ಆ್ಯಪ್ನಗರ

ಜೆಇಇ, ಸಿಬಿಎಸ್‌ಇ ಸೇರಿದಂತೆ ಹಲವು ಪರೀಕ್ಷೆಗಳ ಮುಂದೂಡಿಕೆ; MHRD ಸೂಚನೆ

ರಾಷ್ಟ್ರದಲ್ಲಿಯೂ ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆ, ಹಲವು ಪರೀಕ್ಷೆಗಳನ್ನು ಮುಂದೂಡುವಂತೆ ಎಂಹೆಚ್‌ಆರ್‌ಡಿ ನಿರ್ದೇಶನ ನೀಡಿದೆ. ಮುಂದೂಡಲಾದ ಪರೀಕ್ಷೆಗಳ ಪಟ್ಟಿ ಈ ಕೆಳಗಿನಂತಿದೆ.

Vijaya Karnataka Web 19 Mar 2020, 2:34 pm
ದೇಶದಾದ್ಯಂತ ಕೊರೊನಾ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಜೆಇಇ ಮುಖ್ಯ ಪರೀಕ್ಷೆ ಸೇರಿದಂತೆ, ಸಿಬಿಎಸ್‌ಇ ಮತ್ತು ದೇಶದ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾರ್ಚ್‌ 31 ರವರೆಗೆ ಎಲ್ಲಾ ಪರೀಕ್ಷೆಗಳನ್ನು ಮುಂದೂಡುವಂತೆ ಬುಧವಾರ ನಿರ್ದೇಶನ ನೀಡಿದೆ. " ಶೈಕ್ಷಣಿಕ ಕಾಲಾವಧಿ ಮತ್ತು ಪರೀಕ್ಷೆಗಳನ್ನು ನಿರ್ವಹಣೆ ಮಾಡುವುದು ಎಷ್ಟು ಮುಖ್ಯವೋ, ಅಷ್ಟೇ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳ ರಕ್ಷಣೆ ಮತ್ತು ಸುರಕ್ಷತೆಗೆ ನೀಡಬೇಕಿದೆ. ಅವರ ಪೋಷಕರು, ಶಿಕ್ಷಕರು ಸಹ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ", ಎಂದು ಎಂಹೆಚ್‌ಆರ್‌ಡಿ ಸೆಕ್ರೆಟರಿ ಅಮಿತ್ ಖಾರೆ ತಿಳಿಸಿದ್ದಾರೆ.
Vijaya Karnataka Web exams list postponed due to covid 19
exams list postponed due to corona effect in india


ಪ್ರಸ್ತುತ ದಿನಗಳಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿ, ಮಾರ್ಚ್‌ 31 ರ ನಂತರ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಕ್ರಮವು ಸಿಬಿಎಸ್‌ಇ, ಎನ್‌ಐಓಎಸ್ ಮತ್ತು ವಿಶ್ವವಿದ್ಯಾಲಯಗಳ ಪರೀಕ್ಷೆಗಳಿಗೂ ಅನ್ವಯವಾಗಲಿದೆ. ಮೌಲ್ಯಮಾಪನ ಪ್ರಕ್ರಿಯೆಗಳನ್ನು ಮಾರ್ಚ್‌ ನಂತರ ನಡೆಸಲಾಗುತ್ತದೆ.

ಜಾಯಿಂಟ್ ಇಂಜಿನಿಯರಿಂಗ್ ಎಕ್ಸಾಮಿನೇಷನ್‌(ಜೆಇಇ) ಗೆ ಒತ್ತು ನೀಡಿ, "ಜೆಇಇ ಮೇನ್ಸ್‌ ಪರೀಕ್ಷೆಗೆ ಅಭ್ಯರ್ಥಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರವಾಸ ಮಾಡಬೇಕಾಗುತ್ತದೆ. ಸಿಬಿಎಸ್‌ಇ ಮತ್ತು ಇತರೆ ಬೋರ್ಡ್‌ ಎಕ್ಸಾಮ್ಸ್ ನಡುವೆ ಜೆಇಇ ಪರೀಕ್ಷೆಯ ವೇಳಾಪಟ್ಟಿಯು ಗೊಂದಲ ಸೃಷ್ಟಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜೆಇಇ ಮೇನ್ಸ್‌ ಪರೀಕ್ಷೆಯನ್ನು ಪರಿಷ್ಕರಿಸಿ ಮಾರ್ಚ್‌ ತಿಂಗಳ ನಂತರ ಬಿಡುಗಡೆ ಮಾಡಲಾಗುತ್ತದೆ" ಎಂದು ಎಂಹೆಚ್‌ಆರ್‌ಡಿ ಸೆಕ್ರೆಟರಿ ತಿಳಿಸಿದ್ದಾರೆ.

ಹೆಚ್‌ಆರ್‌ಡಿ ಸಚಿವಾಲಯವು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂವಹನವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ಸೂಚಿಸಿದೆ. ವಿದ್ಯಾರ್ಥಿಗಳೇ ಆಗಲಿ, ಪೋಷಕರೇ ಆಗಲಿ ಯಾವುದೇ ಗೊಂದಲಕ್ಕೆ ಒಳಗಾಗದಂತೆ ಪ್ರಶ್ನೆಗಳಿಗೆ ಉತ್ತರಿಸಲು ಸಂಸ್ಥೆಗಳಿಗೆ ತಿಳಿಸಿದೆ.

ಕೊರೊನಾ ಪರಿಣಾಮ ಮುಂದೂಡಲಾದ ಮತ್ತು ಮುಂದೂಡದೆ ಇರುವ ಪರೀಕ್ಷೆಗಳ ಪಟ್ಟಿ ಈ ಕೆಳಗಿನಂತಿದೆ.

1.ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಜೆಇಇ ಮುಖ್ಯ ಪರೀಕ್ಷೆ ಮುಂದೂಡಿದೆ.

2. ICSE 10, 12 ನೇ ತರಗತಿ ಪರೀಕ್ಷೆಗಳು, ವೇಳಾಪಟ್ಟಿಯಂತೆ ಜರುಗಲಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಐಸಿಎಸ್‌ಇ ಅಧ್ಯಕ್ಷರು ಹೇಳಿದ್ದಾರೆ.

3. ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಮಾರ್ಚ್‌ ತಿಂಗಳ ನಂತರ ಬಿಡುಗಡೆ ಆಗಲಿದೆ.

4. ಯುಜಿಸಿ ಸಹ ವಿಶ್ವವಿದ್ಯಾಲಯಗಳಿಗೆ ಎಲ್ಲಾ ಪರೀಕ್ಷೆಗಳನ್ನು ಮುಂದೂಡುವಂತೆ ನಿರ್ದೇಶನ ನೀಡಿದೆ.

ಭಾರತದಲ್ಲಿ ಒಟ್ಟು 151 ಕೊರೊನಾ ಪಾಸಿಟಿವ್ ಕೇಸ್‌ಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ತಿಳಿಸಿದೆ. ಮೂರು ವ್ಯಕ್ತಿಗಳು ಸೋಂಕಿನಿಂದ ಮರಣ ಹೊಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌