ಆ್ಯಪ್ನಗರ

ಮಲ್ಯ ಗಡೀಪಾರಿಗೆ ಬ್ರಿಟನ್‌ ಸಮ್ಮತಿ: ಆರ್ಥಿಕ ಅಪರಾಧಿಗಳಿಗೆ ಇದು ಪಾಠವಾಗಲಿ

ದೇಶದ ಕಾನೂನಿನ ಕೈಗಳಿಗೆ ಸಿಗದೆ ನುಣುಚಿಕೊಳ್ಳುತ್ತಿದ್ದ, ಉದ್ದೇಶಪೂರ್ವಕ ಸುಸ್ತಿದಾರ ಎಂದು ಭಾರತದ ಬ್ಯಾಂಕ್‌ಗಳು ಘೋಷಿಸಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್‌ನ ವಿದೇಶಾಂಗ ಸಚಿವರು ಒಪ್ಪಿಗೆ ನೀಡಿದ್ದಾರೆ.

Vijaya Karnataka 6 Feb 2019, 2:34 pm
ದೇಶದ ಕಾನೂನಿನ ಕೈಗಳಿಗೆ ಸಿಗದೆ ನುಣುಚಿಕೊಳ್ಳುತ್ತಿದ್ದ, ಉದ್ದೇಶಪೂರ್ವಕ ಸುಸ್ತಿದಾರ ಎಂದು ಭಾರತದ ಬ್ಯಾಂಕ್‌ಗಳು ಘೋಷಿಸಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್‌ನ ವಿದೇಶಾಂಗ ಸಚಿವರು ಒಪ್ಪಿಗೆ ನೀಡಿದ್ದಾರೆ. ಕಳೆದ ವರ್ಷ ಲಂಡನ್‌ನ ಕೋರ್ಟ್‌ ಮಲ್ಯ ಗಡೀಪಾರಿಗೆ ಸಮ್ಮತಿಸಿತ್ತು. ಮಲ್ಯರ ಆಸ್ತಿಗಳನ್ನು ಈಗಾಗಲೇ ಇಡಿ ವಶಪಡಿಸಿಕೊಂಡಿದ್ದು, ಅದನ್ನು ಬ್ಯಾಂಕ್‌ಗಳ ವಶಕ್ಕೆ ನೀಡಲು ಒಪ್ಪಿದೆ. ಮಲ್ಯರನ್ನು ಕರೆತಂದು ವಿಚಾರಣೆಗೊಳಪಡಿಸಿ, ಸಾಲ ವಸೂಲಿ ಮಾಡುವ ಅವಕಾಶ ಎದುರಿಗಿದೆ. ಇದರೊಂದಿಗೆ, ಕಳೆದ ಹಲವಾರು ವರ್ಷಗಳಿಂದ ಭಾರತದ ತನಿಖಾ ಸಂಸ್ಥೆಗಳು ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಇನ್ನೊಂದು ಜಯ ದೊರೆತಿದ್ದು, ಮಲ್ಯ ಎಸಗಿರುವ 9000 ಕೋಟಿ ರೂಪಾಯಿಗಳ ಹಗರಣಕ್ಕೆ ತಾರ್ಕಿಕ ಅಂತ್ಯ ನೀಡುವ ಕಾಲ ಸನ್ನಿಹಿತವಾಗಿದೆ. ಇದೇ ಸಂದರ್ಭದಲ್ಲಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿ ಆಂಟಿಗುವಾಕ್ಕೆ ಪರಾರಿಯಾಗಿರುವ ಮೆಹುಲ್‌ ಚೋಕ್ಸಿಯನ್ನು ಬಂಧಿಸಿ ಕರೆತರಲು ಸರಕಾರ ಸಜ್ಜಾಗಿದೆ. ಬಹುಕೋಟಿ ಬೆಟ್ಟಿಂಗ್‌ ಹಗರಣದ ಆರೋಪಿ ಲಲಿತ್‌ ಮೋದಿ, ಇನ್ನೊಂದು ಬಹುಕೋಟಿ ಹಗರಣದ ಆರೋಪಿ ವಜ್ರದ ವ್ಯಾಪಾರಿ ನೀರವ್‌ ಮೋದಿ ಬಂಧನಕ್ಕೂ ಬಲೆ ಬೀಸಲಾಗಿದೆ. ಇತ್ತೀಚೆಗಷ್ಟೇ, ಯುಪಿಎ ಸರಕಾರದ ಅವಧಿಯ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದ ಸೂತ್ರಧಾರಿ ಕ್ರಿಶ್ಚಿಯನ್‌ ಮೈಕೆಲ್‌ನನ್ನು ಯುಎಇಯಿಂದ ಮತ್ತು ಅದೇ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ದಲ್ಲಾಳಿಗಳನ್ನು ಬೇರೆ ದೇಶಗಳಿಂದ ಭಾರತಕ್ಕೆ ಕರೆತರಲಾಗಿತ್ತು.
Vijaya Karnataka Web vm


ಮಲ್ಯರಂತೆ ದೇಶದಾಚೆ ಪರಾರಿಯಾಗಿರುವ ಹಲವು ಮಂದಿಯನ್ನು ಇದೇ ಮಾದರಿಯಲ್ಲಿ ಕರೆತಂದು ವಿಚಾರಣೆಗೊಳಪಡಿಸುವ ಕಾಲ ಸನ್ನಿಹಿತವಾದಂತೆ ತೋರುತ್ತಿದೆ. ಈ ಯಶಸ್ಸಿಗಾಗಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಅಭಿನಂದನೆ ಹೇಳಬೇಕು. ಇದು ದೇಶದ ರಾಜನೈತಿಕ ವಿಜಯವೂ ಹೌದು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಹೇಳಬಹುದಾದ ಮಾತೆಂದರೆ, ಭಾರತದಲ್ಲಿ ದೊಡ್ಡಮೊತ್ತದ ಹಗರಣ ಎಸಗಿ ವಿದೇಶದಲ್ಲಿ ಬಚ್ಚಿಟ್ಟುಕೊಳ್ಳಲು ಹವಣಿಸುವ ದೊಡ್ಡ ಕುಳಗಳು ಇನ್ನು ಮುಂದೆ ಕಾನೂನು ಕ್ರಮವನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಹುಕೋಟಿ ಹಗರಣಗಳ ಆರೋಪಿಗಳು ಸುಲಭವಾಗಿ ನುಣುಚಿಕೊಳ್ಳುವ ಸಾಧ್ಯತೆಗಳು ಕ್ಷೀಣಗೊಂಡಿವೆ. ಇಂಥ ದೊಡ್ಡ ಪ್ರಕರಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕವಾಗಿ ನಿರ್ವಹಿಸುವ ಮೂಲಕ ಭಾರತ ಸರಕಾರ ಕೂಡ ಪ್ರಭಾವವನ್ನು, ಭ್ರಷ್ಟಾಚಾರದ ವಿಚಾರದಲ್ಲಿ ತನ್ನ ಸ್ಪಷ್ಟ ಕಠಿಣ ನೀತಿಯನ್ನು ಜಗಜ್ಜಾಹೀರುಗೊಳಿಸಿದೆ. ಅಪರಾಧಿ ಎಷ್ಟೇ ಪ್ರಭಾವಿಯಾದರೂ ಬಿಡುವುದಿಲ್ಲ ಎಂಬ ಸಂದೇಶವನ್ನು ನೀಡಿದೆ. ತನಿಖೆ ಇದೇ ನಿಟ್ಟಿನಲ್ಲಿ ಮುನ್ನಡೆದು, ಆಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣದಲ್ಲಿ ಭಾಗಿಯಾದ ರಾಜಕಾರಣಿಗಳು, ಮಲ್ಯ ಪ್ರಕರಣದಲ್ಲಿ ಶಾಮೀಲಾದ ಬ್ಯಾಂಕ್‌ ಅಧಿಕಾರಿಗಳು, ಹೀಗೆ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು.

ಮುಖ್ಯವಾಗಿ ಎರಡು ಪಾಲಿಸಿಗಳು ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮೊದಲನೆಯದಾಗಿ 2016ರಲ್ಲಿ ತರಲಾದ ದಿವಾಳಿ ಕಾಯಿದೆ. ಇದು ಉದ್ಯಮಗಳ ಸಾಲ ಮರುಪಾವತಿಯ ಬಿಕ್ಕಟ್ಟುಗಳ ಪರಿಹಾರದಲ್ಲಿ ಪ್ರಧಾನ ಪಾತ್ರ ವಹಿಸಿದೆ; ಎರಡನೆಯದು ಆರ್ಥಿಕ ಅಪರಾಧಗಳ ಗಡೀಪಾರು ಕಾಯಿದೆಯಡಿ ಭಾರತ ಸರಕಾರ ಇತ್ತೀಚೆಗೆ ಸುಮಾರು 48 ದೇಶಗಳೊಂದಿಗೆ ಮಾಡಿಕೊಂಡಿರುವ ಗಡೀಪಾರು ಒಪ್ಪಂದ. ವಿವಿಧ ಆರ್ಥಿಕ ಮತ್ತು ಕ್ರಿಮಿನಲ್‌ ಅಪರಾಧ ಎಸಗಿ ನಾನಾ ದೇಶಗಳಲ್ಲಿ ತಲೆ ಮರೆಸಿಕೊಂಡಿರುವವರನ್ನು ತನಿಖೆಯ ವ್ಯಾಪ್ತಿಗೆ ತರುವಲ್ಲಿ ಪರಸ್ಪರ ಸಹಕರಿಸಲು ಜಿ-20 ಶೃಂಗದಲ್ಲಿ ಪ್ರಧಾನಿ ಮೋದಿ ಮುಂದಿಟ್ಟಿದ್ದ ಪ್ರಸ್ತಾಪಕ್ಕೆ ವಿಶ್ವ ನಾಯಕರು ಸಮ್ಮತಿಸಿರುವುದನ್ನೂ ಇಲ್ಲಿ ನೆನೆಯಬೇಕು. ಇವೆಲ್ಲವೂ ಸರಕಾರದ ನಡೆ ಸರಿಯಾದ ದಿಕ್ಕಿನಲ್ಲಿ ಆಗುತ್ತಿದೆ ಎಂಬುದನ್ನು ಸಾರುತ್ತಿದೆ. ಇನ್ನು ಮುಂದೆ ಆರ್ಥಿಕ ವಂಚನೆ ಎಸಗಿ ಪಾರಾಗಬಹುದು ಎಂದು ಯಾರಾದರೂ ಯೋಚಿಸುತ್ತಿದ್ದರೆ ಅಂಥವರಿಗೂ ಇದು ಎಚ್ಚರಿಕೆಯ ಗಂಟೆ. ದೇಶದ ಅರ್ಥವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಇನ್ನಷ್ಟು ಹೆಚ್ಚಿಸುವ ಇಂಥ ಕಠಿಣ ಕ್ರಮಗಳು ಹೀಗೆಯೇ ಮುಂದುವರಿಯಲಿ. ಸೆರೆಸಿಕ್ಕಿದ ಅಪರಾಧಿಗಳಿಂದ ಹಣವಸೂಲಿ ಹಾಗೂ ಅವರಿಗೆ ಶಿಕ್ಷೆಗಳಾಗುವ ಮೂಲಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ