‌ ಹೇಳಿಕೆಯನ್ನೇ ಗಮನಿಸೋಣ. ಬಿಜೆಪಿ ಕಾರ‍್ಯಕ್ರಮಗಳ ಬಗ್ಗೆ, ಅದರ ಸಿದ್ಧಾಂತದ ಬಗ್ಗೆ ಏನೇ ಮಾತನಾಡಿದರೂ ಪರವಾಗಿಲ್ಲ. ಆದರೆ ನಮ್ಮ ಆಂತರಿಕ ವಿಚಾರದಲ್ಲಿ ಪಾಕಿಸ್ತಾನವನ್ನು ಎಳೆದು ತರುವುದು, ಪಾಕ್‌ ಜತೆಗೆ ಭಾರತವನ್ನು ಸಮೀಕರಿಸುವುದು ಸರ್ವಥಾ ಸರಿಯಲ್ಲ. ಏಕೆಂದರೆ ಭಾರತ ಪಾಕಿಸ್ತಾನ ನಡುವಿನದು ಬಹಳ ಸೂಕ್ಷ್ಮ ಸಂಬಂಧ. ನಾವು ಆ ದೇಶದೊಡನೆ ಹಲವಾರು ವಿಚಾರಗಳಲ್ಲಿ ಸದಾ ಪರೋಕ್ಷ ಸಮರದಲ್ಲಿ ತೊಡಗಿರುತ್ತೇವೆ. ವಾಸ್ತವ ಹೀಗಿರುವಾಗ ಜನರ ಭಾವನೆಗಳನ್ನು ಕೆರಳಿಸುವಂಥ ಹೇಳಿಕೆ ನೀಡಿದರೆ ಅದರಿಂದ ಪಾಕಿಸ್ತಾನಕ್ಕೇ ಲಾಭವಾದೀತು. ಆದ್ದರಿಂದ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದರ ಅರಿವು ರಾಜಕಾರಣಿಗಳಿಗೆ ಇರುವುದು ಅವಶ್ಯ. ಅವರು ಇಂಥ ವಿಷಯಗಳಲ್ಲಿ ಜವಾಬ್ದಾರಿಯಿಂದ ಹಾಗೂ ದೇಶದ ಹಿತ ಕಾಯುವ ನಿಟ್ಟಿನಲ್ಲಿ ವರ್ತಿಸಬೇಕು. ವೈಯಕ್ತಿಕ ಹಿತಕ್ಕಿಂತ ದೇಶಹಿತ ದೊಡ್ಡದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ