ಆ್ಯಪ್ನಗರ

KAS, IAS, IFS ಪರೀಕ್ಷೆಗಳಿಗೆ ಬರವಣಿಗೆ ಕೌಶಲ ಎಷ್ಟು ಮುಖ್ಯ ಗೊತ್ತೇ?

ಕೆಎಎಸ್‌ ಮತ್ತು ಐಎಎಸ್‌, ಐಎಫ್‌ಎಸ್‌ ಪರೀಕ್ಷೆಗಳಿಗೆ ದಿನ ನಿಗದಿಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಬರವಣಿಗೆಯ ಕೌಶಲವನ್ನೂ ಏಕೆ ಹೊಂದಿರಬೇಕೆಂದು ಇಲ್ಲಿವಿವರಿಸಲಾಗಿದೆ.

Vijaya Karnataka Web 24 Mar 2020, 7:54 pm

ಬರವಣಿಗೆಯು ಕಲಿಕೆಯ ಮುಖ್ಯವಾದ ಭಾಗ. ಓದುವುದರ ಜೊತೆಜೊತೆಗೆ ಜ್ಞಾನಾಭಿವೃದ್ಧಿಗೆ ಬರವಣಿಗೆ ಕೂಡ ಬಹಳ ಮಹತ್ವವನ್ನು ಹೊಂದುತ್ತದೆ. ಕೇವಲ ಓದುವುದರಿಂದ ಜ್ಞಾನ ಹೆಚ್ಚಾಗುವುದಿಲ್ಲ. ಬದಲಿಗೆ, ಓದಿದ್ದನ್ನು ನಮ್ಮ ಸ್ವಂತ ಪದಗಳಲ್ಲಿಅಭಿವ್ಯಕ್ತಗೊಳಿಸುವುದರಿಂದ ಮಾತ್ರ ಆಳವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
Vijaya Karnataka Web handwriting importance for competitive exams
importance of handwriting for upsc and kpsc


ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗ್ಯಾಜೆಟೆಡ್‌ ಪೊ›ಬೇಷನರಿ ಪರೀಕ್ಷೆ, ಫಾರೆಸ್ಟ್‌ ಸರ್ವಿಸ್‌ ಇತ್ಯಾದಿ ಪರೀಕ್ಷೆಗಳ ಮುಖ್ಯ ಪತ್ರಿಕೆಗಳಲ್ಲಿ ವಿಸ್ತೃತ ರೂಪದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಮಾರು 1750 ಅಂಕಗಳಿಗೆ ಏಳು ಪತ್ರಿಕೆಗಳನ್ನು ಹಾಗು 600 ಅಂಕಗಳಿಗೆ ಎರಡು ಕಡ್ಡಾಯ ಭಾಷಾ ಪತ್ರಿಕೆಗಳನ್ನು ವಿಸ್ತೃತ ರೂಪದ ಮಾದರಿಯಲ್ಲಿ ಕೇಳಲಾಗಿರುತ್ತದೆ. ಈ ಪತ್ರಿಕೆಗಳಲ್ಲಿ ಪ್ರಶ್ನೆಗಳನ್ನು 50 ಪದಗಳಿಂದ ಹಿಡಿದು 250 ಪದಗಳಿಗೆ ಮೀರದಂತೆ ಬರೆಯಲು ಕೇಳಲಾಗುತ್ತದೆ. ಪ್ರಬಂಧದ ಪತ್ರಿಕೆಯನ್ನು ಸುಮಾರು 2500-3000 ಪದಗಳಿಗೆ ಮೀರದಂತೆ ಬರೆಯಲು ಕೇಳುವುದು ಸಹಜ.

ಈ ಎಲ್ಲಅಂಶಗಳನ್ನು ಗಮನಿಸಿದಾಗ ನಮಗೆ ತಿಳಿಯುವುದೇನೆಂದರೆ, ಬರವಣಿಗೆ ಕೌಶಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಫಲತೆಯಲ್ಲಿನಿರ್ಣಾಯಕ ಪಾತ್ರವನ್ನು ಹೊಂದುತ್ತದೆ ಎಂಬುದು. ಹಾಗಾಗಿ ಅಭ್ಯರ್ಥಿಗಳು ಇದರ ಬಗ್ಗೆ ವಿಶೇಷವಾದ ಗಮನವನ್ನು ನೀಡುವುದು ಒಳಿತು.

ಎಷ್ಟೋ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳು, ನಾನು ಎಲ್ಲಪ್ರಶ್ನೆಗಳಿಗೆ ಉತ್ತರಿಸಿದ್ದೆ. ಆದರೆ ಅಂಕಗಳೇ ಸಿಕ್ಕಿಲ್ಲಅಥವಾ ನಾನು ಬಹಳ ಕಷ್ಟಪಟ್ಟು ಬರೆದಿದ್ದೆ. ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಉತ್ತರಗಳನ್ನು ಬರೆದಿದ್ದೆ. ಆದರೂ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಪರೀಕ್ಷಾ ವ್ಯವಸ್ಥೆಯೇ ಸರಿಯಿಲ್ಲವೆಂದು ಕೊರಗುವುದನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ, ಅಭ್ಯರ್ಥಿಗಳು ಬೇರೆಯವರನ್ನು ಅಥವಾ ಪರೀಕ್ಷಾ ವ್ಯವಸ್ಥೆಯನ್ನು ದೂಷಿಸುವುದಕ್ಕೂ ಮುಂಚಿತವಾಗಿ, ತಮಗೆ ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಜವಾಗಿಯೂ ತಾನು ಪ್ರಶ್ನೆಯ ನಿರೀಕ್ಷೆಯಂತೆ ಉತ್ತರಗಳನ್ನು ಬರೆದಿದ್ದೇನೆಯೇ ಇಲ್ಲವೆ ಎಂಬುದನ್ನು ಕಂಡುಕೊಂಡು, ಮುಂದಿನ ಪರೀಕ್ಷೆಯಲ್ಲಿತಪ್ಪುಗಳು ಮರುಕಳಿಸದಂತೆ, ಯೋಚನೆ ಮಾಡಿ ಉತ್ತರಗಳನ್ನು ಬರೆಯಬೇಕು.

ಆನ್‌ಲೈನ್‌ ಪರೀಕ್ಷೆ ಬರೆಯುವವರು ಈ ಅಂಶಗಳನ್ನು ಗಮನಿಸಿಕೊಳ್ಳಿ

ಉತ್ತರಿಸುವುದಕ್ಕೂ ಮುಂಚೆ ಗಮನಿಸಬೇಕಾದ ಮುಖ್ಯ ಅಂಶಗಳು ಯಾವುವು ನೋಡೋಣ. ಪರೀಕ್ಷೆಯಲ್ಲಿಉತ್ತಮ ಬರವಣಿಗೆಯನ್ನು ಅಭ್ಯಾಸ ಮಾಡಿಕೊಳ್ಳಲು ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಅರ್ಥಮಾಡಿಕೊಳ್ಳುವುದು ಹಾಗೂ ಎರಡನೆಯದು, ಕೇಳಿರುವ ಪದಗಳ ಮಿತಿಯನ್ನು ಮೀರದಂತೆ ಉತ್ತರಗಳನ್ನು ಬರೆಯುವುದು.

ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರಗಳನ್ನು ಬರೆದರೆ ಪ್ರಯೋಜನವಿಲ್ಲ. ಪ್ರತಿಯೊಂದು ಪ್ರಶ್ನೆಯು ಒಂದು ನಿರ್ದಿಷ್ಟವಾದ ಕೀ-ಪದವನ್ನು ಹೊಂದಿರುತ್ತದೆ. ಉದಾಹರಣೆಗೆ: ವಿಮರ್ಶಿಸಿ, ಟಿಪ್ಪಣಿ ಬರೆಯಿರಿ, ವಿಶ್ಲೇಷಿಸಿ, ಚರ್ಚಿಸಿ, ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಇತ್ಯಾದಿ. ಈ ಕೀ-ಪದಗಳು ಬಹಳ ಮುಖ್ಯವಾದವುಗಳು. ಇವುಗಳ ಅರ್ಥವನ್ನು ಅಭ್ಯರ್ಥಿಗಳು ಚೆನ್ನಾಗಿ ತಿಳಿದುಕೊಂಡಿರಬೇಕು. ಏಕೆಂದರೆ, ಪ್ರತಿಯೊಂದು ಕೀ-ಪದವು ಕೂಡ ಒಂದು ನಿರ್ದಿಷ್ಟವಾದ ಉತ್ತರವನ್ನು ಅಪೇಕ್ಷಿಸುತ್ತದೆ.

ಕೆಳಗಿನ ಪ್ರಶ್ನೆಯನ್ನು ಗಮನಿಸಿ;

ಜಾಗತೀಕರಣದಿಂದ ಭಾರತದ ಕೃಷಿ ಚಟುವಟಿಕೆಯಲ್ಲಿನ ಆದಾಯವು ಕಳೆದ ದಶಕದಲ್ಲಿಗಣನೀಯವಾಗಿ ಕುಂಠಿತವಾಗಿದೆ. ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. ಈ ಮೇಲಿನ ಪ್ರಶ್ನೆಯನ್ನು ಉತ್ತರಿಸುವಾಗ, ಅಭ್ಯರ್ಥಿಗಳು, ಕಳೆದ ದಶಕದಲ್ಲಿಜಾಗತೀಕರಣದ ಪ್ರಭಾವದಿಂದ ಕೃಷಿ ಆದಾಯ ಕುಂಠಿತವಾಗಿದೆಯೇ ಎಂಬುದನ್ನು ಅಂಕಿ-ಅಂಶಗಳೊಂದಿಗೆ ವಿಶ್ಲೇಷಿಸಬೇಕು. ಅದರ ಬದಲಾಗಿ ಕೇವಲ ಜಾಗತೀಕರಣದ ಬಗೆಗೆ ಅಥವಾ ಭಾರತದ ಕೃಷಿ ಚಟುವಟಿಕೆಯಲ್ಲಿನ ಏರಿಳಿತಗಳ ಬಗೆಗೆ ವಿವರಿಸಿದರೆ ಸಾಲದು.

ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಬೇಕಾದರೆ ಅಭ್ಯರ್ಥಿಗಳು ಸಾಕಷ್ಟು ತಯಾರಿಯನ್ನು ನಡೆಸಿರಬೇಕು. ಪರೀಕ್ಷೆಗೂ ಮುಂಚಿತವಾಗಿ ಬೇರೆ ಬೇರೆ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ತಜ್ಞರಿಂದ ಸಲಹೆಯನ್ನು ಪಡೆಯಬೇಕು. ತಮ್ಮದೇ ಒಂದು ಸ್ಟಡಿ ಗ್ರೂಪ್‌ಗಳನ್ನು ನಿರ್ಮಿಸಿಕೊಂಡು ಅಲ್ಲಿಬೇರೆ ಆಕಾಂಕ್ಷಿಗಳ ಜೊತೆಗೆ ಚರ್ಚಿಸಬೇಕು. ಹೀಗೆ ಮಾಡುವುದರಿಂದ ಮಾತ್ರ ತಮ್ಮ ಬರವಣಿಗೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸತತ ಪರಿಶ್ರಮ ಹಾಗು ಪ್ರಯತ್ನದಿಂದ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ.

ಪರೀಕ್ಷಾ ಸಿದ್ಧತಾ ಸಮಯದಲ್ಲಿ ಟೈಮ್‌ ಮ್ಯಾನೇಜ್ಮೆಂಟ್‌ ಹೇಗೆ?

ಬರೆಯುವಾಗ ಗಮನಿಸಿ

*ಕೈಬರಹ ನಿಮ್ಮ ವ್ಯಕ್ತಿವನ್ನು ಬಿಂಬಿಸುತ್ತಿರುತ್ತದೆ. ಹೀಗಾಗಿ ಅಂದವಾದ ಬರವಣಿಗೆಗೆ ಆದ್ಯತೆ ನೀಡಿ.

* ಡಿಜಿಟಲ್‌ನ ಈ ಯುಗದಲ್ಲಿಕೈ ಬರಹಕ್ಕೆ ಮಹತ್ವವಿಲ್ಲಎಂದು ನೀವು ಅತ್ತ ಗಮನ ನೀಡದಿದ್ದರೆ ಇದು ನಿಮ್ಮ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿರುತ್ತದೆ.

* ಬರೆದು ಕಲಿತಿದ್ದು ಹೆಚ್ಚು ದಿನ ನಿಮ್ಮ ನೆನಪಿನಲ್ಲಿರುತ್ತದೆ. ಬರವಣಿಗೆಯು ಶಬ್ದ ಸಂಪತ್ತನ್ನು ಹೆಚ್ಚಿಸುತ್ತದೆ. ದೋಷಗಳಿಲ್ಲದೆ ಬರೆಯುವುದು ಬರೆದು ಕಲಿಯುವುದರಿಂದ ಸಾಧ್ಯವಾಗುತ್ತದೆ.

* ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ಆ ವಿಷಯದ ಬಗ್ಗೆ ಆಸಕ್ತಿ ಹೊಂದಲು ಬರವಣಿಗೆ ನೆರವಾಗುತ್ತದೆ.

* ಬರೆಯುವುದರಿಂದ ಮೆದುಳಿನ ಗ್ರಹಣ ಶಕ್ತಿ ಹೆಚ್ಚುತ್ತದೆ. ಏಕಾಗ್ರತೆ ಮೂಡುತ್ತದೆ.

* ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಬರೆದು ಕಲಿತಿದ್ದು,ಮುಂದೆ ಉದ್ಯೋಗ ಜೀವನದ ಒಂದಲ್ಲಾಒಂದು ಸಂದರ್ಭದಲ್ಲಿಉಪಯೋಗಕ್ಕೆ ಬಂದೇ ಬರುತ್ತದೆ.

KTET 2020: ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಕೊನೆ ಕ್ಷಣದ ಸಿದ್ಧತೆಗಳು ಹೀಗಿರಲಿ ..

* ಬರೆಯುವುದು ಎಂದರೆ ಗೀಚುವುದಲ್ಲ, ಮುತ್ತಿನ ಸಾಲುಗಳಂತೆ ಅಕ್ಷರವನ್ನು ಪೋಣಿಸುವುದು. ನಿಮ್ಮ ಬರವಣಿಗೆ ಅಂದವಾಗಿದ್ದರೆ, ಓದುವವರ ಖುಷಿ ಹೆಚ್ಚುತ್ತದೆ.

* ಸರಳ ಶಬ್ದಗಳಲ್ಲಿನಿಮ್ಮ ಅಭಿಪ್ರಾಯವನ್ನು ಹೇಳುವುದನ್ನು ಕಲಿಯಿರಿ. ಇದರಿಂದ ಪರೀಕ್ಷೆಯಲ್ಲಿಯಶಸ್ಸು ಗ್ಯಾರಂಟಿ.

* ಕೆಲ ಬ್ಯಾಂಕ್‌ ನೇಮಕಾತಿ ಪರೀಕ್ಷೆಗಳಲ್ಲಿವಿಸ್ತೃತ ಉತ್ತರ ನೀಡಬೇಕಾದ ಪ್ರಶ್ನೆಗಳನ್ನು ಕೇಳಲಾಗುತ್ತದೆಯಾದರೂ, ಈ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿನಡೆಸುವುದರಿಂದ ಕಂಪ್ಯೂಟರ್‌ನಲ್ಲಿಯೇ ಉತ್ತರಿಸಬೇಕಿರುತ್ತದೆ. ಹೀಗಾಗಿ ಬರಹದ ಜತೆಗೆ ಕಂಪೋಸ್‌ ಮಾಡುವುದನ್ನೂ ನೀವು ಕಲಿಯಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌