ಆ್ಯಪ್ನಗರ

ಭಾರತ-ಪಾಕ್‌ ಯುದ್ಧ ಟ್ಟೀಟ್‌: ದಿಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ 48 ಗಂಟೆಗಳ ನಿರ್ಬಂಧ

‘ಪರಸ್ಪರ ದ್ವೇಷವನ್ನು ಸೃಷ್ಟಿಸುವ ಅಥವಾ ವಿಭಿನ್ನ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡುವ’ ಮಿಶ್ರಾ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಹೇಳಿದೆ.

TIMESOFINDIA.COM 25 Jan 2020, 3:55 pm

ಹೊಸದಿಲ್ಲಿ: ವಿವಾದಾತ್ಮಕ ಟ್ಟೀಟ್‌ ಹಿನ್ನೆಲೆಯಲ್ಲಿ ದಿಲ್ಲಿಯ ಮಾಡೆಲ್‌ ಟೌನ್‌ ಬಿಜೆಪಿ ಅಭ್ಯರ್ಥಿ ಕಪಿಲ್‌ ಮಿಶ್ರಾಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಸಹಾಯಕ ಚುನಾವಣಾ ಆಯುಕ್ತರು ಈ ನಿರ್ಬಂಧ ಹೇರಿದ್ದು ಶನಿವಾರ ಸಂಜೆ 5 ಗಂಟೆಯಿಂದ ಇದು ಜಾರಿಗೆ ಬರಲಿದೆ.
Vijaya Karnataka Web Kapil MIsra


ಮಿಶ್ರಾ ವಿವಾದಾತ್ಮಕ ಟ್ಟೀಟ್‌ನ್ನು ಡಿಲೀಟ್‌ ಮಾಡುವಂತೆ ಚುನಾವಣಾ ಆಯೋಗ ಟ್ಟಿಟ್ಟರ್‌ಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಟ್ಟಿಟ್ಟರ್‌ ಶುಕ್ರವಾರವೇ ಅವರ ಟ್ಟೀಟ್‌ನ್ನು ಡಿಲೀಟ್‌ ಮಾಡಿತ್ತು. ಜನರ ಮಧ್ಯೆ ಸಂಘರ್ಷ ಹುಟ್ಟುಹಾಕಲು ಯತ್ನಿಸಿದ್ದಕ್ಕಾಗಿ ಅವರ ಮೇಲೆ ಕೇಸನ್ನೂ ದಾಖಲಿಸಲಾಗಿತ್ತು.

“ಪಾಕಿಸ್ತಾನ ಶಾಹಿನ್‌ ಬಾಗ್‌ ಮೂಲಕ ಒಳ ಪ್ರವೇಶಿಸುತ್ತಿದೆ. ದಿಲ್ಲಿಯ ಶಾಹಿನ್‌ ಬಾಗ್‌, ಚಾಂದ್‌ ಬಾಗ್‌, ಇಂದರ್‌ಲೋಕ್‌ನಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ. ಕಾನೂನು ಇಲ್ಲಿ ಪಾಲನೆಯಾಗುತ್ತಿಲ್ಲ ಮತ್ತು ಪಾಕಿಸ್ತಾನದ ಗಲಭೆಕೋರರು ರಸ್ತೆಗಳನ್ನು ಆಕ್ರಮಿಸುತ್ತಿದ್ದಾರೆ,” ಎಂಬುದಾಗಿ ಕಪಿಲ್‌ ಮಿಶ್ರಾ ಹಿಂದಿಯಲ್ಲಿ ಟ್ಟೀಟ್‌ ಮಾಡಿದ್ದರು.

'ಫೆಬ್ರವರಿ 8ಕ್ಕೆ ಭಾರತ-ಪಾಕ್ ಯುದ್ಧ! ಪಾಕ್ ದರೋಡೆಕೋರರು ದಿಲ್ಲಿಗೆ ನುಗ್ಗಿದ್ದಾರೆ': ಬಿಜೆಪಿ ನಾಯಕನ ಟ್ವೀಟ್..!

ಇದಲ್ಲದೆ ಇನ್ನೊಂದು ಟ್ಟೀಟ್‌ನಲ್ಲಿ ಅವರು ದಿಲ್ಲಿ ವಿಧಾನಸಭೆ ಚುನಾವಣೆಯನ್ನು ಭಾರತ - ಪಾಕಿಸ್ತಾನ ಸಂಘರ್ಷಕ್ಕೆ ಹೋಲಿಸಿದ್ದರು. ಈ ಟ್ಟೀಟ್‌ಗಳ ಸಂಬಂಧ ಅವರಿಗೆ ನೋಟಿಸ್‌ ನೀಡಲಾಗಿತ್ತು. ಇದಕ್ಕೆ ಒಂದು ದಿನದ ಒಳಗೆ ಉತ್ತರಿಸುವಂತೆ ಸೂಚಿಸಲಾಗಿತ್ತು. ಆದರೆ ಮಿಶ್ರಾ ಮೂರು ದಿನಗಳ ಕಾಲವಕಾಶ ಕೇಳಿದ್ದರು. “ನಾನು ತಪ್ಪು ಹೇಳಿದ್ದೇನೆ ಎಂದು ಭಾವಿಸುತ್ತಿಲ್ಲ. ಈ ದೇಶದಲ್ಲಿ ಸತ್ಯ ಮಾತನಾಡುವುದು ತಪ್ಪಲ್ಲ. ನಾನು ಸತ್ಯವನ್ನು ಹೇಳಿದ್ದೇನೆ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ,” ಎಂಬುದಾಗಿ ಮಿಶ್ರಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಆದರೆ ‘ಪರಸ್ಪರ ದ್ವೇಷವನ್ನು ಸೃಷ್ಟಿಸುವ ಅಥವಾ ವಿಭಿನ್ನ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡುವ’ ಮಿಶ್ರಾ ಹೇಳಿಕೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಹೇಳಿತ್ತು.ಈ ಹಿನ್ನೆಲೆಯಲ್ಲಿ ಇದೀಗ ಪ್ರಚಾರಕ್ಕೆ 48 ಗಂಟೆಗಳ ನಿರ್ಬಂಧ ವಿಧಿಸಿದೆ.

39 ವರ್ಷದ ಕಪಿಲ್‌ ಮಿಶ್ರಾ ಒಂದು ಕಾಲದಲ್ಲಿ ಅರವಿಂದ ಕೇಜ್ರಿವಾಲ್‌ ಆಪ್ತರಾಗಿದ್ದವರು. ನಂತರ ಕೇಜ್ರಿವಾಲ್‌ ವಿರುದ್ಧವೇ ಭ್ರಷ್ಟಾಚಾರ ಆರೋಪ ಹೊರಿಸಿ ಎಎಪಿಯಿಂದ ಹೊರಬಂದು ಬಿಜೆಪಿ ಸೇರಿದ್ದರು. ಇದೀಗ ಅವರು ಕಮಲ ಪಾಳಯದಿಂದ ಮಾಡೆಲ್‌ ಟೌನ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇದೇ ಫೆಬ್ರವರಿ 8ರಂದು ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಫೆಬ್ರವರಿ 11ರಂದು ಫಲಿತಾಂಶ ಹೊರಬೀಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ