ಆ್ಯಪ್ನಗರ

ಗಾಂಧಿ ಜಯಂತಿ ದಿನ ಗುಂಡು ಬ್ಯಾನ್ ಮಾಡಿದ್ರೆ ಸಮಾಜ 'ಮದ್ಯ ಮುಕ್ತ' ಆಗಿಬಿಡುತ್ತಾ..?

ಪ್ರತಿ ವರ್ಷ ಅಕ್ಟೋಬರ್ 2ನೇ ತಾರೀಖು ಗಾಂಧಿ ಜಯಂತಿ ಇರುತ್ತೆ ಅಂತಾ ಎಲ್ಲರಿಗೂ ಗೊತ್ತು.. ಅಂಗಡಿ ಎದುರು ‘ನಾಳೆ ರಜೆ’ ಎಂಬ ಬೋರ್ಡ್‌ ನೋಡಿದ್ದೇ ತಡ, ಮದ್ಯ ಪ್ರಿಯರು ನಾಳೆಗೆ ಆಗೋವಷ್ಟು ಎಣ್ಣೆಯನ್ನು ಸ್ಟಾಕ್ ಮಾಡಿಕೊಳ್ಳೋದಿಲ್ಲವೇ..?

Authored byದಿಲೀಪ್ ಡಿ. ಆರ್. | Vijaya Karnataka Web 1 Oct 2021, 6:22 pm
ಜೀವನದಲ್ಲಿ ಪ್ರತಿಯೊಂದು ದಿನವನ್ನೂ ಹೊಸ ದಿನ ಅಂತಾನೇ ಭಾವಿಸಿಕೊಂಡು ಬದುಕಿ ಅಂತಾರೆ.. ಹೌದು ಬಿಡಿ ಅಂದ್ಕೊಂಡು ಕ್ಯಾಲೆಂಡರ್ ನೋಡಿದರೆ, ವರ್ಷದ 365 ದಿನವನ್ನೂ ಒಬ್ಬೊಬ್ಬರಿಗೆ, ಒಂದೊಂದು ವಿಚಾರಕ್ಕೆ ಗುತ್ತಿಗೆ ಕೊಟ್ಟು ಕೂತಿದೆ ನಮ್ ಸಮಾಜ..! ಹೌದು..! ಫಾದರ್, ಮದರ್, ಲವರ್ ಹೀಗೆ ಎಲ್ಲರಿಗೂ ಒಂದೊಂದು ದಿನ ಫಿಕ್ಸು..! ಅವತ್ತು ಮಾತ್ರ ಅವರನ್ನು ಪ್ರೀತಿಸಬೇಕಾ ಎಂದು ಡೌಟ್‌ ಬರುವಷ್ಟು..!
Vijaya Karnataka Web gandhi and drunk
ಗಾಂಧಿ ಜಯಂತಿ ದಿನ ಗುಂಡು ಬ್ಯಾನ್ ಮಾಡಿದ್ರೆ ಸಮಾಜ 'ಮದ್ಯ ಮುಕ್ತ' ಆಗಿಬಿಡುತ್ತಾ..?


ಇನ್ನು ಕೆಲವು ದಿನಗಳನ್ನು ‘ನಿಗದಿ’ ಮಾಡಿರುವ ಹಿಂದಿನ ಅರ್ಥವೇ ವಿಚಿತ್ರ ಎನಿಸುತ್ತೆ..! ನೀವೇ ಲೆಕ್ಕ ಹಾಕಿ.. ಫೆಬ್ರುವರಿ 14 ವ್ಯಾಲೆಂಟೈನ್ಸ್‌ ಡೇ.. ನವೆಂಬರ್ 14 ಮಕ್ಕಳ ದಿನ..! ಅಂದ್ರೆ ಪ್ರೇಮಿಗಳ ದಿನ ‘ಸಂಭವಿಸಿ’ ಸರಿಯಾಗಿ 9 ತಿಂಗಳಿಗೆ ಮಕ್ಕಳ ದಿನ ಬರುತ್ತೆ..! ಇದನ್ನು ಏನೆಂದು ಅರ್ಥೈಸಿಕೊಳ್ಳಬೇಕು..? ಈ ವಿಚಾರವಾಗಿ ಜಾಸ್ತಿ ಕೆಣಕಿದರೆ ಚಾಚಾ ನೆಹರೂ ಅವರ ಜನ್ಮದಿನದ ನೆನಪಿಗೆ ಆಚರಿಸುವ ಮಕ್ಕಳ ದಿನಾಚರಣೆಗೆ ಅಪಮಾನ ಮಾಡಿದಂತೆ ಆಗೋದಿಲ್ವೇ..?

ಅಕ್ಟೋಬರ್ 2ರ ಗಾಂಧಿ ಜಯಂತಿ ಭಾರತದಲ್ಲಿ ಎಣ್ಣೆ ಸಿಗಲ್ಲ..!

ಅದಿರಲಿ ಈಗ ಮತ್ತೊಂದು ವಿಷಯಕ್ಕೆ ಬರೋಣ. ಅಕ್ಟೋಬರ್ 2 ಗಾಂಧಿ ಜಯಂತಿ. ಆ ದಿನದಂದು, ಎಣ್ಣೆ, ಬಾಡು ಏನೂ ಸಿಗಲ್ಲ.. ಅಂದ್ರೆ ಮದ್ಯ ಹಾಗೂ ಮಾಂಸಕ್ಕೆ ನಿರ್ಬಂಧ ಇರುತ್ತೆ.. ಗಾಂಧೀಜಿ ಅವರು ಮದ್ಯದಿಂದ ಆಗುವ ಹಾನಿಗಳನ್ನು ಜನರಿಗೆ ತಿಳಿ ಹೇಳುತ್ತಿದ್ದರು. ಜೊತೆಗೆ ಮದ್ಯ ನಿಷೇಧಕ್ಕಾಗಿ ಹೋರಾಡಿದರು.. ಎಲ್ಲಕ್ಕಿಂತಾ ಹೆಚ್ಚಾಗಿ ಅಹಿಂಸಾ ತತ್ವ ಬೋಧಿಸುತ್ತಿದ್ದರು. ಹೀಗಾಗಿ, ಮದ್ಯ, ಮಾಂಸಕ್ಕೆ ನಿರ್ಬಂಧ ಹೇರೋದು ಸರಿ..

ಆದ್ರೆ, ಪ್ರತಿ ವರ್ಷ ಅಕ್ಟೋಬರ್ 2ನೇ ತಾರೀಖು ಗಾಂಧಿ ಜಯಂತಿ ಇರುತ್ತೆ ಅಂತಾ ಎಲ್ಲರಿಗೂ ಗೊತ್ತು.. ಅಂಗಡಿ ಎದುರು ‘ನಾಳೆ ರಜೆ’ ಎಂಬ ಬೋರ್ಡ್‌ ನೋಡಿದ್ದೇ ತಡ, ಮದ್ಯ ಪ್ರಿಯರು ನಾಳೆಗೆ ಆಗೋವಷ್ಟು ಎಣ್ಣೆಯನ್ನು ಸ್ಟಾಕ್ ಮಾಡಿಕೊಳ್ಳೋದಿಲ್ಲವೇ..? ಹೀಗಿದ್ದಾಗ ಆ ದಿನದ ಆಶಯ ಏನಾಯ್ತು..? ಇನ್ನು ಗಾಂಧಿ ನಾಡು ಗುಜರಾತ್‌ನಲ್ಲಿ ಮದ್ಯ ನಿಷೇಧ ಶೇ. 100ರಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬಂದಿದೆಯೇ..? ಬಿಹಾರದಲ್ಲಿ ನಿತೀಶ್ ಕುಮಾರ್ ಜಾರಿ ಮಾಡಿದ ಮದ್ಯ ನಿಷೇಧದ ಕಥೆ ಏನಾಗಿದೆ..? ನಮ್ಮ ರಾಜ್ಯದಲ್ಲೂ ಅಬಕಾರಿ ಇಲಾಖೆಗೆ ಸರ್ಕಾರವೇ 'ಟಾರ್ಗೆಟ್' ಹಾಕೋದಿಲ್ಲವೇ..? ಗಾಂಧಿ ಜಯಂತಿ ದಿನದ ಈ 'ಒಂದು ದಿನದ ಆಶಯ' ದಶಕಗಳಿಂದ ಜಾರಿಯಲ್ಲಿದೆ.. ಆದ್ರೆ, ಎಣ್ಣೆ ಅಂಗಡಿಗಳ ಎದುರು ಪುರುಷರಿರಲಿ, ಮಹಿಳೆಯರೂ ನಾವೇನ್ ಕಮ್ಮಿ ಎಂದು ಸಾಲುಗಟ್ಟಿ ನಿಂತ ಸನ್ನಿವೇಶಕ್ಕೆ ಲಾಕ್‌ಡೌನ್ ಸಾಕ್ಷಿಯಾಗಲಿಲ್ಲವೇ..? ಎಷ್ಟೊಂದು ಸೀರಿಯಸ್ ಪ್ರಶ್ನೆಗಳಿವೆ ನೋಡಿ..!

ಗುಜರಾತ್‌ನಲ್ಲಿ ಮದ್ಯ ನಿಷೇಧ ತೆರವಾಗುತ್ತಾ..? ಹೈಕೋರ್ಟ್‌ ತೀರ್ಪಿಗೆ ಕ್ಷಣಗಣನೆ..!
ಅಕ್ಟೋಬರ್ 3 ವಿಶ್ವ ‘ಆಲ್ಕೋಹಾಲ್ ಮುಕ್ತ ದಿನ..!

ಇನ್ನು ಅಕ್ಟೋಬರ್ 2ರ ಗಾಂಧಿ ಜಯಂತಿ ಬಳಿಕ ಅಕ್ಟೋಬರ್ 3ರಂದು ವಿಶ್ವಾದ್ಯಂತ ‘ಆಲ್ಕೋಹಾಲ್ ಮುಕ್ತ ದಿನ’ ಆಚರಣೆ ಮಾಡ್ತಾರೆ. ಇದೆಂಥಾ ತಮಾಷೆ ನೋಡಿ..! ಒಂದೇ ಒಂದು ದಿನ ಮುನ್ನ, ಭಾರತದಲ್ಲಿ ಗಾಂಧಿ ಜಯಂತಿ ಆಚರಿಸಿ ಎಣ್ಣೆ ಅಂಗಡಿಯನ್ನು ಮುಚ್ಚಿಸಿದ ಮರು ದಿನವೇ ವಿಶ್ವಾದ್ಯಂತ ಆಲ್ಕೋಹಾಲ್ ಮುಕ್ತ ದಿನ..! ಆದ್ರೆ ಎಣ್ಣೆ ಅಂಗಡಿಗಳನ್ನು ಮುಚ್ಚೋದೇನೂ ಇಲ್ಲ.. ಹಾಗೇ ಸುಮ್ಮನೆ ಸಾಂಕೇತಿಕವಾಗಿ ಆಲ್ಕೋಹಾಲ್ ಮುಕ್ತ ದಿನ ಆಚರಿಸಿ, ಅದೇ ‘ಕಿಕ್‌’ನಲ್ಲಿ ಮಲಗಬೇಕು ಅಷ್ಟೇ..! ಆದ್ರೆ, ಮರುದಿನ ಅಚ್ಚರಿಯೊಂದಿದೆ..!

ಅಕ್ಟೋಬರ್ 4 ರಾಷ್ಟ್ರೀಯ ವೋಡ್ಕಾ ಡೇ..!

ಇದಪ್ಪಾ ತಮಾಷೆ ಅಂದ್ರೆ ಅಕ್ಟೋಬರ್ 2 ಭಾರತದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಎಣ್ಣೆ ಸಿಗಲ್ಲ, ಅಕ್ಟೋಬರ್ 3 ವಿಶ್ವ ಆಲ್ಕೋಹಾಲ್ ಮುಕ್ತ ದಿನ.. ಆದ್ರೆ, ಅಕ್ಟೋಬರ್ 4ರಂದು ರಾಷ್ಟ್ರೀಯ ವೋಡ್ಕಾ ದಿನ..! ಅಂದ್ರೆ ಅರ್ಥ ಏನು..? ಅಕ್ಟೋಬರ್ 2 ಹಾಗೂ 3ರಂದು ಅದುಮಿಟ್ಟ ಬಯಕೆಗಳನ್ನು 4ನೇ ತಾರೀಖು ವೋಡ್ಕಾ ಹೊಳೆಯಲ್ಲಿ ತೇಲಿ ಬಿಡಿ ಅಂತಾನಾ..?!

ಇದಲ್ಲದೆ ಇನ್ನೂ ಎಷ್ಟೊಂದು ದಿನಗಳಿವೆ.. ಎಲ್ಲವೂ ಎಣ್ಣೆಗೆ ಮೀಸಲಾದ ದಿನ..! ಆಗಸ್ಟ್‌ 16 ರಮ್‌ ಡೇ..! ಆಗಸ್ಟ್ 28 ರೆಡ್‌ ವೈನ್ ಡೇ..! ಸೆಪ್ಟೆಂಬರ್ 7 ಬಿಯರ್ ಲವರ್ಸ್‌ ಡೇ..! ಸೆಪ್ಟೆಂಬರ್ 28 ರಾಷ್ಟ್ರೀಯ ಬಿಯರ್ ಕುಡಿವ ದಿನ..! ಹೀಗೆ, ಮದ್ಯದ ಎಲ್ಲ ಬಗೆಗೂ ಒಂದೊಂದು ದಿನ ಫಿಕ್ಸ್‌ ಆಗಿಬಿಟ್ಟಿದೆ..!

ಆಕಸ್ಮಿಕವಾಗಿ ಮದ್ಯ ಕುಡಿದಿದ್ದ ಎಮ್ಮೆಗಳಿಂದ ಗೊತ್ತಾಯಿತು ಮಾಲಿಕನ ಅಕ್ರಮ `ಎಣ್ಣೆ' ಸಂಗ್ರಹದ ಸತ್ಯ!
ಲಾಸ್ಟ್ ಕಿಕ್..!

ಅಕ್ಟೋಬರ್ 2 ಸಮೀಪಿಸುವ ಹೊತ್ತಲ್ಲಿ ಒಂದು ಚರ್ಚೆ ಶುರುವಾಗಿದೆ. ಮಹಾತ್ಮಾ ಗಾಂಧೀಜಿ ಅವರ ಸಮೀಪ ವರ್ತಿಯೊಬ್ಬರು ಗಾಂಧೀಜಿಯವರ ಜೊತೆಗೆ ದಶಕಗಳ ಕಾಲ ಇದ್ದರೂ ಅವರಿಗೆ ಸಿಗರೇಟು ಚಟ ಬಿಡಿಸಲು ಗಾಂಧೀಜಿ ಅವರಿಗೆ ಆಗಲಿಲ್ಲ.. ಅಂತಾದ್ರಲ್ಲಿ ಇದೀಗ ಗಾಂಧಿ ಜಯಂತಿ ಪ್ರಯುಕ್ತ ಒಂದು ದಿನ ಮದ್ಯ ನಿಷೇಧ ಮಾಡಿದ್ರೆ ಸಮಾಜದ ಮೇಲೆ ಏನು ಪರಿಣಾಮ ಆಗಿಬಿಡುತ್ತೆ ಅನ್ನೋದು ಈ ವಾದ..! ಈ ವಾದ ವಿತಂಡ ವಾದ ಇರಬಹುದು, ಕುಹುಕ ಇರಬಹುದು, ರಾಜಕೀಯ ಇರಬಹುದು.. ಆದ್ರೆ, ಲಾಜಿಕ್‌ ಇದೆ ಅಂತಾರೆ ಕೆಲವರು..! ಅಂತಿಮವಾಗಿ ಇವೆಲ್ಲವೂ ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ಮ್ಯಾಟ್ರು..! ವಿವಾದ ಅನಿಸಿದರೆ ಆ ಆಟಕ್ಕೆ ನಾವಿಲ್ಲ..!
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ