ಆ್ಯಪ್ನಗರ

ಸೋಂಕು ಮುಕ್ತಿಯ ಕಡೆಗೆ, ಹಬ್ಬದ ಸಂಭ್ರಮ ಹದಗೆಡಿಸದಿರಲಿ

ಮುಂಬರಲಿರುವ ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ವ್ಯಾಪಾರೋದ್ಯಮ ಭಾರಿ ಚೇತರಿಕೆ ಕಾಣುತ್ತಿದೆ. ಆದರೆ ಹಬ್ಬದ ಸಂಭ್ರಮದಲ್ಲಿ ಮೈಮರೆತು ಕೋವಿಡ್ ಬಗ್ಗೆ ಗಮನ ಹರಿಸದಿರುವುದು ಬೇಡ.

Vijaya Karnataka Web 20 Oct 2020, 1:38 pm
ಮುಂಬರಲಿರುವ ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ವ್ಯಾಪಾರೋದ್ಯಮ ಭಾರಿ ಚೇತರಿಕೆ ದಾಖಲಿಸಿದೆ. ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮಾರಾಟಗಳೆರಡರಲ್ಲೂ ಬಿರುಸಾದ ವಹಿವಾಟು ನಡೆದಿದೆ. ಆನ್‌ಲೈನ್‌ ತಾಣಗಳ ಫೆಸ್ಟಿವಲ್‌ ಸೇಲ್ಸ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋವಿಡ್‌ ಬಿಕ್ಕಟ್ಟು, ಉದ್ಯೋಗ ನಷ್ಟ, ವೇತನ ಕಡಿತದ ನಡುವೆಯೂ ಹಬ್ಬದ ಸೀಸನ್‌ ಬಗ್ಗೆ ಮಾರುಕಟ್ಟೆಯು ಆಶಾವಾದ ಹೊಂದಿದೆ. ಹಬ್ಬದ ಆನ್‌ಲೈನ್‌ ಶಾಪಿಂಗ್‌ಗೆ ಸಣ್ಣ ನಗರಗಳಿಂದ ಬಂದ ಹೊಸ ಗ್ರಾಹಕರ ಪ್ರಮಾಣ ಶೇ.91. ಕಳೆದ ವರ್ಷಕ್ಕೆ ಹೋಲಿಸಿದರೆ ಇ-ಕಾಮರ್ಸ್‌ ವ್ಯವಹಾರ ದುಪ್ಪಟ್ಟಾಗಿದೆ. ದೇಶದಲ್ಲಿ ಆಫ್‌ಲೈನ್‌ ಸೇಲ್ಸ್‌ ಶೇ.20ರಷ್ಟು ಏರಿಕೆಯಾಗಿದೆ. ವಾಹನ ಕಂಪನಿಗಳೂ ಹಬ್ಬದ ಮಾರಾಟದ ಉತ್ಸಾಹದಲ್ಲಿದ್ದು, ಭರದಿಂದ ಉತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ. ಈ ತಿಂಗಳು 3.40 ಲಕ್ಷ ಪ್ಯಾಸೆಂಜರ್‌ ಕಾರುಗಳು ಉತ್ಪಾದನೆಯಾಗುವ ನಿರೀಕ್ಷೆ ಇದೆ. ಇದು ಆರಂಭವಾಗಿದ್ದು, ಈ ಖರೀದಿ ಭರಾಟೆ ದೀಪಾವಳಿವರೆಗೂ ಮುಂದುವರಿಯಬಹುದು. ಜನತೆ ಹಣ ಚಲಾವಣೆಗೆ ಮುಂದಾಗುತ್ತಿರುವುದು ಇದರಿಂದ ವ್ಯಕ್ತವಾಗಿದೆ. ಮಾರುಕಟ್ಟೆಯ ಬಗ್ಗೆ ಕಳೆದುಹೋಗಿದ್ದ ಭರವಸೆ ಮತ್ತೆ ಜನತೆಯಲ್ಲಿ ಚಿಗುರಿದಂತಿದೆ. ಅದಕ್ಕೆ ತಕ್ಕಂತೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 448.62 ಅಂಕ ಏರಿಕೆ ಕಂಡಿದೆ.
Vijaya Karnataka Web festive rush


ಇದು ಒಂದು ಶುಭ ಸೂಚನೆಯಾಗಿದ್ದರೆ, ಕೋವಿಡ್‌ ಸೋಂಕಿನ ಅಂಕಿ ಅಂಶಗಳು ಕೂಡ ಇಳಿಮುಖ ದಾಖಲಿಸಿವೆ. ದೇಶದಲ್ಲಿ ಸೋಂಕಿನ ಹೊಸ ಪ್ರಕರಣಗಳು ಈ ತಿಂಗಳಲ್ಲಿ ಎರಡನೇ ಬಾರಿಗೆ 60 ಸಾವಿರಕ್ಕಿಂತಲೂ ಕಡಿಮೆ ವರದಿಯಾಗಿವೆ. ಈವರೆಗೆ 66,63,608 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,72,055ಕ್ಕೆ ಇಳಿದಿದೆ. ಹೀಗಾಗಿ ಸಕ್ರಿಯ ಪ್ರಕರಣಗಳು ಸತತ ಮೂರನೇ ದಿನವೂ 8 ಲಕ್ಷಕ್ಕಿಂತ ಕಡಿಮೆ ಇದೆ. ದೇಶದಲ್ಲಿಮೂರು ತಿಂಗಳ ಬಳಿಕ ಮೊದಲ ಬಾರಿಗೆ ಕೊರೊನಾ ಸಾವಿನ ಸಂಖ್ಯೆ 600ಕ್ಕಿಂತ ಕಡಿಮೆ ದಾಖಲಾಗಿದೆ. ತಜ್ಞರು ಹೇಳುವಂತೆ, ಕೋವಿಡ್‌ ಸೋಂಕಿನ ಗ್ರಾಫ್‌ ದೇಶದಲ್ಲಿತನ್ನ ಅತ್ಯುನ್ನತ ಮಟ್ಟವನ್ನು ಸೆಪ್ಟೆಂಬರ್‌ನಲ್ಲೇ ಮುಟ್ಟಿದ್ದು, ಈಗ ಇಳಿಯುತ್ತಿದೆ. ಮುಂದಿನ ಫೆಬ್ರವರಿಯ ಹೊತ್ತಿಗೆ ದೇಶ ಹೊಸ ಸೋಂಕುಗಳಿಂದ ಮುಕ್ತವಾಗಬಹುದು ಎಂಬುದು ತಜ್ಞರ ಅಂದಾಜು. ಇದೂ ಶುಭ ಸುದ್ದಿಯೇ. ಆದರೆ ನಾವು ಮೈಮರೆತು ಸಂಭ್ರಮಾಚರಣೆ ಮಾಡಬಹುದು ಎಂಬುದು ಇದರರ್ಥವಲ್ಲ.

ಲಾಕ್‌ಡೌನ್‌ ಕವಿಸಿದ ನಿರುತ್ಸಾಹದಿಂದ ಹೊರಬರಲು ಜನತೆ ಹಾಗೂ ಮಾರುಕಟ್ಟೆ ಪ್ರಯತ್ನಿಸುತ್ತಿವೆ. ಅದಕ್ಕೆ ಹಬ್ಬಗಳ ಸೀಸನ್‌ ಒಂದು ನಿಮಿತ್ತ. ಆದರೆ ಸೋಂಕು ಪೂರ್ತಿಯಾಗಿ ಮಾಯವಾಗಿಲ್ಲ. ನಮ್ಮ ನಡುವೆಯೇ ಇದೆ ಹಾಗೂ ಆತಂಕ ಸಾಕಷ್ಟು ಇದೆ. ಪಕ್ಕದ ರಾಜ್ಯ ಕೇರಳದ ಉದಾಹರಣೆಯನ್ನೇ ತೆಗೆದುಕೊಂಡರೆ, ಅಲ್ಲಿಏಪ್ರಿಲ್‌ ಹೊತ್ತಿಗೆ ಹೊಸ ಪ್ರಕರಣಗಳು ಬಹುತೇಕ ಇಲ್ಲವೇ ಇಲ್ಲಎಂಬಂತಾಗಿತ್ತು. ಆದರೆ ಓಣಂ ಹಬ್ಬದ ಬಳಿಕ ಸೋಂಕಿನ ಪ್ರಮಾಣ ಶೇ.126ರಷ್ಟು ಹೆಚ್ಚಿತು ಎಂದು ತಜ್ಞರು ಹೇಳಿದ್ದಾರೆ. ಹಬ್ಬದ ಸಂದರ್ಭದಲ್ಲಿಜನತೆ ಮೈಮರೆತದ್ದೇ ಕೊರೊನಾ ಸೋಂಕಿನ ಎರಡನೇ ಅಲೆ ಹಬ್ಬಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಇದು ನಾವು ಇನ್ನಷ್ಟು ಎಚ್ಚರದಿಂದಿರಬೇಕು ಎಂಬುದನ್ನು ಸೂಚಿಸುತ್ತದೆ. ಚೀನಾ, ಯುರೋಪಿನ ದೇಶಗಳು ಕೂಡ ಸೋಂಕಿನ ಎರಡನೇ ಅಲೆಗಳನ್ನು ಅನುಭವಿಸಿವೆ. ಇಂಥ ಸನ್ನಿವೇಶ ಭಾರತಕ್ಕೆ ಬರಬಾರದು ಎಂದಿದ್ದರೆ ನಾವು ಸೋಂಕನ್ನು ಎದುರಿಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಎಚ್ಚರಿಕೆಯಿಂದ ಪಾಲಿಸುವುದು ಅಗತ್ಯ. ಇನ್ನೂ ಕೊರೊನಾಕ್ಕೆ ಪರಿಪೂರ್ಣ ಲಸಿಕೆ ಸಿದ್ಧವಾಗಿಲ್ಲ. ಹೀಗಾಗಿ ನಾವ್ಯಾರೂ ಅದರಿಂದ ಪೂರ್ಣವಾಗಿ ಮುಕ್ತರಲ್ಲ. ಹಬ್ಬದ ಸಂಭ್ರಮ ಆರೋಗ್ಯ ಹದಗೆಡಿಸದಿರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ